Pages

Wednesday, March 30, 2011

ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.

ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಹೋಗುವಾಗ ಕುವೆಂಪು ವಿರಚಿತ "ಶ್ಮಶಾನ ಕುರುಕ್ಷೇತ್ರಂ" ನಾಟಕ ಓದುತ್ತಿದ್ದೆ. ಕುವೆಂಪುರವರ ಕೃತಿ ಗಳನ್ನೋದುವುದು ಸದಾ ಕಾಲಕ್ಕೂ ರಸಾನುಭವವೇ. ಕಲಿಪುರುಷ ದ್ವಾಪರನಿಗೆ ವಚನವಿತ್ತಂತೆ, ಕಲಿಮಾನವರು ಕುಬ್ಜರಾದರೂ, ಎಲ್ಲರನ್ನೂ ಮೀರಿಸಿದ ಗಟ್ಟಿಗರೇ ಸೈ. ಶ್ಮಶಾನ ರುದ್ರದೇವನು ದ್ವಾಪರನಿಗೆ ತೋರುವ ಕಾಲಜ್ಞಾನದ ತುಣುಕು, ರಸರೋಮಾಂಚನಗೊಳಿಸುವ ಸೆಳಕೇ ಸೈ. ಜಗದೀಶ ಕೃಷ್ಣ ನ ನಾಟಕದಲ್ಲಿ ಎಲ್ಲರೂ ಅಭಿನಯಿಸಿ ನೇಪಥ್ಯಕ್ಕೆ ಸರಿಯುವ ಪಾತ್ರಧಾರಿಗಳೇ. ದುರ್ಯೋಧನನು ಕೌರವ ಕೃಷ್ಣ . ಧರ್ಮಜ ಪಾಂಡವ ಕೃಷ್ಣ . ಸೊಗಸಾದ ಪರಿಕಲ್ಪನೆಯ ಈ ನಾಟಕ, ಕದನದ ಕೇಡನ್ನು ಮೊಗೆಮೊಗೆದು ತೋರುವ, ಅಂತೆಯೇ ಅಧ್ಯಾತ್ಮದ ಅಂತಃದರ್ಶನವನ್ನೂ ನೀಡುವ ಅತಿ ಸುಂದರ ನಾಟಕವನ್ನೋದುವ ಘಳಿಗೆಗಳಲ್ಲಿ ನನ್ನ ಅಂತಃಕರಣ ಕಲಕಿ ಕಣ್ಣೀರಾಗಿ ಹರಿದದ್ದು ಸತ್ಯ.
ಇಂತಹ ದರ್ಶನಗಳು ಕಾಲದೇಶಗಳನ್ನು ಮೀರಿ ಚಿಂತನಾಶೀಲ ಮನುಜರೆಲ್ಲರಿಗೂ ಯಾವುದೋ ಒಂದು ಕಾಲಘಟ್ಟದಲ್ಲಿ, ಅರಿಕೆಗೆ ಬರುತ್ತಲೇ ಇರುತ್ತವೆ. ಆದರೆ ಅವನ್ನು ವ್ಯಕ್ತಪಡಿಸುವ ಭೌತಿಕ ವಿಧಾನಗಳಲ್ಲಿ ಭಿನ್ನತೆ ಇರಬಹುದು.

ಇಂತಹ ಯೋಚನೆ ನನ್ನ ಮನಸ್ಸಿಗೆ ಬಂದಿದ್ದು ನಾನು ಒಂದೇ ದಿನ ನೋಡಿದ ಎರಡು ವಿಭಿನ್ನ ನೆಲೆಯ ಆದರೆ ಎಂತಹುದೂ ಸಾಮ್ಯತೆಯಿಂದ ಹತ್ತಿರವಾದ ಚಿತ್ರಗಳು. ಅವೇ ಮೆಲ್ ಗಿಬ್ಸನ್ ನ ಅಪೋಕ್ಯಾಲಿಪ್ಟೋ ಮತ್ತು ನಮ್ಮವರೇ ಜಿ.ವಿ. ಅಯ್ಯರ್ ಅವರ ಆದಿಶಂಕರಾಚಾರ್ಯ.

ಅಪೋಕ್ಯಾಲಿಪ್ಟೋ ಮೆಲ್ ಗಿಬ್ಸನ್ ನಿರ್ದೇಶನದ ೧೩ನೇ ಶತಮಾನದ 'ಮಾಯಾ' ನಾಗರೀಕತೆಯ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ನಡೆಯುವ ಘಟನೆಗಳ ಅಧಾರಿತ ಚಿತ್ರ. ಜೀವವುಳಿಸಿಕೊಳ್ಳಲು ಬೇಟೆಗಾರರಿಂದ ತಪ್ಪಿಸಿಕೊಂಡು ಓಡುವ ನೀರುಕುದುರೆಯೊಂದರಿಂದ ಶುರುವಾಗುವ ಈ ಚಿತ್ರ, ನೀರುಕುದುರೆಯ ಬೇಟೆಗಾರರೇ ಕ್ರೂರ ಮಾಯಾ ಜನಾಂಗದ ಜನರಿಂದ ಬೇಟೆಯಾಡಲ್ಪಡುವ, ಮತ್ತು ಅವರಲ್ಲೊಬ್ಬ ಈ ನರಬಲಿಗಾರರಿಂದ ತಪ್ಪಿಸಿಕೊಳ್ಳುವಲ್ಲಿ ಮುಕ್ತಾಯವಾಗುತ್ತದೆ.

ಕಣ್ಣಮುಂದೆಯೇ ಹತ್ಯೆಗೊಳಗಾಗುವ ತಂದೆ, ಆ ತಂದೆಯ ಹಿಂದೆಯೇ ಹೇಳಿದ್ದ ಹಿತವಚನ " ಧೈರ್ಯಗೆಟ್ಟರೆ ಸೋತಂತೆ, ಎಂದಿಗೂ ಧೈರ್ಯಗೆಡಬೇಡ" ಎನ್ನುವ ಮಾತು, ನಾಯಕನಿಗೆ ಅತೀವ ಆತ್ಮವಿಶ್ವಾಸ ನೀಡುತ್ತದೆ. ಆಕ್ರಮಣಕಾರರಿಂದ ರಕ್ಷಿಸಿಕೊಳ್ಳಲು ತನ್ನ ಗರ್ಭಿಣಿ ಹೆಂಡತಿ ಮತ್ತು ಮಗುವನ್ನು ಬಾವಿಯೊಂದರಲ್ಲಿ ಅವಿತಿಟ್ಟು, ಆಕ್ರಮಣಕಾರರೊಂದಿಗೆ ಹೋರಾಡುವ ನಾಯಕ ಅವರಿಂದ ಬಂಧನಕ್ಕೊಳಗಾಗುತ್ತಾನೆ. ನರಬಲಿಗಾಗಿ ಎಳೆದೊಯ್ಯುವ ನಿಮಿಷದಲ್ಲಿ ಸೂರ್ಯಗ್ರಹಣವಾಗಿ ನಾಯಕನ ಜೀವವುಳಿಯುತ್ತದೆ. ಆದರೆ ಗೆದ್ದವರ ಬೇಟೆಯ ಆಟಕ್ಕೆ ಗುರಿಯಾಗುವ ಸೋತವರು, ಅವರಿಂದ ಹೇಗೋ ತಪ್ಪಿಸಿಕೊಂಡು ಓಡುವ ನಾಯಕ. ಅವನ ಓಟಕ್ಕೆ ಶಕ್ತಿ ಬಂದಿರುವುದು ಭಯದಿಂದಲೋ, ಅಥವಾ ಭಯವನ್ನು ಗೆದ್ದು, ಧೈರ್ಯಗೆಡಬಾರದೆಂಬ ತಂದೆಯ ಹಿತವಚನದಿಂದಲೋ..? ಒಟ್ಟಿನಲ್ಲಿ ಓಡುತ್ತಾ, ಓಡುತ್ತಾ, ಬೆನ್ನಟ್ಟಿ ಬರುವ ಕೇಡನ್ನು ತಪ್ಪಿಸಿಕೊಳ್ಳುವ ಅದಮ್ಯ ವಿಶ್ವಾಸಿ ನಾಯಕ, ತನ್ನ ತಾಯ್ನೆಲದಲ್ಲಿ ಹೆಜ್ಜೆಯೂರಿದ ಕ್ಷಣದಲ್ಲಿ ಕೇಡಿನ ಜೊತೆ ಹೋರಾಡುವ ಮನೋಬಲ ತೋರುತ್ತಾನೆ. ಪ್ರಕೃತಿ ಯೂ ಅವನ ಪರ ವಹಿಸಿ ಬೆನ್ನಟ್ಟಿದ ಪಟುಭಟರೊಬ್ಬಬ್ಬರಾಗಿ ಸಾವನ್ನಪ್ಪುತ್ತಾರೆ. ಉಳಿದ ಕೆಲವರು ಹಿಡಿದ ಹಠ ಬಿಡದೆ ಬೆನ್ನಟ್ಟಿರಲು ಸಮುದ್ರ ತಟ ತಲುಪುತ್ತಾರೆ. ಅಲ್ಲಿ ಯೂರೋಪಿನ ಭೂ ಶೋಧದ ಪಡೆಯ ಲಂಗರು ಕಾಣಿಸುತ್ತದೆ. ಚಿಕ್ಕದ್ದನ್ನು ದೊಡ್ಡದು ಅದನ್ನು ಅದಕ್ಕಿಂತಲೂ ದೊಡ್ಡದು ನುಂಗುವ ಪ್ರಕೃತಿ ಸಹಜ ಕ್ರಿಯೆಯ ಸಂಕೇತವಾಗಿ ಇದು ಕಾಣುತ್ತದೆ.

ಈ ಘಳಿಗೆಯಲ್ಲಿ ನಾಯಕ ಅಲ್ಲಿಂದ ತಪ್ಪಿಸಿಕೊಂಡು, ಮಳೆಯಿಂದ ತುಂಬುತ್ತಿರುವ ಬಾವಿಯಲ್ಲಿ ಅಡಗಿಸಿದ್ದ ಹೆಂಡತೀ ಮಕ್ಕಳ ರಕ್ಷಣೆಗೆ ಬರುತ್ತಾನೆ. ಎದೆ ಮಟ್ಟ ತುಂಬಿದ ನೀರಿನಲ್ಲಿಯೇ ಹೊಸ ಜೀವ ಜನನವಾಗುತ್ತದೆ. ಅವರನ್ನು ಕರೆದುಕೊಂಡು ದೂರದ ಕಾಡಿಗೆ ಹೊಸಜೀವನದ ಅನ್ವೇಷಣೆಯಲ್ಲಿ ನಾಯಕ ಸಾಗುತಾನೆ.

ವಿಲ್ ಡ್ಯೂರಾಂಟರ " ಯಾವುದೇ ನಾಗರೀಕತೆ ಪರಕೀಯರಿಂದ ದಮನಗೊಳ್ಳುವುದಕ್ಕೆ ಮೊದಲು, ಒಳಗಿನಿಂದಲೇ ಕೊಳೆಯುತ್ತಾ ಬಂದಿರುತ್ತದೆ" ಎಂಬ ಘೋಷವಾಕ್ಯದೊಂದಿಗೆ ಶುರುವಾಗುವ ಈ ಚಿತ್ರ, ತಾತನೊಬ್ಬ ಹೇಳುವ ನೀತಿಕತೆಯಿಂದ, ಬಾಲಕಿಯ ಕಾಲಜ್ಞಾನದ ನುಡಿಗಳಿಂದಲೂ, ದಾರ್ಶನಿಕ ರೂಪ ಪಡೆದುಕೊಳ್ಳುತ್ತದೆ.

