Pages

Wednesday, August 19, 2015

ಮಂಡಿಕಲ್ಲು ಸರ್ಕಾರಿ ಪ್ರೌಢಶಾಲೆ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಮಾಡಿದ ಭಾಷಣ.



ಮಾನ್ಯ ಮುಖ್ಯೋಪಾಧ್ಯಾಯರಾದ ಶ್ರೀ ಕೃಷ್ಣಮೂರ್ತಿಯವರೇ, ಊರಿನ ಹಿರಿಯರೇ, ಪ್ರಮುಖರೇ, ಭವ್ಯ ಭಾರತವನ್ನು ಬೆಳಗಲು ನಿಂತಿರುವ ಯುವ ಪ್ರಜೆಗಳೇ..
ಜನನೀ ಜನ್ಮ ಭೂಮಿಶ್ಚ ಸ್ವರ್ಗದಪೀ ಗರೀಯಸೀ
ಭಾರತೀಯರ ಇತಿಹಾಸದ ಪುಟಗಳಲ್ಲಿ  ಇಂದು  ಸ್ವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಅರವತ್ತೇಳು ವರ್ಷಗಳ ಹಿಂದೆ ಇದೇ ದಿನ, ಸರಿಸುಮಾರು ಸಹಸ್ರಮಾನದ ಪರಕೀಯರ ಆಳ್ವಿಕೆಯಿಂದ ಬಿಡುಗಡೆಯಾಗಿ, ಭಾರತ ಮಾತೆಯ ತ್ರಿವರ್ಣದ ಧ್ವಜ  ಸ್ವಾತಂತ್ರದ ಗಾಳಿಗೆ ತೆರೆದು ಹಾಡಿ ನಲಿದ ಮೊದಲ ದಿನ.  ಈ ಸ್ವಾತಂತ್ರದ ತಂಗಾಳಿ ಸುಮ್ಮನೆ ಬೀಸಲಿಲ್ಲ.. ಕೋಟಿ ಕೋಟಿ ಭಾರತೀಯರ ತ್ಯಾಗದ ಹೊಳೆಯಲ್ಲಿ ತೇಲಿ ಬಂತು.  ಲಕ್ಷ ಲಕ್ಷ  ವೀರಯೋಧರ ರಕ್ತಧಾರೆಯ ತರ್ಪಣದಲ್ಲಿ ಮಿಂದೆದ್ದು ಬಂತು.
ಸಾವಿರ ಸಾವಿರ ಚಿಂತಕರ ಮನದ ಮೂಸೆಯಲ್ಲಿ ಕಾದು ಎರಕವಾಗಿ ಬಂತು.  ಎಂತೆಂಥಹ ಮಹಾನುಭಾವರು. ಎಂತೆಂಥಹ ತ್ಯಾಗಮೂರ್ತಿಗಳು..
ಮಹಾತ್ಮ ಗಾಂಧೀಜಿಯಿಂದ ಮೊದಲುಗೊಂಡು ಸ್ವಾತಂತ್ರ್ಯ ವೀರ ಸುಭಾಶ್ ಚಂದ್ರ ಬೋಸರ ವರೆಗೆ.
ಜವಾಹರ್ ಲಾಲ್ ನೆಹರು, ಮೋತಿಲಾಲ್ ನೆಹರು, ಅಣ್ಣಾ, ಕಾಮರಾಜ್, ದೊಂಧಿಯ ವಾಗ, ಬಾಲಗಂಗಾಧರ ತಿಲಕ್, ಕುದೀರಾಂ ಬೋಸ್, ಚಂದ್ರಶೇಖರ್ ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್ಲಾ, ಭಗತ್ ಸಿಂಗ್, ಉಧಮ್ ಸಿಂಗ್, ಹೇಮು ಕಲಾನಿ, ಅಶ್ಫಾಕುಲ್ಲ ಖಾನ್, ಮನ್ಮಥ್ ನಾಥ್ ಗುಪ್ತ, ವಾಸುದೇವ ಫಡ್ಕೆ, ಅನಂತ್ ಕಂಹರೆ, ಕೃಷ್ಣಾಜಿ ಕರ್ವೆ, ವೀರ ಸಾವರ್ಕರ್, ಜತಿನ್, ಸುಖದೇವ್, ರಾಜಗುರು, ಮದನ್ ಲಾಲ್ ಧಿಂಗ್ರಾ, ಅಲ್ಲೂರಿ ಸೀತಾರಾಮ ರಾಜು, ಕುಶಾಲ್ ಕೊನ್ವರ್, ಸೂರ್ಯ ಸೆನ್, ಒಬೈದುಲ್ಲಾ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ರಾಜೇಂದ್ರ ಲಾಹಿರಿ, ಟಿಪ್ಪು ಸುಲ್ತಾನ್. ಲಾಲಾ ಲಜಪತ್ ರಾಯ್, ಬಿಪಿನ ಚಂದ್ರ ಪಾಲ್  ಅಬ್ಬಬ್ಬಾ.. ಎಷ್ಟು ಸಾಹಸಿಗಳು, ಎಷ್ಟು ತ್ಯಾಗಿಗಳು, ಎಷ್ಟು ಮಹಾತ್ಮರು, ಎಷ್ಟು ಹುತಾತ್ಮರು,
ಹೆಸರು ಹೇಳೋಣವೆಂದರೆ ಒಬ್ಬರೇ –ಇಬ್ಬರೇ.. ಕೋಟಿ ಕೋಟಿ ಜನ
ಜಲಿಯನ್ ವಾಲಾ ಬಾಗ್ ನ ದುರಂತ ಎಷ್ಟು ಭೀಕರ. ಅಂತಹುದೇ ಘಟನೆ ನಮ್ಮದೇ ಜಿಲ್ಲೆಯ ವಿದುರಾಶ್ವತ್ಥದಲ್ಲಿ. ೧೯೩೮ರ ಎಪ್ರಿಲ್ ೨೫ರಂದು ನಡೆದ ಆ ಗೋಲೀಬಾರ್ ನಲ್ಲಿ ಹುತಾತ್ಮರಾದವರು ೩೫ ಮಂದಿ. ಹಳ್ಳಿಯ ಮುಗ್ದರು. ಬ್ರಿಟಿಶ್ ವಸಾಹತುವಿನ ಭಾಗವಾಗಿದ್ದ, ಮೈಸೂರು ಸಂಸ್ಥಾನದಲ್ಲೂ, ಪ್ರತಿಭಟಿಸಿ, ಭಾರತದ ಏಕತೆಯನ್ನು ಎತ್ತಿ ಹಿಡಿದ ಘಟನೆ ಅದು.  ಜನವರಿ ೨೬ನೇ ತಾರೀಕು ಜನಿಸಿ, ಆಗಸ್ಟ್ ೧೫ರಂದು ನೇಣುಗಂಬಕ್ಕೆ ಕೊರಳೊಡ್ಡಿದ ಧೀರ ನಮ್ಮವನೇ ಆದ ಸಂಗೊಳ್ಳಿ ರಾಯಣ್ಣ. ಇಂದಿಗೂ, ಅವನ ಸಮಾಧಿಯ ಮೇಲಿನ ಅಶ್ವಥ ವೃಕ್ಷ ಬೇಡಿದ್ದನ್ನು ನೀಡುವ ಕಾಮಧೇನು ಎಂದು ಹೆಸರಾಗಿದೆ.
ಹೀಗೆ ಹಲವು ಕೋಟಿ ಮಂದಿ, ತಮ್ಮದೆಲ್ಲವನ್ನೂ ಒತ್ತೆ ಇಟ್ಟು, ಪ್ರಾಣವನ್ನೂ ಕಳೆದುಕೊಂಡು, ನಮಗೆ ಸ್ವಾತಂತ್ರ ತಂದುಕೊಟ್ಟರಲ್ಲಾ.. ಏನು ಸ್ವಾತಂತ್ರ್ಯವೆಂದರೆ..? ಪ್ರಾಣ ತ್ಯಾಗ ಮಾಡಿದ ಈ ವೀರರಿಗೆ, ಪ್ರಾಣಕ್ಕಿಂತ ಪ್ರಿಯವಾಗಿರಬಹುದಾದ ಈ ಸ್ವಾತಂತ್ರದ .ಕಲ್ಪನೆ ಹೇಗಿರಬಹುದು. ಅಂತಹ ಬಲಿದಾನದಿಂದ ನಾವು ಪಡೆದ ಈ ಸ್ವಾತಂತ್ರವನ್ನು ನಾವು ಉಳಿಸಿಕೊಳ್ಳುವುದು ಹೇಗೆ, ಬೆಳೆಸುವುದು ಹೇಗೆ, ಬಳಸುವುದು ಹೇಗೆ.
