ಬಹಳ ಹಿಂದೆ ಹೊಯ್ಸಳರ ಕಾಲದ ಕತೆಯಂತೆ ಇದು. ಎಲ್ಲಿ ಓದಿದ್ದೋ, ಕೇಳಿದ್ದೋ ಸರಿಯಾಗಿ ನೆನಪಿಲ್ಲ. ಆದರೆ ಕತೆ ಮಾತ್ರ ಮರೆಯುವಂತಹುದಲ್ಲ. ನೀವು ಅದನ್ನು ಕೇಳುವಿರಾ..?
ಒಮ್ಮೆ ಸಾಮ್ರಾಜ್ಯದಲ್ಲಿ ಬರ ಬಂದು, ಅಗತ್ಯವಸ್ತುಗಳ ಅಭಾವ ಜನಸಾಮಾನ್ಯರಿಗೆ ಉಂಟಾಯಿತಂತೆ, ರಾಜನಿಗೆ ಆಶ್ಚರ್ಯ. ಹೋದವರ್ಷದ ಬೆಳೆ ಸಮೃದ್ದವಾಗಿದ್ದು, ದಾಸ್ತಾನೂ ಸಾಕಷ್ಟಿರುವಾಗ, ಅಭಾವ ಹೇಗೆ?. ಸರಿ ಮಂತ್ರಿಯನ್ನ್ನು ಕೇಳಿದ. ಮಂತ್ರಿ ನಗುತ್ತಾ ಹೇಳಿದ, "ಪ್ರಭು, ವ್ಯಾಪಾರಂ ದ್ರೋಹ ಚಿಂತನಂ ಎನ್ನುವ ಮಾತುಂಟು, ನಮ್ಮ ವ್ಯಾಪಾರಸ್ಥರು ಇಂತಹ ಅವಕಾಶ ಬಿಟ್ಟಾರೆಯೇ? ಕೃತಕ ಅಭಾವ ಸೃಷ್ಟಿಸಿದ್ದಾರೆ. ಅದನ್ನು ಈಚೆ ತಂದರರಾಯಿತು" ಎಂದ.
ರಾಜನಿಗೆ ಮತ್ತೂ ಆಶ್ಚರ್ಯ. "ಏನೆಂದೆ..? ನಮ್ಮ ವರ್ತಕರು ನಿಯತ್ತಿನವರು, ಅಲ್ಲದೆ ನನ್ನ ರಾಜ್ಯದಲ್ಲಿ ಅವರಿಗೆ ರಾಜಭಯವಿದೆ. ಕೃತಕ ಅಭಾವ ಸೃಷ್ಟಿಸುವ ಧೈರ್ಯ ಮಾಡುವರೇ?" ಎಂದ.
"ಪ್ರಭೂ, ರಾಜಭಯ, ನಿಯತ್ತು ಬೇರೆ, ವ್ಯಾಪರೀ ವೃತ್ತಿಯೇ ಬೇರೆ" ಎಂದ ಮಂತ್ರಿ.
"ನಾನು ನಂಬಲಾರೆ"
"ಹಾಗಿದ್ದರೆ ಸಣ್ಣದೊಂದು ಪರೀಕ್ಷೆ ಮಾಡೋಣ ಬಿಡಿ, ನಿಮಗೂ ನಿಜ ಗೊತ್ತಾಗುತ್ತದೆ."
"ಸರಿ ಹಾಗೇ ಆಗಲಿ" ಅಂದ ರಾಜ.
ಊರಿನ ಪೇಟೆ ಬೀದಿಯಲ್ಲಿ ಡಂಗೂರ ಸಾರುವಂತೆ ಹೇಳಿದ ಮಂತ್ರಿ. "ಅರಮನೆಗೆ ಹಾಲಿನ ಕೊರತೆ ಬಂದಿರುವುದರಿಂದ ಊರಿನಲ್ಲಿರುವ ಎಲ್ಲಾ ವರ್ತಕರೂ ಒಂದೊಂದು ತಂಬಿಗೆ ಹಾಲನ್ನು ಅರಮನೆಗೆ ನಾಳೆ ನೀಡತಕ್ಕದ್ದು" ಎನ್ನುವುದು ಡಂಗೂರದ ಸಾರಾಂಶ.
