ಕೃಷ್ಣದೇವರಾಯ : ಕನ್ನಡನಾಡಿನ ಚರಿತೆಯಲ್ಲಿ ಹೊನ್ನಕ್ಕರಗಳಿಂದ ಬರೆದಿಡಬೇಕಾದ ಧೀರ ನಾಯಕನ ಜೀವನ ಚರಿತೆಯನ್ನು ಆಕರವಾಗಿಸಿಕೊಂಡು ಬಂದ ರಂಜನೀಯ ಚಿತ್ರ. ಇಂತಹ ಆಗಾಧ ವಸ್ತುವನ್ನು ಮೂರುಗಂಟೆಗಳಲ್ಲಿ ತೆರೆಯ ಮೇಲೆ ಹಿಡಿದಿಟ್ಟವರು ಬಿ.ಆರ್. ಪಂತುಲು ಮತ್ತು ಕೃಷ್ಣದೇವರಾಯನನ್ನು ಕಣ್ಣ ಮುಂದೆ ತಂದಿರಿಸುವಂತೆ ಅಭಿನಯಿಸಿದವರು ರಾಜಕುಮಾರ್.
ಮಯೂರ : ಕನ್ನಡಿಗರ ಆತ್ಮಶಕ್ತಿಯನ್ನು ಬಡಿದೆಚ್ಚರಿಸಿ, ಸ್ವಾಭಿಮಾನವನ್ನು ಒಗ್ಗೂಡಿಸಿದ ದೇವುಡು ಅವರ ಕಾದಂಬರಿ ಆಧಾರಿತ ಚಿತ್ರ. ರಾಜಕುಮಾರ್ ಅವರಿಗೆ ಸರಿಸಾಟಿಯಾಗಿ ನಿಂತು ಚಿತ್ರಕ್ಕೆ ರೋಚಕತೆ ಕೊಟ್ಟವರು ವಜ್ರಮುನಿ. ಎಂ.ಪಿ.ಶಂಕರ್ ಅಭಿನಯ ಮರೆಯುವಂತಹುದಲ್ಲ.
ಮೈಸೂರು ಮಲ್ಲಿಗೆ : ಕವಿಯೊಬ್ಬನ ಕವನಗಳನ್ನು ಎಲೆಗಳನ್ನಾಗಿಸಿ, ,
ಸುಧಾರಾಣಿಯಂತಹ ಸ್ನಿಗ್ಧ ಸುಂದರಿಯನ್ನು ನಾಯಕಿಯನ್ನಾಗಿಸಿ, ಸುಂದರ ಕತೆಯ ತೋರಣ ನೇಯ್ದ
ನಾಗಾಭರಣ ಮನ ಮುಟ್ಟುವಂತೆ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕನ್ನಡಿಗರೆಲ್ಲರೂ
ನೋಡಬೇಕಾದದ್ದು ಈ ಚಿತ್ರ.
ಬಿಡುಗಡೆ : ಮರಣದಂಡನೆಯ ಔಚಿತ್ಯವನ್ನು ಪ್ರಶ್ನಿಸಿ ನಿರ್ಮಿಸಿದ ಈ ಚಿತ್ರ ಮತ್ತು ಚಿತ್ರದ ವಸ್ತು ಕ್ರಾಂತಿಕಾರಕವಾದದ್ದು. ವೈ. ಆರ್. ಸ್ವಾಮಿ ನಿರ್ದೇಶನದ ರಾಜಕುಮಾರ್ ರಾಜೇಶ್ ಅಭಿನಯದ ರೋಮಾಂಚಕ ಚಿತ್ರ.
