Pages

Wednesday, February 24, 2010

ಜಾದೂ ಪೆಟ್ಟಿಗೆಯ ನಿರೀಕ್ಷೆಯಲ್ಲಿ

ಜೀವದ ಮೇಲಿನ ಆಸೆ ಬಹು ದೊಡ್ಡದು. ಕೆಲಸಕ್ಕೆ ರಾಜೀನಾಮೆ ಇತ್ತು ಕುಟುಂಬದದೊಂದಿಗೆ ಕಾಲ ಕಳೆಯುವ ಬಯಕೆಯ ಯುವತಿ ಅದಕ್ಕಾಗಿ ಬದುಕುವ ಹಂಬಲ ಹೊತ್ತು ಕಿಟಕಿಗೆ ಸೀರೆ ಕಟ್ಟಿ ಕೆಳಗಿದಳು. ಆದರೆ ಕಾಲನ ಲೆಕ್ಕಾಚಾರವೇ ಬೇರೆ. ಅವಳನ್ನು ಸೀರೆಯಿಂದ ಬಿಡಿಸಿ ನೇರ ತನ್ನ ತೆಕ್ಕೆಗೆ ತೆಗೆದುಕೊಂಡ. ಬದುಕಬೇಕೆಂಬದ ಹಂಬಲದ ಹಲವರ ಸಾವು ಕಾರ್ಲ್ ಟನ್ ಕಟ್ಟಡದ ದುರಂತ. ಆಧುನಿಕತೆಯ ಹೆಸರಿನ ಆಮಿಷಗಳೂ , ಅವುಗಳ ಹಿಂದೆ ಅರಿಯದೆ ಕಾಲಿಡುವ ಅನಿಷ್ಟಗಳೂ ಈದುರಂತದ ಪಾಠ. ದುರಂತದ ಘಟನಾಸ್ಥಳಕ್ಕೆ ಕೇವಲ ಮೂರು ಅಗ್ನಿಶಾಮಕ ವಾಹನಗಳು ಸಮಯದಲ್ಲಿ ತಲುಪಲು ಸಾಧ್ಯವಾಯಿತು. ಇದು ಬೆಂಗಳೂರಿನ ಸಂಚಾರ ದಟ್ಟಣೆಯ ದುರಂತ. ಸಿನಿಮಾಗಳ ಪ್ರಭಾವದಿಂದಲೋ, ಅಥವಾ ಇನ್ನ್ಯಾವುದೋ ಭಂಡ ಧೈರ್ಯದಿಂದಲೋ ಮೇಲಿಂದ ಹಾರುವ ಸಾಹಸಕ್ಕಿಳಿದವರು ಜೀವ ತೆತ್ತದು ಮತ್ತೊಂದು ದುರಂತ. ಇದು ಬೆಂಗಳೂರಿನಲ್ಲಿ ಕೇವಲ ಹಣದಾಸೆಯಿಂದ ಸುರಕ್ಷತಾ ನಿಯಮಗಳನ್ನು ಮೀರಿ ಕಟ್ಟಡ ಕಟ್ಟುವವರ ಕಲ್ಲು ಮನಸ್ಸಿನ ನಿರ್ದರ್ಶನ. ಆಧುನಿಕತೆ ತನ್ನ ಅನುಕೂಲಗಳನ್ನು ತೋರಿಸುತ್ತಲೇ ತನ್ನ ಅನಿಷ್ಟಗಳ ತೆಕ್ಕೆಯಲ್ಲಿ ಎಲ್ಲರನ್ನೂ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುತ್ತದೆ ಎನ್ನುವುದಕ್ಕೊಂದು ಜೀವಂತ ನಿದರ್ಶನ.

