Pages

Thursday, February 11, 2016

ಎಚ್ಚಮನಾಯಕ ನಾಟಕದ ಒಂದು ದೃಶ್ಯ.





ಹಿನ್ನೆಲೆ ಧ್ವನಿ:  ಭಾರತದ ಭವ್ಯೇತಿಹಾಸದಲ್ಲಿ, ವಿಜಯನಗರದ ಕಾಲ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹುದು.. ವಿಜಯನಗರದ ಪತನಾನಂತರ, ರಾಷ್ಟ್ರವೀರ ಎಚ್ಚಮನಾಯಕನು, ತನ್ನ ಗೆಳೆಯ ತಿರುವೆಂಕಟನ ಜೊತೆಗೂಡಿ, ಹಂಪೆಯ ವಿರೂಪಾಕ್ಷನ ದರ್ಶನಕ್ಕೆ ಬರುತ್ತಿದ್ದಾನೆ. ಅದೋ ನೋಡಿ,...
ಎಚ್ಚಮ ನಾಯಕ : - ನೋಡಿದೆಯಾ ತಿರುವೆಂಕಟ... ಹಿಂದೊಮ್ಮೆ ಮುತ್ತು ರತ್ನಗಳನ್ನು ಬೀದಿ ಬದಿಯಲ್ಲಿ ರಾಶಿ ಹಾಕಿ ಮಾರುತ್ತಿದ್ದ ವಿಜಯನಗರ ಸಾಮ್ರಾಜ್ಯದ ಬೀದಿಗಳಿಂದು ಹಾಳು ಸುರಿಯುತ್ತಿದೆ,... ಎಚ್ಚಮ ... ಎಚ್ಚಮ ... ನಿನಗಿನ್ನೇಕೆ ಆ ಕೆಚ್ಚೆದೆಯ ಬಿರುದು.. ನಿನಗಿನ್ನೇಕೆ ಆ ರಾಷ್ಟ್ರವೀರನೆಂಬ ಪೊಗರು. ಆಯಿತು.. ಆಯಿತು.. ಎಲ್ಲವೂ ಸರ್ವನಾಶವಾಗಿ ಹೋಯಿತು...
ಅದೋ.. ಅದೋ.. ವಿಜಯನಗರದ ಸ್ಥಾಪನೆ.. ವಿಜಯನಗರದ ಏಳಿಗೆ... ವಿಜಯನಗರದ ವೈಭವ....  ಹಾ.. ವಿಜಯನಗರದ ನಾಶ.. ವಿಜಯನಗರದ ನಾಶ.....

ತಿರುವೆಂಕಟ:  ಒಡೆಯರೇ, ಒಡೆಯರೇ... ಕಳೆದುಹೋದುದ್ದನ್ನು ಚಿಂತಿಸಿ ಫಲವೇನು? ಭವಿತವ್ಯವನ್ನು ಅರಿತವರಾರು..? ವೀರ ಶಿರೋಮಣಿಗಳಾದ ನೀವೇ ಹೀಗೆ ಚಂಚಲಹೃದಯದಿಂದ ದುಃಖಿಸಬಾರದು.

