Pages

Friday, October 26, 2012

ಕಣ್ಣಿಗೆ ಬಂದವಳು ಕನಸಿಗೆ ಬಾರದಿರುವೆಯಾ


ಜಯಂತ್ ಕಾಯ್ಕಿಣಿ ಬರೆದ ಮೊದಲ ಗೀತೆ ಇದು.  ರಾಗ ಸಂಯೋಜನೆ ಸಿ. ಅಶ್ವಥ್, ಗಾಯನ ರಾಜಕುಮಾರ್. "ಅನುರಾಗ" ಸಂಪುಟ. ಮನವನ್ನು ಆರ್ದ್ರಗೊಳಿಸುವ ಗೀತೆ.

ಕಣ್ಣಿಗೆ ಬಂದವಳು ಕನಸಿಗೆ ಬಾರದಿರುವೆಯಾ
ಮಾತಿಗೆ ಬಂದವಳು ಮನಸಿಗೆ ಬಾರದಿರುವೆಯಾ

ಗಾಯವೆಲ್ಲ ಮಾಯುವಂಥ ರಾತ್ರಿಯೊಂದು ಕನಸೇ
ದಳದಳಗಳ ನೋವಿನಲ್ಲಿ ಅರಳಿನಿಂತ ಮನಸೇ
ತಂಗಾಳಿಯ ಕರೆಯೇ, ಹೊಸಲೋಕವ ತೆರೆಯೇ
ಕೊನೆಗೂ ಬಂದವಳು ಬೆಳಗು ತಾರದಿರುವೆಯಾ

ಬಾಯಾರಿದ ಬಿಸಿಲಿನಲ್ಲಿ  ಹೊಸ ಹಗಲ ತೇರು
ಎಳೆಯದೇ ದಾರಿಯಲ್ಲಿ ಬಿಟ್ಟು ಹೋದವರಾರು?
ಹುಚ್ಚು ನೂರು ಸಂತೆ ನೆಚ್ಚಿ ಕಾದು ನಿಂತೆ
ಸಖ ಎಂದವಳು ಮುಖ ತೋರದಿರುವೆಯಾ?

Wednesday, October 24, 2012

ನನ್ನೆದೆಯಲ್ಲೀಗ ಮೊಗ್ಗು ಚಿಗುರಿಲ್ಲ

ನನ್ನೆದೆಯಲ್ಲಿ
ಮೊಗ್ಗೊಂದು ಅರಳಿದಾಗಲೇ
ಹಿಚುಕಿ ಹಾಕಿ
ಬಿಡಬೇಕೆಂದುಕೊಂಡೆ,

ನೀರಿಲ್ಲದೆ ಅದೇ
ಒಣಗಿಹೋಗುವುದೆಂದೇ
ಸುಮ್ಮನಾದೆ

ಮೊಗ್ಗರಳಿ  ಹೂವಾಗಿ
ನಗುತಿರಲು ಹಿತವಾಗಿ
ಮನ ಸೋತಿತು ..

ಅಂದದಲಿ ಚಂದದಲಿ
ಸೌಗಂಧ ಚೆಲ್ಲಿರಲು
ನನದೆಂದೇ ಬಗೆದೆ ನಾನು

ಆದರೆ

ಒಂದೇ ರಾತ್ರಿಯಲಿ
ಇದ್ದಕ್ಕಿದ್ದಂತೆ ಸುರಿದ
ಮಳೆಗಾಳಿಯಾರ್ಭಟದಿ
ಮುರುಟಿ ನೆಲಕಚ್ಚಿತ್ತು.

ನನ್ನೆದೆಯಲ್ಲೀಗ ಮೊಗ್ಗು ಚಿಗುರಿಲ್ಲ
ಹೂವು ಅರಳಿಲ್ಲ.

ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್

ಇದು ಪಂಪನ ಮಾತು.

