Pages

Monday, November 30, 2009

ತಗೋಬೇಕು ಟಿಕೇಟು

ಉದ್ಯಾನ ನಗರಿ ಬೆಂಗಳೂರು,
ಇಲ್ಲಿ ಹೈದರಾಲಿ ಕಟ್ಸಿದ್ ಲಾಲ್ಬಾಗು
ಕಬ್ಬನ್ ಸಾಹೇಬ್ರ ಹೆಸ್ರಲ್ಲೊಂದು ಪಾರ್ಕು.
ತಣ್ಣಗಿರಲಿ ಅಂತ ಬೆಂಗ್ಳೂರು
ಮಾಡಿಟ್ಟು ಹೋದ್ರು ದೊಡ್ಡೋರು

ಕೆಲ್ಸ ಸಿಕ್ಕದ್ ಕೆಲ್ಸದೋರು,
ಪ್ರೇಮಿ ಕಳ್ಕೊಂಡ್ ವಿರಹಿಗಳು,
ಬೈಸಿಕೊಂಡ್ ಮನೆ ಬಿಟ್ ಓಡ್ ಬಂದೋರು,
ಕಾಸಿಲ್ಲದೆ ಬಿದ್ರೂ ಬೆಂಗಳೂರು,
ತಂಪಾಗ್ ಮಲ್ಗಕ್ಕೆ ಇತ್ತು ಪಾರ್ಕುಗಳು.
ಕೋಳೀಕೆ ರಂಗ ಬಂದಿದ್ದ
ಲಾಲ್ಬಾಗ್ ತೋಟದಲ್ ನಡ್ದಿದ್ದ
ಹುಲಿ ಕಂಡ್ ಬೆಕ್ಕಂತ ತಿಳಿದಿದ್ದ.
ಐಟಿ, ಬಿಟಿ ಬಂತಂತೆ
ಬೆಂಗಳೂರು ಬೆಳೀತಂತೆ
ಜನ ಓಡಾಡಕ್ ರೈಲಂತೆ
ಲಾಲ್ಬಾಗ್ ತೋಟ ದ ಮರ
ಮೆಟ್ರೋ ರೈಲಿಗ್ ತಲೆ ಕೊಡ್ತಂತೆ,
ಶಾಸಕರಿಗೆ ಉಳ್ಕೋಳೋಕಂತೆ,
ಕಬ್ಬನ್ ಪಾರ್ಕ್ ನಲ್ಲಿ ಮನೆ ಕಟ್ತಾರಂತೆ,
ಮರ ಕಡೀದಿದ್ರೆ ಆಗೊಲ್ಲವಂತೆ.

ಯಾರೋ ಹೇಳಿದ್ರಂತೆ,
ಪಾರ್ಕ ನಲ್ಲಿ ನಡೆಯೋದು
ಅನಾಗರಿಕ ಕೆಲಸ ಅಂತ,

ಅದಕ್ಕೆ ಇನ್ಯಾರೋ ಹೇಳಿದ್ರಂತೆ
ನಾಗರಿಕರನ್ನು ಮಾತ್ರ ಒಳಕ್ಕೆ ಬಿಟ್ರೆ
ಇರೋದಿಲ್ಲ ತಕರಾರು ತಂಟೆ.

ನಾಗರಿಕರಂದ್ರೆ ಯಾರನ್ಕೊಂಡ್ರಿ..?
ಜೋಬಲ್ಲಿರ್ಬೇಕು ಕಾಂಚಾಣ.
ಇಲ್ಲಾಂದ್ರೆ ಬದುಕಿರೋ ಹೆಣ.
ದುಡ್ಡು ಕೊಟ್ ಮಾಡಿಸ್ಕೋಬೇಕ್ ಐಡಿ,
ಇಲ್ಲಾಂದ್ರೆ ಒಳಕ್ಕೆ ಬಿಡ್ ಬೇಡಿ.

ಇನ್ನು ಮುಂದೆ ಇಲ್ಲಿ
ಉದ್ಯಾನನಗರಿ ಬೆಂಗಳೂರಲ್ಲಿ
ಉದ್ಯಾನಕ್ಕೆ ಹೋಗೋಕು
ತಗೋಬೇಕು ಟಿಕೇಟು.

Natal B-roll

Virtual Reality - a Microsoft Invention

Thursday, November 12, 2009

ನಾಗರಹಾವಿನ ಓಬವ್ವನ ಹಾಡು

ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ
ಚಿ ತ್ರ ದುರ್ಗದ ಕಲ್ಲಿನ ಕೋಟೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ದರು ಹರಸಿದ ಸಿರಿನಾಡು