ಇಂತಹ ಆಧುನಿಕತೆಗೆ ಭಾರತ ತೆರೆದುಕೊಳ್ಳಲಾರಂಭಿಸಿದ್ದು ತೊಂಬತ್ತರ ದಶಕದ ಪ್ರಾರಂಭದಲ್ಲಿ. ಅಂದು ನಾವು ವಿದ್ಯಾರ್ಥಿಗಳಾಗಿದ್ದಾಗ, ಡಂಕೆಲ್ ಒಪ್ಪಂದವನ್ನು ಉಗ್ರವಾಗಿ ವಿರೋಧಿಸಿದ ಪಕ್ಷಗಳು ಇಂದು ಬಂಡವಾಳಶಾಹಿಗಳ ಕೈಯಲ್ಲಿ ಸೂತ್ರದ ಗೊಂಬೆಗಳಾಗಿರುವುದು ಇತಿಹಾಸದ ಒಂದು ಐರನಿ. ಅಂದು ಈ ಒಪ್ಪಂದ ಜಾರಿಗೆ ಬರಲೆಂದು ಹೃದಯಪೂರ್ವಕವಾಗಿ ಹೋರಾಡಿದ ಹಲವರು ಬಂಡವಾಳ ಶಾಹಿಯ ವಿರುದ್ದ ಹೋರಾಡುವ ಮನಸ್ಸು ಮಾಡುತ್ತಿರುವುದೂ ಇಂತಹ ಐರನಿಯಿಂದಲೇ. ಬದಲಾವಣೆಯೊಂದೇ ಜಗತ್ತಿನಲ್ಲಿ ಶಾಶ್ವತ ಎಂಬ ಮಾತು ಎಷ್ಟು ಸತ್ಯ. ಮನಮೋಹನ ಸಿಂಗ್ - ನರಸಿಂಹರಾವ್ ಜೋಡಿಯಿಂದ ಆರಂಭವಾದ ಈ ಬದಲಾವಣೆಯ ಹಿಂದಿನ ಬೀಜ ಶಕ್ತಿ ರಾಜೀವ ಗಾಂಧಿಯವರ ಕನಸುಗಳು. ರಾಜೀವರ ಕಾಲದಲ್ಲಿ ಭಾರತ ಅಣುಶಕ್ತಿ, ತಂತಜ್ಞಾನ ವಿದ್ಯ್ತುತ್ ವಿಜ್ಞಾನ ಕ್ಷೇತ್ರಗಳಲ್ಲಿ ಬದಲಾವಣೆ ಕಂಡಿತು. ಅದರೊಂದಿಗೆ ಬಂಡವಾಳಶಾಹಿ ವ್ಯವಸ್ಥೆ ಅರ್ಥಿಕ ಬೆಳವಣಿಗೆಗೆ ಅಗತ್ಯ ಎಂಬ ಅರಿವು, ಅದು ನಿಜವೋ ಸುಳ್ಳೋ ಭಾರತೀಯರಿಗೆ ಮೂಡಿದ್ದಂತೂ ಸತ್ಯ. ಕೆಲವೇ ಹೈ- ಪ್ರೊಫೈಲ್ ಜನ ಹೇಳುತ್ತಿದ್ದ ಶೇರು ಮಾರುಕಟ್ಟೆ ಇಂದು ಮಧ್ಯಮ ವರ್ಗದ ಭಾರತೀಯರ ಮನೆ ಹೊಕ್ಕಿದೆ. ತಂತ್ರಜ್ಞಾನದ ಅರಿವು ಮತ್ತು ಅದರ ಸಾಧ್ಯತೆಗಳು ನಮ್ಮರಿವಿಗೇ ಬಾರದಂತೆ ನಮ್ಮಲ್ಲಿ ಸರ್ವವ್ಯಾಪಿಯಾಗಿದೆ. ಭಾರತದ ಕಡಲ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯುವ ಮುಂಚೆ ನಾಸಾ ಅಂತರ್ಜಾಲ ತಾಣದಲ್ಲಿ ಹವಾಮಾನ ವರದಿ ನೋಡುತ್ತಾರೆ. ಮೈಸೂರಿನ ಗಲ್ಲಿಯೊಂದರಲ್ಲಿ ವಾಸವಿರುವ ಕ್ರಿಕೆಟ್ ಬೆಟ್ಟಿ ಇಂಗ್ಲೆಂಡ್ ನಲ್ಲಿ ನಡೆಯುವ ಪಂದ್ಯದ ಹವಮಾನ ವರದಿಯನ್ನು ಅಂತರ್ಜಾಲದಲ್ಲಿ ನೋಡುತ್ತಾನೆ. ಮುಂಬೈ ಕುದುರೆ ಪಂದ್ಯಕ್ಕೆ ಕೇರಳದ ಪಾಲಕ್ಕಾಡಿನ ಜಮೀನುದಾರ ಕೊಯಮತ್ತೂರಿಗೆ ಬಂದು ಸೈಬರ್ ಕೆಫೆಯಲ್ಲಿ ಕುದುರೆಗಳ ಜಾತಕ ನೋಡುತ್ತಾನೆ. ನಾಸ್ಡಾಕ್ ನ ಶೇರು ಮಾರುಕಟ್ಟೆಯ ಬೆಳಗಿನ ಪ್ರಾರಂಭದ ಘಂಟೆಯನ್ನು ಮೈಸೂರಿನಲ್ಲಿ ನಾರಾಯಣ ಮೂರ್ತಿ ಹೊಡೆಯುತ್ತಾರೆ. ವಿಚಾರಣೆಗೆ ಮೈಸೂರಿನ ನ್ಯಾಯಾಲಯ, ನ್ಯೂಯಾರ್ಕಿನ ಪ್ರತಿವಾದಿಯನ್ನು ಟೆಲಿ ವಿಚಾರಣೆ ನಡೆಸುತ್ತದೆ. ಅಮೆರಿಕಾದ ಬೆಳಗಿನ ಕೆಲಸ ಇಲ್ಲಿನ ರಾತ್ರಿ ಪಾಳಿಯ ಕಾಲ್ ಸೆಂಟರ್ ನಲ್ಲಿ ನಡೆಯುತ್ತದೆ. ರಾತ್ರಿ ಮಾಡಬೇಕಾದ ಕೆಲಸ ಬೆಳಗಿನ ಪಾಳಿಯ ಔಟ್ ಸೋರ್ಸಿಂಗ್ ಕೇಂದ್ರದಲ್ಲಿ ನಡೆಯುತ್ತದೆ. ಪ್ರಪಂಚ ಗ್ಲೋಬಲ್-ವಿಲೇಜ್ ಆಗುತ್ತಿದೆ. ಇಂತಹ ಸಮಾಜದಲ್ಲಿ ನಮ್ಮ ಸರ್ಕಾರ ಅಭಿವೃದ್ದಿಯ ಅಧ್ಯಯನಕ್ಕಾಗಿ ಚೀನಾಕ್ಕೆ ಸಚಿವರನ್ನು ಪ್ರವಾಸ ಕಳಿಸುತ್ತದೆ. ಅದೂ ಅತಿವೃಷ್ಟಿಯಿಂದ ರಾಜ್ಯ ನರಳುತ್ತಿದ್ದಾಗ. ಬಂಡವಾಳ ಶಾಹಿ ಸರ್ಕಾರ ಕಮ್ಯುನಿಸ್ಟ್ ದೇಶವೊಂದಕ್ಕೆ ಅಭಿವೃದ್ದಿಯ ಅಧ್ಯಯನಕ್ಕೆ ಹೋಗುವುದು ಮತ್ತೊಂದು ಇತಿಹಾಸ. ಅಂದು ಸೋವಿಯತ್ ಒಕ್ಕೂಟದ ವ್ಯವಸ್ಥೆಯಿಂದ ಪ್ರೇರಿತರಾದ ನೆಹರೂರವರಂತೆ, ಇಂದು ಯಡಿಯೂರಪ್ಪನವರ ತಂಡ ಚೀನಾದಿಂದ ಪ್ರೇರಿತರಾಗುತ್ತಾರೆ. ಕರ್ನಾಟಕದ ಕಬ್ಬಿಣದ ಅದಿರನ್ನು ಮುಕ್ತವಾಗಿ ಚೀನಾಕ್ಕೆ ಮಾರುತ್ತಾರೆ. ಪರಿಸರ ಇಲಾಖೆ ,ಲೋಕಾಯುಕ್ತ ಇವರೆಲ್ಲರ ಮಾತು ಮೀರಿ, ಕರ್ನಾಟಕದಲ್ಲಿ ಇನ್ನಷ್ಟು ಜಾಗೆಗಳನ್ನು ಗಣಿಗಾರಿಕೆಗೆ ನೀಡುತ್ತಾರೆ. ಇವೆಲ್ಲಾ ಆಯಾ ಕಾಲಘಟ್ಟಗಳಲ್ಲಿ ನಡೆಯಲೇಬೇಕಾದ ಕೆಲಸಗಳೇನೋ? ಮುಂದಿನದ್ದು ಕಣ್ಣಿಗೆ ಬೀಳದಾದಾಗ ಇಂದಿನ ದಿನ ಕಳೆದರೆ ಸಾಕು ಎನ್ನುವ ಮನೋಭಾವ. ಯಥಾರಾಜಾ.. ತಥಾ ಪ್ರಜಾ.. ತಿನ್ನಲು ಅನ್ನ ನೀಡುವ ಭೂಮಿಯನ್ನು ಹಣಕಾಸಿಗೆ ಮಾರಿ, ಬಂದ ಹಣವನ್ನು ಮೂರೇ ತಿಂಗಳಲ್ಲಿ ಉಡಾಯಿಸಿ ಮತ್ತೆ ಕೂಲಿ ಕೆಲಸ ಹುಡುಕುತ್ತಾ, ಸಿಗದಿದ್ದಾಗ ಅಪರಾಧಗಳಿಗಿಳಿಯುವ ಜನಕ್ಕೆ ದಾರಿ ತೋರುವ ನಾಯಕರಿವರು. ನೈಸ್ ಭೂಮಿಗೆ ಹೋರಾಡಿದರೆ ಅಲ್ಲಿ ನಿಮ್ಮ ಜಮೀನೆಷ್ಟೆಕರೆ ಎನ್ನುತ್ತಾರೆ. ಖೇಣಿಯ ಹುಟ್ಟುಹಬ್ಬ ಅಭಿಮಾನದಿಂದ ನಡೆಯಿತೋ, ಹಣದ ಹೊಳೆ ಹೇಗೆ ಹರಿಯಿತೋ ಎನ್ನುವುದನ್ನು ಹುಡುಕುವವರೆಷ್ಟು ಮಂದಿ.

