Pages

Wednesday, August 18, 2010

ಪ್ರಪಂಚದ ಮೊದಲನೇ ಟಿವಿ ಗೋಪುರ !

ಎರಡನೇ ಮಹಾಯುದ್ದದ ನಂತರ ಜರ್ಮನಿ ನಾಲ್ಕು ಭಾಗಗಳನ್ನಾಗಿ ಸೀಳಿ ಇಂಗ್ಲೆಂಡ್ ಅಮೆರಿಕಾ ಫ಼್ರಾನ್ಸ್ ಮತ್ತು ರಷಿಯಾಗಳು ಹಂಚಿಕೊಂಡವಷ್ಟೇ.. ಮತ್ತೇ ಇಂಗ್ಲೆಂಡ್, ಫ಼್ರಾನ್ಸ್ ಮತ್ತು ಅಮೆರಿಕಾಗಳು ತಮ್ಮ ವಶದಲ್ಲಿದ್ದ ಭಾಗಗಳನ್ನು ಸೇರಿಸಿ, ಗಣತಂತ್ರ ವ್ಯವಸ್ಥೆಯೊಂದಿಗೆ ಪಶ್ಚಿಮ ಜರ್ಮನಿಯನ್ನು ಸ್ವತಂತ್ರಗೊಳಿಸಿದವು. ಆದರೆ ಪೂರ್ವ ಜರ್ಮನಿ ರಶಿಯಾದ ಕಮ್ಯುನಿಸ್ಟ್ ಹಿಡಿತದಲ್ಲೇ ಇತ್ತು.

ಗಣತಂತ್ರದ ಜೊತೆಗೇ ಕಾಲಿಟ್ಟ ಬಂಡವಾಳಶಾಹಿ ವ್ಯವಸ್ಥೆ ಮತ್ತು ಜರ್ಮನಿಗರ ಮತ್ತೊಂದು ಮುಖವಾದ ಕ್ರಿಯಾಶೀಲತೆಯ ಕುರುಹಾಗಿ ಪಶ್ಚಿಮ ಜರ್ಮನಿಯ ಬಾದೆನ್-ವುರ್ಟನ್ ಬರ್ಗ್ ರಾಜ್ಯದ ರಾಜಧಾನಿ ಸ್ಟುಟ್ಗಾರ್ಟ್ ನಲ್ಲಿ ಪ್ರಪಂಚದ ಮೊದಲ ಟೆಲಿವಿಶನ್ ಟವರ್ ೧೯೫೬ರಲ್ಲಿ ಸ್ಥಾಪಿಸಲ್ಪಟ್ಟಿತು. ೨೩೦ ಮೀಟರ್ ಎತ್ತರದ ಈ ಕಟ್ಟಡ ತನ್ನ ರಚನೆಯ ವಿನೂತನ ತಂತ್ರಜ್ಞಾನದೊಂದಿಗೆ ಜಗತ್ತಿನ ಹಲವಾರು ಈ ರೀತಿಯ ಕಟ್ಟಡಗಳಿಗೆ ಮಾದರಿಯಾಯಿತು.



ಕಟ್ಟಡಕ್ಕೆ ಹೋಗುವ ದಾರಿ ಮರಗಳಿಂದ ಕೂಡಿ ಕಾಡಿನ ಮಧ್ಯೆ ನಡೆದು ಬಂದ ಅನುಭವ ನೀಡುತ್ತದೆ. ಕೆಳಗೆ ಮಕ್ಕಳಿಗೆ ಆಟವಾಡಲು ವಿವಿಧ ಆಟಗಳಿವೆ. ಆದರಲ್ಲಿ ನಾಣ್ಯ ಹಾಕಿ ಚಲಾಯಿಸುವ ಆಟಿಕೆ ಕ್ರೇನ್ ಕೂಡಾ ಒಂದು.



ಈ ಕಟ್ಟಡದಲ್ಲಿ ನೂರೈವತ್ತು ಮೀಟರುಗಳವರೆಗೂ ಮೇಲೆ ಹೋಗಲು ಲಿಫ್ಟ್ ವ್ಯವಸ್ಥೆಯಿದೆ. ೪೬ ಸೆಕೆಂಡುಗಳಲ್ಲಿ ಮೇಲೆ ಕರೆದೊಯ್ಯುವ ಈ ಲಿಫ್ಟ್ ೧೯೫೪ರಲ್ಲಿ ಕಟ್ಟಡದೊಂದಿಗೇ ಸ್ಥಾಪಿತವಾಯಿತು. ೨೦೦೩ರಲ್ಲಿ ಸಂಪೂರ್ಣವಾಗಿ ಆಧುನೀಕೃತವಾಯಿತು.



