Pages

Showing posts with label poem. Show all posts
Showing posts with label poem. Show all posts

Monday, July 27, 2015

ಬೆಂಗಳೂರ ಮಳೆಬಿಲ್ಲು




ಕಬ್ಬನ್ ಪಾರ್ಕಿನಲ್ಲಿ ಜೋರು ಮಳೆ
ಎಂ.ಜಿ. ರಸ್ತೆಯಲಿ ಬರೀ ಗಾಳಿ.
ಮಾರತಹಳ್ಳಿಯಲಿ ಹನಿಹನಿ ಜಡಿ
ವೈಟ್ ಫೀಲ್ದಲ್ಲಿ ಬಿಸಿ ಧೂಳು ಗಾಳಿ.

ಗಾಂಧೀ ಬಜಾರಿನಲ್ಲಿ ಮುಸುಕಿದ  ಮೋಡ
ಲಾಲ್ ಬಾಗಿನಲ್ಲಿ ಲವಲವಿಕೆಯ ತಂಗಾಳಿ
ಕೋರಮಂಗಲದಲ್ಲಿ ಕೊರೆವ ಚಳಿ,
ಚಂದಾಪುರದಲ್ಲಿ ಮುಗಿಲ  ನೆರಳು.

ಬನ್ನೇರುಘಟ್ಟದಲಿ ತುಂತುರು ಹಾಡು,
ನೆಲಮಂಗಲದಲಿ ಚುಮುಚುಮು ಚಳಿ
ವಿವಿಧತೆಯಲ್ಲಿ ಏಕತೆ, ಬೆಂಗಳೂರಿನ ಹವಮಾನದ ಕತೆ,
ಬಿಸಿ ಬ್ಯುಸಿ ಬೆಂಗಳೂರ ತುಂಬೆಲ್ಲ ಮಳೆಬಿಲ್ಲು ಮೂಡಿದೆ.

ಚಿತ್ತಾರ ಮಾಡಿದೆ.   ನೋಡುವ ಕಣ್ಣಿಗೆ ಕಾದಿದೆ.
ರಸಿಕರ ಹೃದಯಕೆ ತಂಪನು ತಂದಿದೆ.   


Friday, September 05, 2014

ಒಲವಿನ ತತ್ವ

ನದಿಯ ಸೇರಿ ಹರಿಯುವಲ್ಲಿ,
ಚಿಲುಮೆ ನೀರ ಮನಸು.
ಕಡಲ ಸೇರಿ ಬೆರೆಯುವಲ್ಲಿ,
ಹರಿವ ನದಿಯ ಕನಸು.

ಮೊಗ್ಗಿನ ಮಧುಗಂಧದಲೆಗೆ,
ಹಿಗ್ಗಿನ ತಂಗಾಳಿಯೊಸಗೆ.
ಒಗ್ಗಿ ನಾವು ಬಾಳುವುದೇ,
ಜಗದ ನಿಯಮವಲ್ಲವೇ?

ಶೃಂಗಗಿರಿಗಳೇರಿ ನಿಂತು,
ಸ್ವರ್ಗ ಸಂಗ ಪಡೆದಿವೆ.
ಶರಧಿಯಲೆಗಳೆಲ್ಲ  ನಲಿದು,
ಭರತ ನಾಟ್ಯವಾಡಿವೆ.

ಧರೆಯ ಮುದ್ದು ಮುಖದ ಮೇಲೆ
ಸೂರ್ಯ ರಶ್ಮಿ ಚುಂಬನ
ಸಾಗರದ ನೀರಿನಲೆಗೆ
ಚಂದ್ರನಾಲಿಂಗನ

ಪುರುಷನೊಡನೆ ಪೃಕೃತಿ,
ಬೆರೆಯುವುದೇ ನಿರ್ಮಿತಿ !!
ಒಲ್ಲೆಯೆನುವೆಯಾದರೆ 
ಜಗದ ನಿಯಮವೇತಕೆ..!!?