ತಾಂತ್ರಿಕವಾಗಿಯೂ ಮೈ ನವಿರೇಳಿಸುವ ದೃಶ್ಯ ಗಳನ್ನು ನೀರುಕುದುರೆಯ ಬೇಟೆಯಲ್ಲಿ, ಜಲಪಾತದ ಮೇಲಿನಿಂದ ಜಿಗಿಯುವಲ್ಲಿ ಅಥವಾ ನರಬಲಿಯ ದೃಶ್ಯ ದಲ್ಲಿ ಕಾಣಬಹುದು.

ಈ ಗುಂಗಿನಿಂದ ನಾನು ಬಿಡಿಸಿಕೊಳ್ಳುವ ಮೊದಲೇ ನಮ್ಮ ಜಿ.ವಿ. ಅಯ್ಯರ್ಅವರ ಆದಿಶಂಕರಾಚಾರ್ಯ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು.

ಆಕ್ಷನ್ ಚಿತ್ರ ಮಾಡುವ ಮೆಲ್ ಗಿಬ್ಸನ್ ರಿಗೆ ಅಧ್ಯಾತ್ಮಿಕ ಹೊಳಹುಗಳು ಸಿಕ್ಕಂತೆ, ತೀವ್ರ ಆಧ್ಯಾತ್ಮಿಕ ತುಡಿತದ ಆದಿಶಂಕರಾಚಾರ್ಯದ ಕೆಲವು ಕ್ಷಣಗಳು ನಿಮ್ಮನ್ನು ಬೇರೊಂದು ಪ್ರಪಂಚಕ್ಕೆ ಕರೆದೊಯ್ದರೂ ಅಚ್ಚರಿಯಿಲ್ಲ. ಬಾಲ್ಯದಲ್ಲೇ ತಂದೆಯ ಸಾವನ್ನು ಕಂಡ ಶಂಕರನಿಗೆ ಮೃತ್ಯು ಮತ್ತು ವಿವೇಕಗಳು ಜೊತೆಯಾಗುತ್ತವೆ. ಶಂಕರನ ಕಡೆ ಘಳಿಗೆಯವರೆಗೂ ಜೊತೆಗಿರುವ ಇವರಲ್ಲಿ, ಶಂಕರರು ಕಾಯಿಲೆ ಬಿದ್ದಾಗ ಮೃತ್ಯು ವೇ ಶುಶ್ರೂಷೆಗೆ ನಿಲ್ಲುವುದು ಶಂಕರನಿಗೇ ನಗು ತರಿಸುತ್ತದೆ. ದೂರ ಸರಿ ಎನಿಸಿಕೊಂಡ ಚಂಡಾಲನಿಂದ ದೂರ ಸರಿಯಬೇಕಾದದ್ದು ಶರೀರವೋ , ಆತ್ಮವೋ ಎನ್ನುವ ಪ್ರಶ್ನೆ ಎದುರಾಗುತ್ತದೆ. ಶಂಕರನಿಗೆ ಇದರಿಂದ, ಆತ್ಮದ ಶಾಶ್ವತತೆಯ ಅನುಭವದ ಜೊತೆಗೆ ಅದೇ ಬ್ರಹ್ಮವಾಗುವಂತಹುದು ಎನ್ನುವ ಅರಿವಾಗುತ್ತದೆ. ಮಂಡನ ಮಿಶ್ರರೊಂದಿಗಿನ ಸಂವಾದ, ಛಾಂದೋಗ್ಯಪನಿಷತ್ತಿನ ಪರೀಕ್ಷೆಗಳಲ್ಲಿ ಅಧ್ಯಾತ್ಮಿಕ ಸೂಕ್ಷ್ಮಗಳೂ, ಆಚರಣೆಗಿಂತಲೂ ಅವಿನಾಭಾವವೇ ಮುಖ್ಯವೆಂಬ ದಾರಿಯೂ ಕಾಣುತ್ತದೆ.

ಈ ಎರಡೂ ಚಿತ್ರಗಳನ್ನು ನಾನು ಒಟ್ಟಾರೆಯಾಗಿ ತೂಗಿ ನೋಡಲು ಕಾರಣಗಳಿವೆ.

ಮೇಲಿನವರೆಗೂ ಬರೆದು ನಿಂತ ಲೇಖನವನ್ನು ಸುಮಾರು ಎರಡು ವರ್ಷಗಳ ನಂತರ ಮುಂದುವರೆಸಲು ಕುಳಿತಾಗ ನಾನು ಬರೆಯಬೇಕಿದ್ದುದೇನೆಂಬುದೇ ಮರೆತಿದೆ. ಆದರೆ ಈ ವಿಚಾರಕ್ಕೆ ನೆನಪಿನಲ್ಲಿರುವಂತೆ ಕೆಳಗಿನ ಮಾತುಗಳನ್ನು ಹೇಳಬಲ್ಲೆ.
ಎರಡೂ ಚಿತ್ರಗಳೂ ಜನರಾಡದ ಭಾಷೆಯಲ್ಲಿ ಚಿತ್ರಿತವಾಗಿವೆ, ಒಂದರಲ್ಲಿ ಅದ್ಧೂರಿತನವಿದ್ದರೆ, ಮತ್ತೊಂದು ಸರಳತೆಯಿದೆ. ಎರಡರಲ್ಲೂ ಜೀವ ಹುಟ್ಟುವ ಚಿತ್ರಣವಿದೆ. ಬೆನ್ನಟ್ಟುವ ಮೃತ್ಯು ವಿದೆ. ಮತ್ತು ಎರಡೂ ಚಿತ್ರಗಳು ಕತೆಯಾಗಿ ನಮ್ಮೊಡನೆ ಸಂವಾದ ಮಾಡುತ್ತವೆ.

Monday, March 21, 2011

Multigateway routing in debian

Multigateway routing in debian

Enable forwarding by echoing to ip_forward

echo "1" >> /proc/sys/net/ipv4/ip_forward

create the table entries in rt_table by typing following

echo "10 chitti" >> /etc/iproute2/rt_table
echo "20 bhitti" >> /etc/iproute2/rt_table


You can add the routing table by following snippet


ip r show | grep -Ev ^default | while read ROUTE; \
do; \
ip r a $ROUTE table chitti;\
ip r a $ROUTE table bhitti;\
done;

Now set the default gateways for each table

ip r a default via chittigw table chitti
ip r a default via bhittigw table bhitti


Need to mark the packets coming from the proper source networks

iptables -t mangle -A PREROUTING -s ip.of.chitti.network/netmask -d 0.0.0.0/0 -j MARK --set-MARK 10
iptables -t mangle -A PREROUTING -s ip.of.bhitti.network/netmask -d 0.0.0.0/0 -j MARK --set-MARK 20

NAT them with whatever interface

iptables -t nat -A POSTROUTING -s ip.of.chitti.network/netmask -d 0.0.0.0/0 -j SNAT --to ip.of.chittii.interface
iptables -t nat -A POSTROUTING -s ip.of.bhitti.network/netmask -d 0.0.0.0/0 -j SNAT --to ip.of.bhittii.interface

Add the fwmark from the table in route

ip rule add from fwmark 10 table chitti
ip rule add from fwmark 20 table bhitti

Bingo..

Multiple gateways should be working now.

PS : If you have setup the WANs on a single interface with aliases the case is much easier..

Reference : http://linux-ip.net/html/adv-multi-internet.html

Tuesday, March 08, 2011

openvpn how to

1. apt-get install openvpn

The default directory for easy-rsa certificates is "/usr/share/doc/openvpn/examples/easy-rsa/2.0/". So we change theworking directory:

#cd /usr/share/doc/openvpn/examples/easy-rsa/2.0/

2. Now we will create the certificate for CA

#. ./vars

#./clean-all

#./build-ca

3. Then we will create the certificate for server

#./build-key-server server

4. Then we will create the certificate for client

#./build-key client

5. We will build diffie hellman

#./build-dh

6. Now if you wonder about the place of keys which you already created just change your directory to /keys

#cd /usr/share/doc/openvpn/examples/easy-rsa/2.0/keys/

#ls -al

ca.key ca.crt server.key server.csr server.crt client.key client.crt client.csr

7. Now we have the keys and certificates. So we will send them to our clients who want to connect OPENVPN Server. Just be sure that:

ca.key-> only,must be in CA Server

client.crt-> only,must be in Client

client.key-> only,must be in Client

server.crt-> only,must be in OPENVPN Server

server.key-> only,must be in OPENVPN Server

ca.crt-> must be in CA Server and all of the clients.

8. After you transfered the files above safely, you must modify your main configuration file on OPENVPN Server, which is "server.conf".

#cd /usr/share/doc/openvpn/examples/sample-config-files/

#vim server.conf

port 1194
proto udp
dev tun
ca /usr/share/doc/openvpn/examples/easy-rsa/2.0/keys/ca.crt
cert /usr/share/doc/openvpn/examples/easy-rsa/2.0/keys/server.crt
key /usr/share/doc/openvpn/examples/easy-rsa/2.0/keys/server.key
dh /usr/share/doc/openvpn/examples/easy-rsa/2.0/keys/dh1024.pem
server 10.8.0.0 255.255.255.0
ifconfig-pool-persist ipp.txt
push "route 192.168.1.0 255.255.255.0"
push "redirect-gateway def1"
push "dhcp-option DNS 192.168.1.1"
client-to-client
keepalive 10 120
comp-lzo
persist-key
persist-tun
status openvpn-status.log
log /var/log/openvpn.log
log-append /var/log/openvpn.log
verb 3

9. After you typed the configuration above inside your "server.conf" file, copy it to "/etc/openvpn" directory

#cp server.conf /etc/openvpn/

10. Restart your server.

http://cihan.me/how-to-setup-openvpn-server-on-debian-lenny/

Tuesday, February 22, 2011

ಚಿನ್ನದ ಮಲ್ಲಿಗೆ ಹೂವೆ

ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ
ಚಲವು ನನ್ನಲ್ಲಿ ಏಕೆ

ಮಾತಲ್ಲಿ ಜೇನು ತುಂಬಿ
ನೂರೆಂಟು ಹೇಳುವೆ
ನನಗಿಂತ ಚೆಲುವೇ ಬರಲು
ನೀ ಹಿಂದೆ ಓಡುವೆ

ನಿನ್ನನ್ನು ಕಂಡ ಕಣ್ಣು
ಬೇರೇನೂ ನೋಡದಿನ್ನು
ನಿನಗಾಗಿಯೇ ಬಾಳುವೆ ಇನ್ನು ನಾನು

ಹೊನ್ನಿನ ದುಂಬಿಯೆ ಇನ್ನು
ನಿನ್ನ ನಂಬೆನು ನಾನು
ನನ್ನ ಮೊಗವ ಕಂಡಾಗ
ನೆನಪು ಬಂದಾಗ
ಒಲವು ಬೇಕೆಂದು ಬರುವೆ

ಆ ಸೂರ್ಯಚಂದ್ರ ಸಾಕ್ಷಿ
ತಂಗಾಳಿ ಸಾಕ್ಷಿಯು
ಎಂದೆಂದು ಬಿಡದಾ ಬೆಸುಗೆ ಈ ನಮ್ಮ ಫ್ರೀತಿಯು
ಬಂಗಾರದಂಥಾ ನುದಿಯ
ಸಂಗಾತಿಯಲ್ಲಿ ನುಡಿದು
ಆನಂದದ ಕಂಬನಿ ತಂದೆ ನೀನು

Monday, February 07, 2011

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ

ಮೊನ್ನೆ ಶನಿವಾರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಅಲ್ಲಿ ನಾನು ಮಾಡಿದ್ದು ಏನೂ ಇಲ್ಲ. ಯಾವ ಗೋಷ್ಟಿಯಲ್ಲೂ ಭಾಗವಹಿಸಲಿಲ್ಲ. ಯಾವ ಪ್ರಶ್ನೆ ಯನ್ನೂ ಯಾರಿಗೂ ಕೇಳಲಿಲ್ಲ. ಅಷ್ಟೇ ಏಕೆ ಯಾವ ಕವಿಯನ್ನೂ/ ಸಾಹಿತಿಯನ್ನೂ ನೋಡಲಿಲ್ಲ.