ತ್ಯಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೪-೨೯||

Monday, October 22, 2012

ಸೇವಂತಿಯೆ ಸೇವಂತಿಯೇ

ಸೇವಂತಿಯೆ ಸೇವಂತಿಯೇ
ನನ್ನಾಸೆ ಅಲೆಯಲ್ಲಿ ಘಮ್ಮಂತೀಯೆ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕಿಂತ ಸೌಗಂಧ ನೀನು
ಜನ್ಮಜನ್ಮದ ಪ್ರೀತಿಗೆ
ನನ್ನ ಮೆಚ್ಚಿನ ಹಾಡಿದು

ಮಲ್ಲಿಗೆ ಮಂಟಪವ
ನನ್ನ ಮನಸಲ್ಲಿ ಕಟ್ಟಿಸುವೆ
ಅಂದದ ಸಿರಿದೇವಿಯ
ಅಲ್ಲಿ ಬಚ್ಚಿಟ್ಟು ಪೂಜಿಸುವೆ
ಭುವಿಯ ಹಸಿರಿನಂತೆ ಈ
ಪಾದದಡಿಗೆ ಇರುವೆ
ಮಳೆಯ ಮೋಡದಂತೆ ಆ
ಸುಡುವ ಬಿಸಿಲ ತಡೆವೆ


ಬಾಳ ತುಂಬ ನಾಬರುವೆ
ಹಸ್ತಕ್ಕೆ ರೇಖೆಯ ಹಾಗಿರುವೆ.
ಚಂದಚಂದದ ಸೇವಂತಿಯ
ಅಂದಕ್ಕೆ ಕಾವಲು ನಾನಿರುವೆ

ಕಾಲ್ಗೆಜ್ಜೆ ನಾದದಲಿ
ನನ್ನ ಗುಂಡಿಗೆ ಗೂಡು ಇದೆ
ಕೈಬಳೆ ಸದ್ದಿನಲಿ
ನನ್ನ ಆಸೆಯ ಬುತ್ತಿ ಇದೆ
ಸಿಂಧೂರಬಿಂದಿಗೆಯಲ್ಲಿ
ನಾ ಜೀವವ ತುಂಬಿದೆಯಲ್ಲಿ
ನೀನಿಟ್ಟ ಕಾಡಿಗೆಯಲ್ಲಿ ಓಓ
ನಾನೆಟ್ಟೆ ಪ್ರೀತಿಯ ಬಳ್ಳಿ

ನನ್ನ ಬಣ್ಣದ ಮನಸಿನಲಿ
ನಿನ್ನ ಚಿತ್ರವ ಕೆತ್ತಿಸುವೆ
ಯಾರೂ ಇಲ್ಲದ ಆ ಊರಲಿ
ನಾನೇ ನಿನ್ನವನಾಗಿರುವೆ.

Friday, October 05, 2012

ಸುನೀತ ೧೩೦

ನನ್ನವಳ ಕಂಗಳಲಿ
ಅರುಣಕಾಂತಿಯದಿಲ್ಲ
ಹವಳದ ಕೆಂಪು
ಅವಳ ತುಟಿಗಳಲಿಲ್ಲ

ಹಿಮವು ಬಿಳುಪೆಂದರೆ
ಅವಳೆದೆಯು ಬಿಳಿಯಲ್ಲ.
ಕರಿಮುಗಿಲ ಕೇಶವದು
ಸುವರ್ಣದೆಳೆಯಂತಿಲ್ಲ

ಅವಳ ಕೆನ್ನೆಗಳಲಿ ಕಂಡಿಲ್ಲ
ಕೆಂಗುಲಾಬಿಯ ಕೆಂಪು
ಅವಳುಸಿರ ಕಂಪಿನಲಿಲ್ಲ
ಸಿರಿಗಂಧದ ಪೆಂಪು

ಅವಳುಲಿವ ಸದ್ದಿನಲಿ
ರಾಗದಿಂಚರವಿಲ್ಲ
ಅವಳಿಡುವ ನಡೆಯಲ್ಲಿ
ಅಪ್ಸರೆಯ ಬಳುಕಿಲ್ಲ

ಅಪರೂಪದವಳಿವಳು,  ನನ್ನವಳು 
ನನ್ನಾಣೆ, ಉಪಮೆಗೆ ದಕ್ಕದವಳು.


ವಿಲಿಯಂ ಶೇಕ್ಸ್‍ಪಿಯರ್‌ನ ಸುನೀತ ಸಂಖ್ಯೆ ೧೩೦.  ನನ್ನಳತೆಯೊಳಗೆ ಸಿಕ್ಕಂತೆ.


