Pages

Saturday, April 24, 2010

ರಾಜ ಮುತ್ತಿನ ನೆನಪಲ್ಲೊಂದು ಸ್ವಗತತ

ರಾಜಣ್ಣ, ರಾಜಕುಮಾರ್, ಮುತ್ತುರಾಜ್, ಅಣ್ಣಾವ್ರು

ಯಾರೆಂದು ಗೊತ್ತಾಯಿತಲ್ಲ. ಇವರ ಬಗ್ಗೆ ಚತುಷ್ಕೋಟಿ ಕನ್ನಡಿಗರು ಇನ್ನೊಬ್ಬರ ಬಳಿ ಹೇಳಬೇಕಾದುದೇನೂ ಇಲ್ಲ. ಹೇಳಿಕೊಳ್ಳ ಬೇಕಾದುದು ಮಾತ್ರ ಇದೆ. ಅದು ಬರೀ ಸ್ವಗತ. ಐದು ದಶಕಗಳ ಕಾಲ ಕನ್ನಡಿಗರ ಮನರಂಜಿಸಿದ ಮಹಾನ್ ಚೇತನ. ಸದ್ದಿಲ್ಲದೆ ತನ್ನದೇ ಆದ ರೀತಿಯಲ್ಲಿ ಸಮಾಜದ ಹಲವಾರು ಸ್ತರದ ಹಲವಾರು ವಿಭಿನ್ನ ರೀತಿಯ ಜನಗಳಲ್ಲಿ ಸ್ಪೂರ್ತಿ ಸೆಲೆ ಬಿತ್ತಿದ ಸುಗುಣೇಂದ್ರ. ಬಂಗಾರದ ಮನುಷ್ಯನಲ್ಲಿ ತಮ್ಮನ್ನೇ ಕಂಡು, ವಿದೇಶಗಳನ್ನು ತೊರೆದು ಮಣ್ಣಿನ ಮಕ್ಕಳಾದ ಮಂದಿ ಎಷ್ಟೋ..! ಜೀವನಚೈತ್ರ ವನ್ನು ನೋಡಿ ಕುಡಿಯುವುದನ್ನು ಬಿಟ್ಟವರೆಷ್ಟೋ.!!
ತಾಯಿಯಲ್ಲಿ ಭಕ್ತಿ ವಾತ್ಸಲ್ಯಗಳನ್ನೂ, ಸೋದರಸೋದರಿಯರಲ್ಲಿ ಪ್ರೀತಿಯನ್ನೂ, ಅತ್ತಿಗೆಯಲ್ಲಿ ದೇವರನ್ನೂ , ಕಾಯಕದಲ್ಲಿ ಕೈಲಾಸವನ್ನೂ ಕಾಣಲು ಕನ್ನಡಿಗರ ಮೂರು ತಲೆಮಾರುಗಳನ್ನು ಉತ್ತೇಜಿಸಿದವರಾರು. ಪ್ರೇಯಸಿಗೆ ತೋರುವ ಸರಸ , ಸಂಕಷ್ಟದಲ್ಲೂ ಧೃತಿಗೆಡದ ಸ್ಥೈರ್ಯ , ವಿಧಿಯಾಟಕ್ಕೆ ಬಲಿಯಾದರೂ ನಲುಗದ ಸ್ಥಿತಪ್ರಜ್ಞತೆ ಇವನ್ನು ನಮ್ಮಲ್ಲಿ ತುಂಬಿದವರಾರು?