ಮನೆಮಂದಿಯೊಂದಿಗೆ ಅಲ್ಲಿಗೆ ಹೋದ ನನ್ನ ಮೊದಲ ಗಮನ ಇದ್ದದ್ದು ಪುಸ್ತಕ ಪ್ರದರ್ಶನದತ್ತ. ಆದರೆ ಪಾರ್ಕಿಂಗ್ ಸಿಗುವುದರೊಳಗೆ ಸುಮಾರು ಅರ್ಧ ಗಂಟೆ ಸಮಯ ಕಳೆದು ಹೋಯಿತು. ವಾಹನ ನಿಲ್ಲಿಸಿ, ನಡೆದು ಹೊರಟರೆ, ಊರ ಜಾತ್ರೆಯಲ್ಲಿ ಹರಡಿದಂತೆ ವ್ಯಾಪಾರಿಗಳ ಸುಗ್ಗಿ, ಏನುಂಟು ಏನಿಲ್ಲ ಇಲ್ಲಿ? ಹಾಲು ಬಿಳುಪಿನ ಅಂಗಿಗಳು ಬೇಕೆ..? ಬೆಂಗಳೂರು ಚಳಿ ತಡೆಯುವ ಸ್ವೆಟರುಗಳೇ..? ಬಣ್ಣದ ಬಲೂನುಗಳೇ?, ನೀರಿನಲ್ಲಿ ಹಾಕಿದರೆ ಊದಿಕೊಳ್ಳುವ ಬಣ್ಣಾದ ಮಣಿಗಳೇ? ನವಿಲುಗರಿಗಳೇ? ರಾಜಣ್ಣ , ವಿಷ್ಣುವರ್ಧನರ ಚೆಂದದ ಕಟ್ಟು ಹಾಕಿಸಿಕೊಂಡ ಚೆಂದದ ಚಿತ್ರಗಳೇ? ಬಾಯಾರಿಕೆ ತಣಿಸಲು ಎಳನೀರು, ಕಬ್ಬಿನಹಾಲು, ಹಣ್ಣಿನರಸಗಳೇ? ರಂಗವಲ್ಲಿ ಹಾಕುವ ಹೊಸ ಸಲಕರಣೆಗಳೇ? ಹೊಸಮಾದರಿಯ ಒಂದೊಂದು ಕೋನದಿಂದ ಒಂದೊಂದು ರೀತಿಯಾಗಿ ಕಾಣುವ ಚಿತ್ರಪಟಗಳೇ ಜೋಕು, ದೊಡ್ಡವರ ಜೋಕು, ಪೋಲಿ ಜೋಕು, ಜ್ಯೋತಿಷ್ಯದ ಪುಸ್ತಕಗಳೇ? ಅಂದದ ಹೆಂಗಸಿನ ಚೆಂದಗಾಣಿಸುವ ಶೃಂಗಾರ ಸಾಮಗ್ರಿಗಳೇ? ಎಲ್ಲವೂ ಇದ್ದ ಈ ಬೀದಿಯನ್ನು ಹಾದು ಮುಖ್ಯದ್ವಾರಕ್ಕೆ ಬರುವುದರಲ್ಲಿ ಸಾಕು ಬೇಕಾಯಿತು.

ಹೌದು ಇದೆಲ್ಲದಕ್ಕೂ ಖಳಸಪ್ರಾಯವಾಗಿ ಸುತ್ತೆಲ್ಲಾ ಫ್ಲೆಕ್ಸ್ ಬೋರ್ಡುಗಳು. ಕನ್ನಡ ಓರಾಟಗಾರರ ಚಿತ್ರಗಳು, ಪಾಪ ಅವರ ಮಧ್ಯೆ ಸಮ್ಮೇಳನಾಧ್ಯಕ್ಷ ಹಿರಿಯ 'ಜೀವಿ'ಯವರ ಚಿತ್ರ!. ಬೆಂಗಳೂರು 'ಮೆಜೆಸ್ಟಿಕ್' ನಿಂದ ಸಮ್ಮೇಳನಕ್ಕೆ ಉಚಿತವಾಗಿ ಕರೆತರುವ ಆಟೋಗಳು. ಕೈಕೊಟ್ಟ ಈಟಿ ( ಐ.ಟಿ) ಗಳು.

ಕನ್ನಡಿಗರು ತುಂಬಾ ಮೃದು ಸ್ವಭಾವದವರೆನ್ನುವುದಕ್ಕೆ ಸಾಕ್ಷಿಯಾಗಿ ಇಲ್ಲಿ ಎಂತಹುದೇ ಭದ್ರತಾ ತಪಾಸಣೆ ಇರಲೇ ಇಲ್ಲ! ಅಷ್ಟು ಜನ ಸೇರಿದ ಸಭೆ ಸಂಪೂರ್ಣ ಸುರಕ್ಷಿತವೆಂದು ಯಾರೂ ಖಾತರಿ ಮಾಡಿಕೊಳ್ಳಬೇಕಾಗಿಲ್ಲ. ನೀವೇ ನೋಡಿದಿರಲ್ಲ, ಎಂತಹ ಸುರಕ್ಷತೆಯೂ ಇಲ್ಲದಿದ್ದರೂ ಯಾವುದೇ ತೊಂದರೆ ಇಲ್ಲದೆ ಈ ಕಾರ್ಯಕ್ರಮ ಯಶಸ್ವಿಯಾಗಿ ಮುಗಿದದ್ದು..! ಬೆಂಗಳೂರಿನಲ್ಲಿ ಹಲವು ಸಭೆ ಸಮಾರಂಭಗಳು ಜರುಗುತ್ತಲೇ ಇರುತ್ತವೆ, ಹಾಗಾಗಿ ಕೋಟಿ ಜನಸಂಖ್ಯೆಯ ಬೆಂಗಳೂರಲ್ಲಿ ನಾಲ್ಕೈದು ಲಕ್ಷ ಕನ್ನಡ ಜನ ಸೇರುವ ಈ ಸಮಾರಂಭಕ್ಕೆ ಏನೂ ಸಮಸ್ಯೆಯಿಲ್ಲ.

ಇನ್ನು ಪುಸ್ತಕ ಪ್ರದರ್ಶನದ ಒಳ ಹೋಗಲು, ನೂಕು ನುಗ್ಗಲು, ಒಳಗೆ ನಿಮ್ಮ ಕುತೂಹಲ ತಣಿಸಲು ನೂರಾರು ಪ್ರಕಾಶಕರ ಲಕ್ಷಾಂತರ ಪುಸ್ತಕಗಳು. ತಮಿಳಿನ ರಂಗವಲ್ಲಿ, ಇಂಗ್ಲಿಷಿನ ರೈಮ್ , ಜ್ಯೋತಿಷ್ಯದ ಪುಸ್ತಕಗಳ ಜೊತೆಯಲ್ಲಿ, ವಿವಿಧ ಜ್ಯೋತಿಷ್ಯಮಣಿಗಳು, ಇವುಗಳ ಜೊತೆಗೇ, ಸಮಗ್ರ ಕುವೆಂಪು ಕಾವ್ಯ, ಶೂನ್ಯಸಂಪಾದನೆಯ ವಿಮರ್ಶೆ, ಕೌಟಲೀಯ ಅರ್ಥಶಾಸ್ತ್ರ, ಲಂಕೇಶ್ ಪ್ರತಿಪಾದಿತ ಐಲ್ ಪುಲ್ಲಿಂಗ್ ಚಿಕಿತ್ಸೆ. ಇಗೋ ಕನ್ನಡ, ಭಾಷೆ, ಗಾಂಧೀಜಿಯ ಆತ್ಮ ಚರಿತ್ರೆ. ಅಲ್ಲಿರುವ ಪುಸ್ತಕಗಳನ್ನು ಕಣ್ತುಂಬಿಕೊಳ್ಳಲೂ ಸಾಧ್ಯವಿಲ್ಲದಷ್ಟು ಜನಜಂಗುಳಿ. ಮಳಿಗೆ ನೋಡಿಕೊಳ್ಳಲ್ಲು ಇರುವ ಇಬ್ಬರಿಗೆ ಕಣ್ಣು ತಿರುಗಿಸಲೂ ಪುರುಸೊತ್ತಿಲ್ಲದಷ್ಟು ಕೆಲಸ, ಬಿಲ್ಲು ಹರಿಯುವುದರೊಳಗೆ ಇಲ್ಲೊಂದು ಪುಸ್ತಕ ಹಾರಿಹೋದರೆ? ದೇವನೇ ಬಲ್ಲ. ಕಾಸು ಕೊಟ್ಟು ಪುಸ್ತಕ ಕೊಂಡವರೆಷ್ಟೋ? ಮೆಲ್ಲಗೆ ಜೋಳಿಗೆಯೊಳಗೆ ನುಸುಳಿದವೆಷ್ಟೋ? ಇರಲಿ ಬಿಡಿ ಕನ್ನಡ ಕೃತಿಗಳಿಗೆ ಓದುಗರು ಸಿಕ್ಕರಲ್ಲಾ ಅದು ಮುಖ್ಯ. ತಪ್ಪು ನಾವು ಹೀಗೆಲ್ಲಾ ಅನ್ನಬಾರದು. "ಏಳು" ಕೋಟಿಯ ವಹಿವಾಟು ನಡೆದಿದೆ ಅಲ್ಲಿ ಗೊತ್ತಾ? ಜೊತೆಗೆ ಪುಸ್ತಕ ಪ್ರದರ್ಶನ ಇನ್ನೂ ಮುಂದುವರೆದಿದೆಯಂತೆ. ಸದ್ಯ ನಮ್ಮ ರೈತರು ಈರುಳ್ಳಿಯನ್ನು ರಸ್ತೆಯಲ್ಲಿ ಸುರಿದ ಹಾಗಾಗಲಿಲ್ಲವಲ್ಲ.!

