ಮಯೂರ ಚಿತ್ರದ ಏಕಪಾತ್ರಾಭಿನಯದ ಸಂಭಾಷಣೆ. ವಿಡಿಯೋಗಾಗಿ ಇಲ್ಲಿ ನೋಡಿ.
ಅಮ್ಮ... ಅಮ್ಮ....
ಬುದ್ಧಿ ತಿಳಿಯುವ ಮುನ್ನವೇ ನಿನ್ನನ್ನು ಕಳೆದುಕೊಂಡ ನಿರ್ಭಾಗ್ಯ ನಾನು.
ಕಣ್ಣಿಗೆ ಅರಿವಾಗದ ವಿಷಯ ಕರುಳಿಗೆ ಅರಿವಾಗುತ್ತದೆಂಬ ಮಾತು ಅದೆಷ್ಟು ಸತ್ಯ.
ಹಾಗಾದರೆ.... ಹಾಗಾದರೆ.... ಆಗಾಗ ನನ್ನ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ದೇವತೆ ನೀನೇ ಅಮ್ಮಾ..?
ಬಾ ಮಗೂ ಈ ಮಣಿ ಕಿರೀಟ ನಿನಗೆ ಬೇಡವೇ, ಈ ರತ್ನ ಸಿಂಹಾಸನ ನಿನಗೆ ಬೇಡವೇ?, ಈ ಸಾಮ್ರಾಜ್ಯ ನಿನಗೆ ಬೇಡವೇ ಎಂದು ಅಕ್ಕರೆಯಿಂದ ಕೇಳುತ್ತಿದ್ದವಳು ನೀನೆಯೇ ಅಮ್ಮಾ..
ಈ ನಿನ್ನ ಮಗನಲ್ಲಿ ನಿನಗದೆಷ್ಟೊಂದು ಭರವಸೆ ತಾಯಿ.
ಭೂಮ್ಯಾಕಾಶಗಳೇ ಸಿಡಿದೆದ್ದು ಹಗೆಯಾಗಲಿ. ನಿನ್ನ ಈ ನಂಬಿಕೆಯನ್ನು ಮಾತ್ರ ಸುಳ್ಳು ಮಾಡುವುದಿಲ್ಲ ತಾಯೀ.. ನಿನ್ನ ಈ ನಂಬಿಕೆಯನ್ನು ಮಾತ್ರ ಸುಳ್ಳು ಮಾಡುವುದಿಲ್ಲ.
ಹೊಂಚು ಹಾಕಿ ಸಂಚು ಮಾಡಿ ವಂಚನೆಯಿಂದ ನಮ್ಮ ರಾಜ್ಯವನ್ನು ಕಬಳಿಸಿ ಮೆರೆಯುತ್ತಿರುವ ಶಿವಸ್ಕಂದವರ್ಮ..
ಯಾವ ಕದಂಬರ ವಂಶವೃಕ್ಷ ನಿನ್ನ ಕ್ರೌರ್ಯಕ್ಕೆ ಸಿಕ್ಕು ಸಂಪೂರ್ಣ ನಿರ್ನಾಮವಾಗಿ ಹೋಯಿತು ಎಂದು ತಿಳಿದಿರುವೆಯೋ, ಆ ಮಹಾ ವಂಶವೃಕ್ಷವಿಂದು ಮತ್ತೆ ಚಿಗುರಿ ತಲೆಯೆತ್ತಿ ನಿಂತಿದೆ.
ಪಲ್ಲವರ ಸೊಲ್ಲಡಗಿಸಿ, ನಮ್ಮ ನೆಲದಿಂದವರನ್ನು ಬಡಿದೋಡಿಸಿ, ವೈಜಯಂತಿಯ ರತ್ನ ಸಿಂಹಾಸನದಲ್ಲಿ ಕನ್ನಡ ರಾಜ್ಯಲಕ್ಷ್ಮಿಯನ್ನು ಪ್ರತಿಷ್ಠಾಪಿಸುವ ಮುಹೂರ್ತ ಹತ್ತಿರವಾಗಿದೆ.
ಕನ್ನಡಿಗರ ಸಾಹಸ, ಕನ್ನಡಿಗರ ಪೌರುಷ, ಕನ್ನಡಿಗರ ಸ್ವಾಭಿಮಾನ, ಆಚಂದ್ರಾರ್ಕವಾಗಿ ಉಳಿಯುವಂತಹದೇ ಹೊರತು, ನಿನ್ನಂತಹ ಕೋಟಿ ಪಲ್ಲವರ ನಿರಂತರ ದಾಳಿಯಿಂದ ಅಳಿಯದು. ಎಂಬ ಮಾತನ್ನು ಪ್ರತ್ಯಕ್ಷ ಪ್ರಮಾಣ ಮಾಡಿ ತೋರಿಸುತ್ತೇನೆ.
ಇದೇ ನನ್ನ ಗುರಿ,
ಇದೇ ನನ್ನ ಮಂತ್ರ
ಇದೇ ನನ್ನ ಪ್ರತಿಙ್ಞೆ
No comments:
Post a Comment