Pages

Wednesday, January 13, 2010

ಸಂಪದದಲ್ಲಿ ನಾನಿತ್ತ ಒಂದು ಉತ್ತರ

\\ಸಾಮಾನ್ಯ ಮನುಷ್ಯನಿಗೆ ಬಾಯಿಪಾಠ ಹೊಡೆಯೋ ಕಲೆ ಗೊತ್ತಿದ್ದರೆ ಸಾಕು ನೀವು ಇಂಜಿನಿರ್ ಆದಿರಿ ಎಂದೇ ಅರ್ಥ! vtu ಟಾಪರ್ ಆದರೂ ವಿಶೇಷವೇನಲ್ಲ!
ಕ್ಷಮಿಸಿ ದಯವಿಟ್ಟು. ಶುದ್ದ ವಿಜ್ಞಾನ, ಅನ್ವಯಿಕ ವಿಜ್ಞಾನ ಮತ್ತು ಇಂಜಿನಿಯರಿಂಗ್ ಗಳಿಗೆ ಸಾಕಷ್ಟು ವ್ಯತ್ಯಾಸವಿದೆ ಎಂದು ನೀವೆಲ್ಲಾ ತಿಳಿದಿದ್ದೀರಿ ಎಂದು ಭಾವಿಸಿದ್ದೇನೆ. ಹಾಗಿದ್ದರೆ ಇಂಜಿನಿಯರ್ ಆಗಲು ನಿಮಗೆ ಬಾಯಿಪಾಠ ಹೊಡೆದರೆ ಸಾಧ್ಯವಾಗದು. ಪ್ರಕೃತಿಯ ನಿಯಮಗಳನ್ನರಿಯುವ ಕಲೆ ಶುದ್ದ ವಿಜ್ಞಾನ ವಾದರೆ ಅದರಿಂದಾಗಬಹುದಾದ ಉಪಯೋಗಗಳನ್ನು ನಿರುಕ್ತಿಸುವುದು ಅನ್ವಯಿಕ ವಿಜ್ಞಾನ. ಅನ್ವಯಿಕ ವಿಜ್ಞಾನಕ್ಕೆ ತಂತ್ರಜ್ಞಾನದ ಮೂಲಕ ನಿಜಜೀವನಕ್ಕೆ ಉಪಯುಕ್ತ ಸಲಕರಣೆಗಳನ್ನು ನೀಡಬಹುದಾದ ಮೂಲವೇ ಇಂಜಿನಿಯರಿಂಗ್. ವಿಷಯದ ಆಳಕ್ಕಿಳಿಯದೇ ಸುಮ್ಮನೆ ಹೋದರೆ ಇಂತಹ ಮಾತು ಬರಬಹುದೇನೊ. ಬಿಲ್ ಗೇಟ್ಸ್ ಇಂಜಿನಿಯರಿಂಗ್ ಮಾಡಲಿಲ್ಲ. ಆದರೆ ಅವನು ಜಗತ್ತು ಕಂಡ ವಿಶಿಷ್ಟ ಇಂಜಿನಿಯರ್. ಸ್ಟೀವ್ ಜಾಬ್ಸ್ ಸಹ ಅಷ್ಟೇ. ವಿಶ್ವೇಶ್ವರಯ್ಯ ಸುಮ್ಮನೆ ಉರು ಹೊಡೆದಿದ್ದರೆ, ಕನ್ನಂಬಾಡಿ ಇರುತ್ತಿರಲಿಲ್ಲ.
ತಂದೆ ತಾಯಿಯ ಆಸೆಯಿಂದಾಗಿ ತಮ್ಮ ಬದುಕನ್ನು ಆಯ್ಕೆಯಿಲ್ಲದೆ ಆಯ್ದುಕೊಳ್ಳಬೇಕಾಗುವ ಮಕ್ಕಳ ಬಗ್ಗೆ ನನಗೆ ಸಂಪೂರ್ಣ ಸಹಾನುಭೂತಿಯಿದೆ. ಆದರೆ ಇಂಜಿನಿಯರಿಂಗ್ ಅಂದರೆ ಉರು ಹೊಡೆಯೋದು ಅನ್ನೋ ಮಾತು ಹುರುಳಿಲ್ಲದ್ದು.
ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ನಾವುಗಳು ಪರಿಸರ, ಕಾವ್ಯ, ನಾಟಕ ಅಂತೆಲ್ಲಾ ಓಡಾಡುತ್ತಿದ್ದೆವು. ಆಗಿನ್ನೂ ವಿಟಿಯು ಇರಲಿಲ್ಲ. ಟೆಕ್ಸ್ಟ್ ಬುಕ್ ಇರಲೇ ಇಲ್ಲ. ಕೇವಲ ಮೈಸೂರು ವಿಶ್ವವಿದ್ಯಾನಿಲಯದ ನಾಲ್ಕು ಕಾಲೇಜುಗಳಿಗೆ ಪುಸ್ತಕ ಬರೆಯುವುದು, ಮುದ್ರಿಸುವುದು ಲಾಭದಾಯಕವಾಗಿರಲೇ ಇಲ್ಲ. ಮೂಲ ಲೇಖಕರ ಹಲವಾರು ಪುಸ್ತಕಗಳನ್ನು ಆಕರಗ್ರಂಥವಾಗಿ ಓದಬೇಕಿತ್ತು. ಇಂತಹ ಸಂದರ್ಭದಲ್ಲಿ ಕಾವಾಗೆ ಒಮ್ಮೆ ಪರಿಸರ ಬಳಗದ ಗೆಳೆಯರ ಜೊತೆ ಭೇಟಿ ಕೊಟ್ಟಾಗ ಅಲ್ಲಿನ ಕಲಾವಿದರೊಂದು ಶಿಲ್ಪ ಮಾಡುತ್ತಿದ್ದರು. ಅವರು ಬಳಸುತ್ತಿದ್ದ ತಂತ್ರಜ್ಞಾನಕ್ಕೂ ಇಂಜಿನಿಯರಿಂಗ್ ತಂತ್ರಜ್ಞಾನಕ್ಕೂ ಅಂತಹ ವಿಶೇಷ ವ್ಯತ್ಯಾಸವೇನಿರಲಿಲ್ಲ. ಅದನ್ನು ನೋಡುತ್ತಾ ಅವರೊಡನೆ ಮಾತಿಗಿಳಿದೆ. ನೆನಪಿನಲ್ಲಿರುವಂತೆ ಅದನ್ನು ಇಲ್ಲಿ ಬರೆದಿದ್ದೇನೆ.
ನಾನು: ಸಾರ್ ನೀವು ಉಪಯೋಗಿಸುತ್ತಿರುವ ಟೆಕ್ನಾಲಜಿ ನಮ್ಮ ಇಂಜಿನಿಯರಿಂಗ್ ಟೆಕ್ನಾಲಜಿ ಯಂತೇ ಇದೆ. ಹಾಗಿದ್ದರೆ ಕಲೆಗೂ ಇಂಜಿನಿಯರಿಂಗಿಗೂ ಏನು ವ್ಯತ್ಯಾಸವಿರಬಹುದು?
ಅವರು: ನನಗೇನೋ ಗೊತ್ತಿಲ್ಲ. ಆದರೆ ಈ ಟೆಕ್ನಾಲಜಿ ಬಳಸಲು ನಾನು ಇಂಜಿನಿಯರಿಂಗ್ ಪುಸ್ತಕ ಓದಿದ್ದು ನಿಜ. ಕಲೆ ಬಹುಶ ಮನಸ್ಸಿಗೆ ಸಂತಸ ನೀಡುತ್ತದೆ. ಇಂಜಿನಿಯರಿಂಗ್ ವಾಸ್ತವ ಲೋಕದ ಉಪಯುಕ್ತತೆಯನ್ನು ಕಟ್ಟಿಕೊಡುತ್ತದೆ.
ನಾನು: ಈ ಶಿಲ್ಪವನ್ನು ಮಾಡುವ ಮೊದಲು ಹೀಗೇ ಮಾಡಬೇಕೆಂಬ ನೀಲಿ ನಕಾಶೆ ಇಟ್ಟುಕೊಂಡಿದ್ದಿರಾ..?
ಅವರು: ಇಲ್ಲ ಮಾಡುತ್ತಾ ಮಾಡುತ್ತಾ ಬದಲಾಗುತ್ತಾ ಈಗಿನ ಕೃತಿ ಆಗಿದೆ. ಬಹುಶ ಇಂಜಿನಿಯರಿಂಗ್ ನಲ್ಲಿ ಇಂತಹುದೇ ವಸ್ತು ಬೇಕೆಂದು ಪ್ರಯತ್ನಿಸುತ್ತೀರಿ. ನಾವು ಎಲ್ಲವನ್ನು ಉಪಯೋಗಿಸುತ್ತಾ ಯಾವುದೋ ಔಟ್ ಪುಟ್ ತರುತ್ತೇವೆ.

