Pages

Tuesday, August 31, 2010

ಕಿಟ್ಟೆಲ್ ಸಮಾಧಿ -೨

ಧರ್ಮ ಪ್ರಚಾರಕ್ಕೆಂದು ಭಾರತಕ್ಕೆ ಬಂದ ರೆವರೆಂಡ್ ಫ಼ರ್ಡಿನಾಂಡ್ ಕಿಟ್ಟೆಲ್, ಬಂದಿಳಿದಿದ್ದು ಮಂಗಳೂರಿಗೆ, ಇಲ್ಲಿನ ಭಾಷೆಯ ಸೊಬಗಿಗೆ ಮನಸೋತು, ಬಂದ ಕಾರ್ಯ ಮರೆತು, ಈ ಭಾಷೆಯನ್ನು ಕಲಿತು, ಎಪ್ಪತ್ತು ಸಾವಿರ ಪದಗಳನ್ನೊಳಗೊಂಡ ಕನ್ನಡ ಇಂಗ್ಲಿಷು ಪದಕೋಶ ತಂದ ಮಹನೀಯ. ತನ್ನ ಕೆಲಸವನ್ನೇ ಮರೆತದ್ದಕ್ಕೆ, ಪ್ರಿಂಟಿಂಗ್ ಪ್ರೆಸ್ ನಲ್ಲಿ ಕಾರ್ಯ ನಿರ್ವಹಿಸಬೇಕಾಗಿ ಬಂದರೂ, ಮರಳಿ ತಾಯ್ನಾಡಿಗೆ ಹಿದಿರುಗಿದರೂ, ಮತ್ತೆ ಬಂದು ಛಲಬಿಡದ ತ್ರಿವಿಕ್ರಮನಾಗಿ ತನ್ನ ಪದಕೋಶ ಮುಗಿಸಿಕೊಟ್ಟ ದ್ರಷ್ಟಾರ.

A Grammar of the Kannada Language: Comprising the Three Dialects of the language ಕನ್ನಡ ವ್ಯಾಕರಣ , ಕನ್ನಡದ ಮೂರು ವಿಭಿನ್ನ ಆಡುಭಾಷೆಗಳಲ್ಲಿ ಎನ್ನುವ ಪುಸ್ತಕವನ್ನೂ ಕಿಟ್ಟೆಲ್ ಬರೆದಿದ್ದಾರೆ. ಜೊತೆಗೆ ನಾಗವರ್ಮ ಕವಿಯ ಛಂದೋಬುದಿಯನ್ನೂ ಅನುವಾದಿಸಿದರೆಂದು ವಿಕಿಪೀಡಿಯಾ ಹೇಳುತ್ತದೆ.

ಈ ಮಹನೀಯರ ಸಮಾಧಿ ಜರ್ಮನಿಯ ಟ್ಯೂಬಿಂಗೆನ್ ನಗರದಲ್ಲಿದೆಯೆಂದು ವಿಕಿಪೀಡಿಯಾ ನೋಡಿ ತಿಳಿದಿದ್ದೆ. ಆದರೆ ಅಲ್ಲಿ ಎಲ್ಲಿ ಹೇಗೆ ಹುಡುಕುವುದೆಂದು ತಿಳಿದಿರಲಿಲ್ಲ. ಈ ಬಗ್ಗೆ ಸಂಪದದಲ್ಲಿ ಪ್ರಸ್ತಾಪಿಸಿದಾಗ ಹೇಳಿಕೊಳ್ಳುವ ಪ್ರತಿಕ್ರಿಯೆಯೂ ಬಂದಿರಲಿಲ್ಲ. ಆದರೆ ಸಂಪದ ಸ್ಥಾಪಕ ಹರಿಪ್ರಸಾದ್ ನನಗೆ ಉತ್ತರ ಬರೆದು, ಜರ್ಮನಿಯಲ್ಲೇ ಇರುವ ಪ್ರೊ. ಬಿ. ಎ. ವಿವೇಕ ರೈ ಅವರನ್ನು ಸಂಪರ್ಕಿಸಿದರೆ ವಿವರ ತಿಳಿಯಬಹುದೆಂದು ತಿಳಿಸಿ, ಅವರ ವಿಳಾಸ ನೀಡಿದ್ದರು. ಜೊತೆಗೆ ಹೊಳೆನರಸೀಪುರ ಮಂಜುನಾಥ್ ಅವರು ನನ್ನ ಬಗ್ಗೆ ಪ್ರೊಫ಼ೆಸರಿಗೆ ಮಿಂಚೆ ಕಳಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರೊಫ಼ೆಸರರನ್ನು ಸಂಪರ್ಕಿಸಿದಾಗ ಅವರು, ೧೯೯೩ರ ಸುಮಾರಿನಲ್ಲಿ ಕಿಟ್ಟೆಲ್ ಸಮಾಧಿಯನ್ನು ತಾವು ಸಂದರ್ಶಿಸಿದ್ದುದಾಗಿಯೂ, ಬಹಳ ಜನ ಕಿಟ್ಟೆಲ್ ಗಳು ಇರಬಹುದಾದ ಸಾಧ್ಯತೆ ಇರುವುದರಿಂದ ಅಲ್ಲಿನ ನಾಗರಿಕರ ನೆರವು ಪಡೆದು ಹುಡುಕುವಂತೆಯೂ ತಿಳಿಸಿದರು. ನನ್ನ ಜರ್ಮನಿ ಪ್ರವಾಸದಲ್ಲಿ ವಿವೇಕ ರೈ ಗಳನ್ನು ಖುದ್ದಾಗಿ ಭೇಟಿ ಮಾಡಲು ಸಾಧ್ಯವಾಗದೇ ಹೋದದ್ದು ನನಗೆ ವಿಷಾದದ ಸಂಗತಿಯಾಗಿಯೇ ಉಳಿದುಹೋಯಿತು.

ಇದಕ್ಕೂ ಮುಂಚೆ ನನ್ನೊಂದಿಗೆ ವಿಮಾನದಲ್ಲಿ ಪಯಣಿಸಿದ ಸಹಪಯಣಿಗ ಶ್ರೀ ವಿಜಯಕುಮಾರ್ ರವರು ಟ್ಯೂಬಿಂಗೆನ್ ವಿಶ್ವವಿದ್ಯಾನಿಲಯದಲ್ಲೇ ಉಳಿದುಕೊಳ್ಳುವರಿದ್ದರು. ಆದರೆ ಅವರು ಇರುವವರೆಗೂ ನಾನಿದ್ದ ಸ್ಟುಟ್‍ಗಾರ್ಟ್ - ಎಷ್ಟರ್ಡಿಂಗೆನ್ ನಿಂದ ೪೦ ಕಿ.ಮೀ. ದೂರದ ಟ್ಯೂಬಿಂಗೆನ್ ಗೆ ಹೋಗಲೂ ನನಗೆ ಸಾಧ್ಯವಾಗಲಿಲ್ಲ. ಕೊನೆಗೆ ಹಿಂತಿರುಗುವ ದಿನ ಹತ್ತಿರ ಬಂದಂತೆ, ನನ್ನ ಸಹೋದ್ಯೋಗಿ ಜರ್ಮನಿಗರಲ್ಲಿ ಕಿಟ್ಟೆಲ್ ಬಗ್ಗೆ ವಿಚಾರಿಸಿದರೆ, ಅವರ ಬಗ್ಗೆ ತಿಳಿದವರು ಯಾರೂ ಇರಲಿಲ್ಲ. ಕಿಟ್ಟೆಲರ ಪ್ರತಿಮೆ ಬೆಂಗಳೂರಿನಲ್ಲಿರುವುದನ್ನು ತಿಳಿದು ಅವರಿಗೂ ಆಶ್ಚರ್ಯವಾಗುತ್ತಿತ್ತಷ್ಟೇ. ಸಿಮೋನ್ ನನಗಾಗಿ ಅಂತರ್ಜಾಲದಲ್ಲಿ ಹುಡುಕಿ ಟ್ಯೂಬಿಂಗೆನ್ ನಲ್ಲಿ ಮೂರು ರುದ್ರಭೂಮಿಗಳು ಇರುವುದನ್ನು ಕಂಡುಕೊಂಡ. ನಮ್ಮ ಹಿರಿಯ ಸಹೋದ್ಯೋಗಿ ಎಲಿಸಬೆತ್, ತನ್ನ ಮಗಳು ಟ್ಯೂಬಿಂಗೆನ್ ನಲ್ಲೇ ಓದುತ್ತಿರುವುದರಿಂದ ಈ ಬಗ್ಗೆ ನನಗೆ ಸಹಾಯ ಮಾಡುವುದಾಗಿ ಹೇಳಿದರು. ಆದರೆ ಹೆಚ್ಚಿನ ವಿಚಾರವೇನೂ ತಿಳಿಯಲಿಲ್ಲ. ಕೊನೆಗೆ ನಮ್ಮ ಇನ್ನೊಬ್ಬಳು ಸಹೋದ್ಯೋಗಿ ಸಿಬಿಲೆ, ನನ್ನ ಪಾಡು ಕಂಡು ಅಂತರ್ಜಾಲದಲ್ಲಿ ಹುಡುಕಿ ಕಿಟ್ಟೆಲ್ ಸಮಾಧಿ ಇರಬಹುದಾದ ರುದ್ರಭೂಮಿಯ ಹೆಸರನ್ನು ತಿಳಿಸಿ, ಆ ಸಮಾಧಿಯ ರೆಫರೆನ್ಸ್ ಸಂಖ್ಯೆಯನ್ನೂ ಹುಡುಕಿ ಕೊಟ್ಟಳು. ಇದೆಲ್ಲಾ ನನ್ನ ಜರ್ಮನ್ ಸಹೋದ್ಯೋಗಿಗಳೇ ಮಾಡಿದುದೇಕೆಂದರೆ, ಈ ವಿವರಗಳಿರುವ ಅಂತರ್ಜಾಲ ತಾಣಗಳೆಲ್ಲಾ ಜರ್ಮನ್ ಭಾಷೆಯಲ್ಲೇ ಇದ್ದುದು!!

