Pages

Showing posts with label tallanasidiru kandya. Show all posts
Showing posts with label tallanasidiru kandya. Show all posts

Tuesday, September 25, 2012

ತಲ್ಲಣಿಸದಿರು ಕಂಡ್ಯ ತಾಳು ಮನವೇ

ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೇ ಸಂಶಯವಿಲ್ಲ  ||ಪ||

ಬೆಟ್ಟದ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು
ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ    ||೧||

ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿತ್ತವರು ಯಾರೊ
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ          ||೨||

ಕಲ್ಲೊಳಗೆ ಹುಟ್ಟಿರುವ ಕ್ರಿಮಿಕೀಟಗಳಿಗೆಲ್ಲ
ಅಲ್ಲಲ್ಲೆ ಆಹಾರವನು ಇತ್ತವರು ಯಾರೊ
ಪುಲ್ಲಲೋಚನ ಕಾಗಿನೆಲೆಯಾದಿ ಕೇಶವನು
ಎಲ್ಲರನು ಸಲಹುವನು ಇದಕೇ ಸಂಶಯಬೇಡ     ||೩||