ಇದನ್ನೆಲ್ಲಾ ಹೇಳುವುದಕ್ಕೆ ಹೊರಟಿದ್ದು, ಈ ವಾರದ ವಿಶೇಷವೊಂದು ಇರುವುದರಿಂದ. ಇದು ಫೆಬ್ರುವರಿ ತಿಂಗಳ ಕಡೆಯ ವಾರ. ಈ ವಾರದ ಶನಿವಾರದಂದು ಸಂಸತ್ತಿನಲ್ಲೊಂದು ಮಾಯಾಪೆಟ್ಟಿಗೆ ಬಿಚ್ಚಿಕೊಳ್ಳುತ್ತದೆ. ಅದರಿಂದ ಭರವಸೆಗಳ ಹೂ ಮಳೆ ಹರಿಯುತ್ತದೆ. ತೆರಿಗೆ ಭಾರದ ಹೊರೆಯ ಮೊಳೆಯೂ ಹೊಳೆಯುತ್ತದೆ. ಅದೇ ನಮ್ಮ ಬಜೆಟ್. ಪ್ರಣವ ಮುಖರ್ಜಿ ಎಂಬ ಮಾಂತ್ರಿಕನ ಕೈಯಲ್ಲಿ ಈ ಪೆಟ್ಟಿಗೆ. ನಮ್ಮ ಬಜೆಟ್ ನ ನಿರೀಕ್ಷೆಯ ಮುಂಚೆ ನಿಮಗೊಂದು ಸಣ್ಣ ಕತೆ ಹೇಳುತ್ತೇನೆ. ಅಮೆರಿಕಾದ ಮೂಲ ನಿವಾಸಿ ರೆಡ್-ಇಂಡಿಯನ್ನ್ ಬುಡಕಟ್ಟು ಜನಾಂಗಕ್ಕೆ ಒಂದು ಅಭ್ಯಾಸವಿದೆಯಂತೆ . ಅವರಿಗೆ ಹೇಗೋ ತಮ್ಮದೇ ಆದ ವಿಧಾನಗಳ ಮೂಲಕ ಆ ವರ್ಷ ಮಳೆಯಾಗುವ ಪ್ರಮಾಣ ಎಷ್ಟೆಂಬುದು ಅವರ ನಾಯಕನ ಮೂಲಕ ತಿಳಿಯುತ್ತದಂತೆ. ಕಣಿ ಕೇಳಿಯೋ, ಆಕಾಶ ನೋಡಿಯೋ, ಅಶರೀರವಾಣಿಯೋ ಅವನಿಗೆ ಈ ರಹಸ್ಯ ಬಯಲು ಮಾಡುತ್ತದಂತೆ. ಅದು ಹೇಗೆ ತಿಳಿದುಕೊಳ್ಳಬೇಕೆಂಬುದು ಅವರ ನಾಯಕರಿಗೆ ಮಾತ್ರ ಗೊತ್ತಿರುವ ಗುಟ್ಟು. ಅದನ್ನು ವಂಶಪಾರಂಪರ್ಯವಾಗಿ ತಮ್ಮ ವಾರಸುದಾರರಿಗೆ ಸಮಯ ಬಂದಾಗ ತಿಳಿಸುವ ಪದ್ದತಿ ಅವರದ್ದು. ನಾಯಕನ ಮಾತಿನಂತೆ ಮಳೆ ಹೆಚ್ಚಾಗಿ ಬರುತ್ತದೆ ಎಂದರೆ ಸುತ್ತಲಿನ ಕಾಡುಗಳಿಂದ ಮರವನ್ನು ಹೆಚ್ಚಾಗಿ ಸಂಗ್ರಹಿಸುತ್ತಾರೆ. ಧೀರ್ಘ ಮಳೆಗಾಲಕ್ಕೆ ಹೆಚ್ಚಿನ ಮರ ಸಂಗ್ರಹಿಸಿ ಸರಿದೂಗಿಸಿಕೊಳ್ಳಬೇಕೆಂಬುದು ಅವರ ತಂತ್ರ.

