Pages

Wednesday, August 28, 2013

ಎಲ್ಲಾರು ಮಾಡುವುದು ಹೊಟ್ಟೆಗಾಗಿ

ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ ಗೇಣು ಬಟ್ಟೆಗಾಗಿ

ನೆಲ್ಲುಗಳ ಕುಟ್ಟಿಕೊಂಡು,
ಬಿದಿರುಗಳ ಹೊತ್ತುಕೊಂಡು
ಕೂಲಿಗಳ ಮಾಡುವುದು ಹೊಟ್ಟೆಗಾಗಿ
ನಾಲ್ಕುವೇದ ಪುರಾಣ ಪಂಚಾಂಗ ಹೇಳಿಕೊಂಡು
ಕಾಲ ಕಳೆಯುವುದೆಲ್ಲ ಹೊಟ್ಟೆಗಾಗಿ..

ಬಡಿದು ಬಡಿದು ಕಬ್ಬಿಣವ
ಕಾಸಿ ತುಪಾಕಿ ಮಾಡಿ
ಹೊಡೆವ ಗುಂಡು ಮಾಡುವುದು ಹೊಟ್ಟೆಗಾಗಿ

ಚಂಡಭಟನ್ಗಾಗಿ ನಡೆದು  (ಚಂಡಭಟರೆಲ್ಲ ಮುಂದೆ)
ಕತ್ತಿ ಢಾಲು ಕೈಲಿ ಹಿಡಿದು (ಕತ್ತಿ ಹರಿಗೆಯ ಹಿಡಿದು)
ಖಂಡ ತುಂಡ ಮಾಡುವುದು ಹೊಟ್ಟೆಗಾಗಿ

ಬೆಲ್ಲದಂತೆ ಮಾತನಾಡಿ
ಎಲ್ಲರನ್ನು ಮರಳು ಮಾಡಿ
ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ

ದೊಡ್ಡ ದೊಡ್ಡ ಕುದುರೆ ಏರಿ
ಮೇಜ ಹೊತ್ತು ರಾಹುತರಾಗಿ
ಹೊಡೆದಾಡಿ ಸಾಯುವುದು ಹೊಟ್ಟೆಗಾಗಿ
ಕುಂಟೆ ಕೂರಿಗೆಯಿಂದ
ಹೆಂಟೆ ಮಣ್ಣ ಹದಮಾಡಿ
ರಂಟೆ  ಹೊಡೆದು ಬೆಳೆಸುವುದು ಹೊಟ್ಟೆಗಾಗಿ


ಕೆಟ್ಟತನದಿಂದ
ಕಳ್ಳತನವನ್ನೆ ಮಾಡಿ
ಕತ್ತಿ ಹೊಡೆಸಿಕೊಳ್ಳುವುದು ಹೊಟ್ಟೆಗಾಗಿ
ಸನ್ಯಾಸಿ ಜಂಗಮ ಜೋಗಿ
ಜಟ್ಟಿ ಮೊಂಡ ಭೈರಾಗಿ
ನಾನಾವೇಷ ಕೊಂಬುವುದು ಹೊಟ್ಟೆಗಾಗಿ


ಉನ್ನತ ಕಾಗಿನೆಲೆ ಆದಿಕೇಶವನ
ಅನುದಿನ ನೆನೆವುದು ಭಕ್ತಿಗಾಗಿ// ಪರ ಮುಕ್ತಿಗಾಗಿ

Saturday, August 24, 2013

Shell script to assign each column value as a variable

Consider a txt file with two columns and many rows.

You may want to write a script which will take each column values in each row as variables

Then you can use the following script.



#!/bin/bash
cat text.txt | while read line;
do
var1=$(echo $line| awk '{print $1}')
var2=$(echo $line| awk '{print $2}')
done

Thursday, August 08, 2013

ಓದು ಕಲಿತ ಊಳಿಗದವನ ಪ್ರಶ್ನೆಗಳು.

ಥೀಬ್ಸ್‍ನ ಏಳುಸುತ್ತಿನ ಕೋಟೆ
ಕಟ್ಟಿದವರಾರು ಗೊತ್ತೆ?
ಹೊತ್ತಿಗೆಗಳಲಿದೆ ರಾಯರ ಹೆಸರು.
ಮೆತ್ತಿದೆಯೇನು ಅವರ ಕೈಗಿಷ್ಟಾದರು ಕೆಸರು.