ಕಡೆಗೆ ನನ್ನ ಭಾರತೀಯ ಸಹೋದ್ಯೋಗಿಗಳೊಂದಿಗೆ ಟ್ಯೂಬಿಂಗೆನ್ ಗೂ ಪಯಣಿಸಿದೆ. ಅವರಲ್ಲಿ ಒಬ್ಬರು ಉತ್ತರ ಭಾರತೀಯರು, ಕನ್ನಡದ ಬಗ್ಗೆ ಏನೂ ಗೊತ್ತಿರುವವರಲ್ಲ. ಟ್ಯೂಬಿಂಗೆನ್ ನೋಡಲೆಂದು ಹೊರಟವರು. ಇನ್ನೊಬ್ಬರು ಕನ್ನಡಿಗರೇ ಆದರೂ ಮಾಡರ್ನ್ ಕನ್ನಡಿಗರು.! ಕಿಟ್ಟೆಲ್ ಸಮಾಧಿ ನೋಡುವ ಆಸಕ್ತಿ ಇರುವವರಲ್ಲ. ಟ್ಯೂಬಿಂಗೆನ್ ನಲ್ಲಿ ಅವರಿಬ್ಬರನ್ನು ಅವರ ಪಾಡಿಗೆ ಬಿಟ್ಟು, ರುದ್ರಭೂಮಿಯ ವಿಳಾಸ ಹಿಡಿದು ಹುಡುಕುತ್ತಾ ಹೊರಟೆ. ವಿಶ್ವವಿದ್ಯಾನಿಲಯದ ಬದಿಯಲ್ಲೇ ಇದ್ದ ವಿಶಾಲ ರುದ್ರಭೂಮಿ ಅದು ಸ್ಟಾಟ್-ಫ್ರೀಢ್‍ಹಾಫ್. ( ಗಣ್ಯರ-ರುದ್ರಭೂಮಿ). ಅಲ್ಲಿನ ಪಿ ಬ್ಲಾಕ್ ಒಂದನೇ ವಿಭಾಗದಲ್ಲಿ ೧೭ ನೇ ಸಮಾಧಿ ಕಿಟ್ಟೆಲರದು ಎಂದು ಸಿಬಿಲೆ ಪ್ರಿಂಟ್ ಮಾಡಿ ಕೊಟ್ಟಿದ್ದಳಲ್ಲಾ.. ಅದನ್ನು ಹುಡುಕಲು ಒಳ ಹೊಕ್ಕರೆ...