ಸಿಪಾಯಿರಾಮು : ಸೈನ್ಯದಿಂದ ಮರಳಿದ ಸಿಪಾಯಿ, ಊರ ಸಾಹುಕಾರನ ದುರಾಕ್ರಮಣಕ್ಕೆ ಸಿಕ್ಕು, ಚಂಬಲ್ ಕಣಿವೆಗೆ ಸೇರಿ ಡಕಾಯಿತನಾಗಿ ಊರಿಗೆ ಮರಳಿ, ತನ್ನ ಸಂಸಾರಕ್ಕಾಗಿ ಮತ್ತೆ ಬಂಧಿಯಾಗುವ ಕತೆಯುಳ್ಳ, "ಯಮುನೆ ನಾನಿನ್ನು ಬರಲೆ" ಕಾದಂಬರಿ ಆಧಾರಿತ ಚಿತ್ರ.
ನೋಡಿ ಸ್ವಾಮಿ ನಾವಿರೋದೆ ಹೀಗೆ : ಶಂಕರ್‌ನಾಗ್ ನಿರ್ದೇಶನದ ಜೀವನದ ಕಹಿಗಳನ್ನು ನಗುವಿನಲ್ಲೇ ತೋರಿಸಿ, ಬದುಕಿನ ಮೌಲ್ಯವನ್ನು ಕಲಿಸುವ ಚಿತ್ರ.
ಒಂದಾನೊಂದು ಕಾಲದಲ್ಲಿ : ಗಿರೀಶ್ ಕಾರ್ನಾರ್ಡ್ ನಿರ್ದೇಶನದ ಶಂಕರ್‌ನಾಗ್ ರ ರಂಗಪ್ರವೇಶದ ಚಿತ್ರ. ಅಕಿರಾ ಕುರಸಾವೋ ನ ಸಂಜುರೋ ಚಿತ್ರದ ಅವತರಣಿಕೆಯಾದರೂ, ಕನ್ನಡದ್ದೇ ಸೊಗಡನ್ನು ಕಸುವನ್ನು ಮೈತುಂಬಿಕೊಂಡಂತೆ ಮಾಡಿದ್ದು, ಗಿರೀಶರ ಹೆಚ್ಚುಗಾರಿಕೆ. ಯೋಧನೊಬ್ಬನ, ಸ್ವತಂತ್ರ ನಿಲುವನ್ನೂ, ಮನಸ್ಸಿನ ಬೇಗುದಿಗಳನ್ನು ಬಿಡಿಸಿಡಿವ ಈ ಚಿತ್ರದಲ್ಲಿನ, ಸುಂದರಕೃಷ್ಣ ಅರಸು ಮತ್ತು ಸುಂದರರಾಜ್ ಅಭಿನಯವೂ ಅಮೋಘ.
ಬಂಧನ : ಕನ್ನಡದಲ್ಲಿ ಪ್ರೇಮಕತೆಗಳಿಗೆ ಬರವಿಲ್ಲ. ಆದರೆ ತುಂಬು ಹೃದಯಯ ಪಕ್ವ ಪ್ರೇಮದ ಕತೆಯನ್ನು ತೆರೆಯಮೇಲೆ ರಾಜೇಂದ್ರ ಸಿಂಗ್ ಬಾಬು ತಂದ ರೀತಿ ಅನನ್ಯ, ವಿಷ್ಣುವರ್ಧನ್ ಮತ್ತು ಸುಹಾಸಿನಿಯರ ಅಭಿನಯ ಅತಿ ರೋಚಕ.
ಮುತ್ತಿನಹಾರ : ಅದೇ ರಾಜೇಂದ್ರ ಸಿಂಗ್, ವಿಷ್ಣುವರ್ಧನ್, ಸುಹಾಸಿನಿ ತ್ರೀಡಿಯ (ಇಬ್ಬರಿಗೆ ಜೋಡಿ ಎಂದರೆ ಮೂವರಿಗೆ ತ್ರೀಡಿ ಎನ್ನಬಹುದೇ..?) ಈ ಚಿತ್ರದಲ್ಲಿ, ಮಗು ಕಳೆದುಕೊಂಡ ತಾಯಿಯ ವಾತ್ಸಲ್ಯ, ಯುದ್ದಕ್ಕೆ ನಡೆದುಹೋದ ವೀರಯೋಧನ ಧೈರ್ಯ ಮತ್ತವನ ಕುಟುಂಬದ ಸ್ಥೈರ್ಯ ಎಲ್ಲವೂ ಮಿಳಿತವಾಗಿ ರೋಮಾಂಚಕ ಅನುಭವ ನೀಡುವಲ್ಲಿ ಸಫಲವಾದ ಚಿತ್ರ.
