ಹುಲಿರಾಜನ ಮುಂದೆ,
ಬಂತು ಹುಲಿ ಮಂದೆ
ತಂದಿತೊಂದು ದೂರು
"ಹದಿನೈದು ದಿನ ಕಳೆದು
ಹದಿನಾರನೇ ರಾತ್ರಿ ಇದು.
ತಿಂದಿಲ್ಲ ತುಂಡನೊಂದೂ
ಅಜಮಿಳನ ಕುರಿಗಳನು
ಕಾಯುತಿದೆ ಹೊಸನಾಯಿ
ಹತ್ತಿರಕೂ ಹೋಗಬಿಡದು
ಅದು. ಕಟ್ಟಿಬಿಟ್ಟಿದೆ ಬಾಯಿ"
"ಏನೆಂದಿರೇನೆಂದಿರಿ.. "
ಆರ್ಭಟಿಸಿದನು ಹುಲಿರಾಜ
"ಮುಂದಾಗಿ ಬರಲಿಲ್ಲವೇಕೆ..
ಇಂದೇ ಹೊರಟಿಹನು ಕಾಳಗಕೆ
ಹಬ್ಬದೂಟಕೆ ಸಿದ್ದರಾಗಿ,
ಆ ಕುನ್ನಿ ಕಲಿಯಲಿದೆ ಪಾಠ ಹೊಸದಾಗಿ."
"ಚಿರಾಯುವಾಗಲಿ ನಮ್ಮ ವೀರ,
ನಾಯಿ ಸದೆಬಡಿವ ಶೂರ"
ಹಾರೈಕೆಯ ಸಮರ ಘೋಷಣೆಗಳು
ಹುಲಿಮಂದೆಯಿಂದ.
"ಇರಲಿ ತುಸು ಎಚ್ಚರ,
ಹಿಂತಿರುಗಿ ಕ್ಷೇಮದಿಂದ"
ಎಂದಾಕೆ ಹುಲಿರಾಣಿ
ಪ್ರೀತಿಯೊಳಡಗಿದ ದುಗುಡದಿಂದ.
ನಡೆದಾಯ್ತು ಕಾಳಗಕೆ ಹುಲಿರಾಯ
ಅರುಣ ಮೂಡುವ ಮುನ್ನ
ಕಳೆಯುವದರೊಳಗೊಂದು ಗಂಟೆ
ಹುಲಿರಾಯ ಬಂದ ಹಿಂದೆ.
ಬಲಗಣ್ಣ ಮೇಲೊಂದು ಗುರುತು,
ಕಾಲೊಂದು ಕುಂಟುತಿಹುದು.
ಬಾಲ ಮುದುರಿದ್ದನು ಸೆಟೆಸಿ ನುಡಿದ
"ಸಿದ್ಧರಾಗಿ ವೀರರೇ..
ಸಿದ್ಧ ವಿದೆ ಯೋಜನೆಯು..
ಯುದ್ಧಭೂಮಿಯ ನಕ್ಷೆ ಯೂ
ಆ ಜಾಗವನೆಲ್ಲ ನಾ ಬಲ್ಲೆ
ಆ ಕುನ್ನಿಗಿನ್ನಿಲ್ಲವಲ್ಲಿ ನೆಲೆ
ನುಗ್ಗಿ ಹೋರಾಡಿ ಬಡಿಯಿರಿ ಬಗ್ಗು
ಕುಗ್ಗಿ ಸಾಯಲುಬೇಕು ಕುನ್ನಿ ಕೊಬ್ಬು
ಬಗ್ಗದೆಯೇ ಹೊಕ್ಕು ಕುಗ್ಗದೆಯೇ ಕಾದಿರೈ.
ಮಗ್ಗುಲಲೇ ನಾನಿರುವೆ ಬೇಡ ಭಯವು "
ಐವತ್ತು ಹುಲಿಗಳ ಮಂದೆ,
ರಾಜನಿರುವುದೂ ಸೇರಿ ಹಿಂದೆ,
ಒಟ್ಟಾರೆ ಐವತ್ತೊಂದೇ..
ಅಜಮಿಳನ ನಾಯಿ
ಬಿಡಲಿಲ್ಲ ಯಾರನ್ನೂ ಮುಂದೆ.
