Pages

Friday, July 16, 2010

ರಾಮಧಾನ್ಯದ ದೋಸೆ.

ರಾಮಧಾನ್ಯ ಚರಿತೆ ಎನ್ನುವ ಪದಪುಂಜ ವನ್ನು ಮೊದಲ ಬಾರಿಗೆ ಓದಿದಾಗ ಅದು ಮುದ್ರಾರಾಕ್ಷಸನ ದೋಷವಿರಬೇಕೆಂದುಕೊಂಡಿದ್ದೆ. ಅದನ್ನು ನಾನಿದುವರೆಗೂ ಓದಿಲ್ಲ. ಆದರೆ ಯಾವುದೋ ಸಮಯದಲ್ಲಿ ಆಗಿನ್ನೂ ಹರಿಕಥೆಗಳು ಸಾಕಷ್ಟು ಪ್ರಚಲಿತದಲ್ಲಿದ್ದ ಕಾಲದಲ್ಲಿ, ಹರಿಕಥೆಯೊಂದರಲ್ಲಿ ರಾಮಧಾನ್ಯದ ಕಥೆ ಕೇಳಿದ ಮೇಲೆ ಭಲಾ ಭಲಾ ರಾಮಧಾನ್ಯವೇ ಎನಿಸಿತು.

ಕನಕದಾಸರ ಈ ಕಥೆಯಲ್ಲಿ ಅಕ್ಕಿಗೂ ರಾಗಿಗೂ ಜಗಳವಾಗುವ ಪ್ರಸಂಗ, ನಾನು ಮೇಲು ನಾನು ಮೇಲೆಂದು ಎರಡೂ ಧಾನ್ಯಗಳೂ ಜಗಳವಾಡುತ್ತ ಜಗಳ ಬಿಡಿಸಲು ರಾಮನಲ್ಲಿಗೆ ಹೋಗುತ್ತವೆ. ತಮ್ಮ ಗುಣಾಗುಣಗಳನ್ನು ವರ್ಣಿಸಿಕೊಂಡ ಅವುಗಳ ಜಗಳ ಬಿಡಿಸಲು ರಾಮನಂತ ರಾಮಚಂದ್ರನಿಗೂ ತಬ್ಬಿಬ್ಬಾಗುತ್ತದೆ. ಕಡೆಗೆ ಎಷ್ಟೇ ಗುಣಾತಿಶಯಗಳಿದ್ದರೂ, ಕಾಲನ ಹೊಡೆತಕ್ಕೆ ವಿಧಿಯ ಬಡಿತಕ್ಕೆ ಸಿಕ್ಕೂ ತನ್ನ ಗುಣಗಳನ್ನು ಉಳಿಸಿಕೊಳ್ಳಬಲ್ಲ ಶಕ್ತಿ ಇರುವ ಧಾನ್ಯವೇ ಲೇಸಾಗಿರುವುದರಿಂದ, ತನ್ನ ಪರೀಕ್ಷೆಗೆ ಎರಡೂ ಧಾನ್ಯಗಳೂ ಒಳಪಡಬೇಕೆಂದು ರಾಮ ಆಙ್ಞೆ ಮಾಡುತ್ತಾನೆ. ಅದೆಂತಹ ಪರೀಕ್ಷೆ? ಗುಂಡಿಯೊಂದರಲ್ಲಿ ಎರಡೂ ಧಾನ್ಯಗಳನ್ನು ಬುಟ್ಟಿಯಲ್ಲಿ ಹಾಕಿ ಹೂತಿಟ್ಟು ವರುಷದ ನಂತರ ತೆಗೆದು ಪರೀಕ್ಷಿಸುವ ಪರೀಕ್ಷೆ. ಅದರಂತೆ ಎರಡೂ ಧಾನ್ಯಗಳನ್ನೂ ಬುಟ್ಟಿಯೊಂದರಲ್ಲಿ ಹಾಕಿ, ಗುಣಿ ತೋಡಿ ಮುಚ್ಚಲಾಗುತ್ತದೆ. ವರುಷದ ಬಳಿಕ ಗುಂಡಿ ತೆರೆದು ಬುಟ್ಟಿ ಬಿಚ್ಚಿ ನೋಡಿದರೆ, ಅಕ್ಕಿ ಮುಗ್ಗುಲಾಗಿರುತ್ತದೆ. ರಾಗಿ ಎಂದಿನಂತೆ ತನ್ನ ಸಹಜ ಗುಣದಿಂದಿರುತ್ತದೆ. ಇದನ್ನು ನೋಡಿ ರಾಮಚಂದ್ರ ರಾಗಿಯೇ ಮೇಲೆಂದು ಇನ್ನು ಅದನ್ನು ರಾಮಧಾನ್ಯವೆಂದು ಕರೆಯತಕ್ಕದ್ದೆಂದು ಆಜ್ಞೆ ಮಾಡುತ್ತಾನೆ.