ವಿಂಗಡಣೆಗೆ ಯಾವುದೇ ಸಂಖ್ಯೆಗಳಿರಲಿಲ್ಲ. ಪಿ ಬ್ಲಾಕ್ ಹುಡುಕುವುದು ಸುಲಭವಾದರೂ ಒಂದನೇ ವಿಭಾಗದ ಹದಿನೇಳನೇ ಸಮಾಧಿ ಹುಡುಕುವುದು ಸುಲಭವಾಗಿರಲಿಲ್ಲ. ನಿಶ್ಯಬ್ದ ಪಾಲಿಸಬೇಕಾದ ರುದ್ರಭೂಮಿಯಲ್ಲಿ ನಾನು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಅಲೆಯುತ್ತಿದ್ದೆ. ಸಹಾಯ ಕೇಳೋಣವೆಂದರೂ ಅಲ್ಲಿ ಯಾರೂ ಕಣ್ಣಿಗೆ ಬೀಳುವವರಿರಲಿಲ್ಲ. ಸುಮಾರು ಇಪ್ಪತ್ತು ನಿಮಿಷಗಳ ಹುಡುಕಾಟದಲ್ಲಿ ನೂರಾರು ಸಮಾಧಿಗಳ ಹೆಸರು ನೋಡಿದ್ದೆ. ಕಿಟ್ಟೆಲರ ಹೆಸರು ಎಲ್ಲಿಯೂ ಕಣ್ಣಿಗೆ ಬೀಳಲಿಲ್ಲ. ನಿರಾಸೆಯೊಂದಿಗೆ ಅಲ್ಲಿ ನಿಂತಾಗ, ಗಿಡಕ್ಕೆ ನೀರು ಹಾಕಲು ಬಂದ ಹಣ್ಣು ಹಣ್ಣು ಮುದುಕಿಯೊಬ್ಬರು ಕಣ್ಣಿಗೆ ಬಿದ್ದರು. ಅವರ ಬಳಿ ಈ ಸಮಾಧಿ ಕಂಡು ಹಿಡಿಯಲು ಸಹಾಯ ಯಾಚಿಸಿದೆ. ಅವರಿಗೆ ಇಂಗ್ಲಿಶ್ ಬರದು, ನನಗೆ ಜರ್ಮನ್ ಬರದು. ನಾನು ಕನ್ನಡದಲ್ಲೇ ಕೇಳಿದ್ದರೂ ಏನೂ ತೊಂದರೆ ಇರಲಿಲ್ಲ. ಆ ಮಾತೆ, ಒಂದು ನಿಮಿಶ ಚಿಂತಿಸಿ, ಕೈ-ಸನ್ನೆ ಯ ಜಾಗತಿಕ ಭಾಷೆಯಲ್ಲಿ ತನ್ನ ಮಗ ನನಗೆ ಸಹಾಯ ಮಾಡಬಹುದೆಂದೂ, ನಾನು ಆಕೆಯನ್ನು ಹಿಂಬಾಲಿಸಬೇಕೆಂದೂ ತಿಳಿಸಿದರು. ಅಂದೇನೋ ಜರ್ಮನಿಯಲ್ಲಿ ಬೆಂಕಿಯಂತ ಬಿಸಿಲು. ಮೂವತ್ತೈದು ಡಿಗ್ರಿ ಸೆಂಟಿಗ್ರೇಡುಗಳಷ್ಟು ಉಷ್ಣತೆ. ನಾನಾಗಲೇ ಐದಾರು-ಕಿಮೀಗಳಷ್ಟು ದೂರ ನಡೆದು ದಣಿದಿದ್ದೆ. ಆ ಅಜ್ಜಿಯನ್ನು ಹಿಂಬಾಲಿಸಿದೆ. ಆದರೂ ನಡಿಗೆಯ ವೇಗದಲ್ಲಿ ಅವರನ್ನು ಸರಿಗಟ್ಟಲು ನನಗಾಗಲಿಲ್ಲ. ನಾಲ್ಕು ನಿಮಿಷಗಳ ನಡಿಗೆಯಲ್ಲಿ ಆ ರುದ್ರಭೂಮಿಯಿಂದ ಹೊರಬಂದು ಅದರ ಪಕ್ಕದಲ್ಲಿರುವ ಮನೆಯೊಂದಕ್ಕೆ ಹೊಕ್ಕ ಅಜ್ಜಿ ತನ್ನ ಮಗನಿಗೇನೋ ಕೂಗಿ ಹೇಳಿದರು. ನನಗೆ ಕುಡಿಯಲು ಒಂದಷ್ಟು ನೀರು ಕೊಟ್ಟರು. ಜ್ಯೂಸ್ ಬೇಕಾ ಎಂದು ವಿಚಾರಿಸಿದರು. ಬೇಡವೆಂದೆ. ನನ್ನ ಮನಸ್ಸೆಲ್ಲಾ ಇಷ್ಟು ದೂರ ಬಂದರೂ ಇನ್ನೂ ಕಾಣದ ಕಿಟ್ಟೆಲ್ ಸಮಾಧಿಯ ಬಗ್ಗೆಯೇ ಚಿಂತಿಸುತ್ತಿತ್ತು. ಅಷ್ಟರಲ್ಲಿ ಅವರ ಮಗ ಆ ರುದ್ರಭೂಮಿಯ ಕೀಪರ್ ಇರಬೇಕು ಎನ್ನಿಸುತ್ತದೆ. ನಾನು ಹೇಳಿದ ಹೆಸರಿನಿಂದ ಅವನಿಗೇನೂ ಹೊಳೆದಂತೆನ್ನಿಸಲಿಲ್ಲ. ಆದರೆ ಸಮಾಧಿಯ ಸಂಖ್ಯೆ P I 17 - ೬೩ ಎನ್ನುವುದನ್ನು ಹೇಳಿದಾಗ ಅವನ ಮುಖದಲ್ಲಿ ಹೊಳಪು ಕಾಣಿಸಿತು. ಒಳ ಹೋಗಿ ಬಂದವನ ಕೈಯಲ್ಲಿ ರುದ್ರಭೂಮಿಯ ಮ್ಯಾಪ್ ಇತ್ತು. ಅದರಲ್ಲಿ ಹುಡುಕಿದಾಗ ನಾನು ಹೇಳಿದ ಸಂಖ್ಯೆ ಮತ್ತು ಹೆಸರು ಹೊಂದಿಕೆಯಾದದ್ದನ್ನು ಕಂಡು ನನಗೇ ಸಂತಸವಾಯಿತು. ಮತ್ತೆ ಎರಡು ನಿಮಿಷಗಳ ನಡಿಗೆಯ ನಂತರ ನಾನು ಕಿಟ್ಟೆಲ್ ಸಮಾಧಿಯ ಮುಂದಿದ್ದೆ. ಅವನಿಗೆ ಗುರುತು ಪರಿಚಯವಿರದ ಬೇರೆ ಧರ್ಮ ಮತ್ತು ದೇಶದ ವ್ಯಕ್ತಿ ಈ ಸಮಾದಿಯನ್ನು ಹುಡುಕಿ ಬಂದಿದ್ದು ಅಚ್ಚರಿಯಾಗಿದ್ದು ಅವನ ನೋಟದಲ್ಲಿ ಕಾಣುತ್ತಿತ್ತು. ಅದರಲ್ಲೂ ಫ಼ರ್ಡಿನಾಂಡ್ ಕಿಟ್ಟೆಲ್ ಮರಣಿಸಿದ್ದು ೧೯೦೩ ರಲ್ಲಿ ಎಂದಾಗ ಅವನಿಗಿನ್ನೂ ಅಚ್ಚರಿ. ನೂರು ವರುಷಗಳ ಹಿಂದೆ ಮರಣಿಸಿದ ವ್ಯಕ್ತಿಯ ಸಮಾಧಿ ಹುಡುಕುತ್ತಾ ೩೫ರ ಈ ವ್ಯಕ್ತಿ ಅವನಿಗೆ ಒಗಟಾಗಿಯೇ ಕಂಡಿರಬೇಕು.

ಕಿಟ್ಟೆಲ್ ಕರ್ನಾಟಕದಲ್ಲಿ ಮಾಡಿದ ಸಾಧನೆಯ ಬಗ್ಗೆ ಅವನಿಗೆ ತಿಳಿಸಿದೆ. ಅವರ ಪ್ರತಿಮೆ ಬೆಂಗಳೂರಿನಲ್ಲಿರುವುದನ್ನೂ ತಿಳಿಸಿದೆ. ಇಲ್ಲೆಲ್ಲಾ ಬೆಂಗಳೂರು ಜಗತ್ಪ್ರಸಿದ್ದ.! ಅಚ್ಚರಿಯೊಂದಿಗೆ ನನ್ನನ್ನು ಬೀಳ್ಕೊಟ್ಟು ಅವನು ಹೊರಟು ಹೋದ.

ಸುಮಾರು ಇಪ್ಪತ್ತು ನಿಮಿಷಗಳಷ್ಟು ಕಾಲ ನಾನಲ್ಲಿದ್ದೆ. ಕಿಟ್ಟೆಲ್ ಸಮಾಧಿಯೊಂದಿಗೆ ಕನ್ನಡದ ಇಂದಿನ ಸ್ಥಿತಿಗಳನ್ನು ನನಗೆ ತಿಳಿದಂತೆ ಹೇಳಿಕೊಂಡೆ. ಕುವೆಂಪು, ಪೂಚಂತೆ,ಬೇಂದ್ರೆ,ಗೋಕಾಕ್,ಕಾರ್ನಾಡ,ಅನಂತಮೂರ್ತಿ, ರಾಜಕುಮಾರ್, ವಿಷ್ಣು, ಶಂಕರನಾಗ್, ಹೀಗೆ ನನ್ನ ಮನಸ್ಸಿಗೆ ಹೊಳೆದವರ ಬಗ್ಗೆಯೆಲ್ಲಾ ಹೇಳಿದೆ. ಅವರ ಸಾಧನೆಯ ಶಕ್ತಿಗೆ ನನ್ನ ನಮನಗಳನ್ನರ್ಪಿಸಿ ಮೌನಾಚರಣೆ ಮಾಡಿದೆ. ನಂತರ ಹಿಂದಿರುಗಿ ಬಂದು ನೆಕರ್ ನದಿಯ ದಂಡೆಯಲ್ಲಿ ಕಾಯುತ್ತಿದ್ದ ನನ್ನ ಸಹೋದ್ಯೋಗಿಗಳನ್ನು ಸೇರಿಕೊಂಡೆ.

ಕಿಟ್ಟೆಲ್ ಸಮಾಧಿಯ ಚಿತ್ರಕ್ಕೆ ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಿ.

Tuesday, August 24, 2010

ಅಲ್ಲಿಲ್ಲಿಂದ

//೩.ಹದಿಮೂರು ಪಕ್ಷಗಳ ಹೊಂದಾಣಿಕೆಯ ಸರಕಾರಕ್ಕಿಂತ ಎರಡೇ ಪಕ್ಷದ ಬಹುಮತದ ಸರಕಾರ ನಿಭಾಯಿಸಲು ಕಡಿಮೆ ಕಷ್ಟ.
ಒಂದೇ ಪಕ್ಷದ ಸರಕಾರ ನಿಭಾಯಿಸಲು ಯಡ್ಯೂರಪ್ಪನವರ ಕಷ್ಟ ನೋಡಿಲ್ಲವೇ..!

//೫.ಇದರಿಂದ ರಾಜ್ಯ ಮಟ್ಟದ ಪಕ್ಷಗಳು ಕೇಂದ್ರ ಸರ್ಕಾರವನ್ನು ತಮ್ಮ ಬೇಡಿಕೆಗಳಿಗಾಗಿ ಬ್ಲಾಕ್ ಮೇಲ್ ಮಾಡುವುದು ತಪ್ಪುತ್ತದೆ
ಇಲ್ಲದಿದ್ದರೆ ರಾಜ್ಯಗಳ ಅದರಲ್ಲೂ ಹಿಂದಿ ಮಾತನಾಡದ ರಾಜ್ಯಗಳ ಮಾತುಗಳನ್ನು ಕೇಂದ್ರ ಸರ್ಕಾರ ಕೇಳುವುದೇ..?