 -- ಪಿ ಬಿ ಶೆಲ್ಲಿ ಯ ಲವ್ಸ್ ಫಿಲಾಸಫಿ ಕವನದ ಭಾವಾನುವಾದ. ಮೂಲ ಪದ್ಯ ಇಲ್ಲಿದೆ

Saturday, February 23, 2013

ಅಳೆಯಲಾಗದ ಒಲವು


ಆ ಸಂಜೆಯಲಿ ನಿನ್ನಿಂದ ದೂರ ನಡೆವಾಗ
ನನ್ನೆದೆಯಲಿದ್ದ ಒಲವನ್ನು ಅಳೆಯಲಾರೆ.
ಕಾಪಿಟ್ಟ  ನೀಲಿ ಕಾನನದಲಿ ಕಣ್ಮರೆಯಾದಾಗ
ಪಡುವಣದ ಬಾನಿನಲಿ ತಾರೆಗಳ ಎಣಿಸಲಾರೆ.

ಇನಿತಾದರೂ ನಗೆಯ ಸುಳಿವಿರಲಿಲ್ಲ, ಅಂದು
ಕಾಣದ ವಿಧಿಯಡೆಗೆ ನಾ ನಡೆಯುವಂದು.
ಬೆನ್ನ ಹಿಂದಿನ ಮುಖಗಳು ಮಸುಕಾಗಿ
ನೀಲಿ ಕಾನನದ ಸಂಜೆಯಲ್ಲಿ ಕರಗಿಹೋದಂದು

ಆ ರಾತ್ರಿ ಬಲು ಸೊಬಗು, ಬಹು ಸೊಬಗು
ಹಿಂದೆಂದು ಕಾಣದ್ದು, ಮುಂದೆ ಕಾಣಬರದು.
ನಿಜ ನುಡಿಯಲೇ,  ಆ ಸಂಜೆ ನನ್ನ ಬಳಿ ಉಳಿದದ್ದು..
ನೀಲಿ ಕಾಡಿನ ದೊಡ್ಡಹಕ್ಕಿಗಳು ಮತ್ತದರ ಹಸಿವಿನ ಕೂಗು.


ಬರ್ಟೋಲ್ಟ್ ಬ್ರೆಷ್ಟ್ ಕವಿಯ  "Ich habe dich nie je so geliebt "   ಪದ್ಯದ ಭಾವಾನುವಾದ.  

ಮೂಲದ ಕವಿತೆಯ ಇಂಗ್ಲಿಷ್ ಅನುವಾದ ಕೆಳಗಿನಂತೆ.

Ich habe dich nie je so geliebt

I never loved you more, ma soeur
Than as I walked away from you that evening.
The forest swallowed me, the blue forest, ma soeur
The blue forest and above it pale stars in the west.

I did not laugh, not one little bit, ma soeur
As I playfully walked towards a dark fate -
While the faces behind me
Slowly paled in the evening of the blue forest.

Everything was grand that one night, ma soeur
Never thereafter and never before -
I admit it: I was left with nothing but the big birds
And their hungry cries in the dark evening sky.







Friday, October 26, 2012

ಕಣ್ಣಿಗೆ ಬಂದವಳು ಕನಸಿಗೆ ಬಾರದಿರುವೆಯಾ


ಜಯಂತ್ ಕಾಯ್ಕಿಣಿ ಬರೆದ ಮೊದಲ ಗೀತೆ ಇದು.  ರಾಗ ಸಂಯೋಜನೆ ಸಿ. ಅಶ್ವಥ್, ಗಾಯನ ರಾಜಕುಮಾರ್. "ಅನುರಾಗ" ಸಂಪುಟ. ಮನವನ್ನು ಆರ್ದ್ರಗೊಳಿಸುವ ಗೀತೆ.