ಅಂತಹ ಒಬ್ಬ ನಾಯಕನ ವಾರಸುದಾರನಾಗಬೇಕಿದ್ದ ಪುತ್ರನೊಬ್ಬ ನಗರಕ್ಕೆ ಹೋಗಿ ಹೆಚ್ಚಿನ ವಿದ್ಯೆ ಕಲಿತು ಬಂದನಂತೆ. ವಿದ್ಯೆ ಕಲಿತು ಬಂದ ಮಗನಿಗೆ ಮರಣಶಯ್ಯೆಯೊದಗಿದಾಗ ನಾಯಕ ಹತ್ತಿರ ಕರೆದು ಮಳೆಯ ಮುನ್ಸೂಚನೆ ತಿಳಿಯುವ ವಿದ್ಯೆ ತಿಳಿ, ಇನ್ನು ಮುಂದೆ ಅವನೇ ತನ್ನ ಜನಾಂಗಕ್ಕೆ ಮಾರ್ಗದರ್ಶನ ಮಾಡಬೇಕೆಂದು ಹೇಳಿ ಮರಣಿಸುತ್ತಾನೆಸಿ ನಾಯಕ. ವಿದ್ಯೆ ಕಲಿತ ಹೊಸನಾಯಕನಿಗೆ ತಂದೆ ಹೇಳಿದ ಮಾತು ಅಪಥ್ಯ. ಅವೈಜ್ಞಾನಿಕವಾಗಿ ಮಳೆ ಬೀಳುವುದನ್ನು ನಿರ್ಧರಿಸುವುದು ಸರಿಯಲ್ಲವೆಂದು ಅವನ ಭಾವನೆ. ಮಳೆ ಬೀಳುವ ಪ್ರಮಾಣ ತಿಳಿಸಲು ದೊಡ್ಡದೊಂದು ಇಲಾಖೆಯೇ ಇದೆ. ಅಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಾರೆ. ಸಹಸ್ರಸಹಸ್ರ ಸಂಖ್ಯೆಯ ಗಣಕಗಳಿವೆ. ಪುಟಗಟ್ಟಲೇ ಉದ್ದದ ಸೂತ್ರಗಳಿವೆ, ಕಿಲೋಬೈಟುಗಟ್ಟಲೇ ಪ್ರೋಗ್ರಾಮುಗಳಿವೆ. ಅವನ್ನು ಬಿಟ್ಟು ತಂದೆ ಹೇಳಿದ ವಿಧಾನ ಸರಿ ಎಂದು ಅವನ ಮನಸ್ಸೊಪ್ಪಲಿಲ್ಲ. ಏನೇ ಆಗಲಿ ವೈಜ್ಞಾನಿಕ ಮಾರ್ಗದರ್ಶನ ಮಾಡಬೇಕೆಂದು ನಿರ್ಧರಿಸಿದ ಅವನು ಹವಾಮಾನ ವರದಿಯನ್ನು ರೇಡಿಯೋನಲ್ಲಿ ಕೇಳಿದ, ಅಂತರ್ಜಾಲದಲ್ಲಿ ಓದಿದ. ಸಾಧಾರಣ ಮಳೆಯ ಸೂಚನೆಗಳಿವೆ ಎಂದು ತನ್ನ ಜನಗಳಿಗೆ ತಿಳಿಸಿದ. ಜನ ಮರ ಸಂಗ್ರಹಿಸಲು ಮೊದಲಿಟ್ಟರು, ಹವಾಮಾನ ವರದಿ ಬದಲಾಯಿತು. ಹೆಚ್ಚಿನ ಮಳೆ ಎಂಬ ವರದಿ ಕೇಳಿಸಿತು. ಅದನ್ನು ತನ್ನ ಜನಕ್ಕೆ ಹೇಳಿದೆ. ಅವರು ಇನ್ನೂ ಹೆಚ್ಚಿನ ಮರ ಕಡಿಯತೊಡಗಿದರು. ಆ ವಾರದ ವರದಿ ಇನ್ನಷ್ಟು ತೀಕ್ಷ್ಣ ವಾಗಿತ್ತು. ಧಾರಾಕಾರ ಮಳೆ ಎಂಬ ವರದಿ. ಅದನ್ನೇ ತನ್ನ ಜನಕ್ಕೆ ಹೇಳಿದ. ಅವರು ಇನ್ನೂ ಹೆಚ್ಚಿನ ಮರ ಸಂಗ್ರಹಣೆಗೆ ತೊಡಗಿದರು. ಮುಂದಿನ ವಾರದ ವರದಿ ಅತ್ಯುಗ್ರ ಮಳೆ ಬೀಳುವ ಸಾಧ್ಯತೆ ಎನ್ನುತ್ತಿತ್ತು. ಈಗ ಈ ನಾಯಕನಿಗೆ ಯೋಚನೆ ಹತ್ತಿತ್ತು. ಯಾವುದಕ್ಕೂ ಹವಮಾನ ಇಲಾಖೆಯವರು ಈ ವರದಿ ಹೇಗೆ ಸಂಗ್ರಹಿಸುತ್ತಾರೆ ತಿಳಿಯಬೇಕೆಂದು, ಹವಮಾನ ಇಲಾಖೆಯ ಕಾರ್ಯಾಲಯಕ್ಕೆ ಹೋದ. ಅಲ್ಲಿ ತನ್ನ ಭೂಪ್ರದೇಶದ ಮಳೆಯ ವರದಿಯ ಬಗ್ಗೆ ವಿಚಾರಿಸಿದ. ಈ ಬಾರಿ ಅತ್ಯುಗ್ರ ಮಳೆ ಎನ್ನುವ ವರದಿ ಅವನಿಗೆ ಮತ್ತೆ ಸಿಕ್ಕಿತು. ಅವನು ಕೇಳಿದ ರೇಡಿಯೋ /ಅಂತರ್ಜಾಲದ ವರದಿ ಈ ವರದಿಯ ಆಧಾರದ ಮೇಲೇ ಇದ್ದಿತು. ಹಾಗಿದ್ದರೆ ಈ ವರದಿ ತಯಾರಾದದ್ದು ಹೇಗೆ. ಅಲ್ಲಿನ ಮುಖ್ಯಸ್ಥರನ್ನು ಭೇಟಿ ಮಾಡಿ , ಈ ವರದಿಯ ಆಧಾರದ ಬಗ್ಗೆ ವಿಚಾರಿಸಿದೆ. ಮುಖ್ಯಸ್ಥರ ಮಾತು ಆತನನ್ನು ಬೆಚ್ಚಿ ಬೀಳಿಸಿತು.