ನಮ್ಮ ಮನೆಯಲ್ಲಿ ನಾನು ಚಿಕ್ಕವನಾಗಿದ್ದಾಗಿನ ಊಟದ ಮೆನುವಿನಲ್ಲಿ ರಾಗಿ ಮುದ್ದೆ ಕಡ್ಡಾಯ. ನಾನು ಮೈಸೂರಿನಲ್ಲಿದ್ದರಿಂದ ನಮ್ಮ ರಾಗಿ ಮುದ್ದೆಗೂ ನಾಗರೀಕತೆ ಬಂದು ಬಿಟ್ಟಿತ್ತು. ಮೃದುವಾಗಿ ಮುರಿಯಬಹುದಾದ ನನ್ನ ಅಂಗೈ ತುಂಬುವಂತಹ ಒಂದು ಉಂಡೆ. ಜೊತೆಗೆ ಯಾವ ಸಾರದರೇನು? ಮುದ್ದೆಯ ಜೊತೆಗೆ ಸಾರು ಎನ್ನುವ ವಸ್ತು ಇದ್ದರೆ ಅದರಲ್ಲಿ ಬಾಯಿ ರುಚಿ ತರಿಸುವ ಉಪ್ಪು ಕಾರ ಹುಳಿಗಳಿದ್ದರೆ, ಮುದ್ದೆಯನು ಮೆಲ್ಲಲ್ಲು ಭಯವೇ ಇಲ್ಲ. ಬೇಸಿಗೆಯ ರಜೆಗೆ ನಮ್ಮ ತಾತನ ಊರಿಗೆ ಹೋದರೆ ಅಲ್ಲಿಯ ಮುದ್ದೆಗೂ ನಮ್ಮ ಮುದ್ದೆಗೂ ಅಜಗಜಾಂತರ. ನಮ್ಮ ಮನೆಯ ರಾಗಿ ಮುದ್ದೆಯನ್ನು ಚಾಮುಂಡಿ ಬೆಟ್ಟಕ್ಕೆ ಹೋಲಿಸಿದರೆ ಈ ಮುದ್ದೆ ಹಿಮಾಲಯ ಎನ್ನಬಹುದು ಗಾತ್ರದಲ್ಲಿ, ಕಲ್ಲಿಗಿಂತಲೂ ಗಟ್ಟಿ ಇದು. ಗೋಡೆಗೆ ಎಸೆದರೆ ಕಾರ್ಕ್ ಬಾಲಿನಂತೆ ಹಿಂದೆ ಹಾರಿ ಬರುವಂತದ್ದು. ಬೆಳಿಗ್ಗಿನ ನಮ್ಮ ತಿಂಡಿಗೆ ಉಪ್ಪಿಟ್ಟು. ಅಂದರೆ ಉಪ್ಪು+ ಹಿಟ್ಟು ಜೊತೆಗೆ ಗಟ್ಟಿ ಮೊಸರು. ಆ ಹಿಟ್ಟಿನ್ನು ತಿಂದರೆ , "ಹಿಟ್ಟಂ ತಿಂದ ದಿಟ್ಟಂ ಬೆಟ್ಟಂ ಕಿತ್ತಿಟ್ಟಂ" ಎನ್ನುವ ಮಾತು ನಿಜವೆನ್ನುವ ಅರಿವು ಯಾರಿಗಾದರೂ ಆಗುತ್ತದೆ.

ಇಷ್ಟೆಲ್ಲಾ ಪೀಠಿಕೆ ಹಾಕಿ ರಾಗಿಯ ಕತೆ ಹೇಳಿದ್ದಕ್ಕೆ ಕಾರಣವಿದೆ. ಮದುವೆಯಾದ ಮೇಲೆ ನನ್ನ ಮನೆಯಲ್ಲಿ ರಾಗಿ ಮುದ್ದೆ ಸ್ವಲ್ಪ ಅಪರೂಪವಾಗತೊಡಗಿತು. ಈ ಬಗ್ಗೆ ನಮ್ಮಾಕೆಯೊಂದಿಗೆ ಒಂದೆರಡು ಮಾತುಗಳೂ ನಡೆದವೆನ್ನಿ. ಶ್ರೀಮತಿಯ ಮಾತಿನಂತೆ ರಾಗಿ ಮುದ್ದೆ ಮಾಡುವುದು ಶ್ರಮದಾಯಕವಾದ ಕೆಲಸ. ಅನ್ನ ಮಾಡುವುದೋ ಬಹು ಸುಲಭ. ಒಲೆ ಹತ್ತಿಸಿ(ಮರೆಯದೆ) ಕುಕ್ಕರಿನಲ್ಲಿ ಅಕ್ಕಿ ನೀರು ಇಟ್ಟು ಬಿಟ್ಟರೆ ಒಂದು ಸಿಳ್ಳೆಯಾಗುವ ಹೊತ್ತಿಗೆ ಒಲೆ ಆರಿಸಿದರೆ ಸಾಕು. ಮುದ್ದೆ ಮಾಡಲು, ನೀರು ಕಾದಿದೆಯಾ ನೋಡಬೇಕು. ಸರಿಯಾಗಿ ಕಾದಮೇಲೆ ಹಿಟ್ಟು ಸುರಿಯಬೇಕು. ಸಮಾ ಇರುವಂತೆ ಕಲಕಬೇಕು. ಮಧ್ಯೆ ಹಿಟ್ಟು ಗಂಟಾಗದಂತೆ ಚುರುಕಾಗಿ ಕೈ ತಿರುಗಿಸಬೇಕು. ಅದು ಚೆನ್ನಾಗಿ ಬೇಯುವವರೆಗೂ ಕಲಸುತ್ತಲೇ ಇರಬೇಕು. ಬೆಂದು ಹದಕ್ಕೆ ಬಂದಾಗ ಕೆಳಗಿಳಿಸಿ ತಿರುವಿ ಮುದ್ದೆ ಕಟ್ಟಬೇಕು. ನೀರು ಹೆಚ್ಚಾದರೆ ಮುದ್ದೆ ಕಟ್ಟಲು ಆಗುವುದಿಲ್ಲ. ಕಡಿಮೆಯಾದರೆ ಕಲ್ಲಿಗಿಂತಲೂ ಗಟ್ಟಿ. ಅಬ್ಬಾಬ್ಬಾ ಎಷ್ಟೊಂದು ರೇಜಿಗೆ. ಎಂದಾಕೆಯ ಮಾತು ಕೇಳಿ ನಾನು ಕಡುಕೋಪದಿಂದ ಅನ್ನ ತಿಂದು ಬೊಜ್ಜು ಬೆಳೆದು ನಾನು ಬೇಗ ಸಾಯುತ್ತೇನೆ ಎನ್ನುವ ಮಂತ್ರ ಪಠಿಸಿ, ವಾರಕ್ಕೆ ಎರಡು ಬಾರಿ ಮುದ್ದೆ ನನ್ನ ಊಟದ ಮೆನುವಿನಲ್ಲಿ ಸೇರುವಂತೆ ಮಾಡಿದ್ದೆ.