ಮಿಂಚಿನಂತಹ ವೇಗ
ಶೌರ್ಯದಲಿ ಪರಿಘ
ಬಂದಿಯಾದುವು ಹುಲಿಗಳೆಲ್ಲ
ಯೋಜನೆಯು ಕೈಗೂಡಿ ನಡೆಯಲಿಲ್ಲ
ಅಜಮಿಳನ ಮುಂದು
ಬಂಧಿ ಹುಲಿಗಳ ಹಿಂಡು.
" ಬಪ್ಪರೆ ಭಲಾ ಅಜಮಿಳಾ..
ಮೆಚ್ಚಿ ಅಹುದೆನ್ನಬೇಕು
ನಿನ್ನೊಲವಿನ ಕುನ್ನಿಯ ಶೌರ್ಯ
ಆದರೂ ನಿನಗೊಂದು ಮಾತು.
ನಾವಿಲ್ಲಿ ಬರಲಿಲ್ಲ ಬೇಟೆಗೆ
ಬಂದದ್ದು ನಿನ್ನ ಭೇಟಿಗೆ.
ನಾವಾಡಿದ್ದರೆ ಬೇಟೆ,
ನಿನ್ನ ಕುನ್ನಿಗುಳಿಗಾಲವುಂಟೇ?
ಗೆಲುವಿಂದೇನು? ಸೋಲಾದರೇನು?
ಮುಖ್ಯ ಕಾರ್ಯ ಸಾಧಿಸುವ ರೀತಿ
ನಮಗುಂಟೆ ಕಾಡಿನಲಿ ಸೋಲಿನಾ ಭೀತಿ
ಸರಳ ಬದುಕಿನ ಬುನಾದಿಯಲಿ
ಬೆಳೆದು ಸುಳ್ಳಾಡದೆ ನಡೆವ ನಾಯಿ
ಈ ಮಾತು ಕೇಳಿ ನೊಂದು ಹೃದಯದಲಿ
ತನ್ನೊಡೆಯನಿಗೆ ನಿಜ ತಿಳಿಸಲೆತ್ನಿಸಿತು ಸನ್ನೆಯಲಿ
ಅಜಮಿಳ ಪಳಗಿದವ ರಾಜನೀತಿಯಲಿ
ನೋಡಿಯೂ ನೋಡದಂತಿಹನಲ್ಲಿ
ಹುಲಿರಾಯನ ನುಡಿಗಳೆಲ್ಲವ ನಿಜವೆಂದು ನಂಬಿದಂತೆ
ಬಿಡುಗಡೆಯ ನೀಡಿ ಹುಲಿಗಳಿಗೆಲ್ಲ
ಔತಣಕೆ ನಿಂತಿರಲು ಬಿನ್ನಹವಿತ್ತ.
ರಾತ್ರಿಯೂಟಕೆ ಕಡಿದು ಎಳೆ ಮರಿಯ
ಸಂಧಿಪತ್ರವನಿಟ್ಟ ಸಹಿ ಹಾಕಲು
ಜೀವನವೆಲ್ಲ ಗೆಳೆಯರಾಗಿರಲು
ಭೋಜನ ಮುಗಿಯುವ ಮೊದಲು
ಉಡುಗೊರೆಗಳಾಗಿ ನೀಡಿದನು
ಉಣ್ಣೆ -ಚರ್ಮಗಳ ಕೊಡುಗೆಗಳ
ಮುಟ್ಟಾಳನಲ್ಲ ಅಜಮಿಳನು
ಹುಲಿಗಳಿಗೂ ಬೇಕು ಊಟ ಎಂದರಿತಿಹನು
ಕುರಿಮಂದೆಯೊಡನೆ ಹೊಟ್ಟೆ ತುಂಬಿದ
ಹುಲಿ ಮಂದೆ ಕುಡಿವಾಗ ನೀರನೊಂದೇ ಕೊಳದಲಿ
ಅಜಮಿಳನು ನಸುನಗುತಾ ನುಡಿಸುತಿಹನು ಮುರಲಿ
ಅರುಣ್ ಕೋತಲ್ಕರರ "Ajamil and Tigers" ಪದ್ಯದ ಭಾವಾನುವಾದ
No comments:
Post a Comment