ಎಚ್ಚಮ :   ಇಲ್ಲ ತಿರುವೆಂಕಟ, ಹಿಂದೆ ಈ ವಿಜಯನಗರ ಸಾಮ್ರಾಜ್ಯದಲ್ಲಿ ನಾವಿದ್ದ ರೀತಿನೀತಿಗಳನ್ನು ನೆನಪಿಸಿಕೊಂಡೆ ಅಷ್ಟೇ... ಶ್ರೀ ವಿದ್ಯಾರಣ್ಯರಿಂದ ಸ್ಥಾಪಿಸಲ್ಪಟ್ಟು, ಆ ಮುನ್ನೂರು ವರುಷಗಳ ಕಾಲ ಅವಿಚ್ಚಿನ್ನವಾಗಿ ರಾರಾಜಿಸುತ್ತಿದ್ದ ಈ ಮಹಾನಗರವು, ಇಂದು ಕಾಗೆ-ಗೂಗೆಗಳ ವಾಸಸ್ಥಾನದಂತಿರುವುದನ್ನು ನೋಡಿ, ಯಾವ ಕನ್ನಡಿಗನು ತಾನೇ ಸೈರಿಸಬಲ್ಲನು. ಭುವನೇಶ್ವರಿಯ ಪವಿತ್ರ ರಕ್ತವು, ಕನ್ನಡಿಗರ ಶರೀರದಲ್ಲಿ ಆಶ್ರಯವನ್ನು ಪಡೆದಿದ್ದು, ಆ ಯವನರ ಕೈಯಿಂದ ಇರಿದ ಕಟಾರಿಯಿಂದ ಚಿಲ್ಲೆಂದು ಹಾರಿ ಹಾರಿ ಬೀಳುತ್ತಾ... ಆಶ್ರಯದಾತರಾಗಿದ್ದ ಕನ್ನಡಿಗರು, ಹತವೀರ್ಯರಾದರೆಂದು ತಾಯಿಯಾದ ಭಾರತಾಂಬೆಗೆ ಭೋರಿಡುತ್ತವೆಯೋ ಎಂಬಂತೆ,  ಸಮರಾಂಗಣದಲ್ಲಿ ಕನ್ನಡಿಗರ ತಲೆಗಳು, ಯವನರ ಪದಾಘಾತಗಳಿಂದ ಉರುಳುತ್ತಾ, ರಕ್ತ-ಪ್ರವಾಹದಲ್ಲಿ ತೇಲುತ್ತಿರುವುದನ್ನು ನೋಡಿಯೂ... ಯಾವ ಕನ್ನಡಿಗನು ತಾನೇ ಶೋಕಾಶ್ರುವನ್ನು ಸುರಿಸದಿರನು? ... ಯಾವ ಕನ್ನಡಿಗನು ತಾನೇ ಶೋಕಾಶ್ರುವನ್ನು ಸುರಿಸದಿರನು.?

ತಿರುವೆಂಕಟ: ಒಡೆಯರೇ, ಸಂತಾಪ ಪಡಬಾರದು.  ಆಪತ್ಕಾಲದಲ್ಲಿಯೂ ... ವ್ಯಸನಪೀಡಿತರಾದಾಗಲೂ..  ಧೈರ್ಯವನ್ನವಲಂಬಿಸಬೇಕಲ್ಲವೇ ?  ತಾಳಿದವನು ಬಾಳಿಯಾನೂ.. ಎಂಬುದನ್ನು ನೆನಪಿನಲ್ಲಿಡಿ... ಆ ಸರ್ವಶಕ್ತನಾದ ವಿರೂಪಾಕ್ಷನ ದರ್ಶನಾನಂತರ ಮುಂದಿನ ಕರ್ತವ್ಯವನ್ನು ಆಲೋಚಿಸೋಣ....

ಎಚ್ಚಮ :  ಏನು ವಿರೂಪಾಕ್ಷನ ದರ್ಶನ.... ನಮಗೆ ವಿರೂಪಾಕ್ಷನ ದರ್ಶನ....! ನಮಗಿನ್ನೇಕೆ ವಿರೂಪಾಕ್ಷನ ದರ್ಶನ...? ನಮಗೆ ದೇವರೇ ಇಲ್ಲವೆಂದು ಸ್ಥಿರವಾಗಿ ಹೋಗಿದೆ..

ತಿರುವೆಂಕಟ: ಒಡೆಯರೇ.. ಏನೀ ನೂತನ ಭಾವವು.. ಆ ಸ್ವಾಮಿಯ ನಿಶ್ಚಲಭಕ್ತರಾದ ನಿಮಗೂ.. ಆ ದುಷ್ಟಶಿಕ್ಷಕ ಶಿಷ್ಟರಕ್ಷಕನಾದ ಸ್ವಾಮಿಯಲ್ಲಿ ನಂಬಿಕೆ ಇಲ್ಲವೇ?