//೬.ಸಣ್ಣ ಪುಟ್ಟ ಪಕ್ಷಗಳು ಚುನಾವಣೆಯಲ್ಲಿ kingmaker ಪಾತ್ರ ವಹಿಸಿ ಸರಕಾರವನ್ನು ಬುಗುರಿಯಾಡಿಸುವುದು ತಪ್ಪುತ್ತದೆ
ಹೀಗೆ ಮಾಡಬೇಕಾಗಿರುವುದು ಪ್ರಜಾಪ್ರಭುತ್ವದ ಅಂಗ ಅಲ್ಲವೇ..? ನಾಯಕನಾದವನು ದಕ್ಷನಾಗಿ ಎಲ್ಲರನ್ನೂ ಜೊತೆಯಲ್ಲಿ ಕೊಂಡೊಯ್ಯಬೇಕು.

//೭.ಕಮ್ಯೂನಿಸ್ಟರ ಹೊರಗಿನಿಂದ ಬೆಂಬಲ ಕೊಡುವ "ಅಧಿಕಾರ ಬೇಕು ಜವಾಬ್ದಾರಿ ಬೇಡ" ಧೋರಣೆಯಿಂದ ಕಾಂಗ್ರೆಸ್ ಪಾರಾಗುತ್ತದೆ.
ಅಧಿಕಾರ ಬೇಕು ಜವಾಬ್ದಾರಿ ಬೇಡ ಎನ್ನುವ ಧೋರಣೆಗಿಂತ, ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಕಮ್ಯುನಿಸಂ ಮುಂದೇನೆಂದು ಅರಿಯದೆ ಕುಳಿತಿದೆ. ಅಲ್ಲಿಯೂ ಬೇರು ಮಟ್ಟದ ಚಿಂತಕರ ಕೊರತೆ ಎದ್ದು ಕಾಣುತ್ತಿದೆ.

//೮.ಬೀಜೇಪಿ ಸರಕಾರಕ್ಕೆ ಬಂದರೆ ಭಜರಂಗ ದಳ ಮೊದಲಾದ fringe elements ಗಳ ಹಾವಳಿ ಬಹುಷಃ ಕಮ್ಮಿಯಾಗಬಹುದು
ನನ್ನ ಲೆಕ್ಕದಲ್ಲಿ ಇದು ಜಾಸ್ತಿಯಾಗಬಹುದೆನ್ನೆಸಿತ್ತದೆ....:) ಅಲ್ಲದೆ ಇವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳದ ಮಾತೃ ಪಕ್ಷ ತನ್ನ ರಾಜಕೀಯ ನಡತೆಯನ್ನು ಹೇಗೆ ರೂಢಿಸಿಕೊಳ್ಳುತ್ತದೆ.

//೯.ಸದ್ಯ ಪಾಕಿಸ್ತಾನದಲ್ಲಿ ತಾಲಿಬಾನ್ ಹಾವಳಿಯಿಂದ ಭಾರತಕ್ಕೂ ತೀವ್ರ ಗಂಡಾಂತರದ ಸಂಭವ ಇರುವಾಗಿ ನಮ್ಮ ಎರಡೂ ಪ್ರಧಾನ ಪಕ್ಷಗಳು ಒಟ್ಟುಗೂಡಿ ಭಾರತದ ಭದ್ರತೆಗೆ ಗಮನ ಕೊಡಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ
ರಕ್ಷಣೆಯ ವಿಷಯದಲ್ಲಿ ಭಾರತದ ರಾಜಕೀಯ ಪಕ್ಷಗಳು ಸುಮಾರಾಗಿ ಒಗ್ಗಟ್ಟಾಗಿಯೇ ಇವೆ.

ಪ್ರಜಾಪ್ರಭುತ್ವದಲ್ಲಿ ಸರ್ಕಾರ ನಡೆಸುವ ಪಕ್ಷದಷ್ಟೇ ಪ್ರಮುಖ ಅಂಗ ವಿರೋಧ ಪಕ್ಷ. ಏಕೆಂದರೆ ಸರ್ಕಾರದ ಮುಖ್ಯ ಕೆಲಸ ಯೋಜನೆಗಳನ್ನು ರೂಪಿಸುವುದಷ್ಟೇ. ಇದು ಶಾಸಕಾಂಗದ ಕೆಲಸ. ಕಾರ್ಯಾಂಗ ಅದನ್ನು ನಿರ್ವಹಿಸಬೇಕು. ಈಗೀಗ ಕಾರ್ಯಾಂಗ ಕೇವಲ ಶಾಸಕಾಂಗ ಹೇಳುದಂತೆ ನಡೆಯುವ ಕೀಲುಗೊಂಬೆಯಾಗಿರುವುದು, ಮತ್ತು ಎರಡೂ ಕಡೆಯೂ ಭ್ರಷ್ಟರಿರುವುದು ಸಮಸ್ಯೆಗಳ ಮೂಲ. ನ್ಯಾಯಾಂಗ ಈ ಎರಡರ ಬೆಂಬಲವಿಲ್ಲದೆ ಕೆಲಸ ಮಾಡಲಾಗದು. ಅದಕ್ಕೇ ಅದು ಇವನ್ನೇ ಅನುಸರಿಸುತ್ತಿದೆ.

ಈ ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳಲಿ ಬಿಡಲಿ, ಶಾಸಕಾಂಗದ ಕಾರ್ಯ ನಿರ್ವಹಣೆಗೆ ಚ್ಯುತಿ ಬರುವುದಿಲ್ಲ. ಎಲ್ಲಿಯವರೆಗೆ ಚಿಂತನೆಯ ಬಲವಿಲ್ಲದ, ನಿಯತ್ತಿಲ್ಲದ ಮತ್ತು ಹಣಬಲದ ನಾಯಕತ್ವವಿರುತ್ತದೋ, ಅಲ್ಲಿಯವರೆಗೆ ಈ ಹಣೆ ಬರಹ ತಪ್ಪಿದ್ದಲ್ಲ.


ಆದರೆ ಇನ್ನೂರು ಜನ ಒಪ್ಪಿದ್ದಾರಲ್ಲ.. ಅದೇ ನ್ಯಾಯ. ಪ್ರಜಾಪ್ರಭುತ್ವದಲ್ಲಿ ಬೇರೆ ಏನು ಮಾಡಲು ಸಾದ್ಯ. ನಿಜವಾಗಿಯೂ ಮಾಡಬಹುದಾದ ಸಂಗತಿಯೆಂದರೆ, ಉಳಿದವರು ಚುನಾವಣೆಯಿಂದ ಹೊರಗುಳಿದು, ಸೂಕ್ತ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಕಾರಿಯಾಗುವುದು. ಆದರೆ, ಎಲ್ಲರೂ ಮುಂದುವರೆಯಲು ಹೊರಟಾಗ ಯಾರಿಗೆ ಬಹುಮತವಿರುತ್ತದೆಯೋ ಅವರ ನಾಯಕತ್ವ ಒಳಿತು. ಅಲ್ಲದೇ ಇದೇನೂ ಶಾಶ್ವತವಲ್ಲವಲ್ಲಾ..? ಐದು ವರುಷಗಳಲ್ಲಿ ಮತ್ತೆ ಚುನಾವಣೆ ಬರುತ್ತದೆ.!

Friday, August 20, 2010

ಕೆಲವರು ವಿಶೇಷ ವ್ಯಕ್ತಿಗಳಾಗಿರುತ್ತಾರೆ.

ಇದು ನನಗೆ ತಿಳಿದದ್ದು ಹೀಗೆ.