ಅರಮನೆಯ ಮುಂದೆ, ದೊಡ್ಡ ಕೊಳಗ ಇರುವಂತೆ ವ್ಯವಸ್ಥೆ ಮಾಡಿದ ಮಂತ್ರಿ, ಅದರ ಬಾಯಿಗೆ ಬಿಳಿಯ ಶುಭ್ರ ವಸ್ತ್ರವೊಂದನ್ನು ಕಟ್ಟಿಸಿದ. ಒಳಗಿರುವುದು ಏನೆಂದು ಹೊರಗಿನವರಿಗೆ ಕಾಣದು. ವರ್ತಕರು ಇದನ್ನು ನೋಡಿದರು. ಅವರ ವರ್ತಕ ಬುಧ್ಧಿ ಕೆಲಸ ಮಾಡಿತು. ಹೇಗೂ ಬಾಯಿಗೆ ಬಟ್ಟೆ ಇದೆ, ಒಳಗಿರುವುದು ಕಾಣದು, ಎಲ್ಲರೂ ಹಾಲು ತಂದರೆ, ನಾನೊಬ್ಬ ನೀರು ಹಾಕಿದರೆ ತಿಳಿಯುವುದಾದರೂ ಯಾರಿಗೆ..? ಆದರೆ ಇದು ಒಬ್ಬಿಬ್ಬರಿಗೆ ಹೊಳೆಯಲಿಲ್ಲ. ಊರಿನ ಎಲ್ಲರೂ ಹಾಗೆ ಯೋಚಿಸಿದರು.
ಮಧ್ಯಾಹ್ನಕ್ಕೆ ಕೊಳಗ ತೆಗೆಸಿ ನೋಡಿದರೆ, ಒಳಗೆ ಬರೀ ನೀರು. ರಾಜನಿಗೆ ಕೆಂಡದಂತ ಕೋಪ. "ಎಲ್ಲಾ ವರ್ತಕರನ್ನೂ ಹಿಡಿದು ನೇಣಿಗೇರಿಸಿ" ಎಂದುಬಿಟ್ಟ. ಮಂತ್ರಿ ಬುದ್ದಿವಂತ. " ಹಾಗೆ ಮಾಡಿದರೆ, ಅರಾಜಕತೆ ನಾವೇ ಸೃಷ್ಟಿಸಿದಂತಾಗುತ್ತದೆ" ಎಂದ. "ಅಂದರೆ ಇವರನ್ನು ಸುಮ್ಮನೆ ಬಿಡಬೇಕೆ?" ರಾಜನದು ರುದ್ರಾವತಾರ. "ಇಲ್ಲ ಇಲ್ಲ " ಮಂತ್ರಿ ಹೇಳಿದ ಇವರಿಗೆ ತಕ್ಕ ಪಾಠ ಕಲಿಸದೆ ಬಿಟ್ಟರೆ, ನಮ್ಮ ಮೇಲೇ ಏರಿ ಬರುತ್ತಾರೆ. ಅವರಿಗೆ ಪಾಠದ ವ್ಯವಸ್ಥೆಯೂ ಮಾಡಿದ್ದೇನೆ".
ಮರುದಿನ ವರ್ತಕರಿಗೊಂದು ಅಹ್ವಾನ ಹೋಯಿತು, ವರ್ತಕರ ಔದಾರ್ಯದಿಂದ ಸಂತಸಗೊಡ ಪ್ರಭುಗಳು, ಅವರಿಗೊಂದು ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ, ಸರ್ವರೂ ನಿಗದಿತ ಸಮಯಕ್ಕೆ ಅರಮನೆಯ ಹಜಾರದಲ್ಲಿ ಸೇರತಕ್ಕದ್ದು. ಎನ್ನುವುದು ಅಹ್ವಾನದ ಸಾರಾಂಶ. ಸರಿ ಎಲ್ಲರೂ ಸಂತಸಗೊಂಡರು, ನೀರು ಹಾಕಿದವರು ತಮ್ಮ ತಪ್ಪನ್ನು ಯಾರೂ ಕಾಣಲಿಲ್ಲವೆಂಬ ಸಂತಸದ ಜೊತೆಗೆ, ರಾಜನಿಂದ ಸನ್ಮಾನ. ಭಲೇ! ಭಲೇ!!