ಚಿಕ್ಕಂದಿನಿಂದ ಮುದ್ದೆ ತಿಂದುಬೆಳೆದ ನನಗೆ ನನ್ನ ತಾಯಿ, ಅಕ್ಕ, ಅಜ್ಜಿ, ಸೋದರತ್ತೆಯರು ಯಾವುದೇ ಸದ್ದಿಲ್ಲದೆ ಮುದ್ದೆ ಮಾಡಿಡುತ್ತಿದ್ದುದ್ದನ್ನು ಕಂಡಿದ್ದ ನನಗೆ ಈ ನೆವ ಸ್ವಲ್ಪ ಅತಿರೇಕದ್ದೇ ಅನಿಸಿತ್ತು. ಈ ಸಿಟ್ಟನ್ನು ಹೊಟ್ಟೆಯಲ್ಲಿಟ್ಟುಕೊಂಡೇ ಮೊನ್ನೆ ಜರ್ಮನಿಗೆ ಹೊರಡುವ ಮುನ್ನ ಮನೆಯಲ್ಲಿ ಘೋಷಿಸಿದೆ.

"ನನ್ನ ಜೊತೆಗೆ ಸ್ವಲ್ಪ ರಾಗಿ ಹಿಟ್ಟು ತಗೊಂಡು ಹೋಗ್ತೀನಿ. ಅಲ್ಲಿ ನಾನೇ ಮುದ್ದೆ ಮಾಡಿಕೊಂಡು ತಿಂತೀನಿ"
ನನ್ನ ಹೆಂಡತಿ ಇದೇನು ಹೊಸ ಅವತಾರ ಎನ್ನುವಂತೆ ನನ್ನೆಡೆಗೆ ನೋಡಿದಳು. ನಮ್ಮಮ್ಮ " ನಿನಗೆ ಅಡಿಗೆ ಮಾಡೇ ಗೊತ್ತಿಲ್ಲ, ಇನ್ನು ಮುದ್ದೆ ಮಾಡ್ತೀಯಾ, ಸುಮ್ಮನೆ ಸ್ವಲ್ಪ ಅಕ್ಕಿ ಜೊತೆಗೆ ಹುಳಿಯನ್ನದ ಗೊಜ್ಜು, ಕೆಂಪುಕಾರ ನಿಪ್ಪಟ್ಟು ಕೋಡುಬಳೆ ಇದನ್ನ ತಗೊಂಡು ಹೋಗು" ಎಂದರು
"ಇಲ್ಲ ನಾನೇನು ಮುದ್ದೆ ಮಾಡಿಲ್ಲವಾ, ರಾಗಿ ಹಿಟ್ಟು, ಮುದ್ದೆ ಕೋಲು ತಗೊಂಡು ಹೋಗ್ತಿನಿ. ಅಲ್ಲಿ ಊಟ ಹೇಗಿರುತ್ತೋ ಏನೋ, ಮುದ್ದೆ ಜೊತೆಗೆ ಎರಡು ಮೆಣಸಿನಕಾಯಿ, ಒಂದು ಈರುಳ್ಳಿ ಸ್ವಲ್ಪ ಉಪ್ಪು ಇದ್ದರೆ ಸಾಕು" ಎಂದೆ.
"ಮುದ್ದೆ ಕೋಲನ್ನು ಇಲ್ಲಿಂದ ಜರ್ಮನಿಯವರೆಗೆ ತಗೊಂಡು ಹೋಗ್ತೀರಾ?" ಎಂದಳು ನನ್ನ ಅರ್ಧಾಂಗಿ. ಅದು ನನ್ನ ತಾಕತ್ತನ್ನು ಉಚಾಯಿಸಿಯೇ ಆಡುತ್ತಿರುವ ಮಾತು ಎಂದೇ ತಿಳಿದ ನಾನು "ನೋಡುತ್ತಿರು" ಎಂದೆ. ಕಡೆಗೆ ಜರ್ಮನಿಗೆ ಹೊರಡುವವರೆಗೂ ಮುದ್ದೆ ಕೋಲನ್ನು ಹೊಂದಿಸಲು ಆಗಲೇ ಇಲ್ಲ. ಅಥವಾ ಇದರಲ್ಲಿ ನಮ್ಮ ಯಜಮಾನಿತಿಯ ಪಾತ್ರವೂ ಇದೆಯೋ ನನಗೆ ತಿಳಿಯಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮೆಣಸಿನಕಾಯಿ ಜರ್ಮನಿಯಲ್ಲಿ ಸಿಗುವುದು ಎಷ್ಟು ಕಷ್ಟ ಎಂದು ನನಗಿಲ್ಲಿ ಬಂದ ಮೇಲೆ ಅರಿವಾಗಿದ್ದು. ನಾಲ್ಕು ಬೆಳ್ಳುಳ್ಳಿಗೆ ನಾಲ್ಕು ಯೂರೋ ಕೊಟ್ಟು ಇದುವರೆಗೂ ನಾನು ಖರೀದಿಸಲು ಹೋಗಲೇ ಇಲ್ಲ. ಮೊದಲೇ ರುಚಿಕಟ್ಟಾಗಿ ಸರ್ವಭಕ್ಷಣೆ ಮಾಡುವ ನನಗೆ ಇಲ್ಲಿನ ಖಾದ್ಯಗಳ ರುಚಿ ನೋಡುವಲ್ಲಿ ಹೊಟ್ಟೆ ಕೆಡದೇ ಇರುವುದೇ ಪುಣ್ಯ ಎನ್ನುವ ಸ್ಥಿತಿ ತಲುಪಿ ಅಡುಗೆ ಮಾಡುವ ಮಾತು ದೂರವೇ ಉಳಿಯಿತು. ಆದರೆ ಹಠ ಹಿಡಿದು ಬ್ಯಾಗಿಗೆ ಸೇರಿಸಿದ್ದ ರಾಗಿ ಹಿಟ್ಟು ನನ್ನಭಿಮಾನವನ್ನು ಕೆಣಕುತ್ತಿತ್ತು.

