Pages

Thursday, March 30, 2017

ಆಕಾಶ ಭೂಮಿಗಳ ಒಂದು ಮಾಡಿ ನಿಂತ....

ಜಗದ ಶಕ್ತಿಗಳೆಲ್ಲ ಒಂದಾಗಿ ನಿಂತಿತೋ
ಜಗವೆಲ್ಲಾ ಆಕ್ರಮಿಸಿ ಈ ಆಕಾರ ಬಂದಿತೋ
ಕರಿಮುಗಿಲೆ ಕೇಶವೊ
ಸೂರ್ಯ-ಚಂದ್ರರೇ ನಯನಗಳೊ
ಸುಳಿವ ಮಿಂಚುಗಳೆ ನಗೆಯೊ
ಸಿಡಿಲುಗುಡುಗಳೆಲ್ಲ ನೀನಾಡುವ ನುಡಿಯೊ
ಮೇರುಪರ್ವತವೇ ನೀ ಹಿಡಿದ ಗದೆಯೊ
ಪಾದಕಮಲಗಳೆರಡು ಪಾತಾಳದಲ್ಲಿದೆಯೊ
ಅಂಜನಾತನಯ ವೀರಾಂಜನೇಯ ಮಾರುತಿರಾಯ
ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ಕಣ್ಣುಗಳ ಕೋರೈಸುವ ಕಾಂತಿ ಚೆಲ್ಲುವ, ಈ ಭವ್ಯ ರೂಪವೇನು
ನೋಡುವ ಬಗೆ ಹೇಗೆ ನಿನ್ನ ಬೇಡುವ ಬಗೆ ನಿನ್ನ
ಪಾದ ಹುಡುಕಲಾರೆ ಹನುಮ ಮೊಗವ ಕಾಣಲಾರೆ;
ಕೋಟಿ ಕಣ್ಣು ಸಾಲದಯ್ಯ ನಿನ್ನ ರೂಪ ತುಂಬಿಕೊಳಲು
ಹೇಗೆ ನಿನ್ನ ಕಾಣಲಯ್ಯ ಹೀಗೆ ನಿಲ್ಲಲು;
ನಿಂತ ರೀತಿಯೋ ತನುವ ಕಾಂತಿಯೋ
ಉರಿವ ಸೂರ್ಯ ಹಣತೆ ದೀಪದಂತೆ ಕಾಣುತಿರಲು ಹೀಗೆ
ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ನಿನ್ನ ಉಸಿರ ಬಿಸಿಗೆ ಹೆದರಿ ನದಿಗಳಾವಿಯಾಗುತಿರಲು
ದಿವ್ಯ ರೂಪ ಕಂಡ ಗಿರಿಗಳೆಲ್ಲ ನಡುಗುತಿರಲು;
ನಿನ್ನ ಭಾರ ತಾಳೆನೆಂದು ಭೂಮಿ ಕುಸಿದು ಹೋಗುತಿರಲು
ಎಲ್ಲಿ ನಾನು ನಿಲ್ಲಲಯ್ಯ ನಿನ್ನ ನೋಡಲು;
ರೋಮ ರೋಮದಿ ರಾಮನಾಮವು
ರೋಮ ರೋಮದಿ ರಾಮನಾಮವು;
ಶಂಖನಾದ ತಾಳವಾದ್ಯ
ಶಂಖನಾದ ತಾಳವಾದ್ಯ ದಶದಿಕ್ಕಲು ಮೊಳಗುತಿರಲು
ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ಕಣ್ಣುಗಳೆಲ್ಲ ಕೋರೈಸುವ ಕಾಂತಿ ಚೆಲ್ಲುವ ಈ ಭವ್ಯ ರೂಪವೇನು
ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ಕಣ್ಣುಗಳ ಕೋರೈಸುವ ಕಾಂತಿ ಚೆಲ್ಲುವ, ಈ ಭವ್ಯ ರೂಪವೇನು
ಸಾಹಿತ್ಯ: ಚಿ. ಉದಯಶಂಕರ