Pages

Monday, March 22, 2010

ಬಭ್ರುವಾಹನ ಚಿತ್ರದ ಮೆಚ್ಚಿನ ಹಾಡು

ಬಭ್ರುವಾಹನ: ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ
ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮಾ
ಎಲ್ಲದಕು ಕಾರಣನು ಶ್ರೀ ಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆಕಾಯ್ದು ಕಾಪಾಡಿ
ಜಯವ ತಂದಿತ್ತ ಆ ಯದುನಂದನಾ
ಅವನಿಲ್ಲದೇ ಬಂದ ನೀನು ತೃಣಕ್ಕೆ ಸಮಾನ
-
ಅರ್ಜುನ: ಅಸಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೊ ವ್ಯಾಘ್ರನಿವನೋ
ಉಗ್ರಪ್ರತಾಪೀ….
-
ಬಭ್ರುವಾಹನ: ಓಹೊಹೊಹೊ… ಉಗ್ರಪ್ರತಾಪಿ…. ಆ…
ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ
ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈ ಎಂದು
ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ
ಮಗನನ್ನು ಬಲಿಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೊ
ಖಂಡಿಸದೆ ಉಳಿಸುವೆ ಹೋಗೊ ಹೋಗೆಲೊ ಶಿಖಂಡೀ…
-
ಅರ್ಜುನ : ಫಡಫಡಾ ಶಿಖಂಡಿಯೆಂದಡಿಗಡಿಗೆ ನುಡಿಯ ಬೇಡಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತೆ ರಣಚಂಡಿ ಗೌತಣವೀವ ಈ ಗಾಂಢೀವಿ
ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡಾ
-
ಬಭ್ರುವಾಹನ: ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
ಹೂಡು ಬಾಣಗಳ ಮಾಡುವೆ ಮಾನಭಂಗ
ಅರ್ಜುನ : ಕದನದೊಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ
ಬಭ್ರುವಾಹನ: ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ
-
ಅರ್ಜುನ : ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ
ಬಭ್ರುವಾಹನ: ಅಂತಕನಿಗೇ ಅಂತಕನು ಈ ಬಭ್ರುವಾಹನಾ

ಎ. ಆರ್ ಮಣಿಕಾಂತ್ ಅವರ ಬ್ಲಾಗಿನಲ್ಲಿ ಈ ಹಾಡು ಹುಟ್ಟಿದ ಸಂಧರ್ಭ ತಿಳಿಯಬಹುದು..

Tuesday, March 02, 2010

ಹೋಳಿಯ ದಿನ

ಸಮಗಾರ ಸಾವು

ಸಿಡಿಮದ್ದ ಸಿಡಿತದಲಿ ಮುರಿದು ಬಿದ್ದಿಹರಿಬ್ಬರು
ತಾಯ್ನಾಡ ಬಯಕೆಗೆ ಬಾಳ ನೈವೇದ್ಯವಿತ್ತ ಧೀರ ಯೋಧರು
ಹದಿನೆಂಟರ ಹರೆಯದ ಮುಗ್ಧನೊಬ್ಬ ಇನ್ನೂ ಬಲಿಯದ ಮೈ
ನಲ್ವತ್ತರ ಮತ್ತೊಬ್ಬ ಕಂಡಿಹನು ಯುದ್ಧಗಳ, ಬಡಿದಾಡಿಹನು ಹೊಯ್ ಕಯ್

ಹರೆಯದ ಹುಡುಗನಿಗೆ ಪಳಗಿಲ್ಲ ಮೈ -ಮನ . ಅಳಿದಿಲ್ಲ ಹುಡುಗುತನ
ಎಳೆಯ ಹೃದಯದಲ್ಲಿನ್ನೂ ಕಳೆದಿಲ್ಲ ಮಗುತನ ಮೊಳೆತಿಲ್ಲ ಧೀರತನ
ತುಕಡಿಗವ ನಿಮಿತ್ತ, ಯುದ್ದದಾವೇಶಕೆ ಬಲಿಯಾದ ಮೇಷ
ಮರಣದ ಮುಂದು ಸಿಡಿದ ಬೈಗಳೋ, ದೇವನನೇ ಕೊಲ್ಲುವಾವೇಶ.

ಇನ್ನೊಬ್ಬ ಅನುಭವದ ಮೂಟೆ, ಸಾವಿಗಂಜದ ಮನಸು
ಜೀವನದ ತುಂಬೆಲ್ಲ ಕಂಡಿಹನು ಸಾವಿನ ಸೊಗಸು
ಕಡೆ ಉಸಿರಲವನ ಮನದಲಿ ಏನಿತ್ತೋ ಕೇಳಿದವರಾರು
ನುಡಿ ಕೇಳಿ ಅರಿಯಬಲ್ಲೆಯಾದರೆ ಅಮ್ಮಾ ಎಂದವನ ಒರಲು..?

ತುಕಡಿಯೊಡೆಯ ಸರ್ದಾರ ದುಃಖದಲಿ ಘೋಷಿಸಿದ ಉಳಿದವರ ಮುಂದೆ
"ವೀರರಿವರೇ ಸೈ, ತಾಯ್ನಾಡಿಗಾಗಿ ನೀಡಿಹರು ಜೀವಾರ್ಪಣ
ನಮಗಿವರದೇ ಆದರ್ಶ, ಇವರೇ ನಮ್ಮ ಹೆಮ್ಮೆ"
ಇದೇ ಮಾತ ಎರಡು ಪ್ರತಿಗಳಲಿ ಇಬ್ಬರ ಮನೆಗೂ ಕಳಿಸಿಬಿಡಿ ಒಮ್ಮೆ.

The leveller - ಎಂಬ ರಾಬರ್ಟ್ ಗ್ರೇವ್ಸ್ ರ ಪದ್ಯದ ಭಾವಾನುವಾದ.