ಒಂದು ದಿನ ನಿರ್ಧಾರ ಮಾಡಿಯೇ ಬಿಟ್ಟೆ. "ಮುದ್ದೆ ಮಾಡದಿದ್ದರೆ ಬೇಡ, ರಾಗಿ ಹಿಟ್ಟಿನಲ್ಲಿ ದೋಸೆ ಮಾಡಿಕೊಂಡು ತಿನ್ನುತ್ತೇನೆ" ಅಂತ.

ಇನ್ನು ದೋಸೆಯ ವಿಷಯಕ್ಕೆ ಬಂದರೆ, ಬೆಂಗಳೂರಿಗರಿಗೆ ಎಂ.ಟಿ.ಆರ್ ದೋಸೆ, ವಿದ್ಯಾರ್ಥಿ ಭವನ್ ದೋಸೆ, ದಾವಣಗೆರೆ ಬೆಣ್ಣೆ ದೋಸೆಗಳು ಪರಿಚಿತ, ಮಂಗಳೂರಿಗರ ನೀರು ದೋಸೆ ಜಗತ್ಪ್ರಸಿದ್ದ. ದೆಹಲಿಯ ಹೋಟೆಲಿನಲ್ಲಿ ಕೆಟ್ಟ ಮಸಾಲೆದೋಸೆಗೆ ಮೈಸೂರುದೋಸೆ ಎಂದು ಎಂಬತ್ತು ರೂಪಾಯಿಗಳನ್ನು ತೆತ್ತಿದ್ದು ನನಗಿನ್ನೂ ನೆನಪಿದೆ. ಮೈಸೂರಿನ ದೋಸೆಗಳ ವೈಶಿಷ್ಟ್ಯವೇ ಬೇರೆ. ಅಲ್ಲಿ ಸೆಟ್ ದೋಸೆಗೆ ನಾಲ್ಕು ದೋಸೆ. ಅರ್ಧ ಸೆಟ್ಟು ಇನ್ನೂ ಸಿಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಅರ್ದ ಸೆಟ್ಟು ದಿನವೆಲ್ಲಾ ಹೊಟ್ಟೆ ತುಂಬಿಸಿದೆ. ಒಮ್ಮೆ ಅಗ್ರಹಾರದ ಗುರುಪ್ರಸಾದ್ ಹೋಟೆಲಿನಲ್ಲಿ ಹಠ ತೊಟ್ಟು ಎಂಟು ಸೆಟ್ ಮಸಾಲೆ ಕಬಳಿಸಿದ್ದು ನನಗಿನ್ನೂ ನೆನಪಿದೆ. ರಮಾವಿಲಾಸ ರಸ್ತೆಯ ಸ್ವಾಗತ್ ಹೋಟೆಲಿನಲ್ಲಿ (ಈಗಿಲ್ಲ) ಎರಡು ಈರುಳ್ಳಿ ದೋಸೆಗೆ ಎರಡು ಬಕೆಟ್ ಚಟ್ನಿ ತಿನ್ನುತ್ತಿದ್ದ ಕಾಲವೊಂದಿತ್ತು. ರಮ್ಯಾ ಹೋಟೆಲಿನ ದೋಸೆಗೆ ಆಗ್ಗೆಯೇ ಜಗತ್ಪ್ರಸಿದ್ದ. ಇನ್ನು ಮೈಸೂರಿನ ಕೀರ್ತಿಗೆ ಕಳಶಪ್ರಾಯವಿಟ್ಟಂತೆ ಮೈಲಾರಿ ಹೋಟೆಲಿನ ದೋಸೆ, ಅಗ್ರಹಾರದ ಮನೆಮನೆ ಯಲ್ಲಿ ಮಾರುವ ಬೆಣ್ಣೆ ದೋಸೆ, ಮನೆಯ ದೋಸೆ, ಒಬ್ಬೆ ದೋಸೆ. ಎಷ್ಟೆಲ್ಲ ತರದ ದೋಸೆಗಳು. ದೋಸೆಯ ಬಗ್ಗೆಯೇ ಒಂದು ವಿಶೇಷ ಲೇಖನ ಬರೆಯಬಹುದು, ದೋಸೆ ತಿಂದು ಮನಸು ಹಗುರಾದಾಗ. ಇರಲಿ ಈಗ ನಾನು ಮಾಡಿದ ರಾಗಿ-ದೋಸೆಗೆ ಬರೋಣ.