ಎಚ್ಚಮ: ದುಷ್ಟಶಿಕ್ಷಕ ಹಾ... ದುಷ್ಟಶಿಕ್ಷಕನಾಗಿದ್ದಲ್ಲಿ, ಗೆದ್ದ ಯವನರಿಗಿಷ್ಟನೆನೆಸುತ್ತಿದ್ದನೆ?  ಶಿಷ್ಟರಕ್ಷ್ಕನಾಗಿದ್ದಲ್ಲಿ.. ಪುರವಿಶಿಷ್ಟವನ್ನೂ ನಷ್ಟಗೊಳಿಸಿ, ಸಂತ್ರುಪ್ತನಾಗುತ್ತಿದ್ದನೇ?  ಅಯ್ಯೋ..ಅಯ್ಯೋ.. ಕೆಟ್ಟೆವು...ಕೆಟ್ಟೆವು.. ಸುತ್ತ ಬಾಳಿನವರಾದೆವು..ಕಟ್ಟಕಡೆಗೆ ನಟ್ಟ ಪ್ರತಿಮೆಗಳಂತಾದೆವು.
ಏಕೆ ದೇವ,  ನಮ್ಮ ಮೊರೆಯು ನಿನಗೆ ಕೇಳಿಸಲಿಲ್ಲವೇ? ನಮ್ಮ ಸೇವೆ ನಿನಗೆ ರುಚಿಸಲಿಲ್ಲವೇ.. ನಿನ್ನ ಪ್ರಿಯಭಕ್ತರಾದ ಕನ್ನಡಿಗರ ತಲೆಗಳು ರಣರಂಗದಲ್ಲಿ ಕರಕರನೆಂದು ಕೊಯ್ಯಲ್ಪಡುತ್ತಿದ್ದಾಗ ನಿನಗದು ಗೋಚರಿಸಲಿಲ್ಲವೇ..?  ಅಯ್ಯೋ ಪಾಪ..ನಿನಗಾಗ ಕಣ್ಣು ಕಾಣಿಸುತ್ತಿರಲಿಲ್ಲ. ಕಿವಿ ಕೇಳಿಸುತ್ತಿರಲಿಲ್ಲ. ಕುರುಡನಾಗಿದ್ದೆ..
ಓ.... ಇವನೆಯೋ ಉಗ್ರನರಸಿಂಹ..... ಭಕ್ತ ಪರಾಧೀನ .. ತನ್ನ ಪ್ರಿಯಭಕ್ತನಾದ ಪ್ರಹ್ಲಾದನನ್ನು ರಕ್ಷಿಸುವ ಸಲುವಾಗಿ, ಹಿರಣ್ಯಕನ ಗರ್ಭವನ್ನು ಸೀಳಿ.. ಕರುಳನ್ನು ಮಾಲೆ ಹಾಕಿಕೊಂಡವನಲ್ಲವೇ ನೀನು... ಇಂದು ಆ ಪುಂಡ ಯವನರು ಬಂದು, ನಿನ್ನ ಕೈ ಕಾಲುಗಳನ್ನೇ ತುಂಡರಿಸುತ್ತಿದ್ದರೂ, ನಿನ್ನನು ನೀನು ರಕ್ಷಿಸಿಕೊಲ್ಲಲಾಗದವನು, ಮತ್ತನ್ಯರನ್ನು ಹೇಗೆ ರಕ್ಷಿಸುತ್ತೀಯೋ..? ಹೇಡಿ ನರಸಿಂಹ..  ದುಷ್ಟ ಶಿಕ್ಷಕನಂತೆ.. ಶಿಷ್ಟರಕ್ಷಕನಂತೆ... 
ಗೊಪೂಜೆಯಂ ಮಾಡಿದವರು ರಾಜ್ಯವನ್ನು ನೀಗಿದರು.. ಗೊಹತ್ಯೆಯಂ ಮಾಡಿದವರು ರಾಜ್ಯವನ್ನಾಳಿದರು.. ಇದೂ ಧರ್ಮ... ತಿರುವೆಂಕಟಾ.... ದೇವರೆಂಬ ಮಾತೇ ಸುಳ್ಳಾಯಿತೆಂದು, ವಿಜಯನಗರದಲ್ಲಿ ಅದರಲ್ಲೂ ಈ ಹಾದಿಬೀದಿಗಳಲ್ಲಿ, ತಾಯಿ ಸತ್ತ ತಬ್ಬಲಿಗಳಂತೆ, ದಿಕ್ಕಿಲ್ಲದೆ ಉರುಳಾಡುತ್ತಿರುವ ದೇವರ ಅನಂತ ಮೂರ್ತಿಗಳನ್ನು ಸ್ಮರಿಸಿಕೊಂಡರೆ ರೋಮಾಂಚನವಾಗುವುದು... ಹೀಗಿರುವಾಗ ದೇವರೆಲ್ಲಿಹನು ತಿರುವೆಂಕಟಾ.. ದೇವನೆಲ್ಲಿಹನು...?

