ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ,
ಚಳಿಯನು ಕೊಂದ, ಹಕ್ಕಿಗಳುಲಿಗಲೆ ಚಂದ,
ಕೂವು, ಜಗ್ ಜಗ್ ಪೂವ್ವೀ ಟೂವಿಟ್ಟವೂ ||ಪ||
ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ,
ಇನಿಯರ ಬೇಟ; ಬನದಲಿ ಬೆಳದಿಂಗಳೂಟ,
ಹೊಸಹೊಸ ನೋಟ, ಹಕ್ಕಿಗೆ ನಲಿವಿನ ಪಾಠ,
ಕೂವು, ಜಗ್ ಜಗ್ ಪೂವ್ವೀ ಟೂವಿಟ್ಟವೂ ||೧||
ಮಾವಿನ ಸೊಮ್ಪು, ಮಲ್ಲಿಗೆ ಬಯಲೆಲ್ಲ ಕಂಪು,
ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು,
ಕಿವಿಗಳಿಗಿಂಪು, ಹಕ್ಕಿಗಳುಲುಹಿನ ಪೆಂಪು,
ಕೂವು, ಜಗ್ ಜಗ್ ಪೂವ್ವೀ ಟೂವಿಟ್ಟವೂ
ಬಂದಾ ವಸಂತ, ನಮ್ಮ ರಾಜಾ ವಸಂತ.
No comments:
Post a Comment