ನಾಚಿಕೆ ಬಿಟ್ಟು ನನ್ನಾಕೆಗೆ ಫೋನ್ ಮಾಡಿದೆ. ಎಷ್ಟೇ ಆಗಲಿ ಅರ್ಧಾಂಗಿ ಅವರ ಬಳಿ ನಾಚಿಕೆಯೇಕೆ?. ಕೇಳಿದೆ. " ಹೇಗೂ ರಾಗಿ ಹಿಟ್ಟಿದೆ, ಕೋಲಿಲ್ಲ. ಅದಕ್ಕೆ ದೋಸೆ ಮಾಡಿಕೊಳ್ಳಬೇಕೆಂದಿದ್ದೇನೆ ಹೇಗೆ ಮಾಡುವುದು?"
ನಗುತ್ತಾ ಅಲ್ಲಿಂದ ಬಂತು ಉತ್ತರ. " ಇದ್ದರೆ ಸ್ವಲ್ಪ ಮೊಸರು ಹಾಕಿ ಸ್ವಲ್ಪ ನೀರು ಹಾಕಿ ನೆನೆಸಿ, ಸುಮಾರು ಎರಡು ಘಂಟೆಗಳ ಕಾಲ ನೆನೆದರೆ ಹಿಟ್ಟು ಮೃದುವಾಗುತ್ತದೆ. ಆಮೇಲೆ ದೋಸೆ ಹುಯ್ದರಾಯಿತು". ಧ್ವನಿಯಲ್ಲಿ ಕುಹುಕವಿತ್ತೇ ನನಗಂತೂ ಕಂಡಿತಾ ಗೊತ್ತಿಲ್ಲ. "ಜೊತೆಗೆ ಏನು ಮಾಡುತ್ತೀರಾ?" ಕೇಳಿದಳವಳು. "ಏನು ಮಾಡುವುದು. ಊರಿಂದ ತಂದ ತೊಕ್ಕು ಇದೆ. ಅಡಿಗೆ ಮನೆಯಲಿ ಸ್ವಲ್ಪ ಕ್ಯಾರೆಟ್ ಇದೆ" ಎಂದೆ. " ಸರಿ ಹಾಗಿದ್ದರೆ ಕ್ಯಾರೆಟ್ ತುರಿದು ಹಿಟ್ಟಿಗೆ ಕಲಿಸಿ. ಅಥವಾ ದೋಸೆಯ ಮೇಲೆ ಹೆಂಚಿನಲ್ಲಿದ್ದಾಗ ಹಾಕಿದರೂ ಚೆನ್ನಾಗಿರುತ್ತದೆ" ಎನ್ನುವ ಸಲಹೆ ಬಂದಿತು.