ಸಾರಸ್ವತ ಲೋಕ ಒಗ್ಗಟ್ಟಾಗಿ, ಚಿಮೂಗೆ ಗೌರವ ಡಾಕ್ಟರೇಟ್ ನಿರಾಕರಿಸಿದ ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡಿದೆಯಂತೆ, ಆದರೆ ಬಡಸಾಹಿತಿಯ ಮಾತಿಗೇನು ಬೆಲೆ. ಕನ್ನಡದ ಕೊಲೆಗಡುಕ ಇಂಗ್ಲಿಷ್ ಎಂದರೆ ಯಾರಿಗೇನು ನಷ್ಟ. ನಮ್ಮ ಅಡಿಗೆಯವರು ನೈಫ್ ಅನ್ನೇ ಹಿಡಿಯುತ್ತಾರೆ, ಡಿನ್ನರಿಗೇ ಕರೆಯುತ್ತಾರೆ.

Monday, January 31, 2011

ಅಜಮಿಳ ಮತ್ತು ಹುಲಿಮಂದೆ

ಹುಲಿರಾಜನ ಮುಂದೆ,
ಬಂತು ಹುಲಿ ಮಂದೆ
ತಂದಿತೊಂದು ದೂರು
"ಹದಿನೈದು ದಿನ ಕಳೆದು
ಹದಿನಾರನೇ ರಾತ್ರಿ ಇದು.
ತಿಂದಿಲ್ಲ ತುಂಡನೊಂದೂ
ಅಜಮಿಳನ ಕುರಿಗಳನು
ಕಾಯುತಿದೆ ಹೊಸನಾಯಿ
ಹತ್ತಿರಕೂ ಹೋಗಬಿಡದು
ಅದು. ಕಟ್ಟಿಬಿಟ್ಟಿದೆ ಬಾಯಿ"

"ಏನೆಂದಿರೇನೆಂದಿರಿ.. "
ಆರ್ಭಟಿಸಿದನು ಹುಲಿರಾಜ
"ಮುಂದಾಗಿ ಬರಲಿಲ್ಲವೇಕೆ..
ಇಂದೇ ಹೊರಟಿಹನು ಕಾಳಗಕೆ
ಹಬ್ಬದೂಟಕೆ ಸಿದ್ದರಾಗಿ,
ಆ ಕುನ್ನಿ ಕಲಿಯಲಿದೆ ಪಾಠ ಹೊಸದಾಗಿ."

"ಚಿರಾಯುವಾಗಲಿ ನಮ್ಮ ವೀರ,
ನಾಯಿ ಸದೆಬಡಿವ ಶೂರ"
ಹಾರೈಕೆಯ ಸಮರ ಘೋಷಣೆಗಳು
ಹುಲಿಮಂದೆಯಿಂದ.
"ಇರಲಿ ತುಸು ಎಚ್ಚರ,
ಹಿಂತಿರುಗಿ ಕ್ಷೇಮದಿಂದ"
ಎಂದಾಕೆ ಹುಲಿರಾಣಿ
ಪ್ರೀತಿಯೊಳಡಗಿದ ದುಗುಡದಿಂದ.
ನಡೆದಾಯ್ತು ಕಾಳಗಕೆ ಹುಲಿರಾಯ
ಅರುಣ ಮೂಡುವ ಮುನ್ನ

ಕಳೆಯುವದರೊಳಗೊಂದು ಗಂಟೆ
ಹುಲಿರಾಯ ಬಂದ ಹಿಂದೆ.
ಬಲಗಣ್ಣ ಮೇಲೊಂದು ಗುರುತು,
ಕಾಲೊಂದು ಕುಂಟುತಿಹುದು.
ಬಾಲ ಮುದುರಿದ್ದನು ಸೆಟೆಸಿ ನುಡಿದ

"ಸಿದ್ಧರಾಗಿ ವೀರರೇ..
ಸಿದ್ಧ ವಿದೆ ಯೋಜನೆಯು..
ಯುದ್ಧಭೂಮಿಯ ನಕ್ಷೆ ಯೂ
ಆ ಜಾಗವನೆಲ್ಲ ನಾ ಬಲ್ಲೆ
ಆ ಕುನ್ನಿಗಿನ್ನಿಲ್ಲವಲ್ಲಿ ನೆಲೆ

ನುಗ್ಗಿ ಹೋರಾಡಿ ಬಡಿಯಿರಿ ಬಗ್ಗು
ಕುಗ್ಗಿ ಸಾಯಲುಬೇಕು ಕುನ್ನಿ ಕೊಬ್ಬು
ಬಗ್ಗದೆಯೇ ಹೊಕ್ಕು ಕುಗ್ಗದೆಯೇ ಕಾದಿರೈ.
ಮಗ್ಗುಲಲೇ ನಾನಿರುವೆ ಬೇಡ ಭಯವು "

ಐವತ್ತು ಹುಲಿಗಳ ಮಂದೆ,
ರಾಜನಿರುವುದೂ ಸೇರಿ ಹಿಂದೆ,
ಒಟ್ಟಾರೆ ಐವತ್ತೊಂದೇ..
ಅಜಮಿಳನ ನಾಯಿ
ಬಿಡಲಿಲ್ಲ ಯಾರನ್ನೂ ಮುಂದೆ.
ಮಿಂಚಿನಂತಹ ವೇಗ
ಶೌರ್ಯದಲಿ ಪರಿಘ
ಬಂದಿಯಾದುವು ಹುಲಿಗಳೆಲ್ಲ
ಯೋಜನೆಯು ಕೈಗೂಡಿ ನಡೆಯಲಿಲ್ಲ

ಅಜಮಿಳನ ಮುಂದು
ಬಂಧಿ ಹುಲಿಗಳ ಹಿಂಡು.
" ಬಪ್ಪರೆ ಭಲಾ ಅಜಮಿಳಾ..
ಮೆಚ್ಚಿ ಅಹುದೆನ್ನಬೇಕು
ನಿನ್ನೊಲವಿನ ಕುನ್ನಿಯ ಶೌರ್ಯ
ಆದರೂ ನಿನಗೊಂದು ಮಾತು.
ನಾವಿಲ್ಲಿ ಬರಲಿಲ್ಲ ಬೇಟೆಗೆ
ಬಂದದ್ದು ನಿನ್ನ ಭೇಟಿಗೆ.
ನಾವಾಡಿದ್ದರೆ ಬೇಟೆ,
ನಿನ್ನ ಕುನ್ನಿಗುಳಿಗಾಲವುಂಟೇ?
ಗೆಲುವಿಂದೇನು? ಸೋಲಾದರೇನು?
ಮುಖ್ಯ ಕಾರ್ಯ ಸಾಧಿಸುವ ರೀತಿ
ನಮಗುಂಟೆ ಕಾಡಿನಲಿ ಸೋಲಿನಾ ಭೀತಿ


ಸರಳ ಬದುಕಿನ ಬುನಾದಿಯಲಿ
ಬೆಳೆದು ಸುಳ್ಳಾಡದೆ ನಡೆವ ನಾಯಿ
ಈ ಮಾತು ಕೇಳಿ ನೊಂದು ಹೃದಯದಲಿ
ತನ್ನೊಡೆಯನಿಗೆ ನಿಜ ತಿಳಿಸಲೆತ್ನಿಸಿತು ಸನ್ನೆಯಲಿ
ಅಜಮಿಳ ಪಳಗಿದವ ರಾಜನೀತಿಯಲಿ
ನೋಡಿಯೂ ನೋಡದಂತಿಹನಲ್ಲಿ
ಹುಲಿರಾಯನ ನುಡಿಗಳೆಲ್ಲವ ನಿಜವೆಂದು ನಂಬಿದಂತೆ

ಬಿಡುಗಡೆಯ ನೀಡಿ ಹುಲಿಗಳಿಗೆಲ್ಲ
ಔತಣಕೆ ನಿಂತಿರಲು ಬಿನ್ನಹವಿತ್ತ.
ರಾತ್ರಿಯೂಟಕೆ ಕಡಿದು ಎಳೆ ಮರಿಯ
ಸಂಧಿಪತ್ರವನಿಟ್ಟ ಸಹಿ ಹಾಕಲು
ಜೀವನವೆಲ್ಲ ಗೆಳೆಯರಾಗಿರಲು
ಭೋಜನ ಮುಗಿಯುವ ಮೊದಲು

ಉಡುಗೊರೆಗಳಾಗಿ ನೀಡಿದನು
ಉಣ್ಣೆ -ಚರ್ಮಗಳ ಕೊಡುಗೆಗಳ
ಮುಟ್ಟಾಳನಲ್ಲ ಅಜಮಿಳನು
ಹುಲಿಗಳಿಗೂ ಬೇಕು ಊಟ ಎಂದರಿತಿಹನು

ಕುರಿಮಂದೆಯೊಡನೆ ಹೊಟ್ಟೆ ತುಂಬಿದ
ಹುಲಿ ಮಂದೆ ಕುಡಿವಾಗ ನೀರನೊಂದೇ ಕೊಳದಲಿ
ಅಜಮಿಳನು ನಸುನಗುತಾ ನುಡಿಸುತಿಹನು ಮುರಲಿ

ಅರುಣ್ ಕೋತಲ್ಕರರ "Ajamil and Tigers" ಪದ್ಯದ ಭಾವಾನುವಾದ

Tuesday, November 09, 2010

ಇಗ್-ನೋಬಲ್ ಪ್ರಶಸ್ತಿಗಳ ೨೦೧೦ರ ಪಟ್ಟಿ

ಇಗ್-ನೋಬಲ್ ಪ್ರಶಸ್ತಿಗಳ ೨೦೧೦ರ ಪಟ್ಟಿಯನ್ನು ನಿಮಗೆ ನೀಡುವಲ್ಲಿ ತಡಮಾಡಿದ್ದಕ್ಕೆ ಕ್ಷಮೆ ಇರಲಿ . ಸೆಪ್ಟೆಂಬರ್ ಮೂವತ್ತರಂದು ಈ ಪ್ರಶಸ್ತಿಗಳನ್ನು ನೀಡಲಾಯಿತು.

ನಗು ಮೂಡಿಸಿ ಚಿಂತನೆಗೆ ಹಚ್ಚುವ ಸಂಶೋಧನೆಗಳಿಗೆ ಈ ಪ್ರಶಸ್ತಿ ಮೀಸಲು. ಕಳೆದ ಬಾರಿಯ ಇಗ್ನೋಬಲ್ ಪ್ರಶಸ್ತಿ ವಿಜೇತರಿಗೆ ಈ ಬಾರಿಯ ನೋಬಲ್ ಪ್ರಶಸ್ತಿ ಸಂದಿದೆ ಎನ್ನುವ ಅಂಶ ನಿಮ್ಮ ಗಮನದಲ್ಲಿರಲಿ.

ಇದನ್ನು ಓದಿ, ನಕ್ಕು, ಚಿಂತನೆಗೆ ತೊಡಗಿಕೊಳ್ಳಿ.. ನಿಮಗೆ ಹಾಗೆನ್ನಿಸಿದರೆ


ಇಂಜಿನಿಯರಿಂಗ್ ಪ್ರಶಸ್ತಿ : ಕರೀನಾ ಅಸೆವೆಡೋ ಮತ್ತು ಅಗ್ನೆಸ್ ರೋಕಾ ಲಂಡನ್ ಜೂಯಲಾಜಿಕಲ್ ಸೊಸೈಟಿ. ಮತ್ತು ಡಿಅನೆ ಗೆಂಡ್ರೋನ್ : ನೀಲಿ ತಿಮಿಂಗಲಗಳ ಮೂಗಿನ ಸಿಂಬಳ ಸಂಗ್ರಹಿಸಲು ರಿಮೋಟ್ ಕಂಟ್ರೋಲ್ ಇರುವ ಹೆಲಿಕಾಪ್ಟರ್ ಬಳಸುವ ತಂತ್ರಜ್ನಾನ ರೂಪಿಸಿದ್ದಕ್ಕೆ.

