ನನ್ನ ಮೆಚ್ಚಿನ ಕವಿ ಬರ್ಟೋಲ್ಟ್ ಬ್ರೆಷ್ಟ್ ಬರೆದ "ಸಂಯುಕ್ತ ದಳದ ಹಾಡು" ಈ ಹಾಡನ್ನು ಅವನು ಬರೆದದ್ದು ಸಂಯುಕ್ತ ದಳದ ಗೀತೆಯಾಗಿ ೧೯೩೪ರಲ್ಲಿ. ಅದನ್ನು ನನ್ನ ಕೈಲಾದಷ್ಟು ಮಟ್ಟಿಗೆ ಕನ್ನಡೀಕರಿಸಿದ್ದೇನೆ. ಹೆಚ್ಚಿನ ಮಾಹಿತಿ ಬೇಕಾದವರು ಇಲ್ಲಿ ಮತ್ತು ಇಲ್ಲಿ ನೋಡಿ.
ಮಾನವ ದೇಹವು
ಮೂಳೆ ಮಾಂಸದ ತಡಿಕೆ
ಕೇಳುವುದನುದಿನ
ಅನ್ನ ನೀರು ಹೊದಿಕೆ
ಅರಗಿಸಲಾಗದ ಮಾತುಗಳೆಲ್ಲಾ
ಹಸಿದಿಹ ಹೊಟ್ಟೆಯ ತುಂಬುವುದಿಲ್ಲ
ಒಂದು ಎರಡು ಮೂರು
ಸೇರಿರಿ ನಿಮ್ಮಯ ಸಾಲು
ಶ್ರಮಿಕರ ದಳದಲಿ ನಿಲ್ಲಿರಿ
ನೀವೇ ಶ್ರಮಿಕರು ಮರೆಯದಿರಿ.
ಮಾನವ ದೇಹವು
ಮೂಳೆ ಮಾಂಸದ ತಡಿಕೆ
ಬೀಳುವವರೆಗೂ ತಡೆಯದೆ
ನಿಲ್ಲಲು ಆಗದು ಅದಕೆ
ಗುಲಾಮರೇನೂ ಬೇಕಿಲ್ಲ
ಆಳುವ ಧಣಿಯನೂ ಸಹಿಸಲ್ಲ.
ಒಂದು ಎರಡು ಮೂರು
ಸೇರಿರಿ ನಿಮ್ಮಯ ಸಾಲು
ಶ್ರಮಿಕರ ದಳದಲಿ ನಿಲ್ಲಿರಿ
ನೀವೇ ಶ್ರಮಿಕರು ಮರೆಯದಿರಿ.
ದುಡಿಯುವ ಜನರು ನಾವೆಲ್ಲ
ದುಡಿಮೆಯೆ ದೇವರು ನಮಗೆಲ್ಲ
ಬಿಡಿಸಲು ನಮ್ಮೀ ಬಂಧನ
ಬೇರೇ ಯಾರೂ ಬೇಕಿಲ್ಲ.
ನಮ್ಮದೆ ಬಲವು ಸಾಕಲ್ಲ..
ಒಂದು ಎರಡು ಮೂರು
ಸೇರಿರಿ ನಿಮ್ಮಯ ಸಾಲು
ಶ್ರಮಿಕರ ದಳದಲಿ ನಿಲ್ಲಿರಿ
ನೀವೇ ಶ್ರಮಿಕರು ಮರೆಯದಿರಿ
No comments:
Post a Comment