ಸರಿ ಪ್ರಯೋಗಕ್ಕೆ ಇಳಿದೇ ಬಿಟ್ಟೆ. ಹಿಟ್ಟು ಕಲಿಸಿ ಅದಕ್ಕೆ ಮೊಸರು ಹುಯ್ದು, ಕ್ಯಾರೆಟ್ ತುರಿ ಬೆರೆಸಿ ಇಟ್ಟಾಯಿತು. ಎಣ್ಣೆ, ದೋಸೆ ಹುಯ್ಯಲು ಕಾವಲಿ ಸಿದ್ದ ಮಾಡಿಕೊಂಡದ್ದಾಯಿತು. ಎರಡು ಘಂಟೆ ನೆನೆದ ಹಿಟ್ಟನ್ನು ಸೌಟು ಹಾಕಿ ತಿರುವಿದಾಗ ನನಗೆ ಮೊದಲಬಾರಿಗೆ ಮೈ ಜುಮ್ಮೆಂದಿತು. ತಿಳಿಯಾಗಿ ಕಾಣುತ್ತಿದ್ದ ಕಲಿಸಿದ ಹಿಟ್ಟಿನಲ್ಲಿ ನೀರು, ಮೊಸರು ಎಲ್ಲಾ ಮೇಲಿದೆ. ಅದರಡಿಯ ಭಾಗ ಕ್ಯಾರೆಟ್ ತುರಿಯದು, ಕೆಳಗೆ ಜೇಡಿ ಮಣ್ಣಿನಂತೆ ಒಗ್ಗಟ್ಟು ಬಿಟ್ಟು ಕೊಡದೆ ಗುಂಪಾಗಿ ಗಟ್ಟಿಯಾಗಿ ನಿಂತಿದೆ ರಾಗಿ ಹಿಟ್ಟು. ಇರಲಿ ಅದೇನಾಗುತ್ತದೋ ನೋಡೇ ಬಿಡೋಣವೆಂದು ಚೆನ್ನಾಗಿ ಕಲಸಿದೆ. ಒಲೆಯ ಮೇಲೆ ಪ್ಯಾನ್ ಇಟ್ಟು, ಅದು ಕಾದ ನಂತರ ಒಂದು ಚಮಚ ಎಣ್ಣೆ ಬಿಟ್ಟೆ. ಅದೂ ಕಾದ ನಂತರ ಒಂದು ಸೌಟು ರಾಗಿ ಹಿಟ್ಟನ್ನು ಹುಯ್ದೆ. ನಾನೇನೋ ಹೆಂಚು ಎಣ್ಣೆ ಕಾದಿದೆ ಎಂದುಕೊಂಡಿದ್ದೆ. ಆದರೆ ಅದು ರಾಗಿ ದೋಸೆಯ ಮಟ್ಟಕ್ಕೆ ಕಾದಿರಲಿಲ್ಲ. ಹಿಟ್ಟು ದುಂಡಾಗಿ ಹೆಂಚಿನ ಮೇಲೆ ಹರಡಿಕೊಂಡಾಗ ನನಗೀ ಗುಟ್ಟು ಗೊತ್ತಾಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ದೋಸೆ ಸೀದು ಹೋದೀತೆಂಬ ಭಯದಿಂದ ತಿರುವಿಹಾಕಲು ಹೋದಾಗಲೇ ನನಗದು ಗೊತ್ತಾಗಿದ್ದು. ದೋಸೆ ಹೆಂಚನ್ನು ಬಿಟ್ಟು ಮೇಲೇಳಲಿಲ್ಲ. ಸ್ವಲ್ಪ ದಬಾಯಿಸಿದರೆ ರಷ್ಯಾದಂತೆ ಚುಕ್ಕಾ ಚೂರಾಗಿ ಹೋಯಿತು. ಅದನ್ನು ಸವರಿ ಪಕ್ಕಕ್ಕಿಟ್ಟೆ. ಈ ಬಾರಿ ಇನ್ನೂ ಸ್ವಲ್ಪ ಹೆಂಚು ಕಾದು ಅದರ ಮೇಲೆ ನೀರು ಚಿಮುಕಿಸಿ ಚುಯ್ ಎಂದು ಸದ್ದು ಬಂದಾಗ ಚೆನ್ನಾಗಿ ಕಾದಿದೆ ಎಂದು ಖಾತ್ರಿ ಮಾಡಿಕೊಂಡು ಒಂದು ಸೌಟು ಹಿಟ್ಟು ಸುರಿದೆ. ಚುಯ್ ಎನ್ನುವ ಶಬ್ದದೊಂದಿಗೆ ದೋಸೆ ಹಿಟ್ಟು ಹರಡಿಕೊಂಡಿತು. ಜೊತೆಗದರಲ್ಲಿ ತೂತುಗಳೂ ಕಾಣಿಸಿಕೊಂಡವು. ಎಲ್ಲರ ಮನೆ ದೋಸೆನೂ ತೂತೇ, ಎನ್ನುವ ಮಾತು ನನಗೆ ನೆನಪಿಗೆ ಬಂದಿತು. ಒಟ್ಟಿನಲ್ಲಿ ನಾನು ಸರಿ ದಾರಿಯಲ್ಲಿದ್ದೇನೆ ಎಂದುಕೊಳ್ಳುತ್ತಾ ಹುಯ್ದ ಹಿಟ್ಟನ್ನು ಗುಂಡಾಗಿ ಮಾಡಲು ಸೌಟಿನಿಂದ ಸವರಿದು. ಅದು ಸ್ವಾತಂತ್ರಾನಂತರ ಭಾರತದಂತೆ, ಮೂರು ಭಾಗಗಳಾಗಿ ಹೋಯಿತು. ಒಂದೊಂದೂ ಒಂದೊಂದು ತುತ್ತಿಗೂ ಸಾಲದಷ್ಟು ದೊಡ್ಡದು. ಅದನ್ನು ನೋಡಿ ದಿಕ್ಕೆಟ್ಟು ಯೋಚನೆ ಮಾಡುವಷ್ಟರಲ್ಲಿ ಮೊದಲೇ ತೆಳ್ಳಗಾಗಿದ್ದ ಅದು ಸೀದು ಕರಕಲಾಗಿ ಹೋಯಿತು. ಹೆಂಚಿಗೆ ಅಂಟಿದ್ದ ಆ ದೋಸೆ ಎನ್ನುವ ಪದಾರ್ಥವನ್ನು ಕೆರೆದು ತೆಗೆಯಬೇಕಾಗಿ ಬಂತು.

ಇರಲಿ ಕಲಿಯಲು ಎರಡು ದೋಸೆ ಹಾಳಾಗಿದ್ದು ದೊಡ್ಡ ವಿಷಯವಲ್ಲ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡು, ಎರಡರ ಪಾಠದಿಂದ ಮೂರನೇ ದೋಸೆ ಹುಯ್ದೆ. ಈ ಬಾರಿ ಎಚ್ಚರಿಕೆಯಿಂದ ಎರಡು ಸೌಟುಗಳಷ್ತು ಹಿಟ್ಟನ್ನು ಹೆಂಚಿನ ಮೇಲೆ ಹುಯ್ದೆ. ಹೆಂಚಿನ ಒಂದೊಂದು ಬದಿಗೆ ಒಂದೊಂದು ಬಾರಿ ಹಿಟ್ಟು ಜಾರಿ ಹೋಗುವಂತೆ. ಮತ್ತು ಅವೆರಡೂ ಬರ್ಲಿನ್ ಗೋಡೆ ಒಡೆದು ಜರ್ಮನಿ ಸೇರಿದಂತೆ ಸೇರುವಂತೆ ಎಚ್ಚರಿಕೆ ವಹಿಸಿದ್ದೆ. ಅದೇನೋ ಸೇರಿತು. ಆದರೆ ಸ್ವಲ್ಪ ಮಂದವಾಗಿ ಬಂತು. ಸುತ್ತಲೂ ಎಣ್ಣೆ ಬಿಟ್ಟು. ಮೇಲಷ್ಟು ತೊಟಕಿಸಿ, ದೋಸೆ ಕಾಯಲು ನಾನೂ ಕಾದೆ. ಈಗ ರಾಗಿ ಹಿಟ್ಟಿನ ಇನ್ನೊಂದು ಸ್ವರೂಪದ ಅರಿವು ನನಗಾಯಿತು. ರಾಗಿಯ ಬಲಿಷ್ಟ ಗುಂಉಗಾರಿಕೆಯ ಗುಣ ಹಿಟ್ಟು ಕಲಿಸುವಾಗಲೇ ನನಗೆ ಗೊತ್ತಾಗಿತ್ತು. ಆದರೆ ಅದಕ್ಕೆ ಉಷ್ಣ ನಿರೋಧಕ ಗುಣವೂ ಇದೆ ಎಂದು ನನಗೆ ತಿಳಿದದ್ದು ಈಗಲೇ. ಮೇಲೆಲ್ಲಾ ಚೆನ್ನಾಗಿ ಬೆಂದಂತೆ ಕಾಣುತ್ತಿದ್ದ, ಯೂರೋಪಿನ ಭೂಪಟದ ಮಾದರಿಯಲ್ಲಿದ್ದ ಆ ದೋಸೆಯನ್ನು ಹೆಂಚಿನಿಂದಿಳಿಸಿ, ತಟ್ಟೆಗೆ ಹಾಕಿ, ಕುತೂಹಲವನ್ನೂ, ಹಸಿವನ್ನೂ ಒಟ್ಟಿಗೆ ತಣಿಸಲು, ಒಂದು ಚೂರು ಮುರಿದು ಬಾಯಿಗೆ ಹಾಕಿಕೊಂಡರೆ ಅದು ಮೇಲೆ ಹೇಗೆಯೇ ಕಂಡರೂ ಒಳಗೆ ಹಸೀ ರಾಗಿ ಹಿಟ್ಟು. ತಿನ್ನಲಾಗದೆ ಅದನ್ನೂ ಪಕ್ಕಕ್ಕಿಟ್ಟೆ.

