ಕ್ರಿಕೆಟ್ ಗೂ ಅವಧಾನಕ್ಕೂ ಏನು ಸಂಬಂಧ ?
ಕ್ರಿಕೆಟ್ ನಲ್ಲಿ ಒಬ್ಬ ಬ್ಯಾಟ್ಸ್ ಮನ್, ಒಬ್ಬ ಬೌಲರ್, ಹಲವಾರು ಜನ ಫೀಲ್ಡರ್ಸ್. ಆದರೆ ಅವಧಾನದಲ್ಲಿ ಒಬ್ಬ ಬ್ಯಾಟ್ಸ್ ಮನ್, ಉಳಿದವರೆಲ್ಲಾ, ಫೀಲ್ಡಿಂಗ್, ಬೌಲಿಂಗ್ ಒಟ್ಟಿಗೇ ಮಾಡ್ತಾರೆ.
ಹನುಮಾನ್ ಬೆಳೆದಂತೆ ಆತನ ಬಟ್ಟೆ, ಜುಟ್ಟು ಜನಿವಾರ ಬೆಳೆಯುತ್ತಿತ್ತೆ..?
ಅಯಸ್ಕಾಂತದ ಸಂಪರ್ಕಕ್ಕೆ ಬಂದ ಪಿನ್ನು, ಅಯಸ್ಕಾಂತವಾಗುವಂತೆ, ಹನುಮಾನ್ ಸಂಪರ್ಕದಿಂದ ಅವಕ್ಕೂ ಸಿಧ್ಧಿ ಬರುತ್ತದೆ.
ನೀರು ಜೀವನವಾದರೆ ನೀರೆ?
ಜೀವನವೆ?
ಬೆಂಗಳೂರಿನ ಬಳಿ ಇರುವ ಅಗ್ರಹಾರಕ್ಕೆ ಹೋಗಿದ್ದೀರಾ..?
ಅಲ್ಲಿಗೆ ಹೋಗಿ ಬರಲು ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ.
ಗಣೇಶನಿಗೆ ಬೆನ್ನು ತುರಿಕೆಯಾದರೆ ಏನು ಮಾಡುತ್ತಾನೆ?
ಸೊಂಡಿಲು ಬೆನ್ನು ಮುಟ್ಟುವುದರಿಂದ ಸಮಸ್ಯೆ ಇಲ್ಲ. ನೆಗಡಿಯಾದರೆ ಮಾತ್ರ ಸಮಸ್ಯೆ.
ಇವು ಶುಕ್ರವಾರದ ಅಷ್ಟಾವಧಾನ ಕಾರ್ಯಕ್ರಮದಲ್ಲಿ ಕೇಳಿ ಬಂದ ಅಪ್ರಸ್ತುತ ಪ್ರಸಂಗದ ಪ್ರಶ್ನೋತ್ತರ. ತೀಕ್ಷ್ಣ ಮತಿಯ ಉತ್ತರಗಳಿಂದ ರಂಜಿಸಿದವರು ಶತಾವಧಾನಿ ಅರ್. ಗಣೇಶ್. ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದಲ್ಲಿ ಅಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅದೃಷ್ಟ ನನ್ನದು.
ಶನಿವಾರ ಬೆಳಿಗ್ಗೆ ವಿನಯ ಫೋನ್ ಮಾಡಿ, ಸಾಯಂಕಾಲ ಅಷ್ಟಾವಧಾನ ಕಾರ್ಯಕ್ರಮಕ್ಕೆ ಬರುವಂತೆ ತಿಳಿಸಿ, ಅವನೂ ಬರುತ್ತೇನೆಂದು ಹೇಳಿದ. ಅದಕ್ಕೆ ನಾನು ವೈಟ್ ಫೀಲ್ಡ್ ನಿಂದ, ಇಂದಿರಾನಗರದವರೆಗೆ ಬಸ್ಸಿನಲ್ಲಿ ಬಂದು, ಅಲ್ಲಿಂದ ಬೈಕಿನಲ್ಲಿ ಮಲ್ಲೇಶ್ವರ ತಲುಪಿ, ಗಾಂಧಿ ಸಾಹಿತ್ಯ ಸಂಘವನ್ನು ಹುಡುಕಿ, ಕಾರ್ಯಕ್ರಮಕ್ಕೆ ಹೋದಾಗಾಗಲೇ ಅರ್ಧ ಗಂಟೆ ತಡವಾಗಿತ್ತು. ಆದರೇನು, ಆ ರಸಾನುಭವದಲ್ಲಿ, ಪ್ರಯಾಣದ ಆಯಾಸವೆಲ್ಲ ಮಾಯವಾಗಿ ಹೋಯಿತು. ಕರೆ ಮಾಡಿ ನಾನು ಮನೆ ಬಿಟ್ಟು ಹೊರಡುವಂತೆ ಮಾಡಿದ ವಿನಯನಿಗೆ ನನ್ನ ಅನಂತ ಧನ್ಯವಾದಗಳು.
