Pages

Tuesday, June 09, 2009

ಆಯಸ್ಸು .

ಭುವಿಗೆನ್ನ ಕಳುಹಿಸುವ ಮುಂಚೆ
ದೇವನ ಜೊತೆ ಮಾತಿಗೆ ಕುಳಿತೆ.
ಒಂದಷ್ಟು ವಿಷಯ ಫೈನಲೈಸ್
ಆಗಬೇಕಿತ್ತು ಬೇಗ.

ಪೂರ್ತಿ ನೂರು ವರುಷ
ಬದುಕಬೇಕು ನಾನು .
ಏಕೆ ಎಂದೂ ಕೇಳದೆ
ನೀಡಿದ ವರವನು ದೇವನು .

ಮತ್ತೆ ಕೇಳಿದ ,
ಭೂಮಿಯಲ್ಲಿ ಬದುಕಲು ಬಯಸುವೆ ಎಲ್ಲಿ ?
ನಾನು ಹೇಳಿದೆ,
ಕುರಿತೋದದೆಯುಂ ಕಾವ್ಯಪ್ರಯೋಗ
ಪರಿಣಿತಮತಿಗಳಿರುವ ಬೆಂಗಳೂರಲ್ಲಿ
ಹಾಗಿದ್ದರೆ ಮುರಿಯುವೆ ಹತ್ತು .
ಬೆಂಗಳೂರಲ್ಲಿ ಬದುಕುವ ಗತ್ತು .

ಹೋದರೆ ಹೋಯಿತು ಹತ್ತು .
ಬೆಂಗಳೂರಿನ ಗಮ್ಮತ್ತು ..
ಹತ್ತಕ್ಕೂ ಮಹತ್ತು .

ಮತ್ತೊಂದಿದೆ ಪ್ರಶ್ನೆ ಬೇಕೆ ನಿನಗೆ ಸಿಗರೇಟು ?
ಸಾಕೆ ಬೆಂಗಳೂರಿನ ಹೊಗೆ ಘಾಟು..?
ಹುಟ್ಟಿದ ಮೇಲೆ ಸೇದದೆ ಹೋದರೆ ಸಿಗರೇಟು
ಬದುಕಿಗೆ ಏನಿದೆ ರೇಟು.
ಸರಿ ಹಾಗಾದರೆ ತೆಗೆಯುವ ಇನ್ನೈದೇ ವರ್ಷ .
ನನಗೋ ಬಲು ಹರುಷ .

ಬಸ್ಸಲಿ ಓಡಾಡುವೆಯೋ, ಇಲ್ಲ
ನಿನ್ನದೇ ವಾಹನ ಬೇಕೊ?
ಏನೇ ಆದರು , ಟ್ರಾಫಿಕ್ ಜಾಮಿಗೆ
ಐದೇ ವರ್ಷದ ರೆಂಟು
ಹೋದರೆ ಐದು , ಕಳೆಯುವುದೇನು ಗಂಟು.

ಪಬ್ಬಿದೆ,ಬಾರಿದೆ, ಥರ ಥರ ಡ್ರಿಂಕ್ಸ್ ಇದೆ ..
ಬೇಕೆ ನಿನಗೆ ಗುಂಡು
ಕುಡಿಯದೆ ಉಳಿದರೆ ನಾನಾಗುವೆನೆ
ಬೆಂಗಳೂರಿನ ಗಂಡು ?
ಕುಡಿತ ಕೆಟ್ಟದು ಎನ್ನುವರು
ಕುಡಿದು ಬದುಕಿದರೆ ಲಾಂಗ್ ಲೈಫ್
ಬೇರೆಯವರಿಗದು ರಾಂಗ್ ಟೈಪ್
ಅದಕೇ ತೆಗೆಯುವೆ ಇನ್ನೂ ಹತ್ತು
ಉಳಿದಿದೆ ಇನ್ನೂ ಎಪ್ಪತ್ತು .

ಎಲ್ಲಾ ಓಕೆ. ಇನ್ನೊಂದೇ ಪ್ರಶ್ನೆ .
ಮದುವೆಯು ನಿನಗೆ ಬೇಕೆ.. ?
ಮದುವೆಯು ಇಲ್ಲದೆ ಬದುಕುವುದಾದರೆ
ಆ ಥರ ಬದುಕೇಕೆ ..?

ಸರಿ ಹಾಗಾದರೆ ಮದುವೆಯ ಲೆಕ್ಕಕೆ ಮೂವತ್ತು.
ಉಳಿದಿದೆ ನಿನಗೆ ನಲವತ್ತು.
ಜ್ಞಾನೋದಯವಾಗುವ ತನಕ ಮರೆತಿರು ಈ ಲೆಕ್ಕ
ಎಂದೇನೋ ಹೇಳಿ ಭೂಮಿಗೆ ಕಳಿಸಿದ ಠಕ್ಕ.

ಮೊನ್ನೆ ತುಂಬಿತು ಮೂವತ್ತೇಳು.
ಲೆಕ್ಕವು ನೆನಪಿಗೆ ಬಂತು.
ಉಳಿದ ದಿನದಲ್ಲಿ ಏನಾದರು ಸಾಧಿಸಲು
ಮಡದಿ ಮಕ್ಕಳ ಗೋಳು.

No comments:

Post a Comment