ಇಷ್ಟರಲ್ಲಾಗಲೇ ನನ್ನ ಸಹನೆ ಮೀರಿತ್ತು. ಆದರೆ ಇನ್ನೊಮ್ಮೆ ಪ್ರಯತ್ನಿಸಿ ನೋಡೇ ಬಿಡುವ ಹಠ ನನ್ನಲ್ಲಿ ಕುಣಿಯುತ್ತಿತ್ತು. ಚೆನ್ನಾಗಿ ಹೆಂಚು ಕಾಯಲು ಬಿಟ್ಟೆ. ಈ ಘಳಿಗೆಯಲ್ಲಿ ನಾನೂ, ನನ್ನಾಕೆ ಮುದ್ದೆಯ ವಿಷಯದಲ್ಲಿ ಮಾತಾಡಿದ್ದೆಲ್ಲಾ ನೆನಪಿಗೆ ಬಂತು. ರಾಮಧಾನ್ಯ ಚರಿತವೂ ನೆನಪಾಯಿತು. ಈ ದೋಸೆ ಚೆನ್ನಾಗಿ ಬಂದರೆ, ಆ ರಾಮನಾಣೆ ಇನ್ನು ಅಡಿಗೆಯ ವಿಷಯದಲ್ಲಿ ಮನೆಯಾಕೆಯೊಂದಿಗೆ ಜಗಳವಾಡುವುದಿಲ್ಲ ಎಂದು ದೋಸೆಯ ಮೇಲೆ ಹರಕೆ ಹೊತ್ತೆ. ಹೆಂಚು ಕಾದಿರಬಹುದಾದ ಕ್ಷಣ ಎಂದು ನನಗನ್ನಿಸಿದಾಗ, ಮೆಲ್ಲನೆ ಸೌಟಿನಿಂದ ಹಿಟ್ಟು ಹೊಯ್ದೆ, ಹೊಯ್ಯುವಾಗಲೇ ಕೈ ಅಲ್ಲಾಡಿಸುತ್ತಾ ಸಾದ್ಯವಾದಷ್ಟು ದುಂಡಾಗಿರುವಂತೆ ಮಾಡಿದೆ. (ಇಲ್ಲಿ ಜರ್ಮನಿಯಲ್ಲಿ ಕ್ರುಪ್ಪೆ ಎನ್ನುವ ತಿಂಡಿ ಮಾಡುತ್ತಾರೆ. ಅದು ಥೇಟು ನಮ್ಮ ಮಸಾಲೆದೋಸೆಯ ಥರಾ.. ಅದನ್ನು ಮಾಡುವವರು ಹಿಟ್ಟನ್ನು ಹೆಂಚಿನ ಮೇಲೆ ಹೊಯ್ದು, ಒಂದು ಕೈವಾರದಂತ ಕಡ್ಡಿಯೊಂದನ್ನು ಅದರ ಮಧ್ಯದಲ್ಲಿಟ್ಟು ತಿರುಗಿಸುತ್ತಾರೆ. ಅದು ದೋಸೆಯ ದಪ್ಪ ಸಮವಾಗಿರುವಂತೆ ಮಾಡುವುದಲ್ಲದೆ, ಪೂರ್ಣ ಚಂದಿರನಂತೆ ಗುಂಡಾಗಿರುವಂತೆಯೂ ಮಾಡುತ್ತದೆ. ಬಹುಶಃ ಜರ್ಮನ್ನರ ಪರ್ಪ್ಫ಼ೆಕ್ಷನ್ ಇಂತಹ ಉಪಕರಣಗಳನ್ನು ತಯಾರಿಸುವಂತೆ ಮಾಡಿರಬೇಕು. ಇಂತಹುದೇ ಪರ್ಫ಼ೆಕ್ಷನ್ ಅನ್ನು ಅವರ ಇತರ ಕೆಲಸಗಳಲ್ಲೂ ಕಾಣಬಹುದು). ಈ ಬಾರಿ ದೋಸೆ ತಕ್ಕ ಮಟ್ಟಿಗೆ ಗುಂಡಾಗಿ ಪೂರ್ಣ ಚಂದ್ರನಂತೆ ಅಲ್ಲದಿದ್ದರೂ, ಶುಕ್ಲಪಕ್ಷದ ಏಕಾದಶಿಯ ಚಂದಿರನಂತೆ ಮೂಡಿತು. ಹಿಂದಿನ ದೋಸೆಯ ನೆನಪಿನಿಂದ ಅದನ್ನು ಸಾಕಷ್ಟು ಹೊತ್ತು ಬೇಯಿಸಿದೆ. ನಿಧಾನವಾಗಿ ಎತ್ತಿದಾಗ ಹಾಗೆಯೇ ಮೇಲೆ ಬಂತು. ತಿರುವಿ ಹಾಕಿ ಇನ್ನಷ್ಟು ಹೊತ್ತು ಬೇಯಿಸಿ, ಹೆಂಚಿನಿಂದಿಳಿಸಿದೆ. ಬಾಯಿಗಿಟ್ಟುಕೊಂಡೆ, ರುಚಿಯಾಗಿಯೂ ಇತ್ತು. ಮೊಸರಿನ ಹುಳಿ, ಕ್ಯಾರೆಟ್ ಸಿಹಿ, ಉಪ್ಪಿನ ರುಚಿಯಜೊತೆಗೆ ರಾಗಿಯ ಒಗರು ರುಚಿಯೂ ಸೇರಿ ಹಿತವಾಗಿತ್ತು.