ವೀರಮದಕರಿ ಆಳುತಲಿರಲು ಹೈದರಾಲಿಯು ಯುದ್ದಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು ಸತತ ದಾಳಿಯು ವ್ಯರ್ಥವಾಗಲು
ವ್ಯೆರಿ ಚಿಂತೆಯಲಿ ಬಸವಳಿದ ದಾರಿಗಾಣದೆ ಮಂಕಾದ
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಗೂಡಚಾರರು ಅಲೆದು ಬಂದರು ಹೈದರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು ಲಗ್ಗೆ ಹತ್ತಲು ಹೇಳಿದರು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಸುತ್ತ ಮುತ್ತಲು ಕಪ್ಪು ಕತ್ತಲೆಯು ಮುತ್ತಿರಲು
ವೀರ ಕಾವಲುಗಾರ ಭೋಜನಕ್ಕೆ ನೆಡೆದಿರಲು
ಸಿಹಿನೀರ ತರಲೆಂದು ಅವನ ಸತಿ ಬಂದಿರಲು ಕಳ್ಳಗಂಡಿಯ ಹಿಂದೆ ಪಿಸುಮಾತ ಕೇಳಿದಳು
ಆಲಿಸಿದಳು ಇಣುಕಿದಳು ವೈರಿ ಪಡೆ ಕೋಟೆಯತ್ತ ಬರುವುದ ಕಂಡಳು.


ಕೈಗೆ ಸಿಕ್ಕಿದ ಒನಕೆ ಹಿಡಿದಳು ವೀರಗಚ್ಚೆಯ ಹಾಕಿ ನಿಂದಳು
ದುರ್ಗಿಯನ್ನು ಮನದಲ್ಲೆ ನೆನೆದಳು, ಕಾಳಿಯಂತೆ ಬಲಿಗಾಗಿ ಕಾಯ್ದಳು
ಯಾರವಳೂ..? ಯಾರವಳೂ..? ವೀರವನಿತೆ ಆ ಓಬವ್ವ..
ದುರ್ಗವು ಮರೆಯದ ಓಬವ್ವ ..
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ತೆವಳುತ ಒಳಗೆ ಬರುತಿರೆ ವೈರಿ ,  ಒನಕೆಯ ಬೀಸಿ ಕೊಂದಳು ನಾರಿ,
ಸತ್ತವನನ್ನು ಎಳೆದು ಹಾಕುತ,  ಮತ್ತೆ ನಿಂತಳು ಹಲ್ಲು ಮಸೆಯುತ
ವೈರಿ ರುಂಡ ಚೆಂಡಾಡಿದಳು ರಕುತದ ಕೋಡಿ ಹರಿಸಿದಳು .
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ.

ಸತಿಯ ಹುಡುಕುತ ಕಾವಲಿನವನು ಗುಪ್ತದ್ವಾರದ ಬಳಿಗೆ ಬಂದನು
ಮಾತು ಹೊರಡದೆ ಬೆಚ್ಚಿ ನಿಂತನು, ಹೆಣದ ರಾಶಿಯ ಬಳಿಯೆ ಕಂಡನು
ರಣಚಂಡಿ ಅವತಾರವನು, ಕೋಟೆ ಸಲಹಿದ ತಾಯಿಯನು.

ಸಂಭಾಷಣೆ:   "ಹೈದರಾಲಿಯ ಸೈನ್ಯ ನಮ್ಮ ಕೋಟೆಯನ್ನು ಮುತ್ತಿದೆ. ಹೋಗಿ..  ರಣಕಹಳೆಯನ್ನು ಊದಿ"

ರಣಕಹಳೆಯನು ಊದುತಲಿರಲು, ಸಾಗರದಂತೆ ಸೈನ್ಯ ನುಗ್ಗಲು,
ವೈರಿಪಡೆಯು ನಿಶ್ಯೇಷವಾಗಲು.. ಕಾಳಗದಲ್ಲಿ ಜಯವನು ತರಲು.
ಅಮರಳಾದಳು   ಓಬವ್ವ... ಚಿತ್ರದುರ್ಗದ ಓಬವ್ವ .

Monday, November 09, 2009

ಮನದ ನುಡಿ

ಕೇಳೆ ನೀನು
ನನ್ನ ಮನದ
ನುಡಿಯ ಮೆಲ್ಲಗೆ
ಬಾಳ ಸೊಲ್ಲಿಗೆ
ಭಾವ ಅರಳಿದ
ರೀತಿ ಮಲ್ಲಿಗೆ

ಬೆಳ್ಳಿ ಬೆಳಕು
ಚಿಮ್ಮುತಿತ್ತು
ನಿನ್ನ ಕಣ್ಣಲಿ
ಆ ಕಣ್ಣ ಬೆಳಕು
ನೆಲೆಯಾಗಿ
ಹೋಯ್ತು
ನನ್ನ ಮನದಲಿ

ತುಂಟ ನಗೆಯು
ತುಳುಕುತಿತ್ತು
ನಿನ್ನ ತುಟಿಯಲಿ
ಆ ತುಟಿಯ ಮಾತು
ನಿಂತು ಹೋಯ್ತು
ನನ್ನ ಎದೆಯಲಿ

ಇರುಳ ಮಾಲೆ
ಇಳಿಯುತ್ತಿತ್ತು
ನಿನ್ನ ಹೆರಳಲಿ
ಆ ಹೆರಳ ಪಾಶವು
ಬಂಧಿಸಿತ್ತು
ನನ್ನ ತನ್ನಲಿ

Thursday, November 05, 2009