Pages

Monday, January 12, 2015

ತೆರೆದುಕೊಳ್ಳುವೆ ನಾ ನಿನ್ನ ಕನಸಿನಲಿ



ಮಧುರ ಮಾರುತ ಮಂದಾನಿಲವಾಗಿ ಸುಳಿದಿರಲು
ಚಂದಿರನ ಸುತ್ತ ಬೆಳ್ಳಿ ತಾರೆಗಳು ಹೊಳೆದಿರಲು
ನಿದಿರೆಯಮೃತದ ಸವಿಯು ಮನದುಂಬಿರಲು
ತೆರೆದುಕೊಳ್ಳುವೆ  ನಾ  ನಿನ್ನ ಕನಸಿನಲಿ !

ನಿನ್ನ ಕನಸಿನಲೇ  ಅರಳಿರುವೆ
ನಿನ್ನ ಮನೆ ಅಂಗಳದಲಿ ನಿಂದಿರುವೆ
ನನ್ನ ಕೈ ಹಿಡಿದು ಕರೆತಂದ ದೇವಿಯಾರು?
ಚನ್ನ ಚೆಲುವೆಯ ಸಮ್ಮೋಹನದ ತೇರು

ಸುಳಿಗಾಳಿ ಬೀಸುವುದು ಮೆಲ್ಲ ನಿಲಬಹುದು.
ನದಿಯ ಜುಳುಜುಳುನಾದ ಮೌನವಾಗಲುಬಹುದು.
ಸಂಪಿಗೆಯ ಘಮವು ಮಾಯವಾಗಲುಬಹುದು.
ಕನಸಳಿದು ಸವಿ ನೆನಪುಳಿದು ಮಾಸಲು ಬಹುದು

ಮೇಲೆತ್ತು ನನ್ನೀ ಪತನದಿಂದ  
ಮುತ್ತಿನ ಮಳೆಯಲ್ಲಿ ಪ್ರೀತಿ ಸುರಿಸು
ಬತ್ತಿದಾ ತುಟಿ ಮೇಲೆ ಜೇನ ಹರಿಸು
ಮಂಕಾದ ಕೆನ್ನೆಯಲಿ ರಂಗನಿರಿಸು
ತಪ್ಪಿದ ಎದೆ ತಾಳದಲಿ  ಹದವನಿಡಿಸು
 
ಒತ್ತರಿಸು..  ಚಿತ್ತರಿಸು  ಮತ್ತಗೊಳಿಸು
ಹೊಚ್ಚ ಹೊಸ ಜೀವನದ  ಹೂವರಳಿಸು

ಪಿ. ಬಿ. ಶೆಲ್ಲಿಯ " Indian Serenade" ಕವನದ ಭಾವಾನುವಾದ



Wednesday, January 07, 2015

ಕೆ ಎಸ ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ಸಂಕಲನದ ಬಳೆಗಾರ ಚೆನ್ನಯ್ಯ ಕವನ



ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪಣೆಯೆ ದೊರೆಯೇ
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು
ಬಾಳೆಯ ತೊಡಿಸುವುದಿಲ್ಲ ನಿಮಗೆ

ಮುಡಿದ ಮಲ್ಲಿಗೆಯರಳು ಬಾಡಿಲ್ಲ ರಾಯರೇ
ತೌರಿನಲಿ ತಾಯಿ ನಗುತಿಹರು
ಕುಡಿದ ನೀರಲುಗಿಲ್ಲ ಕೊರಗದಿರಿ ರಾಯರೇ
ಅಮ್ಮನಿಗೆ ಬಳೆಯಾ ತೊಡಿಸಿದರು

ಅಂದು ಮಂಗಳವಾರ ನವಿಲೂರ ಕೇರಿಯಲಿ
ಓಲಗದ  ಸದ್ದು ತುಂಬಿತ್ತು.
ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ
ಅಂಗಳದ ತುಂಬಾ ಜನವಿತ್ತು

ಹಬ್ಬದೂಟವನುಂಡು  ಹಸೆಗೆ ಬಂದರು ತಾಯಿ
ಕೊರಳಿನಲ್ಲಿ ಹೊಳೆದಿತ್ತು ಪದಕ
ಒಬ್ಬರೇ ಹಸೆಗೆ ಬಂದರು ತಾಯಿ ಬಿಂಕದಲಿ
ಕಣ್ತುಂಬಾ ನೋಡಿದೆನು ಮುದುಕ

ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ
ಸೆರಗಿನಲಿ ಕಣ್ಣೀರನೊರೆಸಿ;
ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ
ದೀಪದಲಿ ಬಿಡುಗಣ್ಣ ನಿಲಿಸಿ

ಬೇಕಾದ ಹಣ್ಣಿಹುದು ಹೂವಿಹುದು ತೌರಿನಲಿ
ಹೊಸ ಸೀರೆ ರತ್ನದಾಭರಣ;
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ
ನಿಮಗಿಲ್ಲ ಒಂದು ಹನಿ ಕರುಣ

ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರನೆಳೆದು
ಕುಡಿಯಬಾರದು ನನ್ನ ದೊರೆಯೇ
ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನು
ಒಣಗಬಾರದು ಒಡಲ ಚಿಲುಮೆ

ಮುನಿಸು ಮಾವನ ಮೇಲೆ ಮಗಳೇನ ಮಾಡಿದಳು
ನಿಮಗೇತಕೀ ಕಲ್ಲು ಮನಸು
ಹೋಗಿ ಬನ್ನಿರಿ ಒಮ್ಮೆ ಕೈ ಮುಗಿದು ಬೇಡುವೆನು
ಅಮ್ಮನಿಗೆ ನಿಮ್ಮದೇ ಕನಸು