ಹರಕೆ ಹೊತ್ತದ್ದಕ್ಕೂ ಸಾರ್ಥಕವಾಯಿತೆಂಬ ಭಾವದಿಂದ, ಇನ್ನು ರಾಗಿ ದೋಸೆ ಮಾಡುವ ಹದ ನನಗೆ ಸಿಕ್ಕಿತೆಂದು ಗರ್ವ ಪಟ್ಟುಕೊಂಡೆ, ಇದೆಲ್ಲೋ ರಾಮಧಾನ್ಯಕ್ಕೆ ತಿಳಿಯಿತೆಂದು ಕಾಣುತ್ತದೆ. ಅರ್ಜುನನ ಮದವಡಗಿಸಲು ಶ್ರೀಕೃಷ್ಣ ಸಂಕಲ್ಪ ಮಾಡಿದಂತೆ ಅದೂ ಸಂಕಲ್ಪ ಮಾಡಿರಬೇಕು. ಐದನೇ ದೋಸೆಗೆ ಮೊದಲ್ ದೋಸೆಗಾದ ಗತಿಯೇ ಆಯ್ತು. ಎಚ್ಚರಿಕೆಯಿಂದ ಇನ್ನೆರಡು ದೋಸೆ ಹುಯ್ದೆ. ಆದರಲ್ಲಿ ಒಂದು ತಿನ್ನುವಂತಿತ್ತು. ಹಿಟ್ಟೇನೋ ಸಾಕಷ್ಟಿತ್ತು. ಆದರೆ ಮುಂದೆ ದೋಸೆ ಹುಯ್ಯಲು ತಾಳ್ಮೆ ನನ್ನಲ್ಲಿ ಉಳಿಯಲಿಲ್ಲ. ಈ ಎರಡು ದೋಸೆಗಳೋ ನನಗೆ ಯಾವ ಮೂಲೆಗೂ ಸಾಲವು. ಹಿಟ್ಟನ್ನು ತಂಗಳು ಪೆಟ್ಟಿಗೆಯಲ್ಲಿಟ್ಟು, ಒಂದಷ್ಟು ಅಕ್ಕಿಗೆ ನೀರು ಹಾಕಿ ಅನ್ನ ಮಾಡಲು ಇಟ್ಟೆ, ಮನೆಯಿಂದ ತಂದ ಹುಳಿಯನ್ನದ ಗೊಜ್ಜಿನೊಂದಿಗೆ, ಮಾವಿನಕಾಯಿ ತೊಕ್ಕು ಊಟಕ್ಕೆ ನನಗೆ ಜೊತೆಯಾಯಿತು. ಕಲಸಿದ ಹಿಟ್ಟು ಮಾರನೇ ದಿನ ದೋಸೆಯಾಯಿತು.! ಈಗ ನಾನು ನಾನೇ ಮೆಚ್ಚುವ ದೋಸೆ ಮಾಡುವಲ್ಲಿ ಪರಿಣಿತನಾಗಿದ್ದೇನೆ. ರಾಗಿ ಹಿಟ್ಟು ಇನ್ನೂ ಸಾಕಷ್ಟಿದೆ. ನಿಮ್ಮಲ್ಲಿ ಯಾರಾದರೂ ಇಲ್ಲಿಗೆ ಬರುವರಿದ್ದರೆ, ಒಂದು ತೆಂಗಿನಕಾಯಿ, ಎರಡು ಮೆಣಸಿನಕಾಯಿ ಹಿಡಿದು ತನ್ನಿ, ರಾಗಿ ದೋಸೆಗೆ ಚಟ್ನಿ ಮಾಡಿ ತಿನ್ನೋಣವಂತೆ. ನನ್ನ ಲೆಕ್ಕದಲ್ಲಿ ಬೀರು ನಿಮಗಭ್ಯಂತರವಿಲ್ಲದಿದ್ದರೆ.

No comments:

Post a Comment