ಸುಟ್ಟಿತೆಷ್ಟು ಬಾರಿ ಬ್ಯಾಬಿಲೋನ್ ನಗರ,
ಕಟ್ಟಿ ಕೊಟ್ಟವರಾರು ಮರಳಿ, ಬಲ್ಲಿರಾ..?

ಬೆಳಗಿದೆ ಮಿನುಗಿದೆ ಲಿಮಾ
ಫಳಫಳಿಸಿದೆ ಹೊನ್ನಿನ ಕಾಂತಿಯಲಿ!
ಕಟ್ಟಿದ ಕಾರ್ಮಿಕನವನು
ಮಲಗುವ ಮನೆಯಿರುವದದೆಲ್ಲಿ?

ಚೀನಾ ಗೋಡೆಯ ಮುಗಿಸಿದ ಸಂಜೆ
ಏನಾಯಿತು ಆ ಮೇಸ್ತ್ರಿಗೆ ಮುಂದೆ..? 
ಓಹೋ ರೋಮಿನ ಕಮಾನುಗಳೇನು?
ಯಾರೋ ಇದನು ಕಟ್ಟಿದ ಮನುಜನು?

ಸೀಸರ್ ಗೆಲುವದು ಯಾವನ ಮೇಲೋ?
ಗೀತಗಳಲ್ಲಿ ಹಾಡುವುದೇನೋ
ಬೈಜಾಂಟಿಯನ್ನರ ಅರಮನೆಯೇನೋ?
ಮುಳುಗಿದ ಅಟ್ಲಾಂಟಿಸಿನ ಜನರು
ಮುಳುಗುವ ಮೊದಲಿನ ಕೂಗದು ಏನೋ?

ಭಾರತವನ್ನೇ ಗೆದ್ದೆ ಎನ್ನುವ
ಯವನರ ರಾಜನೆ ತಾನೆ ಬೀಗುವ
ಅಲೆಕ್ಸಾಂಡರನೊಬ್ಬನೇ ಏನು?
ಗಾಲರ ಗೆದ್ದ ಸೀಸರನೆಡೆಗೆ
ಅಡಿಗೆ ಭಟ್ಟನ ಜೊತೆಯಿಲ್ಲವೇನು?

ಅಳುತಿರುವಾಗ ಸ್ಪೇನಿನ ಫಿಲಿಪನು
ಅಳದೇ ಉಳಿದನೇ ಊಳಿಗದವನು?
ಏಳು ವರುಷಗಳ ಕಾಳಗ ಗೆದ್ದನು
ಫ್ರೆಡರಿಕನವನು ಒಂಟಿಯೇನು?

ಗೆಲುವಿನ ಕತೆಯಿದೆ ಪುಟಪುಟದಲ್ಲೂ
ಗೆಲುವಿನ ಕುಣಿತಕೆ ಜೊತೆಯದು ಏನು?
ಗೆದ್ದವ ಮೆಲ್ಲುವ ಸವಿಯನು ಸವಿಯಲು
ಮುದ್ದೆಯ ಮಾಡುವ ಆಳಿನದೇನು?

ಎಷ್ಟೋ ಮಾತಿದೆ, ಎಷ್ಟೋ ಕತೆಯಿದೆ
ಕೇಳದೆ ಉಳಿದ ಪ್ರಶ್ನೆಗಳಷ್ಟಿವೆ.
ಬ್ರೆಷ್ಟ್ ನ ಮತ್ತೊಂದು ಕವಿತೆ  Questions From A Worker Who Reads  ಭಾವಾನುವಾದ

Friday, August 02, 2013

ಎಲ್ಲ ಬದಲಾಗಬಹುದು.