ಸ್ವಾತಂತ್ರ ಎನ್ನುವ ಪದಕ್ಕೆ, ನಮ್ಮಿಚ್ಚೆಯಂತೆ ಬದುಕುವುದು ಎನ್ನುತ್ತದೆ ಶಬ್ದಕೋಶ. ಆದರೆ, ಇಂಗ್ಲಿಷ್ ಭಾಷೆಯ ಇಂಡಿಪೆಂಡೆಂಟ್ ಎನ್ನುವ ಪದಕ್ಕೆ, ಬೇರೆಯವರ ಮೇಲೆ ಅವಲಂಬಿತವಾಗದೆ ಇರುವುದು ಎನ್ನುವ ಅರ್ಥವೂ ಇದೆ. ನಮ್ಮ ಇಚ್ಚೆಯಂತೆ ಬದುಕಲು ಬೇರೆಯವರಿಗೆ ತೊಂದರೆ ಕೊಡದಿದ್ದರೆ, ಇನ್ನೊಬ್ಬರ ಮರ್ಜಿಯಲ್ಲಿ ನಾವು ಬದುಕದಿದ್ದರೆ ಅದೇ ಸ್ವಾತಂತ್ರ. ಕನ್ನಡದ ಒಂದು ಗಾದೆ, ಇಲಿಯಾಗಿ ನೂರು ವರ್ಷ ಬಾಳುವುದಕ್ಕಿಂತ ಹುಲಿಯಾಗಿ ಒಂದೇ ವರುಷದ ಬದುಕು ಮೇಲು ಎನ್ನುತ್ತದೆ. ಹುಲಿಯಾಗಿ ಬದುಕಿದರೂ, ಹುಲ್ಲೆಯ ಜೀವಕ್ಕೆ ತೊಂದರೆ ಮಾಡದೆ ಬದುಕಬೇಕು. ಏಕೆಂದರೆ, ಮನುಷ್ಯ ಸಾಮಾಜಿಕ ಪ್ರಾಣಿ. ನಾವು- ನಮ್ಮ ಸಂಬಂಧಿಕರು- ನಮ್ಮ ಗೆಳೆಯರು-ನಮ್ಮ ಊರವರು-ನಮ್ಮ ತಾಲೂಕಿನವರು-ನಮ್ಮ ಜಿಲ್ಲೆಯವರು-ನಮ್ಮ ರಾಜ್ಯದವರು-ನಮ್ಮದೇಶದವರು  ಹೀಗೆ ಎಲ್ಲರೂ ನಮ್ಮವರೇ ಆಗುತ್ತಾರೆ.  ಮತ್ತು ಹೊರದೇಶಗಳಿಗೆ ಹೋದರೆ, ಅಲ್ಲಿ, ನಮ್ಮ ದೇಶದವರು, ನಮ್ಮ ಖಂಡದವರು, ಬಹುಶಃ ಮುಂದೆ, ಬೇರೆ ಗ್ರಹಗಳಿಗೆ ಹೋದರೆ, ನಮ್ಮ ಭೂಮಿಯವರು, ನಮ್ಮ ಗ್ಯಾಲಕ್ಸಿಯವರು ಎನ್ನಬಹುದೇನೋ?
ಇದನ್ನೇ ನಮ್ಮ ಹಿರಿಯರು ಹೇಳಿದ್ದು ವಸುದೈವ ಕುಟುಂಬಕಂ ಎಂದು. ಇಡೀ ವಿಶ್ವವೇ ಕುಟುಂಬ ಎನ್ನುವ ಭಾವನೆ ಇಲ್ಲಿದೆ. ಭೂಮಿ ಮೇಲೆ ನಾವು ವಾಸ ಮಾಡೋದಕ್ಕೆ ಕೊಡೊ ಬಾಡಿಗೆ ಅಂದ್ರೆ, ಅದನ್ನ ಹಿತವಾಗಿ ಮಿತವಾಗಿ ಬಳ್ಸಿ ನಮ್ಮ ಮುಂದಿನವರಿಗೆ ಇದನ್ನ ಬಳಸೋ ರೀತಿಯಲ್ಲಿ ಬಿಟ್ಟು ಹೋಗೋದು ಅಂತ ಕೈಲಾಸಂ ತಮ್ಮ ಟೊಳ್ಳು-ಗಟ್ಟಿ ನಾಟಕದಲ್ಲಿ ಹೇಳ್ತಾರೆ.