ಜರ್ಮನಿಯ ಸ್ಟುಟ್ಗಾರ್ಟ್ ನಗರದಲ್ಲಿ ಮಧ್ಯಭಾಗಲ್ಲೊಂದು ಕೋಟೆಯಿದೆ. ಅದರ ಮುಂದೊಂದು ಪ್ರತಿಮೆ. ಕ್ರಿಸ್ಟೋಫ್ ವುರ್ಟೆನ್‍ಬರ್ಗ್ ಎನ್ನುವ ಇಲ್ಲಿನ ರಾಜನದು (ಡ್ಯೂಕ್ ಎನ್ನುವುದಕ್ಕೆ ಸಾಮಂತ ಎನ್ನುವುದು ಸಮಾನಾರ್ಥಕವೇನೋ.. ಆದರೆ ನಾನು ರಾಜ ಎಂದೇ ಬಳಸುತ್ತೇನೆ.) ಸುಮಾರು ಐದು ಶತಮಾನಗಳ ಹಿಂದೆ ಕಟ್ಟಿದ ಕೋಟೆ ಮತ್ತು ಅರಮನೆ ಅದು.



ಅವನ ಚರಿತ್ರೆಯನ್ನು ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಅವನು ಕಟ್ಟಿದ ಆ ಕೋಟೆಯನ್ನು ಇಲ್ಲಿ ಜನ ಹಳೇಕೋಟೆ ಎನ್ನುತ್ತಾರೆಂದು ಅದರಲ್ಲಿ ಕಡೆಯವರೆಗೂ ಅಲ್ಲಿಯ ವಂಶದ ಕುಡಿ ಕ್ಲಾಸ್ ಶೆಂಕ್ ಗ್ರಾಫ್ ಫ಼ೋನ್ ಸ್ಟಾಫ಼ೆನ್‍ಬೆರ್ಗ್ Claus Schenk Graf von Stauffenberg ಇದ್ದನೆಂದೂ, ೧೯೪೪ರ ಜುಲೈ ೨೧ರಂದು ಆತ ಹುತಾತ್ಮನಾದನೆಂದೂ, ನಂತರ ಆ ಕೋಟೆಯಲ್ಲೊಂದು ಕೋಣೆಯನ್ನು ಆತನ ನೆನಪಿನಲ್ಲಿ ಮ್ಯೂಸಿಯಂ ಮಾಡಿದ್ದಾರೆಂದೂ ತಿಳಿದು ಅಚ್ಚರಿಯಾಯಿತು. ಯಾರಪ್ಪಾ ಈ ಸ್ಟಾಫೆನ್ ಬೆರ್ಗ್ ಅವನು ಮಾಡಿದ್ದಾದರೂ ಏನು ಎಂದು ತಿಳಿಯೋಣವೆಂದು ಮತ್ತಷ್ಟು ಜಾಲಾಡಿದರೆ, ಈ ಮನುಷ್ಯನ ಬಗ್ಗೆ ಹೆಮ್ಮೆ ಮೂಡಿತು.



ಜರ್ಮನಿ ಎಂದರೆ ನಮಗೆ ಮೊದಲು ನೆನಪಾಗುವುದು ಹಿಟ್ಲರ್. ಮನುಕುಲದ ಚರಿತ್ರೆಯಲ್ಲಿ ಹೆಸರಾದ ಒಬ್ಬ ರಾಕ್ಷಸನೆಂದು. ತನ್ನ ಮಹತ್ವಾಕಾಂಕ್ಷೆಯ ಸಾಧನೆಗಾಗಿ ಜಗತ್ತನ್ನೇ ಯುಧ್ಧಕ್ಕೆಳೆದು, ಕಡೆಗೆ ಆತ್ಮಹತ್ಯೆ ಮಾಡಿಕೊಂಡವನೆಂದು ಇನ್ನೂ ಅವನನ್ನು ನಾವು ನೆನೆಸಿಕೊಳ್ಳುತ್ತೇವೆ. ಇಂತಹ ಹಿಟ್ಲರನ ಸೇನೆಯಲ್ಲಿ ಒಬ್ಬ ಸೇನಾನಿಯಾಗಿದ್ದ ಈ ಸ್ಟಾಫೆನ್ ಬೆರ್ಗ್. ಮೊದಮೊದಲು ಪೋಲ್ಯಾಂಡ್ ಮತ್ತು ಫ಼್ರಾನ್ಸ್ ಗಳ ಯುದ್ಧಗಳಲ್ಲಿ ಭಾಗವಹಿಸಿದ್ದ. ರಷಿಯಾದ ಮೇಲಿನ ದಾಳಿ ಆಪರೇಷನ್ ಬಾರ್ಬರೋಸ್ ನಲ್ಲಿಯೂ ಟುನೇಶಿಯಾ ಮೇಲಿನ ಯುದ್ಧದಲ್ಲಿಯೂ ಭಾಗವಹಿಸಿದ್ದ. ಅಷ್ಟೇ ಅಲ್ಲ. ಬ್ರಿಟಿಷರ ಬಾಂಬು ದಾಳಿಗೆ ಬಲಿಯಾಗಿ ತನ್ನ ಎಡಗಣ್ಣು, ಬಲಗೈ ಕಳೆದುಕೊಂಡಿದ್ದ. ಅವನ ಎಡಗೈನಲ್ಲಿ ಉಳಿದದ್ದು ಮೂರೇ ಬೆರಳು. ಆಸ್ಪತ್ರೆಯಿಂದ ನಂತರ ತನ್ನ ಸ್ನೇಹಿತರ ಜೊತೆ ಮಾತನಾಡುತ್ತ, ಮುಂಚೆ ಅಷ್ಟೊಂದು ಬೆರಳುಗಳಿದ್ದಾಗಲೂ ಅವುಗಳಿಂದ ಏನು ಮಾಡಬೇಕೆಂದು ತನಗೆ ಗೊತ್ತಿರಲಿಲ್ಲ. ಈಗ ಬೆರಳು ಮತ್ತು ಕೈ ಕಳೆದುಕೊಂಡು ತೊಂದರೆಯೇನೂ ಇಲ್ಲ ಎಂದ ಧೀರ ಯೋಧ ಈತ. ಆದರೆ ಟ್ಯುನೇಶಿಯಾ ಯುದ್ಧದ ವೇಳೆಗೆ ಹಿಟ್ಲರನ ನೀತಿಗಳ ಬಗ್ಗೆ ಭ್ರಮನಿರಸನ ಹೊಂದಿದ್ದ. ಅವು ಮಾನವೀಯವಾಗಿಲ್ಲ ಮತ್ತು ಜರ್ಮನಿಗೆ ಅನುಕೂಲಕರವಾಗಿಲ್ಲ ಎನ್ನುವುದು ಆತನ ನಿಲುವಾಗಿತ್ತು.

ಜರ್ಮನರು ಏನು ಮಾಡಿದರೂ ಅಚ್ಚುಕಟ್ಟಾಗಿ ಮಾಡುತ್ತಾರೆ ಎನ್ನುವುದಕ್ಕೆ ಒಂದು ನಿದರ್ಶನ "ಉಂಟರ್ಮೆಹ್ಮೆನ್ ವಾಲ್ಕೌರೆ" ಅಥವಾ ಆಪರೇಷನ್ ವಾಲ್ಕೀರಿ (Valkyrie). ಯುದ್ಧದಲ್ಲಿ ಘಾಸಿಗೊಳಗಾದ ಜರ್ಮನಿಯ ಜನತೆ ಅರಾಜಕತೆಗೆ ಒಡಗೊಡದಿರಲೆಂದು, ತಕ್ಷಣವೇ ರಾಜಕೀಯ ಸ್ಧಿರತೆ ಸ್ಥಾಪಿಸುವ ಉದ್ದೇಶ ಈ ಯೋಜನೆಯದು. (ಇಂತಹುದೇ ಒಂದು ಯೋಜನೆ ನಮ್ಮ ಇಂಟರ್ನೆಟ್ ಶೋಧಕ್ಕೆ ಅಡಿಗಲ್ಲಾಗಿದ್ದು ನಿಮಗೂ ತಿಳಿದಿದೆ.) ಹಿಟ್ಲರನ ನೀತಿಗಳ ಬಗ್ಗೆ ಭ್ರಮನಿರಸನಗೊಂಡಿದ್ದ ಮಂದಿಯೊಡಗೂಡಿದ ಸ್ಟಾಫ಼ೆನ್ ಬರ್ಗ್ ಈ ಯೋಜನೆಯನ್ನು ಆತನ ವಿರುದ್ದವೇ ಬಳಸುವ ತಂತ್ರ ರೂಪಿಸಿದ. ಹಿಟ್ಲರು ದೇಶದ ಸೈನಿಕರ ಕೈಯಲ್ಲಿ ಆತನಿಗೆ (ಜರ್ಮನಿಯ ಅಧ್ಯಕ್ಷನಿಗೆ) ನಿಯತ್ತಾಗಿರುವಂತೆ ವಚನ ಪಡೆಯುತ್ತಿದ್ದ. ಮೊದಲಿಗೆ ಇಂತಹ ಸೈನಿಕರನ್ನು ವಚನಭ್ರಷ್ಟರಾಗದಂತೆ ತಡೆಯಲು, ಹಿಟ್ಲರನನ್ನು ಹತ್ಯೆಗೈದು, ಆ ನಂತರ ಉಂಟಾಗಬಹುದಾದ ರಾಜಕೀಯ ಅನಿಶ್ಚಿತತೆಯನ್ನು ವಾಲ್ಕೀರಿಯಿಂದ ಕೊನೆಗಾಣಿಸಿ, ದೇಶವನ್ನು ನರಳುವಿಕೆಯತ್ತ ಕೊಂಡೊಯ್ಯುತ್ತಿರುವ ಯುದ್ದದಿಂದ ಮುಕ್ತಿ ನೀಡುವುದು ಸ್ಟಾಫ಼ೆನ್ ಬೆರ್ಗ್ ಮತ್ತವನ ಸಂಗಡಿಗರ ಉದ್ದೇಶವಾಗಿತ್ತು. ಇದರಂತೆ ಜುಲೈ ಇಪ್ಪತ್ತು ೧೯೪೪ ರಂದು ಯೋಜನೆ ಕಾರ್ಯಗತವಾಗಲು ಪ್ರಯತ್ನ ನಡೆಯಿತು. ಅದೇ ಜುಲೈ ೨೦ರ ಷಡ್ಯಂತ್ರ.

