Pages

Friday, February 06, 2015

ನರಕವು ಹೇಗಿದೆ ಗೊತ್ತೆ..?



ನರಕವು ಹೇಗಿದೆ ಗೊತ್ತೆ..?

ನನ್ನ ತಮ್ಮ ಹೇಳಿದ  ಥೇಟು ಲಾಸ್ ಏಂಜಲೀಸ್ ನಂತೆ.
ನಾನೂ ಕಲ್ಪಿಸಿಕೊಳ್ಳಬಲ್ಲೆ  ಅದು ಇರಬಹುದು ಬೆಂಗಳೂರಂತೆ.
ನಾನಿರುವುದು ಅಲ್ಲೇ ..!

ಮತ್ತೆ ಅಲ್ಲಿಯೂ

ದೊಡ್ಡ ಉದ್ಯಾನದಲಿ,  ದೊಡ್ಡ ಹೂವರಳಿರಬಹುದು
ದುಡ್ಡನೆರೆಯದಿರಲು ಬಾಡಬಹುದು
ದೊಡ್ಡ ಬುಟ್ಟಿಗಳ ತುಂಬಾ ಹಣ್ಣು ಮಾರಬಹುದು  

ಅಂಕು ದೊಂಕಿಲ್ಲದ ರಸ್ತೆಯಲಿ. ಮಂಕು ಯೋಚನೆಗಳಷ್ಟೇ ವೇಗದಲಿ
ಝೇಂಕರಿಸಿ  ಸಾಗಿರಬಹುದು
ಬಿಂಕದರಸರ  ತೇರುಗಳು ಬಿಡುವಿಲ್ಲದಂತೆ.

ಬೆಡಗಿನ ಮಾನವರು, ಕಡೆದ ಶಿಲ್ಪಗಳಂತೆ
ಎಡೆಯಿಲ್ಲದೆಡೆಯಿಂದ ಬಂದು
ಕಡೆಯಿಲ್ಲದೆಡೆಗೆ ನಡೆದಿರಬಹುದು ಚಿಂತೆಯ ಬುತ್ತಿ ಹೊತ್ತು .


ಬಗೆ ಬಗೆಯ ಮನೆ, ಮೊಗೆ ಮೊಗೆವ  ಸಂತಸ
ನಗೆಯ ಕಾರಂಜಿ ಇರಬಹುದಲ್ಲಿ.
ಹಗಲೇನು ಇರುಳಲೂ ಜನರಿದ್ದೂ  ಖಾಲಿ.

ನರಕದ ಮನೆಯಲ್ಲಿ  ಕೆಡುಕೇನು ಇಲ್ಲ
ಅರೆಗಳಿಗೆ ಕಾಡಿದರೆ, ಬೀದಿಗಿಳಿಯುವ ಚಿಂತೆ
ಮರುಗಳಿಗೆ  ಅದು ಮನೆಯಲ್ಲ,  ಯುದ್ದ ಶಿಬಿರವಂತೆ. 



ಬರ್ಟೋಲ್ಟ ಬ್ರೆಕ್ಟ್ ನ “ Contemplating Hell  ಕವಿತೆಯ ಭಾವಾನುವಾದ .



Monday, January 12, 2015

ತೆರೆದುಕೊಳ್ಳುವೆ ನಾ ನಿನ್ನ ಕನಸಿನಲಿ



ಮಧುರ ಮಾರುತ ಮಂದಾನಿಲವಾಗಿ ಸುಳಿದಿರಲು
ಚಂದಿರನ ಸುತ್ತ ಬೆಳ್ಳಿ ತಾರೆಗಳು ಹೊಳೆದಿರಲು
ನಿದಿರೆಯಮೃತದ ಸವಿಯು ಮನದುಂಬಿರಲು
ತೆರೆದುಕೊಳ್ಳುವೆ  ನಾ  ನಿನ್ನ ಕನಸಿನಲಿ !