ಇವತ್ತು ನಾನು ಈ ಮಾತನ್ನು ಹೇಳುತ್ತಿರುವುದಕ್ಕೆ ಎರಡು ಕಾರಣ ಇದೆ. ಈ ಭೂಮಿ ಹುಟ್ಟಿ ನಾನೂರ ಅರವತ್ತು  ಮಿಲಿಯನ್ ಅಂದ್ರೆ ಸುಮಾರು ೪೬೦ ಕೋಟಿ ವರ್ಷಗಳಾಗಿವೆ.  ಈ ಭೂಮಿ ಹುಟ್ಟಿದಾಗಿನಿಂದ ಇವತ್ತಿನವರೆಗೆ ನಾವು ಒಂದು ಸಿನಿಮಾ ಮಾಡ್ತೀವಿ ಎಂದುಕೊಂಡರೆ, ಒಂದು ಮಿಲಿಯನ್ ವರ್ಷಕ್ಕೆ ಒಂದು ವರ್ಷ ಅಂತ ಇಟ್ಟುಕೊಂಡರೆ, ಈ ಭೂಮಿ ಮೇಲೆ ಈ ಮನುಷ್ಯ ಅನ್ನೋ ಪ್ರಾಣಿ ಬಂದು ಕೇವಲ ೪ ಗಂಟೆಗಳಾಗಿವೆ. ಅದರಲ್ಲಿ ನಮ್ಮ ಕೈಗಾರಿಕಾ ಕ್ರಾಂತಿ ನಡೆದು ಕೇವಲ ಒಂದು ನಿಮಿಷ.  ಈ ಒಂದು ನಿಮಿಷದಲ್ಲಿ, ಅರ್ಧ ಭೂಮಿಯನ್ನ ನಾವು ನಾಶ ಮಾಡಿದ್ದೇವೆ. ಪೂರ್ತಿ ನಾಶ ಮಾಡಲು ಕೇವಲ ಇನ್ನೊಂದು ನಿಮಿಷ ಅಷ್ಟೇ, ಆಮೇಲೆ ನಿಸರ್ಗ ಈ ಮನುಷ್ಯ ಅನ್ನೋ ಪ್ರಾಣಿಯನ್ನ ಭೂಮಿಯ ಮೇಲಿಂದ ಡೈನೋಸಾರ್ ನಂಥ ಪ್ರಾಣಿಗಳನ್ನು ಇಲ್ಲವಾಗಿಸಿದಂತೆ ನಾಶ ಮಾಡಿಬಿಡುತ್ತಾ..   ಗೊತ್ತಿಲ್ಲ..  ಆದರೆ ಇರುವಷ್ಟು ದಿನ ಈ ಭೂಮಿಯನ್ನ ನಾವು ನಿಮಗೆ ಉಳಿಸಿಕೊಡಬೇಕು. ನೀವು ನಿಮ್ಮ ಮುಂದಿನವರಿಗೆ ಉಳಿಸಿಕೊಡಬೇಕು.
ಮನುಷ್ಯನಿಗೆ ಇಂತಹ ಲಾಲಸೆ ಹುಟ್ಟಲು ಮುಖ್ಯ ಕಾರಣ, ಅವನೇ ಕಂಡುಹಿಡಿದ ಹಣ ಎನ್ನುವ ರಾಕ್ಷಸ. ೧೭ನೇ ಶತಮಾನದಲ್ಲಿ ವ್ಯಾಪಾರಕ್ಕೆಂದು ಬಂದ ಬ್ರಿಟಿಷರು, ಈ ದೇಶದ ಆಡಳಿತವನ್ನು ಹಿಡಿಯಲು, ಅದಕ್ಕೂ ಹಿಂದೆ, ಆಫ್ಘನ್ ಕಣಿವೆಯ ಅತ್ತಲಿಂದ ಭಾರತವನ್ನು ಲೂಟಿ ಮಾಡಲು ಬಂದ ದಾಳಿಕೋರರು, ಇಲ್ಲಿಯ ಸಂಪತ್ತನ್ನು ತಮ್ಮದಾಗಿಸಿಕೊಲ್ಲಲೆಂದೇ ಬಂದವರು.  ಇಂದು ಅಂತಹುದೇ ಆಕ್ರಮಣ ಜಾರಿಯಲ್ಲಿದೆ ಎಂದರೆ ನೀವು ನಂಬುತ್ತೀರಾ..?