ವೋಲ್ಫ಼್‍ಶಾಂಜ್ ನಲ್ಲಿ ಹಿಟ್ಲರನೊಂದಿಗೆ ಮಿಲಿಟರಿ ಚರ್ಚೆ ಜುಲೈ ೨೦ರಂದು ನಿಗದಿಯಾಗಿತ್ತು. ಅಲ್ಲಿಗೆ ಹೋದ ಸ್ಟಾಫ಼ೆನ್‍ಬರ್ಗ್ ತನ್ನ ಬ್ರೀಫ಼್‍ಕೇಸಿನಲ್ಲಿ ಎರಡು ಬಾಂಬುಗಳನ್ನೂ ಕೊಂಡೊಯ್ದಿದ್ದ. ಅವನ ರಿವಾಲ್ವರ್ ಅನ್ನು ಪಡೆದುಕೊಂಡು ಬ್ರೀಫ಼್ ಕೇಸ್ ಪರೀಕ್ಷಿಸದೆ ಆತನನ್ನು ಒಳಗೆ ಬಿಡಲಾಯಿತು. ಅಲ್ಲಿ ಬಾಂಬುಗಳನ್ನು ಜೋಡಿಸುತ್ತಿರುವಾಗ, ಹಿಟ್ಲರ್ ನಿಗದಿತ ಅವಧಿಗಿಂತ ಮುಂಚೆಯೇ ಬರುತ್ತಿರುವನೆಂದೂ ಸ್ಟಾಫ಼ೆನ್ ತನ್ನ ಕೆಲಸವನ್ನು ಬೇಗನೇ ಮುಗಿಸಬೇಕೆಂದೂ ಸುದ್ದಿ ಬಂದಿತು. ಕೇವಲ ಎಡಗೈ ಮತ್ತದರ ಮೂರು ಬೆರಳುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ಟಾಫ಼ೆನ್ ಗೆ ಎರಡೂ ಬಾಂಬುಗಳನ್ನು ಜೋಡಿಸಲಾಗಲಿಲ್ಲ. ಒಂದನ್ನು ಜೋಡಿಸಿ, ಬ್ರೀಫ಼್ ಕೇಸಿನಲ್ಲಿಟ್ಟು, ಹಿಟ್ಲರಿಗೆಂದು ನಿಗದಿತವಾದ ಕುರ್ಚಿಯ ಆದಷ್ಟೂ ಸಮೀಪಕ್ಕೆ ತಳ್ಳಿ, ತಾನು ಸಭೆಯಲ್ಲಿ ಭಾಗವಹಿಸದೆ ಹೊರನಡೆದುಬಿಟ್ಟ, ಬಾಂಬೂ ನಿಗದಿಯಂತೆ ಸ್ಪೋಟವಾಯ್ತು. ಆದರೆ ಹಿಟ್ಲರನ ಸುದೈವ. ಪಾಪಿ ಚಿರಾಯು ಎನ್ನುತ್ತಾರಲ್ಲ ಹಾಗೆ.. ದಪ್ಪ ಮೇಜಿನ ಹಲಗೆಯಿಂದಾಗಿ, ಹಿಟ್ಲರ್ ಸಣ್ಣಪುಟ್ಟಗಾಯಗಳೊಡನೆ ಪಾರಾಗಿದ್ದ. ಅಲ್ಲದೇ ಅಂದೇ ಸಂಜೆ ರಾಷ್ಟ್ರವನ್ನುದ್ದೇಶಿಸಿ ರೇಡಿಯೋ ಭಾಷಣವನ್ನೂ ಮಾಡಿದ.

ಇತ್ತ ಸಭೆಯಿಂದ ಹೊರಬಂದ ಸ್ಟಾಫ಼ೆನ್ನನಿಗೆ ಬಾಂಬು ಸ್ಪೋಟವಾದದ್ದು ಕಾಣಿಸಿತು. ಆ ಸ್ಫೋಟದಲ್ಲಿ ಖಂಡಿತವಾಗಿಯೂ ಹಿಟ್ಲರ್ ಸತ್ತಿರುತ್ತಾನೆಂಬ ನಂಬಿಕೆಯೊಂದಿಗೆ, ಮುಂದಿನ ರಾಜಕೀಯ ಚಟುವಟಿಕೆಗಳಿಗಾಗಿ ಬರ್ಲಿನ್ ಗೆ ಹೊರಟು ಬಿಟ್ಟ, ಆದರೆ ಬದುಕುಳಿದ ಹಿಟ್ಲರ್ ಈ ಸೇಡಿಗಾಗೆ ನಾಲ್ಕೂವರೆ ಸಾವಿರ ಜನರ ಸಾವಿಗೆ ಆದೇಶಿಸಿದ. ಕೆಲವರು ಗುಂಡಿಗೆ ಬಲಿಯಾದರೆ, ಮತ್ತೆ ಕೆಲವರು ನಿರಾಹಾರದಿಂದ, ಮತ್ತೆ ಕೆಲವರು ನಿಧಾನವಾಗಿ ಕತ್ತು ಹಿಸುಕುವ ಯಂತ್ರ ಗೆರೇಟ್ ವೀಲ್ ಗೆ ಬಲಿಯಾದರು. ಬರ್ಲಿನ್ ನಲ್ಲಿ ಬಂಧನಕ್ಕೊಳಗಾದ ಮೂವತ್ತಾರು ವರ್ಷದ ಸ್ಟಾಫ಼ೆನ್ ವಿಚಾರಣೆಯಲ್ಲಿ ಇದೆಲ್ಲವೂ ತನ್ನೊಬ್ಬನದೇ ತಂತ್ರ. ಮರಣದಂಡನೆಯಾಗುವುದಾದರೆ ತನಗೊಬ್ಬನಿಗೇ ಆಗಬೇಕು ಎಂದು ವಾದಿಸಿದ. ಆದರೆ ಅವನ ಜೊತೆ ಇನ್ನೂ ನಾಲ್ವರಿಗೆ ಗುಂಡಿನಿಂದ ಸಾಯುವ ಆದೇಶ ದೊರೆಯಿತು . ಈ ಆದೇಶ ನೀಡಿದ್ದು, ಆತನ ಜೊತೆ ಈ ಸಂಚಿನಲ್ಲಿ ಭಾಗಿಯಾಗಿದ್ದ ಫ಼್ರಾಮ್ ಎಂಬ ಕರ್ನಲ್. ಅದರಲ್ಲೂ ತನ್ನ ಹೆಸರು ಹೊರಗೆ ಬರಬಾರದೆಂಬ ಭಯದಿಂದ ಈ ಸಂಚಿನಲ್ಲಿ ಸಿಕ್ಕಿಕೊಂಡವರನ್ನು ಕೂಡಲೇ ಕೊಲ್ಲಲು ಆದೇಶಿಸಿದ. ಆದರೆ ಸ್ಟಾಫೆನ್ ಬರ್ಗ್ ನನ್ನು ತನ್ನ ಸಮವಸ್ತ್ರ ಮತ್ತು ಪದಕಗಳೊಂದಿಗೆ ಸಮಾಧಿ ಮಾಡಲು ಆದೇಶಿಸಿದ್ದ. ಮರುದಿನ ಹಿಟ್ಲರನ ವಿಶೇಷ ಪಡೆ ಗೆಸ್ಟಾಪೋ ಅವನ ಶವವನ್ನು ಮೇಲೆತ್ತಿ ಸಮವಸ್ತ್ರ ಮತ್ತು ಪದಕಗಳನ್ನು ಬಿಚ್ಚಿ ಅವನನ್ನು ಮತ್ತೆ ಹೂಳಿತು. ಫ಼್ರಾಮ್ ಸಂಚಿನಲ್ಲಿ ತನ್ನ ಪಾತ್ರವನ್ನು ಯಶಸ್ವಿಯಾಗಿ ಮುಚ್ಚಿಹಾಕಿದ್ದೇನೆನ್ನುವ ಭ್ರಮೆಯಲ್ಲಿದ್ದರೂ, ಎಸೆಸ್ಸ್ ಪಡೆ ಆತನನ್ನುಬಂಧಿಸಿ, ಸಂಚನ್ನು ಮುಂಗಾಣಲು ವಿಫಲನಾದ ಅರೋಪದ ಮೇಲೆ ಅವನನ್ನು ಮಾರ್ಚಿ ೧೯೪೫ರಲ್ಲಿ ಗಲ್ಲಿಗೇರಿಸಿತು ..!