ಹಂಸಗೀತೆ : ತರಾಸು ಕಾದಂಬರಿ ಆಧರಿಸಿ ರಚಿಸಿದ ಈ ಚಿತ್ರ, ಸಂಗೀತಗಾರನೊಬ್ಬ ಪಕ್ವಗೊಳ್ಳುವುದನ್ನು ತೋರಿಸುತ್ತಲೇ ಆತ್ಮಾಭಿಮಾನವನ್ನು ಉಳಿಸಿಕೊಳ್ಳುವ ಛಲವನ್ನೂ ತೋರಿಸಿ, ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಜಿ.ವಿ.ಅಯ್ಯರ್ ನಿರ್ದೇಶನದ, ಟಿ.ಜಿ. ಲಿಂಗಪ್ಪ ಮತ್ತು ಬಿ.ವಿ. ಕಾರಂತರ ಸಂಗೀತ ಇರುವ ಅನಂತನಾಗ್ ಅಭಿನಯದ ಚಿತ್ರ.
ಜೀವನ ಚೈತ್ರ : ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ಬಣ್ಣಹಚ್ಚಿದ ಕನ್ನಡದ ಹಿರಿಯಣ್ಣನ ಚಿತ್ರ. ಕುಡಿತ ಮತ್ತು ಜಾಗತೀಕರಣವನ್ನೂ ಸಹ ಮೂರ್ತರೂಪವಾಗಿ ತೋರುವ ಈ ಚಿತ್ರ ನನ್ನ ಮೇಲೆ ಬೀರಿದ ಪ್ರಭಾವ ಅಪಾರವಾದದ್ದು.
ಸಮಯದ ಗೊಂಬೆ : ಸಮಯದ ಕೈಯಲ್ಲಿ ನಾವೆಲ್ಲರೂ ಬೊಂಬೆಗಳೆಂದು ಸಾರುವ ಈ ಚಿತ್ರ, ನೊಂದ ಮನಸ್ಸುಗಳಿಗೆ ಸಾಂತ್ವನ ನೀಡಬಲ್ಲ ಶಕ್ತಿಯಿದೆ. ಅದರಲ್ಲೂ ಶಕ್ತಿಪ್ರಸಾದರ ಅಭಿನಯ ಅತ್ಯಮೋಘವಾಗಿದೆ.
ಸಾವಿರ ಸುಳ್ಳು : ಮದುವೆ ಮಾಡಿಸುವ ನಂತರ ಆ ಸಂಸಾರದ ವಿರಸವನ್ನೂ ತೊಡೆಯುವ ಕೆಲಸ ಮಾಡುವ ಲೊಕೇಶ್, ಕಡೆಯಲ್ಲಿ ಎಲ್ಲರಿಂದ ನಿಂದಿತನಾಗಬೇಕಾಗುತ್ತದೆ. ನಗಿಸುತ್ತಲೇ ಸಂಸಾರದ ಒಳಗುಟ್ಟುಗಳ ಪಟ್ಟು ತಿಳಿಸುವ ಈ ಚಿತ್ರದ ರವಿಚಂದ್ರನ್ ಆಪ್ತರಾಗುತ್ತಾರೆ.