ಹೌದು, ಬಹುರಾಷ್ಟ್ರೀಯ ಕಂಪನಿಗಳು, ಉದ್ಯೋಗ ಸೃಷ್ಟಿ, ಅಭಿವೃದ್ದಿ ಅನ್ನುವ ಹೆಸರಿನಲ್ಲಿ ನಮ್ಮ ದೇಶದ ಮೇಲೆ ದಾಳಿಯಿದುತ್ತಿದ್ದಾರೆ. ಇಂದಿನ ದೂರದರ್ಶನದ ಜಾಹೀರಾತಿನಲ್ಲಿ ಅವರು ತೋರಿಸುವ ಟೂತ್ ಪೇಸ್ಟ್ ಉಪಯೋಗಿಸದಿದ್ದರೆ, ಇಂತಹುದೇ ಶಾಂಪೂ ಹಾಕದಿದ್ದರೆ, ಇಂತಹ ಸೋಪನ್ನು ಬಳಸಿದ್ದಾರೆ, ಇಂತಹ ಚಡ್ಡಿ, ಕಾಚ ಹಾಕದಿದ್ದರೆ, ಇಂತಹ ಬಟ್ಟೆ ಬಳಸದಿದ್ದರೆ, ನಾವು ಹುಟ್ಟಿದ್ದೇ ವ್ಯರ್ಥ ಎಂದು ತೋರಿಸುತ್ತಾರೆ, ಇದೂ ಇವತ್ತಿನ ದಿನದ ದಾಳಿಯ ಒಂದು ವಿಧ.
ಇಂತಹ ದಾಳಿಯ ಪರಿಣಾಮವೇ ಇಂದು ನಮ್ಮನ್ನು ಕಾಡುತ್ತಿರುವ ರೈತರ  ಆತ್ಮಹತ್ಯೆ.
ಇದನ್ನು ಎದುರಿಸಬೇಕಾದ ಆತ್ಮಸ್ಥೈರ್ಯವನ್ನು ರೈತರಲ್ಲಿ ತುಂಬುವ ಕೆಲಸ ಮಾಡುವ ಶಕ್ತಿ ಇಂದಿನ ಯುವಜನತೆಯಾದ ನಿಮ್ಮಲ್ಲಿಯೇ ಇದೆ. ಸರಳ ಜೀವನ, ಮುಂದಾಲೋಚನೆ ಮತ್ತು ಪೊಳ್ಳು ಆಧುನಿಕತೆಗೆ ಮರುಳಾಗದೆ, ಧೃಡ ಮನಸ್ಸಿನಿಂದ ಕಾರ್ಯ ನಿರ್ವಹಿಸುವ ಕಾಯಕ ಯೋಗಿಗೆ ಎಂದೂ ಸೋಲಿಲ್ಲ ಎನ್ನುವ ಮಾತನ್ನು ನೆನಪಿಸಿ.
ಇತ್ತ, ನಮ್ಮಲ್ಲಿ ಹಲವರು, ಎಲ್ಲವೂ ನಮ್ಮಲ್ಲಿ ಇತ್ತು, ಆಯುರ್ವೇದದಲ್ಲಿ ಕ್ಯಾನ್ಸರ್, ಎಬೋಲಾ ತರದ ಕಾಯಿಲೆಗಳಿಗೂ ಮದ್ದು ಇತ್ತು. ಭಾರತೀಯರು ಬಹಳ ಹಿಂದೆಯೇ ವಿಮಾನ ಹಾರಿಸಿದ್ದರು. ಆನೇಕಲ್ ಸುಬ್ಬರಾಯರು ವೈಮಾನಿಕ ಶಾಸ್ತ್ರದಲ್ಲಿಯೇ ಒಂದು ಪುಸ್ತಕ ಬರೆದಿದ್ದರು. ಎನ್ನುವುದನ್ನೂ ಹೇಳುತ್ತಾರೆ. ಇದೂ ಕೇವಲ ಉತ್ಪ್ರೇಕ್ಷೆಯೆನ್ನುವುದನ್ನು ವಿಷಾದದಿಂದ ಇಲ್ಲಿ ಹೇಳಲಿಚ್ಚಿಸುತ್ತೇನೆ.
ತರ್ಕಬದ್ದ ಚಿಂತನೆ, ವೈಜ್ಞಾನಿಕ ತಳಹದಿಯ ಮೇಲೆ ತರ್ಕಬದ್ದ ಚಿಂತನೆಯ ಆಧಾರದಲ್ಲಿ, ಗಣಿತದ ಆಧಾರದ ಮೇಲೆ ನಿರೂಪಿಸಲಾಗದೆ ಹೋದರೆ ಅದನ್ನು  ಯಾರೂ ನಂಬಲಾರರು.