ತಿರುವೆಂಕಟ: ಒಡೆಯರೇ, ಒಡೆಯರೇ.. ಶಾಂತರಾಗಿ. ಅಪ್ರತಿಮ ಸ್ವಾಮಿ ನಿಷ್ಠಾಪರರಾದ ನೀವು, ಹೀಗೆ ವ್ಯರ್ಥವಾಗಿ ಶೋಕ ಪಡಬಾರದು. ಆ ಸರ್ವೆಶ್ವರನಾದ ವಿರೂಪಾಕ್ಷನ ಸಂಕಲ್ಪದಿಂದಲೇ, ಸ್ಥಾಪಿಸಲ್ಪಟ್ಟು, ಈಗ ನಾಶವಾಗಿರುವ ಈ ವಿಜಯನಗರದ ದುರ್ದೆಶೆಗೆ ಯಾರೂ ಕಾರಣರಲ್ಲ. ಧೈರ್ಯ,ಸಾಹಸ, ಶೌರ್ಯ, ಐಶ್ವರ್ಯಾದಿಗಳಲ್ಲಿ, ಅತ್ಯುನ್ನತ ಪದವಿಯನ್ನೇರಿದ್ದ ಈ ನಗರಾಂಗನೆಯು ಅತ್ಯುನ್ನತ: ಪತನ ಹೇತು: ಎಂಬಂತೆ,ಆಗಿರುವುದಕ್ಕೆ ಕನ್ನಡಿಗರ ದುರ್ದೈವ ಬಲವೇ ಕಾರಣ.

ಎಚ್ಚಮ : ದುರ್ದೈವ ಬಲ.... ಇಲ್ಲ ತಿರುವೆಂಕಟ... ಮಾನವ ಪ್ರಯತ್ನದ ಬಲದ ಮುಂದೆ, ಯಾವ ಬಲವೂ ದೊಡ್ಡದಲ್ಲ. ನವಭಾರತ ದಿಗಂತದಲ್ಲಿ ಕನ್ನಡಿಗರ ಕೀರ್ತಿಪತಾಕೆಯನ್ನು ಹಾರಿಸುವ ಕರ್ತ್ಯವವೇ ನಮಗಿನ್ನು ಪೂಜೆ. ತಾಯಿ ಭುವನೇಶ್ವರಿಯ ಸೇವೆಯೇ ನಮ್ಮ ತಪಸ್ಸು, ಬಾ ತಿರುವೆಂಕಟ ನಾನೂ, ನೀನೂ,  ನಮ್ಮಂತಹ ಅಸಂಖ್ಯ ಕನ್ನಡಿಗರೂ ಸೇರಿ, ಈ ಕನಸಿನ ಸಾಕಾರಕ್ಕೆ ಪಣ ತೊಡೋಣ. ವಿಶ್ವ ಇತಿಹಾಸ ಸಂಪುಟದಲ್ಲಿ ಕನ್ನಡಾಂಬೆಯ ಹೆಸರು ಸುವರ್ಣಾಕ್ಷರಗಳಲ್ಲಿ ಬರೆದು ರಾರಾಜಿಸುವಂತೆ ಮಾಡೋಣ, ಇದಕ್ಕೆ ಇದೋ ತಾಯಿ ಭುವನೇಶ್ವರಿಯೇ ಸಾಕ್ಷಿ.

ಜೈ ಭುವನೇಶ್ವರಿ    
 ಜೈ ಭಾರತಾಂಬೆ


(ನಿರ್ಗಮನ)