Pages

Thursday, February 03, 2022

ಭಯ

ಕಡಲೊಡನೆ ಬೆರೆವ ಮುನ್ನ
ನದಿಯಾಕೆ ಮೈಯೆಲ್ಲ ನಡುಕ
ಒಡಲೊಳಗೆ ಹರಿವ ಕ್ಷಣದೆ 
ತನುವ ತುಂಬೆಲ್ಲಾ ತಲ್ಲಣದ ತವಕ
ಘಟ್ಟದಲಿ ಹುಟ್ಟಿ,  ತಿಟ್ಟುಗಳ ತೆವಳಿ,  
ಬಟ್ಟಬಯಲಿನವರೆಗೆ ಪಯಣ

ಅಲ್ಲಲ್ಲಿ,

ಒತ್ತರಿಸಿ ನಿಂತ ಕಾನನದ ಗೂಡು
ಎತ್ತರಿಸಿ ನಿಂತ ಗಿರಿಸಾಲ ಬೀಳು
ಹಂಬಲಿಸಿ ನಿಂತ  ಜೀವಗಳ ಜೋಗುಳದ ಹಾಡು,    
ಹಾಡಿ ಬಂದಾಕೆ ನಿಂತಿಹಳು ಇಲ್ಲಿ
ಕೊನೆ ಮೊದಲು ಕಾಣದೀಶರಧಿಯೆದುರಿನಲಿ.

ಈ ಘಳಿಗೆ ತವಕದ ಘಳಿಗೆ, 
ಸಾಗರನ ಎದೆಯಲ್ಲಿ ಬೆಸುಗೆ,
ನದಿಗೋ, 
ಕರಗಿ ಹೋಗುವ ಭಯಕೆ
ಹಿಂತಿರುಗಿ ಓಡಿ ಹೋಗುವ ಬಯಕೆ.

ಕಾಲ ಹಿಂದೆ ಸರಿದೀತೆ,
ನದಿಯು ಬೆಟ್ಟ ಹತ್ತೀತೆ,
ಹಿನ್ನಡೆಯ ದಾರಿ ತೆರೆದೇ ಇಲ್ಲ.

ಚಳಿ ಬಿಟ್ಟು ಮುನ್ನಡೆಯಲೇಬೇಕು 
ಇಳೆ ದಾಟಿ ಸಾಗರದಲಿ ಒಂದಾಗಲೇಬೇಕು 
ಕರಗಿ ಹೋಗುವ  ಭಯವು ಕರಗಲೇಬೇಕು

ಆಗಲೇ  ಅರಿವಾಗುವುದು
ಅದು ಸಾಗರದಲಿ ಕರಗಿಹೋಗುವುದಲ್ಲ
ತಾನೇ ಸಾಗರವಾಗುವ ಸಂಭ್ರಮದ ಘಳಿಗೆಯೆಂದು.

--
ಖಲೀಲ್ ಗಿಬ್ರಾನ್ ನ Fear ಕವಿತೆಯ ಭಾವಾನುವಾದ.

No comments:

Post a Comment