ಇಂತಹ ಯಾವುದೇ ಆಧಾರವಿಲ್ಲದೆ, ಪೊಳ್ಳುತನದ ಮಾತುಗಳನ್ನು ನಂಬುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವುದು ಕಂಡು ಬರುತ್ತದೆ. ಇವು ನಮ್ಮನ್ನು ದಾಸ್ಯಕ್ಕೆ ತಳ್ಳುತ್ತದೆ ಎನ್ನುವ ಎಚ್ಚರಿಕೆ, ಯುವಕರಾದ ನಿಮ್ಮಲ್ಲಿ ಮೂಡಬೇಕು.
ಒಂದು ಸಣ್ಣ ಕತೆಯನ್ನು ಇಲ್ಲಿ ಹೇಳಲು ಇಷ್ಟಪಡುತ್ತೇನೆ. ಬಹುಶ ಬೆಳೆಗೆರೆ ಕೃಷ್ಣಶಾಸ್ತ್ರಿಗಳು, ತಮ್ಮ ಗುರುಗಳ ಬಗ್ಗೆ ಹೇಳಿದ ಕತೆಯಿದು.
ಅವರು ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ ಅವರಿಗೆ ಜೀವಶಾಸ್ತ್ರದ ಅಧ್ಯಾಪಕರೊಬ್ಬರಿದ್ದರಂತೆ, ಒಂದು ದಿನ ತರಗತಿಗೆ, ತಲೆಬುರುಡೆಯೊಂದನ್ನು ತಂದು, ತಲೆಬುರುಡೆಯ ಭಾಗಗಳನ್ನು ತೋರಿಸಿ ಪಾಠ ಮಾಡುತ್ತಾ, ಹುಷಾರು ಇದು ಮೂರು ಸಾವಿರ ವರುಷಗಳ ತಲೆಬುರುಡೆ ಎಂದು ಹೇಳಿ, ಮುಂದುವರೆದರಂತೆ.  ಪಾಠ ಮುಗಿದ ನಂತರ ಹುಡುಗರನ್ನು ಉದ್ದೇಶಿಸಿ, ನಿಮಗ್ಯಾರಿಗಾದರೂ ಇಂದಿನ ಪಾಠದಲ್ಲಿ ಏನಾದರೂ ಅನುಮಾನಗಳಿವೆಯೇ? ಎಂದು ಕೇಳಿದ್ದಾರೆ, ಯಾರೂ ಯಾವ ಅನುಮಾನವನ್ನೂ ಕೇಳಲಿಲ್ಲ. ಅದಕ್ಕೆ ಅವರು ಹಾಗಿದ್ದರೆ ನನ್ನ ಪಾಠ ವ್ಯರ್ಥ ಎಂದರಂತೆ.
ಹುಡುಗರು “ಇಲ್ಲ ಗುರುಗಳೇ ನೀವು ಹೇಳಿದ್ದೆಲ್ಲಾ ನಮಗೆ ಚೆನ್ನಾಗಿ ಅರ್ಥವಾಗಿದೆ ” ಎಂದರಂತೆ.
ಅದಕ್ಕೆ ಉಪಾಧ್ಯಾಯರು “ಅಯ್ಯೋ ಮಂಕುಗಳೇ..!!  ಭಾಗ ಗುರುತಿಸುವುದನ್ನು ಯಾರು ಯಾವಾಗ ಬೇಕಾದರೂ ಕಲಿಯಬಹುದು, ಕಲಿಸಬಹುದು.  ಆದರೆ ವೈಜ್ಞಾನಿಕ ಚಿಂತನೆ ಎಲ್ಲರಿಗೂ ಬರುವಂತಹುದಲ್ಲ. ನಾನು ಮೂರು ಸಾವಿರ ವರುಷಗಳ ಹಿಂದಿನ ತಲೆಬುರುಡೆ ಎಂದರೆ ಅದು ನನಗೆ ಹೇಗೆ ಸಿಕ್ಕಿತು ಎನ್ನುವ ಅನುಮಾನ ನಿಮಗೆ ಬರದಿದ್ದರೆ, ವೈಜ್ಞಾನಿಕ ಚಿಂತನೆ ನಿಮಗೆ ದಕ್ಕುವುದಿಲ್ಲ” ಎಂದರಂತೆ. ಇಂತಹ ಚಿಂತನಾವಿಧಾನವನ್ನು ಬೆಳೆಸಿಕೊಳ್ಳುವುದು ಇಂದಿನ ಅತೀ ಮುಖ್ಯ ಅಗತ್ಯಗಳಲ್ಲಿ ಒಂದು. ಇದನ್ನೇ ರಾಷ್ಟ್ರಕವಿ ಮಾನ್ಯ ಕುವೆಂಪು ಅವರು ಹೇಳಿದ್ದು. “ಆತ್ಮಶ್ರೀ ಗಾಗಿ ನಿರಂಕುಶ ಮತಿಗಳಾಗಿ ಎಂದು” ನಮ್ಮ ಯೋಚನಾ ಶಕ್ತಿ ಯಾವ ಅಂಕುಶವೂ ಇಲ್ಲದೆ ಬಾನಾಡಿಯಾಗಿ ಅಲೆಯಬೇಕು. “आ नो भद्राः क्रतवो यन्तु विश्वतः” “ ಆನೋ ಭದ್ರಾ ಕ್ರತವೋ ಯಂತು ವಿಶ್ವತ: “ ಪ್ರಪಂಚದ ಎಲ್ಲ ಮೂಲೆಗಳಿಂದ ಜ್ಞಾನ ನಮ್ಮೆಡೆಗೆ ಹರಿದು ಬರಬೇಕು.