ಇನ್ನು ಆಷ್ಟಾವಧಾನ ಕಾರ್ಯಕ್ರಮದ ಕಾವ್ಯ ತತ್ವ ರಸಾನುಭೂತಿಯಂತೂ ಸ್ವಾರಸ್ಯಕರ, ಅದನ್ನಿಲ್ಲಿ ಅಕ್ಷರಗಳಲ್ಲಿ ಬಂಧಿಸಿಡಲಾಗುವುದಸಾಧ್ಯ. ಕೇವಲ ವರದಿಯಾಗಿ ಬರೆಯುವುದಷ್ಟೇ ಸಾಧ್ಯ.
ನಿಷೇಧಾಕ್ಷರ ವಿಭಾಗದಲ್ಲಿ ಕೇಳಿದ ಪ್ರಶ್ನೆ, ಶಾರ್ದೂಲವಿಕ್ರೀಡಿತ ವೃತ್ತದಲ್ಲಿ ಗಾಂಧೀಜಿ ಸಂಸ್ಕೃತ ಸಂಘದ ಉದ್ಘಾಟನೆಗೆ ಮಾಡಬಹುದಾದ ಭಾಷಣವನ್ನು ಸಂಸ್ಕೃತದಲ್ಲಿ ಹೇಳುವಂತೆ ಕೇಳಲಾಗಿತ್ತು.
ಚಿತ್ರ ಪದ್ಯ ವಿಭಾಗಕ್ಕೆ, ಅತಿ ವಿರಳವಾದ ಛತ್ರ ಪದ್ಯ ಛಂದಸ್ಸಿನಲ್ಲಿ ಪದ್ಯ ರಚನೆ.
ದತ್ತ ಪದಿಯಲ್ಲಿ ಸನ್, ಮೂನ್, ಮತ್ತಿನ್ನೆರಡು ಪದಗಳನ್ನು ಬಳಸಿ ಡಿ.ವಿ,ಜಿ ಯವರ ಸ್ತುತಿ ಪಂದ್ಯ ರಚನೆ ಮಾಡುವ ಸವಾಲು.
ಸಮಸ್ಯಾಪೂರಣದಲ್ಲಿ, ಮೂಗಿಲಿಯಂ ತಿವಿದರೂ ಸುಮ್ಮನಿರುವ ಗಣೇಶನನ್ನು ಬಿಡಿಸಬೇಕಿತ್ತು , ಕಾವ್ಯವಾಚನದಲ್ಲಿ, ಸೊಗಸಾದ ಗಾಯನ, ಲಕ್ಷೀಶ, ಕುಮಾರವ್ಯಾಸ, ರನ್ನ, ಪಂಪರ ಕಾವ್ಯಗಳಿಂದ. ಅಶುಕವಿತೆ ವಿಭಾಗದಲ್ಲಿ ಸುಂದರ ಸನ್ನಿವೇಶಗಳು, ಹರಿವ ನೀರಿನಲ್ಲಿ ಕಾಣುವ ಚಂದ್ರಬಿಂಬದ ಕುರಿತು ರಚಿಸಿದ ಕವಿತೆ, ಅತ್ಯಂತ ಸುಂದರ, ಕಾಲದ ಹರಿವಿನಲ್ಳೂ ಮಹಾತ್ಮರ ಚಂದ್ರಬಿಂಬ ಸ್ಥಿರವಾಗಿರುತ್ತದೆಯೆನ್ನುವ ಅಸಮಾನ್ಯ ಉಪಮೆ. ದೂರದ ಬೆಟ್ಟಕ್ಕೆ ಬಿದ್ದ ಬೆಂಕಿಯನ್ನು, ಗ್ರೀಕ್ ಕಾವ್ಯದ ಬೆಂಕಿಯ ಚರ್ಮದ ಟಗರು ಹೊತ್ತು ತರುವ ವೀರನಿಗೆ ಹೋಲಿಸಿದ ಕವಿತೆ.
ಒಟ್ಟಿನಲ್ಲಿ ಮೂರೂವರೆ ಗಂಟೆಗಳ ಸಮಯ ಸರಿದದ್ದೇ ತಿಳಿಯಲಿಲ್ಲ. ಹಿಂತಿರುಗಿ ಮನೆಗೆ ಬರುವಾಗ ಮನಸ್ಸಿನ ತುಂಬಾ ರಸಾನುಭೂತಿ.
No comments:
Post a Comment