ನಾಗಮಂಡಲ: ಟಿ.ಎಸ್. ನಾಗಾಭರಣ ನಿರ್ದೇಶನದ ಈ ಚಿತ್ರ, ಎ.ಕೆ. ರಾಮಾನುಜಂ ಅವರ ನಾಟಕ ಆಧರಿಸಿದ್ದು. ಕತೆ ಜಾನಪದದ್ದು. ಹಾದರದ ಬಗ್ಗೆ ಜಾನಪದರ ಕಲ್ಪನೆಯೇ ಬೇರೆ ಎನ್ನುವುದನ್ನು ನಾಗದಿವ್ಯದ ಮೂಲಕ ತೋರಿಸುವ ಈ ಚಿತ್ರ, ಕಾವ್ಯಾತ್ಮಕ ಗುಣಗಳಿಂದ ಕೂಡಿ, ನೆಳಲು ಬೆಳಕುಗಳ ವಿನ್ಯಾಸದಿಂದ ಮನ ಸೆಳೆಯುತ್ತದೆ.
ಅರಸು : ಲಕ್ಷ್ಮೀ ಪುತ್ರನೊಬ್ಬ ಕಾಸಿನ ಬೆಲೆ ಅರಿಯಲು ಮಾರುವೇಷದಲ್ಲಿ ದುಡಿಯುವ ಮಾಮೂಲಿ ಕತೆಯಾದರೂ, ಅದು ಮನಸ್ಸಿಗೆ ತಟ್ಟುವ ರೀತಿ ಹಿತಕರ. ಪುನೀತ್ ಅತ್ಯಂತ ಆಪ್ತವಾಗಿ ನಟಿಸಿರುವ ಈ ಚಿತ್ರದಲ್ಲಿ, ಪ್ರೇಮಕತೆ ಹಳ್ಳ ಹಿಡಿಯುತ್ತದೆ.
ಉಪೇಂದ್ರ: ವಿಭಿನ್ನ ಆಯಾಮಗಳನ್ನೊಳಗೊಂಡ ಈ ಚಿತ್ರ ಒಂದು ಮಾಸ್ಟರ್ ಪೀಸ್. ಆದರೆ ಆಯಾಮಗಳ ಅಂತಸತ್ವವನ್ನು ಎತ್ತರಿಸುವಲ್ಲಿ ವಿಫಲರಾಗಿದ್ದು, ಉಪೇಂದ್ರರ ಎಡವಟ್ಟು.
ಬೂತಯ್ಯನ ಮಗ ಅಯ್ಯು : ಜಿಪುಣ, ಕ್ರೂರಿ ಜಮೀನ್ದಾರನ ಮಗ ಮತ್ತು ಊರ ಹೈದರ ಜಗಳದಲ್ಲಿ ತನಗರಿವಿಲ್ಲದೆಯೇ ಪರಿವರ್ತಿತನಾಗುವ ಜಮೀನ್ದಾರನ ಮಗನ ಕತೆ ಇದು. ಬೂತಯ್ಯ ಸರ್ಕಲ್ ಎನ್ನುವ ಹೆಸರು ಎಂ.ಪಿ. ಶಂಕರ್ ಮನೆಯ ಬಳಿ ಇರುವ ವೃತ್ತಕ್ಕೆ ಜನಪ್ರಿಯ ಹೆಸರಾಯಿತೆಂದರೆ, ಆ ಬೂತಯ್ಯನ ಪ್ರಭಾವ ಎಂತಹುದಿರಬೇಕಿನ್ನು..? ಅಯ್ಯುವಾಗಿ ಲೋಕೇಶ್, ಗುಳ್ಳನಾಗಿ ವಿಷ್ಣುವರ್ಧನ್ ಅಭಿನಯ ಮರೆಯಲಾಗದಂತಹುದು. ಸಿದ್ದಲಿಂಗಯ್ಯ ನಿರ್ದೇಶನದ ಈ ಚಿತ್ರದ ಕತೆ ಗೊರೂರು ರಾಮಸ್ವಾಮಿ ಅಯ್ಯಂಗಾರರ ಅದೇ ಹೆಸರಿನ ಕಾದಂಬರಿಯದು.