ನಿನ್ನ ಕನಸಿನಲೇ  ಅರಳಿರುವೆ
ನಿನ್ನ ಮನೆ ಅಂಗಳದಲಿ ನಿಂದಿರುವೆ
ನನ್ನ ಕೈ ಹಿಡಿದು ಕರೆತಂದ ದೇವಿಯಾರು?
ಚನ್ನ ಚೆಲುವೆಯ ಸಮ್ಮೋಹನದ ತೇರು

ಸುಳಿಗಾಳಿ ಬೀಸುವುದು ಮೆಲ್ಲ ನಿಲಬಹುದು.
ನದಿಯ ಜುಳುಜುಳುನಾದ ಮೌನವಾಗಲುಬಹುದು.
ಸಂಪಿಗೆಯ ಘಮವು ಮಾಯವಾಗಲುಬಹುದು.
ಕನಸಳಿದು ಸವಿ ನೆನಪುಳಿದು ಮಾಸಲು ಬಹುದು

ಮೇಲೆತ್ತು ನನ್ನೀ ಪತನದಿಂದ  
ಮುತ್ತಿನ ಮಳೆಯಲ್ಲಿ ಪ್ರೀತಿ ಸುರಿಸು
ಬತ್ತಿದಾ ತುಟಿ ಮೇಲೆ ಜೇನ ಹರಿಸು
ಮಂಕಾದ ಕೆನ್ನೆಯಲಿ ರಂಗನಿರಿಸು
ತಪ್ಪಿದ ಎದೆ ತಾಳದಲಿ  ಹದವನಿಡಿಸು
 
ಒತ್ತರಿಸು..  ಚಿತ್ತರಿಸು  ಮತ್ತಗೊಳಿಸು
ಹೊಚ್ಚ ಹೊಸ ಜೀವನದ  ಹೂವರಳಿಸು

ಪಿ. ಬಿ. ಶೆಲ್ಲಿಯ " Indian Serenade" ಕವನದ ಭಾವಾನುವಾದ



Wednesday, January 07, 2015

ಕೆ ಎಸ ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ಸಂಕಲನದ ಬಳೆಗಾರ ಚೆನ್ನಯ್ಯ ಕವನ



ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪಣೆಯೆ ದೊರೆಯೇ
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು
ಬಾಳೆಯ ತೊಡಿಸುವುದಿಲ್ಲ ನಿಮಗೆ

ಮುಡಿದ ಮಲ್ಲಿಗೆಯರಳು ಬಾಡಿಲ್ಲ ರಾಯರೇ
ತೌರಿನಲಿ ತಾಯಿ ನಗುತಿಹರು
ಕುಡಿದ ನೀರಲುಗಿಲ್ಲ ಕೊರಗದಿರಿ ರಾಯರೇ
ಅಮ್ಮನಿಗೆ ಬಳೆಯಾ ತೊಡಿಸಿದರು

ಅಂದು ಮಂಗಳವಾರ ನವಿಲೂರ ಕೇರಿಯಲಿ
ಓಲಗದ  ಸದ್ದು ತುಂಬಿತ್ತು.
ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ
ಅಂಗಳದ ತುಂಬಾ ಜನವಿತ್ತು

ಹಬ್ಬದೂಟವನುಂಡು  ಹಸೆಗೆ ಬಂದರು ತಾಯಿ
ಕೊರಳಿನಲ್ಲಿ ಹೊಳೆದಿತ್ತು ಪದಕ
ಒಬ್ಬರೇ ಹಸೆಗೆ ಬಂದರು ತಾಯಿ ಬಿಂಕದಲಿ
ಕಣ್ತುಂಬಾ ನೋಡಿದೆನು ಮುದುಕ

ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ
ಸೆರಗಿನಲಿ ಕಣ್ಣೀರನೊರೆಸಿ;
ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ
ದೀಪದಲಿ ಬಿಡುಗಣ್ಣ ನಿಲಿಸಿ

ಬೇಕಾದ ಹಣ್ಣಿಹುದು ಹೂವಿಹುದು ತೌರಿನಲಿ
ಹೊಸ ಸೀರೆ ರತ್ನದಾಭರಣ;
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ
ನಿಮಗಿಲ್ಲ ಒಂದು ಹನಿ ಕರುಣ

ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರನೆಳೆದು
ಕುಡಿಯಬಾರದು ನನ್ನ ದೊರೆಯೇ
ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನು
ಒಣಗಬಾರದು ಒಡಲ ಚಿಲುಮೆ

ಮುನಿಸು ಮಾವನ ಮೇಲೆ ಮಗಳೇನ ಮಾಡಿದಳು
ನಿಮಗೇತಕೀ ಕಲ್ಲು ಮನಸು
ಹೋಗಿ ಬನ್ನಿರಿ ಒಮ್ಮೆ ಕೈ ಮುಗಿದು ಬೇಡುವೆನು
ಅಮ್ಮನಿಗೆ ನಿಮ್ಮದೇ ಕನಸು

Tuesday, November 25, 2014

೧. ತಪ್ಪು ಮಾಡದವ್ರ್ ಯಾರವ್ರೇ..?