ಮೂಲ ಕೆಳಗಿದೆ.




SONNET 130

My mistress' eyes are nothing like the sun;
Coral is far more red than her lips' red;
If snow be white, why then her breasts are dun;
If hairs be wires, black wires grow on her head.
I have seen roses damask'd, red and white,
But no such roses see I in her cheeks;
And in some perfumes is there more delight
Than in the breath that from my mistress reeks.
I love to hear her speak, yet well I know
That music hath a far more pleasing sound;
I grant I never saw a goddess go;
My mistress, when she walks, treads on the ground:
And yet, by heaven, I think my love as rare
As any she belied with false compare.



Friday, September 28, 2012

ಪ್ರೇಮಿಸುವುದೇಕೆ ನೀ ಅವಳ

ಪ್ರೇಮಿಸುವುದೇಕೆ ನೀ ಅವಳ
ಎಂದು ಕೇಳುವವರಿದ್ದಾರೆ ಬಹಳ.

ಅವಳ ಸೊಂಟದ ಕುಲುಕು
ತುಂಬು ತೊಡೆಗಳ ಬಿಗಿಪು
ಹವಳ ತುಟಿಗಳ ಥಳುಕು
ದುಂಬಿ ಕಂಗಳ ಬೆಳಕು
ಚರ್ಮದೊಗಲಿನ ನುಣುಪು
ಕೇಶರಾಶಿಯ ಹೊಳಪು
ನಡಿಗೆಯಲ್ಲಿನ ಬಳುಕು
ಮಾತಿನೊಳಗಿನ ಮಿದುಪು
ಪ್ರೇಮಧಾರೆಯ ಹುರುಪು

ನನ್ನೆದೆಯಲಿ ಅನುರಾಗ ಮಿಡಿಸುವುದು
ಅನುದಿನವು ಪ್ರೀತಿಯನು ಸುರಿಸುವುದು

ಎಂದಷ್ಟೇ ಹೇಳುವೆನು ನಾನು.


ಜಸ್ಟಿನ್ ಹಚಿನ್ಸ್ ರ ಕವನದ ಭಾವಾನುವಾದ.   ಮೂಲ ಕೆಳಗಿನಂತಿದೆ



If asked why I love her I would say,
It’s the sway in her hips,
the thickness in her thighs.
It’s the lust in her lips,
the love in her eyes.
It’s the softness of her skin,
the silk in her hair.
It’s the twist in her walk;
it’s the sweetness in her talk.
It’s the way she loves me,
that makes me love her each day.
That is what I would say.






Tuesday, September 25, 2012

ತಲ್ಲಣಿಸದಿರು ಕಂಡ್ಯ ತಾಳು ಮನವೇ

ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೇ ಸಂಶಯವಿಲ್ಲ  ||ಪ||

ಬೆಟ್ಟದ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು
ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ    ||೧||

ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿತ್ತವರು ಯಾರೊ
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ          ||೨||

ಕಲ್ಲೊಳಗೆ ಹುಟ್ಟಿರುವ ಕ್ರಿಮಿಕೀಟಗಳಿಗೆಲ್ಲ
ಅಲ್ಲಲ್ಲೆ ಆಹಾರವನು ಇತ್ತವರು ಯಾರೊ
ಪುಲ್ಲಲೋಚನ ಕಾಗಿನೆಲೆಯಾದಿ ಕೇಶವನು
ಎಲ್ಲರನು ಸಲಹುವನು ಇದಕೇ ಸಂಶಯಬೇಡ     ||೩||

Friday, September 14, 2012

ಚೆಂಗುಲಾಬಿ ಚೆಲುವು ನನ್ನೊಲವು

ವರುಷ ಋತುವಿನಲರಳಿ ನಿಂತ
ಹೊಸ ಚೆಂಗುಲಾಬಿ ಚೆಲುವು ನನ್ನೊಲವು.
ಹರುಷ ನೀಡುವ ಗೀತದೊಡಲಿನ
ಮಧುರ ಇನಿದನಿಯ ಇಂಚರವು ನನ್ನೊಲವು