ವೈದ್ಯಕೀಯ ಪ್ರಶಸ್ತಿ : ಸೈಮೊನ್ ರೈಟ್ ವೆಲ್ಡ್ , ಅಮ್ಸ್ ಟರ್ ಡ್ಯಾಮ್ ವಿಶ್ವವಿದ್ಯಾನಿಲಯ. ಮತ್ತು ಇಲಿಯಾ ವ್ಯಾನ್ ಬೀಸ್ಟ್ ಟಿಲ್ಬರ್ಗ್ ವಿಶ್ವವಿದ್ಯಾನಿಲಯ : ರೋಲರ್ ಕೋಸ್ಟರ್ ಮೇಲಿನ ಪಯಣದಿಂದ ಅಸ್ತಮಾವನ್ನು ಗುಣಪಡಿಸಬಹುದೆಂಬ ಸಂಶೋಧನೆಗೆ

ಸಾರಿಗೆ ಯೋಜನೆ ಪ್ರಶಸ್ತಿ
: ತೊಷಿಯಾಕು ನಾಕಾಗಾಕಿ, ಅತ್ಸುಶಿ ಟೆರೋ, ಸೀಜಿ ಟಕಾಗಿ, ಟೆತ್ಸು ಸೈಗುಸಾ ,ಕೆಂಟಾರೋ ಇಟೋ, ಕೆಂಜಿ ಯೂಮಿಕಿ , ರಯೋ ಕೊಬಾಯಾಶಿ , ಡಾನ್ ಬೆಬ್ಬರ್, ಮಾರ್ಕ್ ಫ್ರಿಕರ್, ಮರದ ಮೇಲೆ ಬೆಳೆಯುವ ಬೂಸ್ಟಿನ ಮಾದರಿ ಅನುಸರಿಸಿ ಅತ್ಯಂತ ಲಾಭದಾಯಕವಾದ ರೈಲು ಮಾರ್ಗದ ಯೋಜನೆ ಹಾಕಬಹುದೆಂದು ತೋರಿಸಿಕೊಟ್ಟಿದ್ದಕ್ಕೆ

ಭೌತಶಾಸ್ತ್ರ ಪ್ರಶಸ್ತಿ: ಲಿಯಾನ್ ಪಾರ್ಕಿನ್, ಶೀಲಾ ವಿಲಿಯಮ್ಸ್ ಮತ್ತು ಪ್ಯಾಟ್ರಿಷಿಯಾ ಪ್ರೀಸ್ಟ್ , ಒಟಾಗೋ ವಿಶ್ವವಿದ್ಯಾನಿಲಯ ನ್ಯೂಜಿಲ್ಯಾಂಡ್. : ಹಿಮದಾರಿಗಳಲ್ಲಿ ನಡೆದಾಡುವ ಜನ ಚಳಿಗಾಲದಲ್ಲಿ ತಮ್ಮ ಶೂ ಮೇಲುಗಡೆ ಮತ್ತೊಂದು ಸಾಕ್ಸ್ ಧರಿಸಿದರೆ ಜಾರಿ ಬೀಳುವುದು ಕಮ್ಮಿಯಾಗುತ್ತದೆಂದು ತೋರಿಸಿಕೊಟ್ಟಿದ್ದಕ್ಕಾಗಿ .

ಶಾಂತಿ ಪ್ರಶಸ್ತಿ
. ರಿಚರ್ಡ್ ಸ್ಟೀಫನ್, ಜಾನ್ ಅಟ್ಕಿನ್ಸ್ ಮತ್ತು ಆಂಡ್ರ್ಯೂ ಕಿಂಗ್ ಸ್ಟನ್, ಕೀಲೆ ವಿಶ್ವವಿದ್ಯಾನಿಲಯ , ಹರಕೆ ಹೊರುವುದು ನೋವನ್ನು ಕಡಿಮೆ ಮಾಡುತ್ತದೆ ಎಂಬ ಜನಪ್ರಿಯ ನಂಬಿಕೆ ನಿಜ ಎಂದು ಪ್ರಮಾಣೀಕರಿಸಿದ್ದಕ್ಕಾಗಿ.

ಸಾರ್ವಜನಿಕ ಆರೋಗ್ಯ ಪ್ರಶಸ್ತಿ: ಮಾನ್ಯುಯೆಲ್ ಬಾರ್ಬಿಟೋ, ಚಾರ್ಲ್ಸ್ ಮಾಥ್ಯೂ, ಲಾರಿ ಟೈಲರ್ , ಮೇರಿಲ್ಯಾಂಡ್ ಅಮೆರಿಕಾ ಸಂಯುಕ್ತ ಸಂಸ್ಥಾನ . ಪ್ರಯೋಗದ ಮೂಲಕ ಬ್ಯಾಕ್ಟೀರಿಯಾಗಳು ಗಡ್ಡ ಬಿಟ್ಟ ವಿಜ್ಯಾನಿಗಳ ಗಡ್ಡದಲ್ಲಿರುತ್ತವೆ ಎಂದು ತೋರಿಸಿಕೊಟ್ಟಿದ್ದಕ್ಕಾಗಿ

ಅರ್ಥಶಾಸ್ತ್ರ ಪ್ರಶಸ್ತಿ: ಗೋಲ್ಡ್ ಮ್ಯಾನ್ ಸಾಶ್, ಎ ಐ ಜಿ, ಲೆಹ್ಮಾನ್ ಬ್ರದರ್ಸ್, ಬೀರ್ ಸ್ಟೀರ್ನ್ಸ್, ಮೆರಿಲ್ ಲಿಂಚ್, ಮತ್ತು ಮಾಗ್ನೇಟರ್ ನ ಉನ್ನತ ಅಧಿಕಾರಿಗಳು ಮತ್ತು ನಿರ್ದೇಶಕರುಗಳಿಗೆ, ಲಾಭ ಹೆಚ್ಚು ಮಾಡಿ, ರಿಸ್ಕ್ ಕಡಿಮೆ ಮಾಡುವ ರೀತಿಯಲ್ಲಿ ಹಣ ಹೂಡಿಕೆಯ ಹೊಸಬಗೆಗಳನ್ನು ಸಂಶೋಧಿಸಿದ್ದಕ್ಕೆ

ರಸಾಯನ ಶಾಸ್ತ್ರ ಪ್ರಶಸ್ತಿ : ಎರಿಕ್ ಅಡಮ್ಸ್ , ಸ್ಕಾಟ್ ಸೊಕೊಲೊಫ್ ಸ್ಕಿ , ಸ್ಟೀಫನ್ ಮಸುಟಾನಿ ಮತ್ತು ಬ್ರಿಟಿಷ್ ಪೆಟ್ರೋಲಿಯಮ್ : ನೀರು ಮತ್ತು ಪೆಟ್ರೋಲ್ ಬೆರೆಯುವುದಿಲ್ಲವೆನ್ನುವ ಹಳೆಯ ನಂಬಿಕೆ ಸುಳ್ಳೆಂದು ತೋರಿಸಿದ್ದಕ್ಕೆ .

ಮ್ಯಾನೇಜ್ ಮೆಂಟ್ ಪ್ರಶಸ್ತಿ. ಅಲೆಸಾಂಡ್ರೋ ಪ್ಲುಚಿನೋ, ಆಂಡ್ರಿಯಾ ರಾಪಿಸಾರ್ಡಾ ಮತ್ತು ಸೆಸಾರೇ ಗಾರೋಫಾಲೋ , ಇಟಲಿ , ಸಂಸ್ಥೆಯೊಂದರಲ್ಲಿ ಪ್ರಮೋಷನ್ ನೀಡಲು ಯಾವುದೇ ನೀತಿ ಅನುಸರಿಸದೆ , ಸುಮ್ಮನೆ ಪದೋನ್ನತಿ ನೀಡುವುದರಿಂದ ಸಂಸ್ಥೆಗಳ ಚಾಕಚಕ್ಯತೆ ಹೆಚ್ಚುತ್ತದೆ ಎಂದು ಗಣಿತೀಯವಾಗಿ ನಿರೂಪಿಸಿದ್ದಕ್ಕಾಗಿ

ಜೀವಶಾಸ್ತ್ರ ವಿಭಾಗ : ಲಿಬಿಯವೋ ಝಾಂಗ್, ಮಿನ್ ಟಾನ್, ಝು, ಜಿಯಾನ್ ಪಿಂಗ್ ಯೆ, ತಿಯು ಹೋಂಗ್, ಶಾನ್ಯಿ ಝೂ, ಶುಯಿ ಝಾಂಗ್, ಚೀನಾ ಮತ್ತು ಗರೆತ್ ಜೋನ್ಸ್, ಬಾವಲಿಗಳ ಒಂದು ಬಗೆಯಲ್ಲಿ ಮುಖಮೈಥುನದಿಂದ ಮಿಥುನದ ಸಮಯ ಹೆಚ್ಚಾಗುತ್ತದೆಂಬ ಸಂಶೋಧನೆಗೆ

Wednesday, October 27, 2010

rm to mp3 conversion using lame

Converting rm to mp3 in ubuntu.. from the link http://ubuntu-virginia.ubuntuforums.org/showthread.php?t=1110872

#!/bin/sh
inputfile=$1
inputfilename=`basename $1 rm`
ext='mp3'
outputfilename=$inputfilename$ext

echo 'CONVERTING TO WAV FORMAT'
mplayer $inputfile -ao pcm

echo 'CONVERTING WAV FORMAT TO MP3'
lame -h -b 256 audiodump.wav $outputfilename

rm -f audiodump.wav

echo 'DONE...!'

Sunday, October 03, 2010

ಯಶಸ್ಸಿಗಾಗಿ ಆಲ್ಬರ್ಟ್ ಐನ್ ಸ್ಟೈನ್ ರ ೧೦ ಸೂತ್ರಗಳು

ಅಲ್ಬರ್ಟ್ ಐನ್ಸ್ ಟೈನ್ ಲೋಕ ಕಂಡ ಅಪ್ರತಿಮ ವಿಜ್ನಾನಿಗಳಲ್ಲೊಬ್ಬರು. ಅವರ ಸಾಪೇಕ್ಷತಾ ಸಿದ್ದಾಂತದ ತಿರುಳನ್ನರಿತವರು ಇಂದಿಗೂ ಬಹು ಕಡಿಮೆ ಮಂದಿ. ಸೈದ್ದಾಂತಿಕ ಭೌತವಿಜ್ಞಾನಿ, ತತ್ವಜ್ಞಾನಿ ಮತ್ತು ಲೇಖಕ ಎಂದವರು ಪ್ರಸಿದ್ದರು. ತಮ್ಮ ದ್ಯ್ತುತಿ ವಿದ್ಯುತ್ ಪರಿಣಾಮದ ಸಂಶೋಧನೆಗಾಗಿ ೧೯೨೧ ರಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾದವರು .

೩೦೦ಕ್ಕೂ ಮಿಕ್ಕ ವೈಜ್ಞಾನಿಕ ಲೇಖನಗಳನ್ನು ೧೫೦ ಇತರ ಲೇಖನಗಳನ್ನು ಬರೆದ ಅವರು ಜಗತ್ತು ಕಂಡ ಅತೀ ಯಶಸ್ವಿ ವಿಜ್ಞಾನಿ ಎನ್ನಬಹುದು.

ಅವರ ಬರಹಗಳಲ್ಲಿ ಕಾಣುವ ವಾಕ್ಯಗಳನ್ನು ಹಿಡಿದೇ ಬದುಕಿನ ಹತ್ತು ಮುಖ್ಯವಾದ ಪಾಠಗಳನ್ನು ನಾವಿಲ್ಲಿ ನೋಡೋಣ.

೧. ನನಗೆ ವಿಶೇಷ ಪ್ರತಿಭೆಯಿಲ್ಲ. ಆದರೆ ತೀವ್ರ ಆಸಕ್ತಿ ಇದೆ.

ಇದು ನಮ್ಮೆಲ್ಲರಿಗೂ ಅನ್ವಯಿಸುತ್ತದೆ. ವಿಶೇಷ ಪ್ರತಿಭೆ ಯಶಸ್ವಿಯಾಗಲು ಬೇಕಿಲ್ಲ. ಅದು ನಮ್ಮಲ್ಲಿ ಆಸಕ್ತಿ ಮೂಡಿದಾಗ ತಾನಾಗಿಯೇ ಬರುತ್ತದೆ.

ನಿಮ್ಮ ಆಸಕ್ತಿಯನ್ನು ಬೆಳೆಸಿಕೊಳ್ಳಿ .

೨. ನಾನೇನೂ ಚತುರನಲ್ಲ. ಆದರೆ ಸಮಸ್ಯೆಗಳನ್ನು ನಾನು ಸುಧೀರ್ಘವಾಗಿ ಚಿಂತಿಸುತ್ತೇನೆ.

ಅಲ್ಲವೇ. ಸಮಸ್ಯೆಗಳಿಂದ ದೂರ ಓಡುವುದು ಸುಲಭ. ಆದರೆ ಸ್ವಲ್ಪ ತಾಳ್ಮೆಯಿದ್ದರೆ ಈ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಬಹುದು.

ತಾಳ್ಮೆಯಿರಲಿ.

೩. ಕಾರು ಓಡಿಸುವಾಗ ಸುಂದರಿಗೆ ಮುತ್ತು ಕೊಡುಬಲ್ಲೆ ಎಂದು ಹೇಳಿಕೊಳ್ಳುವ ಮನುಷ್ಯ ಮುತ್ತಿಡಲು ಸಾಕಷ್ಟು ಗಮನ ನೀಡಿರಲಾರ ಎನಿಸುತ್ತದೆ.

ನೀವು ಮಾಡುವ ಕೆಲಸದಲ್ಲಿ ಗಮನ ನೀಡುವುದು ಅತೀ ಮುಖ್ಯ. ಮಾಡಬೇಕಾದ ಕೆಲಸದೆಡೆ ನಿಮ್ಮ ಸಂಪೂರ್ಣ ಶಕ್ತಿಯೊಂದಿಗೆ ಗಮನ ಕೇಂದ್ರೀಕರಿಸಿ.

ಗಮನಿಸಿ.

೪. ಕಲ್ಪನೆಯೇ ಎಲ್ಲಕ್ಕಿಂತ ಮಿಗಿಲು. ಮುಂದಿನ ಜೀವನದ ಆಕರ್ಷಣೆಗಳ ಮುನ್ನೋಟವದು. ಜ್ಞಾನಕ್ಕಿಂತ ಕಲ್ಪನೆ ಮುಖ್ಯವಾದುದು.

ಹೌದು. ಎಲ್ಲ ಅನ್ವೇಷಣೆಗಳ ಮುಂಗಾಣ್ಕೆ ಕಲ್ಪನೆಯಿಂದಲೇ ತಾನೇ. ನೀವು ಅರಿತಿರುವುದೆಷ್ಟು ಎನ್ನುವುದು ಬೇರೆ. ಆದರೆ ನಿಮ್ಮ ಕಲ್ಪನಾಶಕ್ತಿಯನ್ನು ವಿಕಸಿಸಿಕೊಳ್ಳಬೇಕಾದದ್ದು ಅತೀ ಅವಶ್ಯ.

ಕಲ್ಪಿಸಿಕೊಳ್ಳಿ

೫. ತಪ್ಪು ಮಾಡದ ವ್ಯಕ್ತಿ ಹೊಸತೇನನ್ನೂ ಪ್ರಯತ್ನಿಸಿದವನಲ್ಲ.

ಹೊಸತು ಮಾಡುವಾಗ ತಪ್ಪು ಸಹಜ. ತಪ್ಪನ್ನು ತಿದ್ದಿಕೊಂಡು ಮುನ್ನಡೆಯುವುದು ಯಶಸ್ವಿಗಳ ಗುಣ. ನಿಮಗೆ ಯಶಸ್ಸು ಬೇಕೆಂದರೆ, ಉದ್ದೇಶಪೂರ್ವಕವಲ್ಲದ ತಪ್ಪುಗಳು ನಿಮ್ಮಿಂದ ಹೆಚ್ಚಾಗಲಿ.

ಹೊಸ ಪ್ರಯತ್ನದಲ್ಲಾಗಬಹುದಾದ ತಪ್ಪುಗಳಿಗೆ ಹೆದರಬೇಡಿ..

೬. ಭವಿಷ್ಯದ ಬಗ್ಗೆ ಭಯ ಬೇಡ ಅದು ಹೇಗೂ ಬರುತ್ತದೆ.

ಮುಂದಿನದರ ಬಗ್ಗೆ ಯೋಚಿಸುತ್ತಾ, ಇಂದಿನ ಸುಖವನ್ನು ಕಳೆದುಕೊಳ್ಳುವುದರಲ್ಲಿ ಅರ್ಥವಿಲ್ಲ.

ಈ ಕ್ಷಣದ ಬದುಕಿನಲ್ಲಿ ಗಮನವಿಡಿ.

೭.ಯಶಸ್ವಿಯಾಗಲು ಪ್ರಯತ್ನಿಸುವುದಕ್ಕಿಂತ, ಮೌಲ್ಯಯುತವಾಗಲು ಪ್ರಯತ್ನಿಸಬೇಕು.

ಯಶಸ್ಸು ನಿಮ್ಮ ನಿಲುವುಗಳಿಂದ ಬರುತ್ತದೆ. ನಮ್ಮ ನಿಲುವುಗಳನ್ನು ನಿರ್ಧರಿಸುವುದು ನಮ್ಮ ಮೌಲ್ಯಗಳು. ನಮ್ಮ ಆಸೆ ಆಕಾಂಕ್ಷೆಗಳನ್ನು , ನಮ್ಮ ಪ್ರತಿಭೆ ಆಸಕ್ತಿಗಳನ್ನೂ ಪೋಷಿಸಿಕೊಂಡರೆ ಅವು ನಮ್ಮ ಯಶಸ್ಸಿಗೆ ಕಾರಣೀಭೂತವಾಗುತ್ತದೆ.

ಮೌಲ್ಯಗಳನ್ನು ಗಳಿಸಿಕೊಳ್ಳಿ .

೮. ಮೂರ್ಖತನದ ಪರಮಾವಧಿಯೆಂದರೆ ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುತ್ತ ಬೇರೆ ಫಲಿತಾಂಶಗಳನ್ನು ನಿರೀಕ್ಷಿಸುವುದು.

ಮಾಡಿದ ತಪ್ಪನ್ನು ತಿಳಿದು, ಅದನ್ನು ಸರಿಪಡಿಸಿಕೊಳ್ಳಿ. ಹಾಗೆ ಮಾಡುವುದೆಂದರೆ ನಿಮ್ಮ ಯೋಚನಾ ರೀತಿ ಮತ್ತು ಕಾರ್ಯವಿಧಾನವನ್ನು ಬದಲಿಸಿಕೊಳ್ಳು ವುದು. ಅದು ನಿಮ್ಮ ಜೀವನವನ್ನು ಬದಲಿಸುತ್ತದೆ.

ನಿಮ್ಮ ತಪ್ಪುಗಳಿಂದ ಪಾಠ ಕಲಿಯಿರಿ.

೯. ಅರಿವು ತಿಳಿವಲ್ಲ ತಿಳಿವಿನ ಒಂದೇ ಮೂಲವೆಂದರೆ ಅನುಭವ

ಯಾವುದೇ ಸಮಸ್ಯೆಯ ಬಗ್ಗೆ ನೀವು ಬಹಳಷ್ಟು ಮಾತಾಡಬಹುದು. ಆದರೆ ಅದರಿಂದ ಲಭಿಸುವುದು ಅರಿವಷ್ಟೇ (Information). ತಿಳಿವು (knowledge) ಲಭಿಸಲು ನೀವೇ ಅದರಲ್ಲಿ ಬೀಳಬೇಕು. ಹಿಂಜರಿಯದೆ ಯಾವುದೇ ಕೆಲಸ ಮಾಡಲು ನುಗ್ಗಿ. ಅಗಣಿತವಾದ ತಿಳಿವು ನಿಮಗದರಿಂದ ಲಭಿಸುತ್ತದೆ.

ಅನುಭವದಿಂದ ತಿಳಿವು ಬರುತ್ತದೆ.

೧೦. ಆಟದ ನಿಯಮಗಳನ್ನು ಮೊದಲು ಅರಿಯಬೇಕು. ಆ ಮೇಲೆ ಬೇರೆಯವರಿಗಿಂತ ಚೆನ್ನಾಗಿ ಆಟವಾಡಬೇಕು.

ಅಲ್ಲವೇ..? ಆಟದ ನಿಯಮಗಳನ್ನರಿಯದೇ ಆಡುತ್ತೇವೆಂದರೆ, ಗೆಲುವು ಸೋಲು ಯಾವುದೆಂದು ನಿರ್ಣಯಿಸುವುದು ಹೇಗೆ. ಅಥವಾ ನಮ್ಮ ಕಾರ್ಯ ನಮ್ಮನ್ನು ಗೆಲುವಿನೆಡೆಗೆ ಕೊಂಡೊಯ್ಯುವುದೋ ಸೋಲಿನೆಡೆಗೆ ಕೊಂಡೊಯ್ಯುವುದೋ..?

ಮೊದಲು ನಿಯಮಗಳನ್ನರಿಯಬೇಕು. ನಂತರ ಚೆನ್ನಾದ ಆಟವನ್ನಾಡಬೇಕು.