ಎಲ್ಲ ಬದಲಾಗಬಹುದು.
ನಿನ್ನ ಕಡೆಯುಸಿರಿಂದ
ಹೊಸ ಬದುಕು ಮೊದಲಾಗಬಹುದು.
ನಡೆದದ್ದು ನಡೆದಾಯ್ತು.
ಮದಿರೆಯೊಡನೆ ಬೆರೆತ ನೀರು
ಮರಳಿ ತರಬಲ್ಲವರಾರು

ನಡೆದದ್ದು ನಡೆದಾಯ್ತು
ಮದಿರೆಯೊಡನೆ ಬೆರೆತ ನೀರು
ಮರಳಿ ತರಬಲ್ಲವರಾರು?
ಎಲ್ಲ ಬದಲಾಗಬಹುದು.
ನಿನ್ನ ಕಡೆಯುಸಿರಿನಿಂದ
ಹೊಸ ಬದುಕು ಮೊದಲಾಗಬಹುದು.

ಬ್ರೆಷ್ಟ್ ಕವಿಯ "ಎವೆರಿಥಿಂಗ್ ಚೇಂಜಸ್" ಕವಿತೆಯ ಭಾವಾನುವಾದ.

ಸಂಯುಕ್ತ ದಳದ ಹಾಡು United Front Song

ನನ್ನ ಮೆಚ್ಚಿನ ಕವಿ ಬರ್ಟೋಲ್ಟ್ ಬ್ರೆಷ್ಟ್ ಬರೆದ "ಸಂಯುಕ್ತ ದಳದ ಹಾಡು"  ಈ ಹಾಡನ್ನು ಅವನು ಬರೆದದ್ದು ಸಂಯುಕ್ತ ದಳದ ಗೀತೆಯಾಗಿ ೧೯೩೪ರಲ್ಲಿ. ಅದನ್ನು ನನ್ನ ಕೈಲಾದಷ್ಟು ಮಟ್ಟಿಗೆ ಕನ್ನಡೀಕರಿಸಿದ್ದೇನೆ. ಹೆಚ್ಚಿನ ಮಾಹಿತಿ ಬೇಕಾದವರು ಇಲ್ಲಿ ಮತ್ತು ಇಲ್ಲಿ ನೋಡಿ.

ಮಾನವ ದೇಹವು
ಮೂಳೆ ಮಾಂಸದ ತಡಿಕೆ
ಕೇಳುವುದನುದಿನ
ಅನ್ನ ನೀರು ಹೊದಿಕೆ

ಅರಗಿಸಲಾಗದ ಮಾತುಗಳೆಲ್ಲಾ
ಹಸಿದಿಹ ಹೊಟ್ಟೆಯ ತುಂಬುವುದಿಲ್ಲ

ಒಂದು ಎರಡು ಮೂರು
ಸೇರಿರಿ ನಿಮ್ಮಯ ಸಾಲು
ಶ್ರಮಿಕರ ದಳದಲಿ ನಿಲ್ಲಿರಿ
ನೀವೇ ಶ್ರಮಿಕರು ಮರೆಯದಿರಿ.

ಮಾನವ ದೇಹವು
ಮೂಳೆ ಮಾಂಸದ ತಡಿಕೆ
ಬೀಳುವವರೆಗೂ ತಡೆಯದೆ
ನಿಲ್ಲಲು ಆಗದು ಅದಕೆ

ಗುಲಾಮರೇನೂ ಬೇಕಿಲ್ಲ
ಆಳುವ ಧಣಿಯನೂ ಸಹಿಸಲ್ಲ.

ಒಂದು ಎರಡು ಮೂರು
ಸೇರಿರಿ ನಿಮ್ಮಯ ಸಾಲು
ಶ್ರಮಿಕರ ದಳದಲಿ ನಿಲ್ಲಿರಿ
ನೀವೇ ಶ್ರಮಿಕರು ಮರೆಯದಿರಿ.

ದುಡಿಯುವ ಜನರು ನಾವೆಲ್ಲ
ದುಡಿಮೆಯೆ ದೇವರು ನಮಗೆಲ್ಲ
ಬಿಡಿಸಲು ನಮ್ಮೀ ಬಂಧನ
ಬೇರೇ ಯಾರೂ ಬೇಕಿಲ್ಲ.
ನಮ್ಮದೆ ಬಲವು ಸಾಕಲ್ಲ..

ಒಂದು ಎರಡು ಮೂರು
ಸೇರಿರಿ ನಿಮ್ಮಯ ಸಾಲು
ಶ್ರಮಿಕರ ದಳದಲಿ ನಿಲ್ಲಿರಿ
ನೀವೇ ಶ್ರಮಿಕರು ಮರೆಯದಿರಿ