೧. ತಪ್ಪು ಮಾಡದವ್ರ್ ಯಾರವ್ರೇ..?
೨. ತಪ್ಪಾಗಿದ್ದೆಲ್ಲಾ ತಪ್ಪಾಗ್ಬೇಕಿಲ್ಲ.
೩. ಯಾರಿಗೂ ತೊಂದರೆ ಕೊಡದ ತಪ್ಪು ತಪ್ಪೇ ಅಲ್ಲ.
೪, ತಿಳಿಯದೇ ಮುಟ್ಟಿದ್ರೂ ಕೆಂಡ ಸುಡುತ್ತೆ.  ತಿಳಿಯದೇ ಮಾಡಿದರೂ ತಪ್ಪು ತಪ್ಪೇ..!
೫. ಅತ್ಯಂತ ಕೆಟ್ಟ ಸಮಯದಲ್ಲೇ ತಪ್ಪು ಆಗಿಬಿಡುತ್ತೆ.
೬. ತಪ್ಪು ತಪ್ಪನ್ನೇ ಮರಿ ಹಾಕುತ್ತೆ.
೭. ಕಂಪ್ಯೂಟರ್ನಲ್ಲಿ ಮಾಡಿದ ತಪ್ಪು ಬೇಗ ಹರಡುತ್ತೆ, ಜಾಸ್ತಿ ತೊಂದರೆ ಕೊಡುತ್ತೆ.
೮. ಕೆಲಸ ಮಾಡ್ಬೇಕಿದ್ದಾಗ ಕೈ ಕಟ್ಟಿ ಕೂತರೂ,  ಅದು ತಪ್ಪೇ.....!!
೯. ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ ಹೋಗುವುದು ಅದಕ್ಕಿಂತಾ ದೊಡ್ಡ ತಪ್ಪು.
೧೦. ತಪ್ಪಿನಿಂದ ಪಾಠ ಕಲಿಯದಿದ್ದರೆ ಅದೇ ನಿಜವಾದ ತಪ್ಪು.
ಅಬ್ಬಾ ಏನು ತಪ್ಪಿನ ಮೇಲೆ ಇಷ್ಟೊಂದು ಕೋಟ್ ಬರೆದಿದ್ದೇನೆ ಎಂದು ಕೊಂಡಿರಾ..? ಇವು ನಾವು ನೀವೆಲ್ಲರೂ ಕೇಳಿ ಕ್ಲೀಷೆಯಾಗಿರಬಹುದಾದ ಸವಕಲು ಕೋಟ್ ಗಳೇ ಇರಬಹುದು.  ಆದರೆ ಇಂದು ಇವನ್ನು "ಟೆಕ್ ಟಾರ್ಗೆಟ್" ಅಂತರ್ಜಾಲ ಪತ್ರಿಕೆಯಲ್ಲಿ ಓದಿದಾಗ, ಹಾಗೇ ಕನ್ನಡಕ್ಕಿಳಿಸಿ ನಿಮ್ಮ ಜೊತೆ ಹಂಚಿಕೊಳ್ಳಬೇಕೆನೆಸಿತು .

ಮೂಲ ಲೇಖನ ಇಲ್ಲಿದೆ.  ಮೇಲಿನ ಕೋಟ್ ಗಳಿಗೆ ನಾನು ವಿವರಣೆ ನೀಡಿಲ್ಲ.. ನಿಮ್ಮದೇ ವಿವರಣೆ ಇದ್ದರೆ ಚೆನ್ನ ಎಂದುಕೊಂಡಿದ್ದೇನೆ. ದಯವಿಟ್ಟು ಪ್ರತಿಕ್ರಿಯಿಸಿ.