ರಾಜಕುಮಾರ್ ಬಗ್ಗೆ ಏಕಷ್ಟು ಅಭಿಮಾನ? ಕನ್ನಡವೇ ಸತ್ಯ ಎಂದು ಹಾಡಿದ ಕೊರಳದು, ಕನ್ನಡಿಗರ ದನಿಯಾಗಿ ನಿಂತ ಧಣಿಯವರು. ಸುಶ್ರಾವ್ಯ ಕಂಠದಲ್ಲಿ ಸಾವಿರಾರು ಗೀತೆಗಳು, ಕನ್ನಡಿಗರಿಗೆ ಸಂಗೀತದ ರಸದೌತಣ, ಅವರ ದನಿಯಲ್ಲಿ ರುವ ಭಕ್ತಿಗೀತೆಗಳನ್ನು ಆಸ್ವಾದಿಸುವುದು ಒಂದು ಯೋಗವೇ.! ಅದೆಷ್ಟು ಪ್ರೇಮಿಗಳ ನಡುವೆ ರಾಜ್ ಹಾಡುಗಳ ವಿನಿಮಯ ನಡೆದಿಲ್ಲ? ರಾಜ್ ಹಾಡನ್ನು ಹಾಡಿ ತನ್ನೊಲವಿನ ಹುಡುಗಿಯನ್ನು ಒಲಿಸಿಕೊಂಡ ಅದೆಷ್ಟು ತರುಣರಿಲ್ಲ? ಏಕೆ ಮಳ್ಳಿ ಹಂಗೆ ಕದ್ದು ಕದ್ದು ನೋಡುತೀಯೆ , ಇಫ್ ಯು ಕಮ್ ಟುಡೇ, ಇಟ್ಸ್ ಟೂ ಲೇಟ್,
ಎಂಥಾ ಸೊಗಸು ಪ್ರೇಮದ ಕನಸು, ಲವ್ ಮಿ ಆರ್ ಹೇಟ್ ಮಿ, ಅದೆಷ್ಟು ಬಗೆಯ ಪ್ರೇಮ ಗೀತೆಗಳು.? (ಹತ್ತಿರ ಬಂದರೆ ಕಿವಿಯಲಿ ಹೇಳುವೆ ). ಅಮ್ಮನಿಗಾಗಿ, ಹಾಡಿದ ಹಾಡುಗಳೆಷ್ಟು, ಅಮ್ಮನ ಆರ್ದ್ರ ಭಾವವನ್ನು ನಮ್ಮಲ್ಲನುರಣಿಸಿದ ಆಪ್ತನಾರು? ನಾದಮಯ, ಅರಾಧಿಸುವೆ ಮದನಾರಿ ಗೀತೆಗಳ ಮಾಧುರ್ಯ ಎಂತದು? ಜೋಗದ ಝೋಕಿನ ಸೊಬಗೇನು? ಸಿಗೆವೆಂ ಕ್ಷಣದಲಿ ನಿನ್ನ ನಾ ಎಂದು ಆರ್ಭಟಿಸಿದ ಪರಿಯೇನು? ಅದೆಷ್ಟು ಕವಿಗಳ ಗೀತೆಗಳು ರಾಜ್ ದನಿಯಲ್ಲಿ ಮರುಹುಟ್ಟು ಪಡೆದಿಲ್ಲ. ಆಲಾಪದೇರಿಳಿತದಲಿ ಮೋಹನ ಮುರಳಿ ಮಿಡಿದವರಾರು?

ಯೋಗ ಕಲಿತದ್ದು ಐವತ್ತರ ಇಳಿವಯಸ್ಸಿನಲ್ಲಿ, ಆದರೆ ಜೀವಮಾನದ ಸಾಧನೆ ಸಿಕ್ಕ ಷ್ಟೇ ಸಮಯದಲ್ಲಿ. ಈ ಯೋಗವೇ ಇರಬೇಕು, ಹುಡುಕಿಕೊಂಡು ಬರುತ್ತಿದ್ದ ಪದವಿಗಳನ್ನು ನಿರಾಕರಿಸುವ ಸ್ಥಿತ್ಯತೆ ತಂದುಕೊಟ್ಟಿದ್ದು. ಇಂದಿರಾಗಾಂಧಿ ಎದುರಾಗಿ ಚುನಾವಣೆಗೆ ನಿಲ್ಲಲು ಮುರಾರ್ಜಿ ದೇಸಾಯರೇ ಕರೆ ಮಾಡುತ್ತಿದ್ದರೂ, ಮದರಾಸಿಗೆ ಹೋಗಿ ಯಾರ ಕೈಗೂ ಸಿಗದೆ ಕುಳಿತದ್ದು. ಯೋಗದಲ್ಲಿ ಕಳೆದು ಹೋದ ರಾಜಕುಮಾರ್, ಯೋಗ ಪುರುಷನಾಗಿಯೇ ಕಂಗೊಳಿಸಿದರು. ಅವರ ಸಾನಿಧ್ಯದಲ್ಲಿ ದಿವ್ಯ ಯೋಗದ ಅನುಭವವಿತ್ತು.