ಅವರು ಹೇಳಿದ್ದು .. " ನಾವು ಇಷ್ಟೆಲ್ಲಾ ಸಾಧನೆ-ಸಾಧನಗಳಿದ್ದರೂ ಪ್ರಕೃತಿಯ ಮುಂದೆ ಅಲ್ಪರು. ನಮ್ಮ ಲೆಕ್ಕಾಚಾರ ಹಲವಾರು ಬಾರಿ ಏರು-ಪೇರಾಗುತ್ತದೆ. ಆದರೆ ನಿಮ್ಮ ಭೂ ಪ್ರದೇಶದ ವಿಷಯದಲ್ಲಿ ನಾವು ಬೇರೆಯದೇ ಆದ ಲೆಕ್ಕಾಚಾರ ಅನುಸರಿಸುತ್ತೇವೆ. ಆ ಪ್ರದೇಶದ ಮೂಲವಾಸಿಗಳಾದ ರೆಡ್-ಇಂಡಿಯನ್ನರು ಮಳೆ ಹೆಚ್ಚಾಗಿ ಬೀಳುವ ವರ್ಷಗಳಲ್ಲಿ ಹೆಚ್ಚಿನ ಮರ ಸಂಗ್ರಹಿಸುತ್ತಾರೆ. ಈ ಬಾರಿಯಂತೂ ಅವರು ಅತ್ಯಂತ ಹೆಚ್ಚಿನ ಮರ ಸಂಗ್ರಹಿಸುತ್ತಿದ್ದಾರೆ ಅವರ ಲೆಕ್ಕಾಚಾರ ಇಷ್ಟೂ ವರ್ಷಗಳಲ್ಲಿ ತಪ್ಪಿದ್ದಿಲ್ಲ. ಅಂದರೆ ಈ ಬಾರಿ ಅತ್ಯುಗ್ರ ಮಳೆ ಬೀಳುತ್ತದೆ ಎನ್ನುವುದೇ ನಮ್ಮ ಅನಿಸಿಕೆ"

ಹೀಗೆ ನಮ್ಮ ಸುತ್ತಲಿನ ವೈಜ್ಞಾನಿಕ ವೆನ್ನಿಸುವ ಎಷ್ಟೋ ವರದಿಗಳು, ಅಸಂಬದ್ದ ತಳಹದಿಯ ಮೇಲೆ ನಿಂತಿರುತ್ತವೆ. ಈ ಬಾರಿಯ ಅರ್ಥಿಕ ಮುಗ್ಗಟ್ಟಿಗೆ ರಿಯಲ್ ಎಸ್ಟೇಟ್ ಉದ್ಯಮ ಕಾರಣ ಎನ್ನುವರಾರು, ನಾಗಾಲೋಟ ಓಡುತ್ತಿದ್ದಾಗ ಎಲ್ಲಿಯೋ ಏನೋ ತಪ್ಪಿರಬಹುದೇ ಎನ್ನುವ ಯೋಚನೆ ಮಾಡುವುದಿಲ್ಲ. ಇಂತಹ ವರದಿಗಳನ್ನು ಆಧರಿಸಿಯೇ ನಮ್ಮ ಬಜೆಟ್ ನಿರ್ಧರಿತವಾಗುತ್ತದೆ. ಪ್ರಣವ್ ಮುಖರ್ಜಿ ಸಮಾಜವಾದಿ ಗರಡಿಯಲ್ಲಿ ಬೆಳೆದವರು. ಆದರೂ ಇಂದಿಗೂ ಪ್ರಸ್ತುತವೆನಿಸುವ ರಾಜಕಾರಣಿ. ಹೊಸಸರ್ಕಾರದಲ್ಲಿ ಹಣಕಾಸು ಸಚಿವ ಸ್ಥಾನ ಚಿದಂಬರಂ ಅವರ್ನ್ನು ಬಿಟ್ಟು ಪ್ರಣವ್ ಮುಖರ್ಜಿಯವರತ್ತ ಹೋದಾಗ, ನನಗನ್ನಿಸಿದ್ದು ಭಾರತ ಈ ಬಂಡವಾಳಶಾಹಿಯ ಕಬಂಧ ಬಾಹುಗಳಿಂದ ಬಿಡಿಸಿಕೊಂಡು ಮತ್ತೆ ಸಮಾಜವಾದದ ನೆರಳಡಿಗೆ ತೆರಳುತ್ತಿದೆಯೇ ಎಂದು. ಅವರ ಮೊದಲ ಬಜೆಟ್ ಹೊಸತನವಿಲ್ಲದಿದ್ದರೂ, ಹೊರೆತನವೂ ಇರಲಿಲ್ಲ. ಅಲ್ಲದೆ ಅರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಬಂಡವಾಳಶಾಹಿಗಳಿಗೆ ಒಂದಿಷ್ಟು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದ್ದು ಸತ್ಯ. ಈ ಬಂಡವಾಳಶಾಹಿಗಳ ಬಾಹು ಬಂಧನ ಎಷ್ಟು ಬಿಗಿಯೆಂದರೆ, ಎಂದೂ ಬಂಡವಾಳಶಾಹಿಯ ತತ್ವದ ಮೇಲೇ ಸ್ಥಾಪಿತವಾದ ಅಮೆರಿಕೆಯಂತಹ ಪ್ರಜಾಪ್ರಭುತ್ವದ ನಾಯಕರು ಸಮಾನ ಅರ್ಥಿಕ ಲಾಭ ಎನ್ನುವ ಪದ ಬಳಸಿದ್ದಷ್ಟಕ್ಕೇ, ಉದ್ದುದ್ದದ ಚಾಟಿಗಳು ಬೀಸಲ್ಪಡುತ್ತವೆ. "you cannot multiply wealth by dividing it" ಎನ್ನುವ ಮಾತುಗಳನ್ನು ಜನಪ್ರಿಯಗೊಳಿಸುವ ಕ್ಕ್ಯಾಂಪೇನ್ (ಪ್ರಚಾರ ಸರಣಿ)ಗಳೇ ಆರಂಭವಾಗುತ್ತದೆ. ಬರಾಕ್ ಒಬಾಮ ಒಬ್ಬ ಸಮಾಜವಾದಿ - ಕಮ್ಯುನಿಸ್ಟ್ ಎನ್ನುವ ಹಣೆಪಟ್ಟಿಯನ್ನೂ, ಹೊಡೆದುಬಿಡುತ್ತವೆ. ಅದೂ ಒಬಾಮ ಸಮಾನ ಅರ್ಥಿಕತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮಾತ್ರ ಎನ್ನುವ ಭರವಸೆಯನ್ನು ಕೊಟ್ಟ ಮೇಲೆಯೂ.