ಇನ್ನೂ ಒಂದು ಮಾತು ಹೇಳಬೇಕೆನ್ನಿಸುತ್ತದೆ. ಎಲ್ಲಾ ಓದು-ಅಧ್ಯಯನ ಮತ್ತು ಚಿಂತನೆಗಳ ಮೂಲ ಉದ್ದೇಶ ಒಂದೇ.. ಅದು ಸತ್ಯದ ಶೋಧ. ಆ ಸತ್ಯವನ್ನು ಹಲವಾರು ರೀತಿಯಲ್ಲಿ ಹುಡುಕಬಹುದು. ಇಂಜಿನಿಯರುಗಳು, ಗಣಿತಜ್ಞರು ಮತ್ತು ಕಲಾವಿದರ ಜೀವನ ಚರಿತ್ರೆಗಳಲ್ಲಿ ಇಂತಹ ಸಾಕಷ್ಟು ಉದಾಹರಣೆಗಳಿವೆ.
ಏನೂ ಓದದೆ ನಿಮ್ಮ ಮನಸ್ಸು ತರ್ಕಬದ್ದವಾಗಿ ಕೆಲಸ ಮಾಡುವುದಾದರೆ ನೀವೂ ಇಂಜಿನಿಯರ್ ಆಗಬಹುದು.

No comments:

Post a Comment