ಸಾಯುವ ಮುನ್ನ ಶಾಂತಿಯಿಂದ ಸ್ಟಾಫೆನ್ "Es lebe unser heiliges Deutschland!" ಎಂದು ಹೇಳಿದ ಎನ್ನುತ್ತಾರೆ ಅಂದರೆ "ಪವಿತ್ರ ಜರ್ಮನಿ ಚಿರಕಾಲ ಬಾಳಲಿ" ಎಂದರ್ಥ. ಇನ್ನೂ ಕೆಲವರು ಆತನ ಕಡೆಯ ಮಾತುಗಳು "Es lebe das geheime Deutschland!" ಎನ್ನುತ್ತರೆ. ಅಂದರೆ "ಗುಪ್ತ ಜರ್ಮನಿ ಚಿರಕಾಲ ಬಾಳಲಿ" ಎಂದರ್ಥ.

ಯುದ್ದದ ತರುವಾಯು ಈ ವಿಷಯವನ್ನಾಧರಿಸಿ ಹಲವಾರು ಚಲನಚಿತ್ರಗಳೂ, ಟಿವಿ ಸೀರಿಯಲ್ಲುಗಳೂ ಬಂದಿವೆ. Valkyrie ವಲ್ಕಿರಿ ಅವುಗಳಲ್ಲಿ ತೀರಾ ಇತ್ತೀಚಿಗೆ ೨೦೦೮ರಲ್ಲಿ ಬಿಡುಗಡೆಯಾದ ಚಿತ್ರ ಇದರಲ್ಲಿ ಟಾಮ್ ಕ್ರೂಸ್ ಸ್ಟಾಫ಼ೆನ್ ಬರ್ಗ್ ನ ಪಾತ್ರ ಮಾಡಿದ್ದಾನೆ. ಜುಲೈ ಇಪ್ಪತ್ತರ ಷಡ್ಯಂತ್ರ ಮನುಷ್ಯನ ಅದಮ್ಯ ವಿಶ್ವಾಸ ಮತ್ತು ಹೋರಾಟಕ್ಕೆ ಮತ್ತೊಂದು ನಿದರ್ಶನ. ಇಲ್ಲಿ ಸ್ಟಾಫ಼ೆನ್ ಬರ್ಗ ಅಣ್ಣ, ಹೆಂಡತಿ ಮತ್ತು ಇನ್ನೂ ಅನೇಕ ಹೀರೋಗಳಿದ್ದಾರೆ. ಆದರೆ ನಾನಿಲ್ಲಿ ಹೇಳುತ್ತಿರುವುದು ಸ್ಟಾಫ಼ೆನ್ ಬರ್ಗ್ ಬಗ್ಗೆ ಮಾತ್ರ..!


ಚಿತ್ರಗಳು ನನ್ನವೇ
ಆಧಾರಗಳು ಮತ್ತು ಹೆಚ್ಚಿನ ಮಾಹಿತಿಗೆ :

http://en.wikipedia.org/wiki/Claus_Schenk_Graf_von_Stauffenberg
http://en.wikipedia.org/wiki/Valkyrie_(film)
http://www.historylearningsite.co.uk/july_bomb_plot.htm
http://en.wikipedia.org/wiki/Adolf_Hitler
http://en.wikipedia.org/wiki/July_20_plot
http://en.wikipedia.org/wiki/Reichswehreid
http://www.stauffenbergthemovie.com/history_july20.html

Wednesday, August 18, 2010

ಪ್ರಪಂಚದ ಮೊದಲನೇ ಟಿವಿ ಗೋಪುರ !

ಎರಡನೇ ಮಹಾಯುದ್ದದ ನಂತರ ಜರ್ಮನಿ ನಾಲ್ಕು ಭಾಗಗಳನ್ನಾಗಿ ಸೀಳಿ ಇಂಗ್ಲೆಂಡ್ ಅಮೆರಿಕಾ ಫ಼್ರಾನ್ಸ್ ಮತ್ತು ರಷಿಯಾಗಳು ಹಂಚಿಕೊಂಡವಷ್ಟೇ.. ಮತ್ತೇ ಇಂಗ್ಲೆಂಡ್, ಫ಼್ರಾನ್ಸ್ ಮತ್ತು ಅಮೆರಿಕಾಗಳು ತಮ್ಮ ವಶದಲ್ಲಿದ್ದ ಭಾಗಗಳನ್ನು ಸೇರಿಸಿ, ಗಣತಂತ್ರ ವ್ಯವಸ್ಥೆಯೊಂದಿಗೆ ಪಶ್ಚಿಮ ಜರ್ಮನಿಯನ್ನು ಸ್ವತಂತ್ರಗೊಳಿಸಿದವು. ಆದರೆ ಪೂರ್ವ ಜರ್ಮನಿ ರಶಿಯಾದ ಕಮ್ಯುನಿಸ್ಟ್ ಹಿಡಿತದಲ್ಲೇ ಇತ್ತು.

ಗಣತಂತ್ರದ ಜೊತೆಗೇ ಕಾಲಿಟ್ಟ ಬಂಡವಾಳಶಾಹಿ ವ್ಯವಸ್ಥೆ ಮತ್ತು ಜರ್ಮನಿಗರ ಮತ್ತೊಂದು ಮುಖವಾದ ಕ್ರಿಯಾಶೀಲತೆಯ ಕುರುಹಾಗಿ ಪಶ್ಚಿಮ ಜರ್ಮನಿಯ ಬಾದೆನ್-ವುರ್ಟನ್ ಬರ್ಗ್ ರಾಜ್ಯದ ರಾಜಧಾನಿ ಸ್ಟುಟ್ಗಾರ್ಟ್ ನಲ್ಲಿ ಪ್ರಪಂಚದ ಮೊದಲ ಟೆಲಿವಿಶನ್ ಟವರ್ ೧೯೫೬ರಲ್ಲಿ ಸ್ಥಾಪಿಸಲ್ಪಟ್ಟಿತು. ೨೩೦ ಮೀಟರ್ ಎತ್ತರದ ಈ ಕಟ್ಟಡ ತನ್ನ ರಚನೆಯ ವಿನೂತನ ತಂತ್ರಜ್ಞಾನದೊಂದಿಗೆ ಜಗತ್ತಿನ ಹಲವಾರು ಈ ರೀತಿಯ ಕಟ್ಟಡಗಳಿಗೆ ಮಾದರಿಯಾಯಿತು.