ಒಟ್ಟಾಗಿ ಎಲ್ಲರೂ ನಿಗದಿತ ಸಮಯದಲ್ಲಿ ನಿಗದಿತ ಜಾಗದಲ್ಲಿ ಸೇರಿದರು. ಸಾರ್ವಜನಿಕ ಸನ್ಮಾನ ನಿರೀಕ್ಷಿಸಿದವರಿರೊಂದು ಅಚ್ಚರಿ. ಒಬ್ಬೊಬ್ಬರನ್ನಾಗಿ ಒಳಗೆ ಕರೆದು ಸನ್ಮಾನ ಮಾಡುತ್ತಿದ್ದಾರೆ. ಒಳಗೇನು ನಡೆಯುತ್ತಿದೆ, ಹೊರಗಿನವರಿಗೆ ತಿಳಿಯುವಂತಿಲ್ಲ. ಒಳಗಿಂದ ಹೊರಹೋಗುವುದೇ ಬೇರೆ ಬಾಗಿಲಿನಿಂದ.
ಒಳಗೆ ನಡೆಯುವುದಾದರೂ ಏನು?
ರಾಜ ಒಬ್ಬೊಬ್ಬರಿಗೂ ಕೇಳುತ್ತಾನೆ, "ಏನಯ್ಯಾ, ರಾಜಾಜ್ಣೆ ಮೀರುವಷ್ಟು ಸೊಕ್ಕೆ ನಿನಗೆ? ಹಾಲು ಬೇಕೆಂದು ಕೇಳಿದರೆ ನೀರು ಕೊಡುತ್ತೀಯೋ?"
ಇವನಿಗೋ ಅಚ್ಚರಿ ತಾನು ನೀರು ಹಾಕಿದ್ದನ್ನು ಇವರು ಕಂಡುಕೊಂಡದ್ದಾದರೂ ಹೇಗೆ? ಇವರ ಗೂಢಚಾರರು ಎಷ್ಟು ಗಟ್ಟಿ.. ತಪ್ಪೊಪ್ಪಿಕೊಂಡರೆ ಬದುಕೇನು, ಎನ್ನುವ ಭಾವ. "ತಪ್ಪಾಯಿತು ಬುದ್ಧಿ, ಮಣ್ಣು ತಿನ್ನುವ ಕೆಲಸ ಮಾಡಿದೆ, ನನ್ನನು ಈ ಬಾರಿ ಕ್ಷಮಿಸಿ"
"ನಿನ್ನ ತಪ್ಪಿಗೆ ತಲೆ ತೆಗೆಯದೆ ಬಿಡುವುದು ದೊಡ್ಡದು, ಹತ್ತು ಛಡಿ ಏಟು ತಿಂದು ಸೀದಾ ಮನೆಗೆ ನಡೆ. ಯಾರ ಬಳಿಯಾದರೂ ಕೆಮ್ಮಿದರೆ, ಗಂಟಲು ಸೀಳಿ ಹೋದೀತು"
ಛಡಿ ತಿಂದು ತಲೆ ತಗ್ಗಿಸಿ, ಬೇರೆ ಬಾಗಿಲಿಂದ ಮನೆ ಸೇರಿಕೊಳ್ಳುವುದಷ್ಟೇ ವರ್ತಕರಿಗೆ ಉಳಿದದ್ದು.