ಪುರಾಣ ಮಿಥ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತಿಯವಧ್ಯಂ
ಸಂತ ಪರೀಕ್ಷತಾರ್ತ್ ಭಜಂತೆ ಮೂಢಪರಪ್ರತ್ಯಯೇನ ಬುದ್ದಿಹಿ
ಎನ್ನುವ ಮಾತು ಕಾಳಿದಾಸನದು. ಅದು ಇಂದಿಗೂ ಸತ್ಯ. ಇದರ ಅರ್ಥವಾದರೂ ಇಷ್ಟೇ, ಹಿಂದಿನಿಂದ ಬಂದ ಮಾತ್ರಕ್ಕೆ ಎಲ್ಲವನ್ನೂ ಒಪ್ಪಿಕೊಳ ಬೇಕೆಂದಿಲ್ಲ.  ಆಧುನಿಕತೆಯನ್ನು ತಿರಸ್ಕರಿಸಲೂ ಬೇಕಿಲ್ಲ. ಹಾಗೆಯೇ ಹಳತನ್ನು ಎಸೆಯಬೇಕಿಲ್ಲ, ಹೊಸತನ್ನು ಅಪ್ಪಿಕೊಳ್ಳುವುದೂ ಬೇಕಾಗಿಲ್ಲ. ಆದರೆ, ಎಲ್ಲವನ್ನೂ ನಿಕಶಕ್ಕೊಳಪಡಿಸಿ, ಸರಿ ತಪ್ಪು ಎಂದು ನಿರ್ಧರಿಸಬೇಕಾದವರು ನೀವು.  ಕಾಳಿದಾಸನ ಮೇಘ ಸಂದೇಶಕ್ಕೆ ಮೇಘ ಪ್ರತಿ ಸಂದೇಶ ಬರೆದ ಮಂಡಿಕಲ್ ರಾಮಾಶಾಸ್ತ್ರಿಗಳು ಇದೇ ಊರಿನವರು ಎನ್ನುವುದನ್ನು ನೆನಪಿನಲ್ಲಿರಿಸಿಕೊಳ್ಳಿ.
ನಮ್ಮ ಮಾನ್ಯ ಪ್ರಧಾನಿಗಳು, ನಮ್ಮ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು, ಇನ್ನೂ ಹಲವಾರು ಚಿಂತಕರು, ವಿದ್ವಾಂಸರುಗಳು, ಉದ್ಯೋಗ ಸೃಷ್ಟಿಗಾಗಿ, ಮೇಕ್ ಇನ್ ಇಂಡಿಯಾ, ಕರ್ನಾಟಕ ಇಟಿ ಕಾರಿಡಾರ್, ಇನ್ನೂ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ, ಮತ್ತು ತರುವ ಪ್ರಯತ್ನದಲ್ಲಿದ್ದಾರೆ.  ಆದರೆ ಇಂದಿನ ಯುವಶಕ್ತಿಯಾದ ನಿಮ್ಮ ಕೈಯಲ್ಲಿ ಆಕಾಶವೇ ಇದೆ. ಯಾರ ಹಂಗಿಗೂ ಕಾಯಬೇಕಿಲ್ಲದ ತಾಕತ್ತು ನಿಮ್ಮ ಕಾಲಬುಡದಲ್ಲಿ ಬಿದ್ದಿದೆ.
