Pages

Wednesday, August 28, 2013

ಎಲ್ಲಾರು ಮಾಡುವುದು ಹೊಟ್ಟೆಗಾಗಿ

ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ ಗೇಣು ಬಟ್ಟೆಗಾಗಿ

ನೆಲ್ಲುಗಳ ಕುಟ್ಟಿಕೊಂಡು,
ಬಿದಿರುಗಳ ಹೊತ್ತುಕೊಂಡು
ಕೂಲಿಗಳ ಮಾಡುವುದು ಹೊಟ್ಟೆಗಾಗಿ
ನಾಲ್ಕುವೇದ ಪುರಾಣ ಪಂಚಾಂಗ ಹೇಳಿಕೊಂಡು
ಕಾಲ ಕಳೆಯುವುದೆಲ್ಲ ಹೊಟ್ಟೆಗಾಗಿ..

ಬಡಿದು ಬಡಿದು ಕಬ್ಬಿಣವ
ಕಾಸಿ ತುಪಾಕಿ ಮಾಡಿ
ಹೊಡೆವ ಗುಂಡು ಮಾಡುವುದು ಹೊಟ್ಟೆಗಾಗಿ

ಚಂಡಭಟನ್ಗಾಗಿ ನಡೆದು  (ಚಂಡಭಟರೆಲ್ಲ ಮುಂದೆ)
ಕತ್ತಿ ಢಾಲು ಕೈಲಿ ಹಿಡಿದು (ಕತ್ತಿ ಹರಿಗೆಯ ಹಿಡಿದು)
ಖಂಡ ತುಂಡ ಮಾಡುವುದು ಹೊಟ್ಟೆಗಾಗಿ

ಬೆಲ್ಲದಂತೆ ಮಾತನಾಡಿ
ಎಲ್ಲರನ್ನು ಮರಳು ಮಾಡಿ
ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ

ದೊಡ್ಡ ದೊಡ್ಡ ಕುದುರೆ ಏರಿ
ಮೇಜ ಹೊತ್ತು ರಾಹುತರಾಗಿ
ಹೊಡೆದಾಡಿ ಸಾಯುವುದು ಹೊಟ್ಟೆಗಾಗಿ
ಕುಂಟೆ ಕೂರಿಗೆಯಿಂದ
ಹೆಂಟೆ ಮಣ್ಣ ಹದಮಾಡಿ
ರಂಟೆ  ಹೊಡೆದು ಬೆಳೆಸುವುದು ಹೊಟ್ಟೆಗಾಗಿ


ಕೆಟ್ಟತನದಿಂದ
ಕಳ್ಳತನವನ್ನೆ ಮಾಡಿ
ಕತ್ತಿ ಹೊಡೆಸಿಕೊಳ್ಳುವುದು ಹೊಟ್ಟೆಗಾಗಿ
ಸನ್ಯಾಸಿ ಜಂಗಮ ಜೋಗಿ
ಜಟ್ಟಿ ಮೊಂಡ ಭೈರಾಗಿ
ನಾನಾವೇಷ ಕೊಂಬುವುದು ಹೊಟ್ಟೆಗಾಗಿ


ಉನ್ನತ ಕಾಗಿನೆಲೆ ಆದಿಕೇಶವನ
ಅನುದಿನ ನೆನೆವುದು ಭಕ್ತಿಗಾಗಿ// ಪರ ಮುಕ್ತಿಗಾಗಿ

No comments:

Post a Comment