ಈ ಕತೆ ನೆನಪಿಗೆ ಬರಲು ನನಗೆ ಎರಡು ಕಾರಣಗಳು, ಸಿಗರೇಟು ಸೇದುವವರಿಗೆ, ಇದು ಈಗಾಗಲೇ ಯಾಕೆಂದು ತಿಳಿದಿರಬಹುದು. ಮುಕ್ತ ಮಾರುಕಟ್ಟೆಯ ಈ ವ್ಯವಸ್ಥೆಯಲ್ಲಿ, ಏಕಸ್ವಾಮ್ಯದ ಸಿಗರೇಟು ಕಂಪನಿಯ ಸಿಗರೇಟುಗಳು ಕಾಳ ಮಾರುಕಟ್ಟೆಯಲ್ಲಷ್ಟೇ ಬಿಕರಿಯಾಗುತ್ತಿವೆ. ಬಜೆಟ್ ನ ಪರಿಣಾಮ ಇದು. ದಿನಬಳಕೆಯ ವಸ್ತುಗಳಿಗೆ ಈ ಸ್ಥಿತಿ ಬರುವುದಿಲ್ಲವೋ, ನನಗಂತೂ ಅನುಮಾನ. ಬಂದೇ ಬರುತ್ತದೆ ಎನ್ನುವುದು ನನ್ನ ನಂಬಿಕೆ. ಕಾಲವೇ ಉತ್ತರಿಸಬೇಕು. ಆದರೆ ಆ ರಾಜನ ಮಂತ್ರಿಯಂತ ಮಂತ್ರಿಗಳು ಈಗಿಲ್ಲ ಎನ್ನುವುದು ಸತ್ಯ.
ಆಷ್ಟೇ ಅಲ್ಲ. ಇನ್ನೊಂದು ಕಾರಣದಿಂದ ಈ ಕತೆ ನೆನಪಿಗೆ ಬಂತು. ಅದಕ್ಕೆ ಕಾರಣ ನಾನು ಇತ್ತೀಚಿಗೆ ಓದಿದ ಪುಸ್ತಕ. "ಭಾರತೀಯರಾಡುವ ಆಟಗಳು (Games Indian Play)" ಎನ್ನುವ ರಘುನಾಥನ್ ಎನ್ನುವವರು ಬರೆದದ್ದು. ಇದಕ್ಕೆ ಮುನ್ನುಡಿ ನಮ್ಮ ಇನ್ಫೋಸಿಸ್ ಅಧ್ಯಕ್ಶ ನಾರಾಯಣ ಮೂರ್ತಿಯವರದು. ಅದರಲ್ಲಿ ಲೇಖಕರು ಈ ಕತೆಯನ್ನೂ ಬೇರೆ ರೀತಿಯಲ್ಲಿ ಬರೆದಿದ್ದಾರೆ. ಗೇಮ್ ಥಿಯರಿಯ ಹಿನ್ನೆಲೆಯಲ್ಲಿ, ಭಾರತೀಯರ ಮನಸ್ಸತ್ವವನ್ನು ತೆರೆದಿಡುವ ಪುಸ್ತಕ ಅದು. ತಕ್ಷಣದ ಲಾಭಕ್ಕಾಗಿ ಲೋಭಿಗಳಾಗಿ, ಸಮಷ್ಟಿ ಲಾಭವನ್ನು ಕಡೆಗಣಿಸುವ ಭಾರತೀಯತೆಯನ್ನು ಉದಾಹರಣೆ ಸಮೇತ ಅವರು ವಿವರಿಸುತ್ತಾರೆ. ವೀರಪ್ಪನ್ ಡೈಲಮಾ ಎನ್ನುವ ಕಲ್ಪನೆಯೊಂದಿಗೆ ವಸ್ತುಸ್ಥಿತಿಯನ್ನು ವಿವರಿಸುವ ಪರಿ ಚಿಂತನೆಗೆ ಹಚ್ಚುವಂತಿದೆ. ಗೀತೆಯಲ್ಲಿ ಗೇಮ್ ಥಿಯರಿ ಅಳಕವಾಗಿದೆ ಎಂದು ವಾದಿಸುವ ಲೇಖಕರ ಮಾತು ಸತ್ಯವಿರಲೂ ಬಹುದು. ಆದರೆ, ಭಾರತೀಯ ಸಮುದಾಯದ ಈ ಲೋಭಿ ಬುದ್ದಿಗೆ ಛಡಿ ನೀಡಿ ತಿದ್ದಬಲ್ಲ ಮಂತ್ರಿ ಯಾವಾಗ ಬರಬಹುದು? ಅಥವಾ ನಮ್ಮ-ನಿಮ್ಮಂತವರು ಸ್ವ ಪ್ರೇರಣೆಯಿಂದ ಬದಲಾಗುತ್ತಾ ಹೋದರೆ ಸಾಕೆ ಎನ್ನುವ ಪ್ರಶ್ನೆ ನನ್ನದು.
No comments:
Post a Comment