ಬಂಗಾರದ ಮನುಷ್ಯ : ಇದೇ ಸಿದ್ದಲಿಂಗಯ್ಯನವರ ಮರೆಯಲಾಗದ ಮಾಸ್ಟರ್ ಪೀಸ್ ಬಂಗಾರದ ಮನುಷ್ಯ. ವಿದ್ಯಾವಂತ ಯುವಕ, ಪರಿಸ್ಥಿತಿಯ ಒತ್ತಡವೇ ಇದ್ದರೂ ಸ್ವಪ್ರೇರಣೆಯಿಂದ ಮಣ್ಣಿನ ಮಗನಾಗಿ, ತನ್ನ ಗುಣಗಳಿಂದಾಗಿ ಬಂಗಾರದ ಮನುಷ್ಯನಾಗುವ ಈ ಚಿತ್ರ ಜನಸಮೂಹಕ್ಕೆ ಬೀರಿದ ಪ್ರಭಾವ ಅಷ್ಟಿಷ್ಟಲ್ಲ. ಇದೂ ಟಿ.ಕೆ. ರಾಮರಾಯರ ಕಾದಂಬರಿ ಆಧಾರಿತ ಕೃತಿ. ಸಾಧನೆಯ ಜೊತೆಜೊತೆಗೇ ಮನುಷ್ಯ ಪ್ರವೃತ್ತಿಗಳ ಚಿತ್ರಣವೂ ಇಲ್ಲಿ ಸೊಗಸಾಗಿ ಮೂಡಿ ಬಂದಿದೆ.
ಬೆಟ್ಟದ ಹೂವು : ಚಿಕ್ಕವಯಸ್ಸಿನಲ್ಲೇ ರಾಷ್ಟ್ರಪ್ರಶಸ್ತಿಯನ್ನು ಪುನೀತ್ ಗೆ ತಂದುಕೊಟ್ಟ ಚಿತ್ರವಿದು. ಪುಸ್ತಕ ಓದಬೇಕೆನ್ನುವ ಹುಡುಗನ ಅದಮ್ಯ ಆಸೆ ಮತ್ತು ಜೀವನದ ಬಂಡಿ ಸಾಗಲು ಬೇಕಾಗುವ ಚೈತನ್ಯದ ಸಂಘರ್ಷವನ್ನು ಸೆರೆಹಿಡಿಯುವಲ್ಲಿ ನಿರ್ದೇಶಕ ಎನ್. ಲಕ್ಷ್ಮೀನಾರಯಣರು ಯಶಸ್ವಿಯಾಗಿದ್ದಾರೆ.
ಇಲ್ಲಿರುವುದು ನಾನು ನೋಡಿರುವ ಚಿತ್ರಗಳಲ್ಲಿ ನಾನು ಮೆಚ್ಚಿದ ಚಿತ್ರಗಳ ಪಟ್ಟಿಯಷ್ಟೇ, ಈ ಪಟ್ಟಿಯೂ ನನ್ನ ನೆನಪಿನ ಶಕ್ತಿಯ ಗುಣದೋಷಗಳಿಂದ ಮುಕ್ತವಾಗಿಲ್ಲ. ಅಲ್ಲದೇ ನನಗರಿವಿಲ್ಲದ ಉತ್ತಮಚಿತ್ರಗಳು ಇಲ್ಲಿ ಚರ್ಚೆಗೆ ಬಂದೇ ಇಲ್ಲ. ಹಾಗಾಗಿ ಇದು ನನ್ನ ಈ ಕ್ಷಣದ ಅಭಿಪ್ರಾಯವೆಂದಷ್ಟೇ ಭಾವಿಸಬೇಕೆನ್ನುವುದು ನನ್ನ ಮನವಿ.
Nice
ReplyDeleteE ella chitragalu nanage thumaba esta