ಮೊದ್ಮಣಿ

( ನನಗೆ ಬಂದ ಮಿಂಚೆಯೊಂದರಿಂದ ಭಾವಾನುವಾದ)

Tuesday, August 31, 2010

ಕಿಟ್ಟೆಲ್ ಸಮಾಧಿ -೨

ಧರ್ಮ ಪ್ರಚಾರಕ್ಕೆಂದು ಭಾರತಕ್ಕೆ ಬಂದ ರೆವರೆಂಡ್ ಫ಼ರ್ಡಿನಾಂಡ್ ಕಿಟ್ಟೆಲ್, ಬಂದಿಳಿದಿದ್ದು ಮಂಗಳೂರಿಗೆ, ಇಲ್ಲಿನ ಭಾಷೆಯ ಸೊಬಗಿಗೆ ಮನಸೋತು, ಬಂದ ಕಾರ್ಯ ಮರೆತು, ಈ ಭಾಷೆಯನ್ನು ಕಲಿತು, ಎಪ್ಪತ್ತು ಸಾವಿರ ಪದಗಳನ್ನೊಳಗೊಂಡ ಕನ್ನಡ ಇಂಗ್ಲಿಷು ಪದಕೋಶ ತಂದ ಮಹನೀಯ. ತನ್ನ ಕೆಲಸವನ್ನೇ ಮರೆತದ್ದಕ್ಕೆ, ಪ್ರಿಂಟಿಂಗ್ ಪ್ರೆಸ್ ನಲ್ಲಿ ಕಾರ್ಯ ನಿರ್ವಹಿಸಬೇಕಾಗಿ ಬಂದರೂ, ಮರಳಿ ತಾಯ್ನಾಡಿಗೆ ಹಿದಿರುಗಿದರೂ, ಮತ್ತೆ ಬಂದು ಛಲಬಿಡದ ತ್ರಿವಿಕ್ರಮನಾಗಿ ತನ್ನ ಪದಕೋಶ ಮುಗಿಸಿಕೊಟ್ಟ ದ್ರಷ್ಟಾರ.

A Grammar of the Kannada Language: Comprising the Three Dialects of the language ಕನ್ನಡ ವ್ಯಾಕರಣ , ಕನ್ನಡದ ಮೂರು ವಿಭಿನ್ನ ಆಡುಭಾಷೆಗಳಲ್ಲಿ ಎನ್ನುವ ಪುಸ್ತಕವನ್ನೂ ಕಿಟ್ಟೆಲ್ ಬರೆದಿದ್ದಾರೆ. ಜೊತೆಗೆ ನಾಗವರ್ಮ ಕವಿಯ ಛಂದೋಬುದಿಯನ್ನೂ ಅನುವಾದಿಸಿದರೆಂದು ವಿಕಿಪೀಡಿಯಾ ಹೇಳುತ್ತದೆ.

ಈ ಮಹನೀಯರ ಸಮಾಧಿ ಜರ್ಮನಿಯ ಟ್ಯೂಬಿಂಗೆನ್ ನಗರದಲ್ಲಿದೆಯೆಂದು ವಿಕಿಪೀಡಿಯಾ ನೋಡಿ ತಿಳಿದಿದ್ದೆ. ಆದರೆ ಅಲ್ಲಿ ಎಲ್ಲಿ ಹೇಗೆ ಹುಡುಕುವುದೆಂದು ತಿಳಿದಿರಲಿಲ್ಲ. ಈ ಬಗ್ಗೆ ಸಂಪದದಲ್ಲಿ ಪ್ರಸ್ತಾಪಿಸಿದಾಗ ಹೇಳಿಕೊಳ್ಳುವ ಪ್ರತಿಕ್ರಿಯೆಯೂ ಬಂದಿರಲಿಲ್ಲ. ಆದರೆ ಸಂಪದ ಸ್ಥಾಪಕ ಹರಿಪ್ರಸಾದ್ ನನಗೆ ಉತ್ತರ ಬರೆದು, ಜರ್ಮನಿಯಲ್ಲೇ ಇರುವ ಪ್ರೊ. ಬಿ. ಎ. ವಿವೇಕ ರೈ ಅವರನ್ನು ಸಂಪರ್ಕಿಸಿದರೆ ವಿವರ ತಿಳಿಯಬಹುದೆಂದು ತಿಳಿಸಿ, ಅವರ ವಿಳಾಸ ನೀಡಿದ್ದರು. ಜೊತೆಗೆ ಹೊಳೆನರಸೀಪುರ ಮಂಜುನಾಥ್ ಅವರು ನನ್ನ ಬಗ್ಗೆ ಪ್ರೊಫ಼ೆಸರಿಗೆ ಮಿಂಚೆ ಕಳಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರೊಫ಼ೆಸರರನ್ನು ಸಂಪರ್ಕಿಸಿದಾಗ ಅವರು, ೧೯೯೩ರ ಸುಮಾರಿನಲ್ಲಿ ಕಿಟ್ಟೆಲ್ ಸಮಾಧಿಯನ್ನು ತಾವು ಸಂದರ್ಶಿಸಿದ್ದುದಾಗಿಯೂ, ಬಹಳ ಜನ ಕಿಟ್ಟೆಲ್ ಗಳು ಇರಬಹುದಾದ ಸಾಧ್ಯತೆ ಇರುವುದರಿಂದ ಅಲ್ಲಿನ ನಾಗರಿಕರ ನೆರವು ಪಡೆದು ಹುಡುಕುವಂತೆಯೂ ತಿಳಿಸಿದರು. ನನ್ನ ಜರ್ಮನಿ ಪ್ರವಾಸದಲ್ಲಿ ವಿವೇಕ ರೈ ಗಳನ್ನು ಖುದ್ದಾಗಿ ಭೇಟಿ ಮಾಡಲು ಸಾಧ್ಯವಾಗದೇ ಹೋದದ್ದು ನನಗೆ ವಿಷಾದದ ಸಂಗತಿಯಾಗಿಯೇ ಉಳಿದುಹೋಯಿತು.

ಇದಕ್ಕೂ ಮುಂಚೆ ನನ್ನೊಂದಿಗೆ ವಿಮಾನದಲ್ಲಿ ಪಯಣಿಸಿದ ಸಹಪಯಣಿಗ ಶ್ರೀ ವಿಜಯಕುಮಾರ್ ರವರು ಟ್ಯೂಬಿಂಗೆನ್ ವಿಶ್ವವಿದ್ಯಾನಿಲಯದಲ್ಲೇ ಉಳಿದುಕೊಳ್ಳುವರಿದ್ದರು. ಆದರೆ ಅವರು ಇರುವವರೆಗೂ ನಾನಿದ್ದ ಸ್ಟುಟ್‍ಗಾರ್ಟ್ - ಎಷ್ಟರ್ಡಿಂಗೆನ್ ನಿಂದ ೪೦ ಕಿ.ಮೀ. ದೂರದ ಟ್ಯೂಬಿಂಗೆನ್ ಗೆ ಹೋಗಲೂ ನನಗೆ ಸಾಧ್ಯವಾಗಲಿಲ್ಲ. ಕೊನೆಗೆ ಹಿಂತಿರುಗುವ ದಿನ ಹತ್ತಿರ ಬಂದಂತೆ, ನನ್ನ ಸಹೋದ್ಯೋಗಿ ಜರ್ಮನಿಗರಲ್ಲಿ ಕಿಟ್ಟೆಲ್ ಬಗ್ಗೆ ವಿಚಾರಿಸಿದರೆ, ಅವರ ಬಗ್ಗೆ ತಿಳಿದವರು ಯಾರೂ ಇರಲಿಲ್ಲ. ಕಿಟ್ಟೆಲರ ಪ್ರತಿಮೆ ಬೆಂಗಳೂರಿನಲ್ಲಿರುವುದನ್ನು ತಿಳಿದು ಅವರಿಗೂ ಆಶ್ಚರ್ಯವಾಗುತ್ತಿತ್ತಷ್ಟೇ. ಸಿಮೋನ್ ನನಗಾಗಿ ಅಂತರ್ಜಾಲದಲ್ಲಿ ಹುಡುಕಿ ಟ್ಯೂಬಿಂಗೆನ್ ನಲ್ಲಿ ಮೂರು ರುದ್ರಭೂಮಿಗಳು ಇರುವುದನ್ನು ಕಂಡುಕೊಂಡ. ನಮ್ಮ ಹಿರಿಯ ಸಹೋದ್ಯೋಗಿ ಎಲಿಸಬೆತ್, ತನ್ನ ಮಗಳು ಟ್ಯೂಬಿಂಗೆನ್ ನಲ್ಲೇ ಓದುತ್ತಿರುವುದರಿಂದ ಈ ಬಗ್ಗೆ ನನಗೆ ಸಹಾಯ ಮಾಡುವುದಾಗಿ ಹೇಳಿದರು. ಆದರೆ ಹೆಚ್ಚಿನ ವಿಚಾರವೇನೂ ತಿಳಿಯಲಿಲ್ಲ. ಕೊನೆಗೆ ನಮ್ಮ ಇನ್ನೊಬ್ಬಳು ಸಹೋದ್ಯೋಗಿ ಸಿಬಿಲೆ, ನನ್ನ ಪಾಡು ಕಂಡು ಅಂತರ್ಜಾಲದಲ್ಲಿ ಹುಡುಕಿ ಕಿಟ್ಟೆಲ್ ಸಮಾಧಿ ಇರಬಹುದಾದ ರುದ್ರಭೂಮಿಯ ಹೆಸರನ್ನು ತಿಳಿಸಿ, ಆ ಸಮಾಧಿಯ ರೆಫರೆನ್ಸ್ ಸಂಖ್ಯೆಯನ್ನೂ ಹುಡುಕಿ ಕೊಟ್ಟಳು. ಇದೆಲ್ಲಾ ನನ್ನ ಜರ್ಮನ್ ಸಹೋದ್ಯೋಗಿಗಳೇ ಮಾಡಿದುದೇಕೆಂದರೆ, ಈ ವಿವರಗಳಿರುವ ಅಂತರ್ಜಾಲ ತಾಣಗಳೆಲ್ಲಾ ಜರ್ಮನ್ ಭಾಷೆಯಲ್ಲೇ ಇದ್ದುದು!!

ಕಡೆಗೆ ನನ್ನ ಭಾರತೀಯ ಸಹೋದ್ಯೋಗಿಗಳೊಂದಿಗೆ ಟ್ಯೂಬಿಂಗೆನ್ ಗೂ ಪಯಣಿಸಿದೆ. ಅವರಲ್ಲಿ ಒಬ್ಬರು ಉತ್ತರ ಭಾರತೀಯರು, ಕನ್ನಡದ ಬಗ್ಗೆ ಏನೂ ಗೊತ್ತಿರುವವರಲ್ಲ. ಟ್ಯೂಬಿಂಗೆನ್ ನೋಡಲೆಂದು ಹೊರಟವರು. ಇನ್ನೊಬ್ಬರು ಕನ್ನಡಿಗರೇ ಆದರೂ ಮಾಡರ್ನ್ ಕನ್ನಡಿಗರು.! ಕಿಟ್ಟೆಲ್ ಸಮಾಧಿ ನೋಡುವ ಆಸಕ್ತಿ ಇರುವವರಲ್ಲ. ಟ್ಯೂಬಿಂಗೆನ್ ನಲ್ಲಿ ಅವರಿಬ್ಬರನ್ನು ಅವರ ಪಾಡಿಗೆ ಬಿಟ್ಟು, ರುದ್ರಭೂಮಿಯ ವಿಳಾಸ ಹಿಡಿದು ಹುಡುಕುತ್ತಾ ಹೊರಟೆ. ವಿಶ್ವವಿದ್ಯಾನಿಲಯದ ಬದಿಯಲ್ಲೇ ಇದ್ದ ವಿಶಾಲ ರುದ್ರಭೂಮಿ ಅದು ಸ್ಟಾಟ್-ಫ್ರೀಢ್‍ಹಾಫ್. ( ಗಣ್ಯರ-ರುದ್ರಭೂಮಿ). ಅಲ್ಲಿನ ಪಿ ಬ್ಲಾಕ್ ಒಂದನೇ ವಿಭಾಗದಲ್ಲಿ ೧೭ ನೇ ಸಮಾಧಿ ಕಿಟ್ಟೆಲರದು ಎಂದು ಸಿಬಿಲೆ ಪ್ರಿಂಟ್ ಮಾಡಿ ಕೊಟ್ಟಿದ್ದಳಲ್ಲಾ.. ಅದನ್ನು ಹುಡುಕಲು ಒಳ ಹೊಕ್ಕರೆ...