ಕಣ್ಣಿಗೆ ಬಂದವಳು ಕನಸಿಗೆ ಬಾರದಿರುವೆಯಾ
ಮಾತಿಗೆ ಬಂದವಳು ಮನಸಿಗೆ ಬಾರದಿರುವೆಯಾ

ಗಾಯವೆಲ್ಲ ಮಾಯುವಂಥ ರಾತ್ರಿಯೊಂದು ಕನಸೇ
ದಳದಳಗಳ ನೋವಿನಲ್ಲಿ ಅರಳಿನಿಂತ ಮನಸೇ
ತಂಗಾಳಿಯ ಕರೆಯೇ, ಹೊಸಲೋಕವ ತೆರೆಯೇ
ಕೊನೆಗೂ ಬಂದವಳು ಬೆಳಗು ತಾರದಿರುವೆಯಾ

ಬಾಯಾರಿದ ಬಿಸಿಲಿನಲ್ಲಿ  ಹೊಸ ಹಗಲ ತೇರು
ಎಳೆಯದೇ ದಾರಿಯಲ್ಲಿ ಬಿಟ್ಟು ಹೋದವರಾರು?
ಹುಚ್ಚು ನೂರು ಸಂತೆ ನೆಚ್ಚಿ ಕಾದು ನಿಂತೆ
ಸಖ ಎಂದವಳು ಮುಖ ತೋರದಿರುವೆಯಾ?

Wednesday, October 24, 2012

ನನ್ನೆದೆಯಲ್ಲೀಗ ಮೊಗ್ಗು ಚಿಗುರಿಲ್ಲ

ನನ್ನೆದೆಯಲ್ಲಿ
ಮೊಗ್ಗೊಂದು ಅರಳಿದಾಗಲೇ
ಹಿಚುಕಿ ಹಾಕಿ
ಬಿಡಬೇಕೆಂದುಕೊಂಡೆ,

ನೀರಿಲ್ಲದೆ ಅದೇ
ಒಣಗಿಹೋಗುವುದೆಂದೇ
ಸುಮ್ಮನಾದೆ

ಮೊಗ್ಗರಳಿ  ಹೂವಾಗಿ
ನಗುತಿರಲು ಹಿತವಾಗಿ
ಮನ ಸೋತಿತು ..

ಅಂದದಲಿ ಚಂದದಲಿ
ಸೌಗಂಧ ಚೆಲ್ಲಿರಲು
ನನದೆಂದೇ ಬಗೆದೆ ನಾನು

ಆದರೆ

ಒಂದೇ ರಾತ್ರಿಯಲಿ
ಇದ್ದಕ್ಕಿದ್ದಂತೆ ಸುರಿದ
ಮಳೆಗಾಳಿಯಾರ್ಭಟದಿ
ಮುರುಟಿ ನೆಲಕಚ್ಚಿತ್ತು.

ನನ್ನೆದೆಯಲ್ಲೀಗ ಮೊಗ್ಗು ಚಿಗುರಿಲ್ಲ
ಹೂವು ಅರಳಿಲ್ಲ.

Tuesday, September 04, 2012

ಈ ಕಾಲದ ಸರ್ಕಾರಿ ಜನ

ಒಂದೂರಿನಲ್ಲೊಬ್ಬ ರಾಜ.
ಬಹುಜನ ಭೋಜ.
ಅವನಿಗೊಬ್ಬ ಮಂತ್ರಿ. 
ಬುದ್ದಿಯವಲನು ತಂತ್ರಿ.
ಅವರಿಗೊಂದು ಸಮಸ್ಯೆ. 
ರಾಣಿಯ ಪ್ರೀತಿಯ ತಮ್ಮ
ಆ ರಾಜ್ಯದ ಅಧಿಕಾರಿ.
ಅವನೋ ಬಲು ಭ್ರಷ್ಟ. 
ಜನಗಳ ದೂರು ಸಾವಿರಾರು.
ರಾಜನ ಕಷ್ಟ ಕೇಳುವರಾರು?

