Pages

Tuesday, March 13, 2018

ಗೋಕುಲದ ಹಾಡು

ಬೆಳದಿಂಗಳ ರಾತ್ರಿಯಲ್ಲಿ
ಹೊಳೆ ಹೊಳೆಯುತ ಹಾಲಿನಂತೆ 
ಯಮುನೆ ಹರಿಯುತಿದ್ದಳು


ಗೋಕುಲದ ಅಂಗಳದಲಿ
ಸಾಲು ಸಾಲು ಧೇನುಗಳು 
ಮೆಲುಕು ಹಾಕುತ್ತಿದ್ದವು 

ಮುರಳಿ ಗಾನ ಲೋಕದಲ್ಲಿ 
ರಸ ಸಾಗರ ಯಾನದಲ್ಲಿ
ಕೋಟಿ ಕೋಟಿ ಮನಸುಗಳು  ತೇಲುತಿದ್ದುವು.

ವೇಣು ನಾದ ಕೇಳಿ ಸೋತ 
ಹಿಂಡು ಹಿಂಡು  ಷೋಡಶಿಯರು
ರಾಗ ರತಿಯ ಗುಂಗಿನಲ್ಲಿ ಮುಳುಗುತಿದ್ದರು.

ಕೊಳಲ ದನಿಯ ಮಿಡಿಸುವವನೋ
ಜಗವನೆಲ್ಲ ಕುಣಿಸುವವನೋ 
ಅವನ ಪ್ರೀತಿ ಬೇಡಿ ಬೇಡಿ ಹಾಡುತಿದ್ದರು.

ಎಲ್ಲರೊಡನೆ ನಲಿವ ಅವನು 
ಇನಿದನಿಯ ಗೀತೆ ಅವನು 
ಜಗವನೆಲ್ಲ  ಪ್ರೀತಿಯಿಂದ ಗೆಲ್ಲುತಿದ್ದನು.

ಅದರವನ ಮನದ ತುಂಬ
ರಾಧೆಯೆಂಬ ಪ್ರೀತಿ ಬಿಂಬ
ಅವಳ ನೆನಪ ತುಂಬಿಕೊಂಡು ಹಾಡುತಿದ್ದನು.

ಅವಳ ಪ್ರೀತಿ ಧಾರೆಗಾಗಿ 
ವಿರಹದುರಿಯ ಶಮನಕಾಗಿ 
ರಾಧೇ ರಾಧೆ ಎಂದು ಅವನು ಕಾಯುತಿದ್ದನು