ವಿಂಗಡಣೆಗೆ ಯಾವುದೇ ಸಂಖ್ಯೆಗಳಿರಲಿಲ್ಲ. ಪಿ ಬ್ಲಾಕ್ ಹುಡುಕುವುದು ಸುಲಭವಾದರೂ ಒಂದನೇ ವಿಭಾಗದ ಹದಿನೇಳನೇ ಸಮಾಧಿ ಹುಡುಕುವುದು ಸುಲಭವಾಗಿರಲಿಲ್ಲ. ನಿಶ್ಯಬ್ದ ಪಾಲಿಸಬೇಕಾದ ರುದ್ರಭೂಮಿಯಲ್ಲಿ ನಾನು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಅಲೆಯುತ್ತಿದ್ದೆ. ಸಹಾಯ ಕೇಳೋಣವೆಂದರೂ ಅಲ್ಲಿ ಯಾರೂ ಕಣ್ಣಿಗೆ ಬೀಳುವವರಿರಲಿಲ್ಲ. ಸುಮಾರು ಇಪ್ಪತ್ತು ನಿಮಿಷಗಳ ಹುಡುಕಾಟದಲ್ಲಿ ನೂರಾರು ಸಮಾಧಿಗಳ ಹೆಸರು ನೋಡಿದ್ದೆ. ಕಿಟ್ಟೆಲರ ಹೆಸರು ಎಲ್ಲಿಯೂ ಕಣ್ಣಿಗೆ ಬೀಳಲಿಲ್ಲ. ನಿರಾಸೆಯೊಂದಿಗೆ ಅಲ್ಲಿ ನಿಂತಾಗ, ಗಿಡಕ್ಕೆ ನೀರು ಹಾಕಲು ಬಂದ ಹಣ್ಣು ಹಣ್ಣು ಮುದುಕಿಯೊಬ್ಬರು ಕಣ್ಣಿಗೆ ಬಿದ್ದರು. ಅವರ ಬಳಿ ಈ ಸಮಾಧಿ ಕಂಡು ಹಿಡಿಯಲು ಸಹಾಯ ಯಾಚಿಸಿದೆ. ಅವರಿಗೆ ಇಂಗ್ಲಿಶ್ ಬರದು, ನನಗೆ ಜರ್ಮನ್ ಬರದು. ನಾನು ಕನ್ನಡದಲ್ಲೇ ಕೇಳಿದ್ದರೂ ಏನೂ ತೊಂದರೆ ಇರಲಿಲ್ಲ. ಆ ಮಾತೆ, ಒಂದು ನಿಮಿಶ ಚಿಂತಿಸಿ, ಕೈ-ಸನ್ನೆ ಯ ಜಾಗತಿಕ ಭಾಷೆಯಲ್ಲಿ ತನ್ನ ಮಗ ನನಗೆ ಸಹಾಯ ಮಾಡಬಹುದೆಂದೂ, ನಾನು ಆಕೆಯನ್ನು ಹಿಂಬಾಲಿಸಬೇಕೆಂದೂ ತಿಳಿಸಿದರು. ಅಂದೇನೋ ಜರ್ಮನಿಯಲ್ಲಿ ಬೆಂಕಿಯಂತ ಬಿಸಿಲು. ಮೂವತ್ತೈದು ಡಿಗ್ರಿ ಸೆಂಟಿಗ್ರೇಡುಗಳಷ್ಟು ಉಷ್ಣತೆ. ನಾನಾಗಲೇ ಐದಾರು-ಕಿಮೀಗಳಷ್ಟು ದೂರ ನಡೆದು ದಣಿದಿದ್ದೆ. ಆ ಅಜ್ಜಿಯನ್ನು ಹಿಂಬಾಲಿಸಿದೆ. ಆದರೂ ನಡಿಗೆಯ ವೇಗದಲ್ಲಿ ಅವರನ್ನು ಸರಿಗಟ್ಟಲು ನನಗಾಗಲಿಲ್ಲ. ನಾಲ್ಕು ನಿಮಿಷಗಳ ನಡಿಗೆಯಲ್ಲಿ ಆ ರುದ್ರಭೂಮಿಯಿಂದ ಹೊರಬಂದು ಅದರ ಪಕ್ಕದಲ್ಲಿರುವ ಮನೆಯೊಂದಕ್ಕೆ ಹೊಕ್ಕ ಅಜ್ಜಿ ತನ್ನ ಮಗನಿಗೇನೋ ಕೂಗಿ ಹೇಳಿದರು. ನನಗೆ ಕುಡಿಯಲು ಒಂದಷ್ಟು ನೀರು ಕೊಟ್ಟರು. ಜ್ಯೂಸ್ ಬೇಕಾ ಎಂದು ವಿಚಾರಿಸಿದರು. ಬೇಡವೆಂದೆ. ನನ್ನ ಮನಸ್ಸೆಲ್ಲಾ ಇಷ್ಟು ದೂರ ಬಂದರೂ ಇನ್ನೂ ಕಾಣದ ಕಿಟ್ಟೆಲ್ ಸಮಾಧಿಯ ಬಗ್ಗೆಯೇ ಚಿಂತಿಸುತ್ತಿತ್ತು. ಅಷ್ಟರಲ್ಲಿ ಅವರ ಮಗ ಆ ರುದ್ರಭೂಮಿಯ ಕೀಪರ್ ಇರಬೇಕು ಎನ್ನಿಸುತ್ತದೆ. ನಾನು ಹೇಳಿದ ಹೆಸರಿನಿಂದ ಅವನಿಗೇನೂ ಹೊಳೆದಂತೆನ್ನಿಸಲಿಲ್ಲ. ಆದರೆ ಸಮಾಧಿಯ ಸಂಖ್ಯೆ P I 17 - ೬೩ ಎನ್ನುವುದನ್ನು ಹೇಳಿದಾಗ ಅವನ ಮುಖದಲ್ಲಿ ಹೊಳಪು ಕಾಣಿಸಿತು. ಒಳ ಹೋಗಿ ಬಂದವನ ಕೈಯಲ್ಲಿ ರುದ್ರಭೂಮಿಯ ಮ್ಯಾಪ್ ಇತ್ತು. ಅದರಲ್ಲಿ ಹುಡುಕಿದಾಗ ನಾನು ಹೇಳಿದ ಸಂಖ್ಯೆ ಮತ್ತು ಹೆಸರು ಹೊಂದಿಕೆಯಾದದ್ದನ್ನು ಕಂಡು ನನಗೇ ಸಂತಸವಾಯಿತು. ಮತ್ತೆ ಎರಡು ನಿಮಿಷಗಳ ನಡಿಗೆಯ ನಂತರ ನಾನು ಕಿಟ್ಟೆಲ್ ಸಮಾಧಿಯ ಮುಂದಿದ್ದೆ. ಅವನಿಗೆ ಗುರುತು ಪರಿಚಯವಿರದ ಬೇರೆ ಧರ್ಮ ಮತ್ತು ದೇಶದ ವ್ಯಕ್ತಿ ಈ ಸಮಾದಿಯನ್ನು ಹುಡುಕಿ ಬಂದಿದ್ದು ಅಚ್ಚರಿಯಾಗಿದ್ದು ಅವನ ನೋಟದಲ್ಲಿ ಕಾಣುತ್ತಿತ್ತು. ಅದರಲ್ಲೂ ಫ಼ರ್ಡಿನಾಂಡ್ ಕಿಟ್ಟೆಲ್ ಮರಣಿಸಿದ್ದು ೧೯೦೩ ರಲ್ಲಿ ಎಂದಾಗ ಅವನಿಗಿನ್ನೂ ಅಚ್ಚರಿ. ನೂರು ವರುಷಗಳ ಹಿಂದೆ ಮರಣಿಸಿದ ವ್ಯಕ್ತಿಯ ಸಮಾಧಿ ಹುಡುಕುತ್ತಾ ೩೫ರ ಈ ವ್ಯಕ್ತಿ ಅವನಿಗೆ ಒಗಟಾಗಿಯೇ ಕಂಡಿರಬೇಕು.

ಕಿಟ್ಟೆಲ್ ಕರ್ನಾಟಕದಲ್ಲಿ ಮಾಡಿದ ಸಾಧನೆಯ ಬಗ್ಗೆ ಅವನಿಗೆ ತಿಳಿಸಿದೆ. ಅವರ ಪ್ರತಿಮೆ ಬೆಂಗಳೂರಿನಲ್ಲಿರುವುದನ್ನೂ ತಿಳಿಸಿದೆ. ಇಲ್ಲೆಲ್ಲಾ ಬೆಂಗಳೂರು ಜಗತ್ಪ್ರಸಿದ್ದ.! ಅಚ್ಚರಿಯೊಂದಿಗೆ ನನ್ನನ್ನು ಬೀಳ್ಕೊಟ್ಟು ಅವನು ಹೊರಟು ಹೋದ.

ಸುಮಾರು ಇಪ್ಪತ್ತು ನಿಮಿಷಗಳಷ್ಟು ಕಾಲ ನಾನಲ್ಲಿದ್ದೆ. ಕಿಟ್ಟೆಲ್ ಸಮಾಧಿಯೊಂದಿಗೆ ಕನ್ನಡದ ಇಂದಿನ ಸ್ಥಿತಿಗಳನ್ನು ನನಗೆ ತಿಳಿದಂತೆ ಹೇಳಿಕೊಂಡೆ. ಕುವೆಂಪು, ಪೂಚಂತೆ,ಬೇಂದ್ರೆ,ಗೋಕಾಕ್,ಕಾರ್ನಾಡ,ಅನಂತಮೂರ್ತಿ, ರಾಜಕುಮಾರ್, ವಿಷ್ಣು, ಶಂಕರನಾಗ್, ಹೀಗೆ ನನ್ನ ಮನಸ್ಸಿಗೆ ಹೊಳೆದವರ ಬಗ್ಗೆಯೆಲ್ಲಾ ಹೇಳಿದೆ. ಅವರ ಸಾಧನೆಯ ಶಕ್ತಿಗೆ ನನ್ನ ನಮನಗಳನ್ನರ್ಪಿಸಿ ಮೌನಾಚರಣೆ ಮಾಡಿದೆ. ನಂತರ ಹಿಂದಿರುಗಿ ಬಂದು ನೆಕರ್ ನದಿಯ ದಂಡೆಯಲ್ಲಿ ಕಾಯುತ್ತಿದ್ದ ನನ್ನ ಸಹೋದ್ಯೋಗಿಗಳನ್ನು ಸೇರಿಕೊಂಡೆ.

ಕಿಟ್ಟೆಲ್ ಸಮಾಧಿಯ ಚಿತ್ರಕ್ಕೆ ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಿ.