Pages

Tuesday, February 22, 2011

ಚಿನ್ನದ ಮಲ್ಲಿಗೆ ಹೂವೆ

ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ
ಚಲವು ನನ್ನಲ್ಲಿ ಏಕೆ

ಮಾತಲ್ಲಿ ಜೇನು ತುಂಬಿ
ನೂರೆಂಟು ಹೇಳುವೆ
ನನಗಿಂತ ಚೆಲುವೇ ಬರಲು
ನೀ ಹಿಂದೆ ಓಡುವೆ

ನಿನ್ನನ್ನು ಕಂಡ ಕಣ್ಣು
ಬೇರೇನೂ ನೋಡದಿನ್ನು
ನಿನಗಾಗಿಯೇ ಬಾಳುವೆ ಇನ್ನು ನಾನು

ಹೊನ್ನಿನ ದುಂಬಿಯೆ ಇನ್ನು
ನಿನ್ನ ನಂಬೆನು ನಾನು
ನನ್ನ ಮೊಗವ ಕಂಡಾಗ
ನೆನಪು ಬಂದಾಗ
ಒಲವು ಬೇಕೆಂದು ಬರುವೆ

ಆ ಸೂರ್ಯಚಂದ್ರ ಸಾಕ್ಷಿ
ತಂಗಾಳಿ ಸಾಕ್ಷಿಯು
ಎಂದೆಂದು ಬಿಡದಾ ಬೆಸುಗೆ ಈ ನಮ್ಮ ಫ್ರೀತಿಯು
ಬಂಗಾರದಂಥಾ ನುದಿಯ
ಸಂಗಾತಿಯಲ್ಲಿ ನುಡಿದು
ಆನಂದದ ಕಂಬನಿ ತಂದೆ ನೀನು

Monday, February 07, 2011

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ

ಮೊನ್ನೆ ಶನಿವಾರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಅಲ್ಲಿ ನಾನು ಮಾಡಿದ್ದು ಏನೂ ಇಲ್ಲ. ಯಾವ ಗೋಷ್ಟಿಯಲ್ಲೂ ಭಾಗವಹಿಸಲಿಲ್ಲ. ಯಾವ ಪ್ರಶ್ನೆ ಯನ್ನೂ ಯಾರಿಗೂ ಕೇಳಲಿಲ್ಲ. ಅಷ್ಟೇ ಏಕೆ ಯಾವ ಕವಿಯನ್ನೂ/ ಸಾಹಿತಿಯನ್ನೂ ನೋಡಲಿಲ್ಲ.

ಮನೆಮಂದಿಯೊಂದಿಗೆ ಅಲ್ಲಿಗೆ ಹೋದ ನನ್ನ ಮೊದಲ ಗಮನ ಇದ್ದದ್ದು ಪುಸ್ತಕ ಪ್ರದರ್ಶನದತ್ತ. ಆದರೆ ಪಾರ್ಕಿಂಗ್ ಸಿಗುವುದರೊಳಗೆ ಸುಮಾರು ಅರ್ಧ ಗಂಟೆ ಸಮಯ ಕಳೆದು ಹೋಯಿತು. ವಾಹನ ನಿಲ್ಲಿಸಿ, ನಡೆದು ಹೊರಟರೆ, ಊರ ಜಾತ್ರೆಯಲ್ಲಿ ಹರಡಿದಂತೆ ವ್ಯಾಪಾರಿಗಳ ಸುಗ್ಗಿ, ಏನುಂಟು ಏನಿಲ್ಲ ಇಲ್ಲಿ? ಹಾಲು ಬಿಳುಪಿನ ಅಂಗಿಗಳು ಬೇಕೆ..? ಬೆಂಗಳೂರು ಚಳಿ ತಡೆಯುವ ಸ್ವೆಟರುಗಳೇ..? ಬಣ್ಣದ ಬಲೂನುಗಳೇ?, ನೀರಿನಲ್ಲಿ ಹಾಕಿದರೆ ಊದಿಕೊಳ್ಳುವ ಬಣ್ಣಾದ ಮಣಿಗಳೇ? ನವಿಲುಗರಿಗಳೇ? ರಾಜಣ್ಣ , ವಿಷ್ಣುವರ್ಧನರ ಚೆಂದದ ಕಟ್ಟು ಹಾಕಿಸಿಕೊಂಡ ಚೆಂದದ ಚಿತ್ರಗಳೇ? ಬಾಯಾರಿಕೆ ತಣಿಸಲು ಎಳನೀರು, ಕಬ್ಬಿನಹಾಲು, ಹಣ್ಣಿನರಸಗಳೇ? ರಂಗವಲ್ಲಿ ಹಾಕುವ ಹೊಸ ಸಲಕರಣೆಗಳೇ? ಹೊಸಮಾದರಿಯ ಒಂದೊಂದು ಕೋನದಿಂದ ಒಂದೊಂದು ರೀತಿಯಾಗಿ ಕಾಣುವ ಚಿತ್ರಪಟಗಳೇ ಜೋಕು, ದೊಡ್ಡವರ ಜೋಕು, ಪೋಲಿ ಜೋಕು, ಜ್ಯೋತಿಷ್ಯದ ಪುಸ್ತಕಗಳೇ? ಅಂದದ ಹೆಂಗಸಿನ ಚೆಂದಗಾಣಿಸುವ ಶೃಂಗಾರ ಸಾಮಗ್ರಿಗಳೇ? ಎಲ್ಲವೂ ಇದ್ದ ಈ ಬೀದಿಯನ್ನು ಹಾದು ಮುಖ್ಯದ್ವಾರಕ್ಕೆ ಬರುವುದರಲ್ಲಿ ಸಾಕು ಬೇಕಾಯಿತು.

ಹೌದು ಇದೆಲ್ಲದಕ್ಕೂ ಖಳಸಪ್ರಾಯವಾಗಿ ಸುತ್ತೆಲ್ಲಾ ಫ್ಲೆಕ್ಸ್ ಬೋರ್ಡುಗಳು. ಕನ್ನಡ ಓರಾಟಗಾರರ ಚಿತ್ರಗಳು, ಪಾಪ ಅವರ ಮಧ್ಯೆ ಸಮ್ಮೇಳನಾಧ್ಯಕ್ಷ ಹಿರಿಯ 'ಜೀವಿ'ಯವರ ಚಿತ್ರ!. ಬೆಂಗಳೂರು 'ಮೆಜೆಸ್ಟಿಕ್' ನಿಂದ ಸಮ್ಮೇಳನಕ್ಕೆ ಉಚಿತವಾಗಿ ಕರೆತರುವ ಆಟೋಗಳು. ಕೈಕೊಟ್ಟ ಈಟಿ ( ಐ.ಟಿ) ಗಳು.

ಕನ್ನಡಿಗರು ತುಂಬಾ ಮೃದು ಸ್ವಭಾವದವರೆನ್ನುವುದಕ್ಕೆ ಸಾಕ್ಷಿಯಾಗಿ ಇಲ್ಲಿ ಎಂತಹುದೇ ಭದ್ರತಾ ತಪಾಸಣೆ ಇರಲೇ ಇಲ್ಲ! ಅಷ್ಟು ಜನ ಸೇರಿದ ಸಭೆ ಸಂಪೂರ್ಣ ಸುರಕ್ಷಿತವೆಂದು ಯಾರೂ ಖಾತರಿ ಮಾಡಿಕೊಳ್ಳಬೇಕಾಗಿಲ್ಲ. ನೀವೇ ನೋಡಿದಿರಲ್ಲ, ಎಂತಹ ಸುರಕ್ಷತೆಯೂ ಇಲ್ಲದಿದ್ದರೂ ಯಾವುದೇ ತೊಂದರೆ ಇಲ್ಲದೆ ಈ ಕಾರ್ಯಕ್ರಮ ಯಶಸ್ವಿಯಾಗಿ ಮುಗಿದದ್ದು..! ಬೆಂಗಳೂರಿನಲ್ಲಿ ಹಲವು ಸಭೆ ಸಮಾರಂಭಗಳು ಜರುಗುತ್ತಲೇ ಇರುತ್ತವೆ, ಹಾಗಾಗಿ ಕೋಟಿ ಜನಸಂಖ್ಯೆಯ ಬೆಂಗಳೂರಲ್ಲಿ ನಾಲ್ಕೈದು ಲಕ್ಷ ಕನ್ನಡ ಜನ ಸೇರುವ ಈ ಸಮಾರಂಭಕ್ಕೆ ಏನೂ ಸಮಸ್ಯೆಯಿಲ್ಲ.

ಇನ್ನು ಪುಸ್ತಕ ಪ್ರದರ್ಶನದ ಒಳ ಹೋಗಲು, ನೂಕು ನುಗ್ಗಲು, ಒಳಗೆ ನಿಮ್ಮ ಕುತೂಹಲ ತಣಿಸಲು ನೂರಾರು ಪ್ರಕಾಶಕರ ಲಕ್ಷಾಂತರ ಪುಸ್ತಕಗಳು. ತಮಿಳಿನ ರಂಗವಲ್ಲಿ, ಇಂಗ್ಲಿಷಿನ ರೈಮ್ , ಜ್ಯೋತಿಷ್ಯದ ಪುಸ್ತಕಗಳ ಜೊತೆಯಲ್ಲಿ, ವಿವಿಧ ಜ್ಯೋತಿಷ್ಯಮಣಿಗಳು, ಇವುಗಳ ಜೊತೆಗೇ, ಸಮಗ್ರ ಕುವೆಂಪು ಕಾವ್ಯ, ಶೂನ್ಯಸಂಪಾದನೆಯ ವಿಮರ್ಶೆ, ಕೌಟಲೀಯ ಅರ್ಥಶಾಸ್ತ್ರ, ಲಂಕೇಶ್ ಪ್ರತಿಪಾದಿತ ಐಲ್ ಪುಲ್ಲಿಂಗ್ ಚಿಕಿತ್ಸೆ. ಇಗೋ ಕನ್ನಡ, ಭಾಷೆ, ಗಾಂಧೀಜಿಯ ಆತ್ಮ ಚರಿತ್ರೆ. ಅಲ್ಲಿರುವ ಪುಸ್ತಕಗಳನ್ನು ಕಣ್ತುಂಬಿಕೊಳ್ಳಲೂ ಸಾಧ್ಯವಿಲ್ಲದಷ್ಟು ಜನಜಂಗುಳಿ. ಮಳಿಗೆ ನೋಡಿಕೊಳ್ಳಲ್ಲು ಇರುವ ಇಬ್ಬರಿಗೆ ಕಣ್ಣು ತಿರುಗಿಸಲೂ ಪುರುಸೊತ್ತಿಲ್ಲದಷ್ಟು ಕೆಲಸ, ಬಿಲ್ಲು ಹರಿಯುವುದರೊಳಗೆ ಇಲ್ಲೊಂದು ಪುಸ್ತಕ ಹಾರಿಹೋದರೆ? ದೇವನೇ ಬಲ್ಲ. ಕಾಸು ಕೊಟ್ಟು ಪುಸ್ತಕ ಕೊಂಡವರೆಷ್ಟೋ? ಮೆಲ್ಲಗೆ ಜೋಳಿಗೆಯೊಳಗೆ ನುಸುಳಿದವೆಷ್ಟೋ? ಇರಲಿ ಬಿಡಿ ಕನ್ನಡ ಕೃತಿಗಳಿಗೆ ಓದುಗರು ಸಿಕ್ಕರಲ್ಲಾ ಅದು ಮುಖ್ಯ. ತಪ್ಪು ನಾವು ಹೀಗೆಲ್ಲಾ ಅನ್ನಬಾರದು. "ಏಳು" ಕೋಟಿಯ ವಹಿವಾಟು ನಡೆದಿದೆ ಅಲ್ಲಿ ಗೊತ್ತಾ? ಜೊತೆಗೆ ಪುಸ್ತಕ ಪ್ರದರ್ಶನ ಇನ್ನೂ ಮುಂದುವರೆದಿದೆಯಂತೆ. ಸದ್ಯ ನಮ್ಮ ರೈತರು ಈರುಳ್ಳಿಯನ್ನು ರಸ್ತೆಯಲ್ಲಿ ಸುರಿದ ಹಾಗಾಗಲಿಲ್ಲವಲ್ಲ.!

ಸಾರಸ್ವತ ಲೋಕ ಒಗ್ಗಟ್ಟಾಗಿ, ಚಿಮೂಗೆ ಗೌರವ ಡಾಕ್ಟರೇಟ್ ನಿರಾಕರಿಸಿದ ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡಿದೆಯಂತೆ, ಆದರೆ ಬಡಸಾಹಿತಿಯ ಮಾತಿಗೇನು ಬೆಲೆ. ಕನ್ನಡದ ಕೊಲೆಗಡುಕ ಇಂಗ್ಲಿಷ್ ಎಂದರೆ ಯಾರಿಗೇನು ನಷ್ಟ. ನಮ್ಮ ಅಡಿಗೆಯವರು ನೈಫ್ ಅನ್ನೇ ಹಿಡಿಯುತ್ತಾರೆ, ಡಿನ್ನರಿಗೇ ಕರೆಯುತ್ತಾರೆ.