ಕೇವಲ ವೈಟ್ ಕಾಲರ್ ಉದ್ಯೋಗಗಳು ನಮ್ಮನ್ನು ಬೆಳೆಸಲಾರವು. ಎಲ್ಲರೂ ಐ.ಟಿ ಉದ್ಯೋಗಿಗಲಾದರೆ, ಅನ್ನದಾತ ಯಾರು?,  ಎಲ್ಲರೂ ಜಮೀನನ್ನು ಸೈಟುಗಳಾಗಿ ಮಾರಿದರೆ, ಅನ್ನ ಬೆಳೆಯುವ ಭೂಮಿ ಎಲ್ಲಿರುತ್ತದೆ. ಎಲ್ಲ ಉದ್ಯೋಗಗಳೂ ಸಂಘಜೀವಿಯಾದ ಮಾನವನಿಗೆ ಅವಶ್ಯಕ. ಆಧುನಿಕ ಬಂಡವಾಳಶಾಹೀ ಆರ್ಥಿಕತೆ, ಸಮಾನತೆಯನ್ನು ತರುವ ಕಾಲ ಹತ್ತಿರದಲ್ಲಿದೆ. ಅದಕ್ಕಾಗಿ, ನಿಮ್ಮ ಇಚ್ಚೆಯ ಉದ್ಯೋಗವನ್ನು ಆರಿಸಿಕೊಳ್ಳುವ ಧೀ ಶಕ್ತಿ ನಿಮಗೆ ಬೇಕಿದೆ.  ನಮ್ಮ ಸ್ವರ್ಗಸ್ಥ ಮಾಜಿ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂ ಹೇಳಿದಂತೆ ಕನಸು ಕಾಣುವುದನ್ನು ಮರೆಯಬೇಡಿ, ಕನಸನ್ನು ನನಸಾಗಿಸಲು ಪಣ ತೊಟ್ಟು ದುಡಿಯಿರಿ.


ಸ್ವತಂತ್ರ ಭಾರತದ ಪ್ರಜೆಗಳಾದ ನೀವು ರಾಷ್ಟ್ರ ಕಟ್ಟಲು ಮಾಡಬೇಕಾದುದು ಇಷ್ಟೇ. ಸ್ವಾರ್ಥವನ್ನು ಬದಿಗೊತ್ತಿ, ಬಹುಜನ ಹಿತಾಯ ಬಹುಜನ ಸುಖಾಯ ಎನ್ನುವ ಕೆಲಸಗಳಿಗೆ ಮುನ್ನುಗ್ಗಿ.  ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯಾದರೆ ಸಹಿಸಬೇಡಿ. ಹಾಗೆಯೇ ಬೇರೆಯವರ ಸ್ವಾತಂತ್ರ್ಯಕ್ಕೆ ಧಕ್ಕೆ ತರಬೇಡಿ. ಬೌದ್ದಿಕ ಸ್ವಾತಂತ್ರ್ಯಕ್ಕೆ ಎಂದೂ ಅಂಕುಶವಿಡಬೇಡಿ. ತರ್ಕಬದ್ದ ಚಿಂತನೆಗಳೊಂದಿಗೆ, ವೈಜ್ಞಾನಿಕ ದೃಷ್ಟಿಕೋನದ ಜೊತೆಗೆ ಕನಸಿನ ಸಾಕಾರಕ್ಕಾಗಿ ಪ್ರಯತ್ನಿಸಿ,
ಆಗ ಭಾರತಾಂಬೆ ತನ್ನ ಗತವೈಭವವನ್ನ ಮರಳಿ ಪಡೆಯುತ್ತಾಳೆ. ದಾಸ್ಯದ ಸಂಕೋಲೆ ಮುರಿದ ಸಂತಸದಿಂದ ನಸುನಗು ಬೀರುತ್ತಾಳೆ.
ನನಗೆ ನಿಮ್ಮಲ್ಲಿ ನಂಬಿಕೆಯಿದೆ.
ನಿಮ್ಮೊಡನೆ ಭಾರತಾಂಬೆಯ ಹರಕೆಯಿದೆ, ಕಟ್ಟಲು ಹೊಸಭಾರತ ಮುನ್ನುಗ್ಗಿ,
ರೈತ, ವಿಜ್ಞಾನಿ, ಸೈನಿಕ, ಸಂತ, ಏನಾದರೂ ಆಗಿ,
ಮೊದಲು ಮಾನವರಾಗಿ,  ಭಾರತೀಯರಾಗಿ.
ಶುಭವಾಗಲಿ.
ಜೈ ಹಿಂದ್, ಜೈ ಕರ್ನಾಟಕ.