ಅರಳು ಮಲ್ಲಿಗೆಯ ಕಣ್ಣಲಿ
ಹೊಸಕನಸು ಮೂಡುತಿಹುದೇನೋ
ಆ ಕನಸು ಕಟ್ಟುವ ಬಣ್ಣದಲಿ
ನನ್ನ ಮನಸು ಮೂಡಿಹುದೇನೋ
ಅರಳು ಮಲ್ಲಿಗೆಯ ಘಮದಲಿ
ಹೊಸ ಬಾಳು ಬೆಳಗುತಿದೆಯೇನೋ
ಆ ಸುಮದ ಸೌಗಂಧದಲೆಯಲಿ
ಹೊಸ ಆಸೆ ಗರಿ ಬಿಚ್ಚಿ ಬೆಳೆಯುತಿದೆಯೇನೋ
ಅರಳು ಮಲ್ಲಿಗೆಯ ಅರೆ ಬಿರಿದ ಎಸಳುಗಳ ನಡುವೆ
ರಾಗರಂಜಿತ ಪರಾಗಭೂಷಿತ ಮಧುವೇ
ಹಾರಿ ಬಂದು ಬಾಯಾರಿ ನಿಂತ ಭ್ರಮರಕೆ
ತೃಷೆಯನಾರಿಪ ಸೂಜಿ ಚುಂಬನದ ಕನವೇ..
ಅಲ್ಲೆಲ್ಲೋ ಬಚ್ಚಿಟ್ಟ ಪುಟ್ಟ ಹೃದಯದಲಿ
ಏನಿದೆಯೋ ಏನೋ ತಿಳಿದವಳು ನೀನೇ
ನಿನ್ನ ಗುಟ್ಟುಗಳ ಹಾಗೇ ಒಟ್ಟಾಗಿ ನೋಡಿ
ಒಗಟಾಗಿ ಕಾಡಿದರೂ, ಸಡಗರವ ಪಡುವೆ.
No comments:
Post a Comment