ಅವರು ಒಬ್ಬೊಬ್ಬರಿಗೆ ಒಂದೊಂದು ತೆರನ ಮಾದರಿ. ಕನ್ನಡ ಮೇಷ್ಟ್ರು, ಮಾತಾಡಿದರೆ ರಾಜಕುಮಾರನ ಹಾಗೆ ಕನ್ನಡ ಮಾತಾಡಬೇಕು ಅನ್ನುವ ಆಸೆ ಹಲವರದು. ಬಭ್ರುವಾಹನ ಚಿತ್ರದ ದೃಶ್ಯವನ್ನು ಸುಮಾರು ಇಪ್ಪತ್ತು ವರುಷಗಳ ಕಾಲ ಏಕಪಾತ್ರಾಭಿನಯದಲ್ಲಿ ಕರ್ನಾಟಕದ ಉದ್ದಗಲಕ್ಕೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಅಭಿನಯಿಸಿಲ್ಲವೇ? ಭಲೇಜೋಡಿಯ ಎಚ್ಚಮನಾಯಕನ ಮಾತನ್ನು ನಾನೇ ಏಕಪಾತ್ರಾಭಿನಯಕ್ಕೆ ಬಳಸಿ ಬಹುಮಾನ ಗೆದ್ದಿದ್ದೇನೆ. ಭಕ್ತಿರಸದಲ್ಲಿ, ಭಕ್ತ ಕುಂಬಾರ, ಕನಕದಾಸ, ಓಹಿಲೇಶ್ವರ, ಗುರು ರಾಘವೇಂದ್ರರ ಅಭಿನಯಕ್ಕೆ ಮನಸೋಲದವರಾರು?

ಸಮಾಜಕ್ಕೆ ನೀಡಿದ ಕೊಡುಗೆ ಏನು ಎಂದು ಕೇಳುವರಿದ್ದಾರೆ. ಒಬ್ಬ ಕಲಾವಿದನಾಗಿ ಐದು ದಶಕಗಳ ಕಾಲ ಉತ್ತಮ ನಡತೆಗಳನ್ನು ಇಡೀ ಸಮಾಜಕ್ಕೆ ಕಟ್ಟಿಕೊಟ್ಟ ಸಾಧನೆಗಿಂತ ಬೇರಿನ್ನೇನು ಬೇಕು, ರಾಜ್ ಚಿತ್ರಗಳಲ್ಲಿ ಕುಡಿತ ವಿಲ್ಲ, ಹೆಂಡತಿಗೆ ಹೊಡೆಯುವುದಂತೂ ಇಲ್ಲವೇ ಇಲ್ಲ. ಅವರ ಅಭಿನಯ ಸೂಕ್ಷ್ಮತೆಯನ್ನು ನೋಡಿಯೇ ತಿಳಿಯಬೇಕು. ಚಲಿಸುವ ಮೋಡಗಳು ಚಿತ್ರದ ಲಾಯರ್ ತನ್ನ ಕಕ್ಷಿದಾರಿಣಿಯ ವಿರುದ್ದ ಸಾಕ್ಷ್ಹಿಯನ್ನು ಪಾಟೀಸವಾಲು ಮಾಡಿ ಆ ಪಾತ್ರದ ಬಾಯಿಂದ ನಿಜ ಹೊರಹಾಕಿಸಿದ ಮೇಲೆ, ಗೆಲುವಿನ ಸಂತಸ,ಮತ್ತು ನಿಜದ ಬಗ್ಗೆ ಜುಗುಪ್ಸೆ ಇನ್ನೂ ಹಲವಾರು ಭಾವನೆಗಳನ್ನು ಕಣ್ಣೋಟದಲ್ಲಿಯೇ ಹೊರಹಾಕುವುದನ್ನು ನೋಡಿಯೇ ಅನುಭವಿಸಬೇಕು. ಚಿ.ಉದಯಶಂಕರ ಸಂಭಾಷಣೆಗಳು ರಾಜ್ ರಿಗೆ ಎಷ್ಟು ಚೆನ್ನಾಗಿ ಒಪ್ಪುತ್ತಿದ್ದವೆಂದರೆ, ಕನ್ನಡದ ಶಕ್ತಿ, ಉಪಮೆಗಳ ಮತ್ತು ಪದಗಳ ನಡುವಿನ ಅರ್ಥವನ್ನು ಹುಡುಕುವುದನ್ನು ನಾವೆಲ್ಲಾ ಕಲಿತಿದ್ದು ಅದರಿಂದಲೇ.

ಕಡೆಯ ದಿನಗಳ ನೋವನ್ನೂ, ದೇವರು ಕೊಟ್ಟ ವರ ಎಂದೇ ತಿಳಿದವರು ರಾಜಕುಮಾರ್, ಏಪ್ರಿಲ್ ೨೪ ಅವರ ಜನ್ಮದಿನ. ಕೆಲವರಿಗೆ ವಯಸ್ಸಾಗುವುದಿಲ್ಲ, ಅವರು ಕಣ್ಮರೆಯಾಗುವುದಿಲ್ಲ. ಅಮರರಾಗಿ ಚಿರಯೌವನಿಗರಾಗಿ ಇರುತ್ತಾರೆ. ಅಂತಹವರು ರಾಜಕುಮಾರ್.

ಇದು ಅವರ ನೆನಪಿನ ಸ್ವಗತ.

No comments:

Post a Comment