ಶ್ವೇತ ಸುಂದರಿಯಿವಳು, ಸಣ್ಣಮೈಯವಳು,
ತನ್ನೊಲವಬಲೆಯಲ್ಲಿ ನನ್ನ ಹಿಡಿದಿಹಳು.
ಬತ್ತಿಹೋದರು ಸಪ್ತಸಾಗರ,
ಬತ್ತದಂತಿಹುದು ನನ್ನೆದೆಯ ಒಲವು

ಬತ್ತಿಹೋಗಲಿ ಸಪ್ತ ಸಾಗರ
ಕರಗಿಹೋಗಲಿ ಮೇರು ಗಿರಿಗಳೆಲ್ಲ
ಜೀವಕಣಗಳು ಹರಿಯುತಿರಲು
ನಿನ್ನೊಲವಿನದೆ ಬಲವು ಬದುಕಿಗೆಲ್ಲ.

ವಿದಾಯಗಳು ಚೆಲುವೆ,
ನೀನೊಬ್ಬಳೇ ಗೆಳತಿ ನನಗೆ
ಕಾಲದ ಪಯಣದಲಿ ಕ್ಷಣಿಕವೀ ವಿರಹ
ಬೇಗ ಬರುವೆ ನಾ ನಿನ್ನೆಡೆಗೆ

ಹತ್ತು ಸಾಸಿರ ಮೈಲು
ಮತ್ತೆ ಸಾವಿರ ತಡೆಯು
ದಾಟಿ ಬರುವೆನು ನಿನ್ನ ನೆನಪಿನೊಳಗೆ
ನಿನ್ನೊಲವ ತಂಪು ನೆರಳಿನಡಿಗೆ.

ರಾಬರ್ಟ್ ಬರ್ನ್ಸ್ ಕವಿಯ "  My love is like red, red rose"  ಕವನದ ಭಾವಾನುವಾದ

Thursday, September 13, 2012

ನೀನ್ ನನ್ ಹಟ್ಟೀಗ್ ಬೆಳಕಂಗಿದ್ದೆ ನಂಜು

ಜಿ.ಪಿ.  ರಾಜರತ್ನಂ ಅವರ  ರತ್ನನ ಪದಗಳ ಒಂದು ಸುಂದರ ಪದ್ಯ.

ನೀನ್ ನನ್ ಹಟ್ಟೀಗ್ ಬೆಳಕಂಗಿದ್ದೆ ನಂಜು
ಮಾಗೀಲ್ ಹುಲ್ಲ್ ಮೇಲ್ ಮಲಗಿದ್ದಂಗೆ ಮಂಜು

ಮಾಗೀ ಕುಗ್ತು, ಬೇಸಿಗೆ ನುಗ್ತು,
ಇದ್ಕಿದ್ದಂಗೆ ಮಾಯವಾಗೊಯ್ತು ಮಂಜು
ನಂಗೂ ನಿಂಗೂ ಎಂಗ್ ಅಗಲೋಯ್ತ್ ನಂಜು

ಶ್ರೀರಂಗಪಟ್ಟಣ್ ದ್ ತಾವ್ ಕಾವೇರಿ ಒಡ್ದಿ
ಎರಡ್ ಹೋಳಾಗಿ ಪಟ್ಣದ ಸುತ್ತಾ ನಡ್ದಿ

ಸಂಗಂದಲ್ಲಿ ಸೇರ್ಕೊಂದು ಮಳ್ಳಿ
ಮುಂದಕ್ಕೋದ್ದು ನಮ್ಗೆ ಙ್ನಾನದ್ ಪಂಜು
ಈಗಗಲಿದ್ರೇನ್ ಮುಂದ್ ನಾವ್ ಸೇರ್ತೀವ್ ನಂಜು.

ಹಗಲೋಡ್ಗ್ತೆ ರಾತ್ರೀ ಬಂತಂತಂಜಿ
ರಾತ್ರಿ ಮುಗ್ದೋದ್ರೆ ಹಗಲೇ ಅಲ್ವ ನಂಜಿ
ರಾತ್ರಿ ಬಿತ್ತು ಹಗಲೇ ಬತ್ತು
ಹೋಗೋದ್ ಮಳ್ಳಿ ಬರೋಕಲ್ವಾ ನಂಜಿ
ಆ ನೆಂಬ್ಕೆ ನನ್ ಜೀವ ಉಳ್ಸೋ ಗಂಜಿ