ಕಟ್ಟಡಕ್ಕೆ ಹೋಗುವ ದಾರಿ ಮರಗಳಿಂದ ಕೂಡಿ ಕಾಡಿನ ಮಧ್ಯೆ ನಡೆದು ಬಂದ ಅನುಭವ ನೀಡುತ್ತದೆ. ಕೆಳಗೆ ಮಕ್ಕಳಿಗೆ ಆಟವಾಡಲು ವಿವಿಧ ಆಟಗಳಿವೆ. ಆದರಲ್ಲಿ ನಾಣ್ಯ ಹಾಕಿ ಚಲಾಯಿಸುವ ಆಟಿಕೆ ಕ್ರೇನ್ ಕೂಡಾ ಒಂದು.



ಈ ಕಟ್ಟಡದಲ್ಲಿ ನೂರೈವತ್ತು ಮೀಟರುಗಳವರೆಗೂ ಮೇಲೆ ಹೋಗಲು ಲಿಫ್ಟ್ ವ್ಯವಸ್ಥೆಯಿದೆ. ೪೬ ಸೆಕೆಂಡುಗಳಲ್ಲಿ ಮೇಲೆ ಕರೆದೊಯ್ಯುವ ಈ ಲಿಫ್ಟ್ ೧೯೫೪ರಲ್ಲಿ ಕಟ್ಟಡದೊಂದಿಗೇ ಸ್ಥಾಪಿತವಾಯಿತು. ೨೦೦೩ರಲ್ಲಿ ಸಂಪೂರ್ಣವಾಗಿ ಆಧುನೀಕೃತವಾಯಿತು.



ಮೇಲೆ ಒಂದು ಮಹಡಿಯಲ್ಲಿ ಹೋಟೆಲು ಮತ್ತೊಂದರಲ್ಲಿ ಕಾಫೀ ಶಾಪ್ ಇದೆ. ಇಲ್ಲಿ ಕುಳಿತು ಹೊರಗಡೆಯ ವಿಹಂಗಮ ನೋಟವನ್ನು ಸವಿಯುತ್ತಾ ಕಾಫೀ ಕುಡಿಯುವುದು ಚೆನ್ನ. ಜೊತೆಯಲ್ಲಿ ಆತ್ಮೀಯರಿದ್ದರೆ ಇನ್ನೂ ಚೆನ್ನ. ಇದಕ್ಕಿಂತಲೂ ಮೇಲೆ ನಿಂತು ನೋಡಲು ಅನುವಾಗುವಂತೆ ಬಾಲ್ಕನಿ ವ್ಯವಸ್ಥೆಯಿದೆ. ಇಲ್ಲೊಂದು ಪುಟ್ಟ ಯಂತ್ರವಿದೆ. ಅದರಲ್ಲಿ ಒಂದು ಯುರೋ ನಾಣ್ಯ ಮತ್ತು ಐದು ಸೆಂಟಿನ ನಾಣ್ಯಗಳನ್ನು ಹಾಕಿ, ಹಿಡಿಕೆ ತಿರುಗಿಸಿದರೆ, ಒಂದು ಯೂರೋ ನಾಣ್ಯವನ್ನು ನುಂಗಿಕೊಂಡು, ಅರ್ಧ ಸೆಂಟಿನ ನಾಣ್ಯವನ್ನು ಒತ್ತಿ ಮೊಟ್ಟೆಯಾಕಾರದಲ್ಲಿ ಮಾಡಿ, ಅದರಲ್ಲಿ ಟಿವಿ ಗೋಪುರದ ಚಿತ್ರವನ್ನು ಟಂಕಿಸಿ ಕೊಡುತ್ತದೆ. ಇನ್ನೂ ಒಂದು ಮಹಡಿ ಮೇಲಕ್ಕೆ ಮೆಟ್ಟಿಲು ಹತ್ತಿ ಹೋದರೆ ಇಲ್ಲಿ ಕಟ್ಟಡದ ಸುತ್ತಾ ಸುಮಾರು ೫೦ ಕಿಮೀ ವರೆಗಿನ ದೃಶ್ಯಗಳನ್ನು ಕಾಣಬಹುದು. ಜೊತೆಗೆ ನಾಣ್ಯ ಹಾಕಿ ನೋಡಬಹುದಾದ ಟೆಲಿಸ್ಕೋಪ್ ಕೂಡಾ ಇದೆ. ಮತ್ತು ಕಂಚಿನಲ್ಲಿ ಆ ದಿಕ್ಕಿನ ಭೂಕೃತಿಯನ್ನು ರಚಿಸಿ ನಮಗೆ ಕಾಣಬಹುದಾದ ಕಟ್ಟಡಗಳ ವಿವರಗಳನ್ನು ಬರೆದಿದ್ದಾರೆ. .



ಬಂಡವಾಳಶಾಹಿ ಮತ್ತು ಕಮ್ಯುನಿಸ್ಟ್ ವ್ಯವಸ್ಥೆಗಳ ಬೆಳವಣಿಗೆಯ ಪರಸ್ಪರ ಅವಲೋಕನಕ್ಕೆ ಪೂರ್ವ ಮತ್ತು ಪಶ್ಚಿಮ ಜರ್ಮನಿಗಳ ಬೆಳವಣಿಗೆ ಒಂದು ಒಳ್ಳೆಯ ಉದಾಹರಣೆಯಾಗಬಲ್ಲುದು. ಅಂದಹಾಗೆ ಲಿಫ಼್ಟ್ ನಲ್ಲಿ ಮೇಲೆ ಹೋಗಲು ಐದು ಯೂರೋಗಳ ಶುಲ್ಕ. ಲಿಫ್ಟ್ ನಲ್ಲಿದ್ದಾಗ ನಾನು ಪ್ರದರ್ಶಿಸಿದ ನನ್ನ ವಿಕಿಪೀಡಿಯಾ ಅಧಾರಿತ ಟಿವಿ ಟವರ್ ನ ಬಗೆಗಿನ ಜ್ಞಾನಕ್ಕೆ ಮನಸೋತ ಲಿಫ಼್ಟ್ ಆಪರೇಟರ್ ನನಗಾಗಿ ಒಂದು ವಿಶಿಷ್ಟ ಬ್ರೋಚರ್ ಅನ್ನೇ ಉಡುಗೊರೆಯಾಗಿತ್ತ! ನನಗೆ ಅದಕ್ಕಿಂತಲೂ ಅಚ್ಚರಿಯ ಸಂಗತಿ ಎಂದರೆ ಅವನು ಶುಧ್ಧ ಇಂಗ್ಲಿಷ್ ಮಾತಾಡುತ್ತಿದ್ದುದು.

ಅಂದಹಾಗೇ ಇಲ್ಲೂ ಗೋಡೆ ಬರಹ ಕಣ್ಣಿಗೆ ಬಿದ್ದದ್ದು ಅದಕ್ಕಿಂತಲೂ ಅಚ್ಚರಿ

Monday, August 16, 2010

sieve filtering Howto

STEP 1 Write a script as follows:

## test script to work on folders
require "fileinto";
if header :contains ["Received"] ["gmail.com"] {discard;} This line is to block gmail
if header :contains ["Received"] ["FALSE"] [".domain.A","Domain.B","Domain.C","Domain.D"] {discard;} ### this is supposedly block all the mails apart from our domain.A/B/C/D
save this as a file block_gmail

STEP 2

Login to seive shell and put the script

sieveshell --auth=manager --user=manager localhost
put scriptname
quit


STEP 3
cyradm -u manager localhost
mboxconfig shared/test_seive seive block_gmail

(for all shared folder)
mboxconfig shared/* seive block_gmail

info shared.somefolder

sources:
http://wiki.kolab.org/index.php/Filtering_Emails_on_the_Server
http://www.cmu.edu/computing/doc/email/sieve/developing.html
http://www.cs.cmu.edu/~help/mail_news/corvid/sieve_intro.html
http://wiki.bath.ac.uk/display/bucstech/Sieve+scripts


Currently stuck at :(
localhost> mboxcfg shared/test_seive seive block_gmail
mboxconfig: Permission denied