ಇಂತಹ ಬಾಹುಗಳಿಂದ ಬಿಡಿಸಿಕೊಳ್ಳುವ ಶಕ್ತಿ ಪ್ರಣವ್ ಮುಖರ್ಜಿಯವರಿಗಿದೆಯೇ?

ಇದೆಯೆಂದೇ ಮನಮೋಹನ ಸಿಂಗ್ ನಂಬಿದ್ದಾರೆ. ಅದಕ್ಕಾಗಿಯೇ ಈ ಬಾರಿಯ ಬಜೆಟ್ ಅನ್ನು ನಾವು ಉತ್ಸುಕತೆಯಿಂದ ಎದುರು ನೋಡಬೇಕಿದೆ. ಸಿರಿವಂತರು ಮತ್ತು ಬಡವರ ನಡುವಿನ ಕಂದಕ ದೊಡ್ಡದಾಗುತ್ತಿದೆ. ಹಿರಿಯರು ಬದಲಾದ ವಾತಾವರಣದಲ್ಲಿ ಬಿಕ್ಕುತ್ತಿದ್ದಾರೆ. ಕಿರಿಯರು ಸ್ವಚ್ಚಂದವಾಗುತ್ತಾ, ಒಮ್ಮೆ ಎದುರಾಗುವ ಕಷ್ಟಕ್ಕೇ ಬರಿದಾಗಿ, ಬಲಿಯಾಗುತ್ತಿದ್ದಾರೆ. ಮೊದಲೇ ಹೇಳಿದಂತೆ ಆಧುನಿಕತೆಯ ಅನಿಷ್ಟಗಳು ಬಾಗಿಲ ಒಳಗೆ ಹೆಜ್ಜೆಯಿಟ್ಟಾಗಿದೆ. ಇವೆಲ್ಲವನ್ನು ಗಮನಿಸಿ ಹೆಚ್ಚರಿಕೆಯ ಹೆಜ್ಜೆಯಿಡುವ ಸವಾಲು ಪ್ರಣವ್ ಮುಖರ್ಜಿಯವರ ಮುಂದಿದೆ. ಅವರೇನು ಮಾಡುತ್ತಾರೆ? ತಮ್ಮ ಮಂತ್ರದಂಡವನ್ನಾಡಿಸಿ ಜಾದೂ ಪೆಟ್ಟಿಗೆಯನ್ನು ತೆರೆಯಲಿದ್ದಾರೆ. ಇದೇ ೨೬ರಂದು... ಅಲ್ಲಿಯವರೆಗೆ ಕಾದು ನೋಡೋಣ.

ಕೊನೆಯ ಮಾತು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೆ ಅನಾವೃಷ್ಟಿ. ಜನತಾ ಸರ್ಕಾರ ಇದ್ದರೆ ಅತಿವೃಷ್ಟಿ. .. ಈಗ ಬಿಜೆಪಿ ಸರ್ಕಾರದಲ್ಲಿ ಎರಡೂನಾ..? (ಈ ತಿಂಗಳ ಬಿಸಿಲು ನೋಡಿ ಅನಿಸಿದ ಮಾತು..ಸುಮ್ಮನೆ ನಕ್ಕುಬಿಡಿ)

1 comment:

  1. tumba chennagide
    an article makes you think seriously on few things
    which we never thought or thought but not so seriously

    ReplyDelete