Pages

Thursday, August 08, 2013

ಓದು ಕಲಿತ ಊಳಿಗದವನ ಪ್ರಶ್ನೆಗಳು.

ಥೀಬ್ಸ್‍ನ ಏಳುಸುತ್ತಿನ ಕೋಟೆ
ಕಟ್ಟಿದವರಾರು ಗೊತ್ತೆ?
ಹೊತ್ತಿಗೆಗಳಲಿದೆ ರಾಯರ ಹೆಸರು.
ಮೆತ್ತಿದೆಯೇನು ಅವರ ಕೈಗಿಷ್ಟಾದರು ಕೆಸರು.

ಸುಟ್ಟಿತೆಷ್ಟು ಬಾರಿ ಬ್ಯಾಬಿಲೋನ್ ನಗರ,
ಕಟ್ಟಿ ಕೊಟ್ಟವರಾರು ಮರಳಿ, ಬಲ್ಲಿರಾ..?

ಬೆಳಗಿದೆ ಮಿನುಗಿದೆ ಲಿಮಾ
ಫಳಫಳಿಸಿದೆ ಹೊನ್ನಿನ ಕಾಂತಿಯಲಿ!
ಕಟ್ಟಿದ ಕಾರ್ಮಿಕನವನು
ಮಲಗುವ ಮನೆಯಿರುವದದೆಲ್ಲಿ?

ಚೀನಾ ಗೋಡೆಯ ಮುಗಿಸಿದ ಸಂಜೆ
ಏನಾಯಿತು ಆ ಮೇಸ್ತ್ರಿಗೆ ಮುಂದೆ..? 
ಓಹೋ ರೋಮಿನ ಕಮಾನುಗಳೇನು?
ಯಾರೋ ಇದನು ಕಟ್ಟಿದ ಮನುಜನು?

ಸೀಸರ್ ಗೆಲುವದು ಯಾವನ ಮೇಲೋ?
ಗೀತಗಳಲ್ಲಿ ಹಾಡುವುದೇನೋ
ಬೈಜಾಂಟಿಯನ್ನರ ಅರಮನೆಯೇನೋ?
ಮುಳುಗಿದ ಅಟ್ಲಾಂಟಿಸಿನ ಜನರು
ಮುಳುಗುವ ಮೊದಲಿನ ಕೂಗದು ಏನೋ?

ಭಾರತವನ್ನೇ ಗೆದ್ದೆ ಎನ್ನುವ
ಯವನರ ರಾಜನೆ ತಾನೆ ಬೀಗುವ
ಅಲೆಕ್ಸಾಂಡರನೊಬ್ಬನೇ ಏನು?
ಗಾಲರ ಗೆದ್ದ ಸೀಸರನೆಡೆಗೆ
ಅಡಿಗೆ ಭಟ್ಟನ ಜೊತೆಯಿಲ್ಲವೇನು?

ಅಳುತಿರುವಾಗ ಸ್ಪೇನಿನ ಫಿಲಿಪನು
ಅಳದೇ ಉಳಿದನೇ ಊಳಿಗದವನು?
ಏಳು ವರುಷಗಳ ಕಾಳಗ ಗೆದ್ದನು
ಫ್ರೆಡರಿಕನವನು ಒಂಟಿಯೇನು?

ಗೆಲುವಿನ ಕತೆಯಿದೆ ಪುಟಪುಟದಲ್ಲೂ
ಗೆಲುವಿನ ಕುಣಿತಕೆ ಜೊತೆಯದು ಏನು?
ಗೆದ್ದವ ಮೆಲ್ಲುವ ಸವಿಯನು ಸವಿಯಲು
ಮುದ್ದೆಯ ಮಾಡುವ ಆಳಿನದೇನು?

ಎಷ್ಟೋ ಮಾತಿದೆ, ಎಷ್ಟೋ ಕತೆಯಿದೆ
ಕೇಳದೆ ಉಳಿದ ಪ್ರಶ್ನೆಗಳಷ್ಟಿವೆ.
ಬ್ರೆಷ್ಟ್ ನ ಮತ್ತೊಂದು ಕವಿತೆ  Questions From A Worker Who Reads  ಭಾವಾನುವಾದ

No comments:

Post a Comment