ಏಕೆಂದರೆ ಅವನು ರಾಣಿಯ ಪ್ರೀತಿಯ ತಮ್ಮ. ಅವನಿಗೆ ಏನೂ ಮಾಡಲಾಗದ ಸ್ಥಿತಿ ರಾಜನದು.
ಮಂತ್ರಿ ಹೇಳಿದ,

"ಪ್ರಯೋಜನವಿಲ್ಲ ಮಹಾರಾಜ,
ಬ್ರಷ್ಟತೆ ಅವನ ಹುಟ್ಟುಗುಣ.
ಲಂಚವೇ ಅವನ ಆಭರಣ.
ಎಲ್ಲಿ ಕಳಿಸಿದರು ಅವನನ್ನು,
ಹುಡುಕುತ್ತಾನೆ ಸಂಪಾದನೆಯ ದಾರಿಯನ್ನು."

ಮಹಾರಾಜನದೊಂದು ಪಟ್ಟು. 
ಹುಡುಕಿದನೊಂದು ಉಪಾಯ.
ನಾನವನಿಗೆ ಏನೂ ಮಾಡಲಾರೆ. 
ಆದರೆ ಅವನಿಂದ ನನ್ನ ಪ್ರಜೆಗಳಿಗಿರದಿರಲಿ ತೊಂದರೆ.
ಅವನಿಗಿರಲಿ ಸಮುದ್ರದ ಅಲೆಗಳ ಎಣಿಸುವ ಕೆಲಸ.
ಅದರಲ್ಲಿ ಅವನೇನು ಮಾಡುವ ಮೋಸ.

ಹುಸಿನಗೆ ನಕ್ಕ ಮಂತ್ರಿ. 
ಕಾದು ನೋಡೋಣ ತಿಳಿಯುವುದು ಬೇಗ ಎಂದ.
ಮೊದಲ ವಾರದಲಿ ಬರಲಿಲ್ಲ  ದೂರು.
ರಾಜನ ಮುಖದಲಿ ನಗೆ ಬಹು ಜೋರು.
ಕಳೆದಿಹವು ವಾರವಿನ್ನೆರಡು.
ಅದರೊಳಗೇ  ದೂರು ಹನ್ನೆರಡು.

ಸಾಗರದಲಿ ಸ್ನಾನ ಮಾಡುವ ಜನ ತಪ್ಪಿಸುತ್ತಾರೆ ಲೆಕ್ಕ,
ಅದಕೇ ಕೊಡಬೇಕು ಲಂಚ ಎನ್ನುವುದೊಂದು.
ಸಾಗರದಲಿ ಸಂಚರಿಸುವ ನಾವೆಗಳೆಲ್ಲಾ
ಅಲೆಗಳ ಹರಿವಿಗೆ ತಡೆಯಾಗುವುದಲ್ಲಾ 
ಹೋಗಬಾರದೆ ದೊರೆಗೆ ದೂರು?
ಹಾಗಿದ್ದರೆ ಬರಲಿ ನನ್ನಯ ಪಾಲು.

ತಲೆ ತಿರುಗಿತು ದೊರೆಗೆ,
ಕೆರಳಿಸಿ ನಕ್ಕಿತು ಮಂತ್ರಿಯ ನಗೆ.
ಉಕ್ಕಿದ ಸಿಟ್ಟಿಗೆ  ಅಬ್ಬರಿಸಿ,
 ಆದೇಶವ ನೀಡಿದ ಪರಿಜನಕೆ.
"ಅಧಿಕಾರಿಯ  ತಲೆ ಕತ್ತರಿಸಿ, 
ಮುಂಡವ ಚೂರು ಚೂರಾಗಿಸಿ.
ಸಮುದ್ರದ ಮೀನುಗಳೆಲ್ಲ
ತಿನ್ನಲಿ ಅವನ ದೇಹವನು."

ಆ ಮೀನನು ತಿಂದವರ ವಂಶಜರೆಲ್ಲಾ 
ಈ ಕಾಲದ ಸರ್ಕಾರಿ ಜನರಂತೆ,
ಏನೇ ನಿಯಮವ  ಮಾಡಿದರೂ
ಲಂಚವನಿವರು ಬಿಡರಂತೆ.