ಮೇಲೆ ಒಂದು ಮಹಡಿಯಲ್ಲಿ ಹೋಟೆಲು ಮತ್ತೊಂದರಲ್ಲಿ ಕಾಫೀ ಶಾಪ್ ಇದೆ. ಇಲ್ಲಿ ಕುಳಿತು ಹೊರಗಡೆಯ ವಿಹಂಗಮ ನೋಟವನ್ನು ಸವಿಯುತ್ತಾ ಕಾಫೀ ಕುಡಿಯುವುದು ಚೆನ್ನ. ಜೊತೆಯಲ್ಲಿ ಆತ್ಮೀಯರಿದ್ದರೆ ಇನ್ನೂ ಚೆನ್ನ. ಇದಕ್ಕಿಂತಲೂ ಮೇಲೆ ನಿಂತು ನೋಡಲು ಅನುವಾಗುವಂತೆ ಬಾಲ್ಕನಿ ವ್ಯವಸ್ಥೆಯಿದೆ. ಇಲ್ಲೊಂದು ಪುಟ್ಟ ಯಂತ್ರವಿದೆ. ಅದರಲ್ಲಿ ಒಂದು ಯುರೋ ನಾಣ್ಯ ಮತ್ತು ಐದು ಸೆಂಟಿನ ನಾಣ್ಯಗಳನ್ನು ಹಾಕಿ, ಹಿಡಿಕೆ ತಿರುಗಿಸಿದರೆ, ಒಂದು ಯೂರೋ ನಾಣ್ಯವನ್ನು ನುಂಗಿಕೊಂಡು, ಅರ್ಧ ಸೆಂಟಿನ ನಾಣ್ಯವನ್ನು ಒತ್ತಿ ಮೊಟ್ಟೆಯಾಕಾರದಲ್ಲಿ ಮಾಡಿ, ಅದರಲ್ಲಿ ಟಿವಿ ಗೋಪುರದ ಚಿತ್ರವನ್ನು ಟಂಕಿಸಿ ಕೊಡುತ್ತದೆ. ಇನ್ನೂ ಒಂದು ಮಹಡಿ ಮೇಲಕ್ಕೆ ಮೆಟ್ಟಿಲು ಹತ್ತಿ ಹೋದರೆ ಇಲ್ಲಿ ಕಟ್ಟಡದ ಸುತ್ತಾ ಸುಮಾರು ೫೦ ಕಿಮೀ ವರೆಗಿನ ದೃಶ್ಯಗಳನ್ನು ಕಾಣಬಹುದು. ಜೊತೆಗೆ ನಾಣ್ಯ ಹಾಕಿ ನೋಡಬಹುದಾದ ಟೆಲಿಸ್ಕೋಪ್ ಕೂಡಾ ಇದೆ. ಮತ್ತು ಕಂಚಿನಲ್ಲಿ ಆ ದಿಕ್ಕಿನ ಭೂಕೃತಿಯನ್ನು ರಚಿಸಿ ನಮಗೆ ಕಾಣಬಹುದಾದ ಕಟ್ಟಡಗಳ ವಿವರಗಳನ್ನು ಬರೆದಿದ್ದಾರೆ. .



ಬಂಡವಾಳಶಾಹಿ ಮತ್ತು ಕಮ್ಯುನಿಸ್ಟ್ ವ್ಯವಸ್ಥೆಗಳ ಬೆಳವಣಿಗೆಯ ಪರಸ್ಪರ ಅವಲೋಕನಕ್ಕೆ ಪೂರ್ವ ಮತ್ತು ಪಶ್ಚಿಮ ಜರ್ಮನಿಗಳ ಬೆಳವಣಿಗೆ ಒಂದು ಒಳ್ಳೆಯ ಉದಾಹರಣೆಯಾಗಬಲ್ಲುದು. ಅಂದಹಾಗೆ ಲಿಫ಼್ಟ್ ನಲ್ಲಿ ಮೇಲೆ ಹೋಗಲು ಐದು ಯೂರೋಗಳ ಶುಲ್ಕ. ಲಿಫ್ಟ್ ನಲ್ಲಿದ್ದಾಗ ನಾನು ಪ್ರದರ್ಶಿಸಿದ ನನ್ನ ವಿಕಿಪೀಡಿಯಾ ಅಧಾರಿತ ಟಿವಿ ಟವರ್ ನ ಬಗೆಗಿನ ಜ್ಞಾನಕ್ಕೆ ಮನಸೋತ ಲಿಫ಼್ಟ್ ಆಪರೇಟರ್ ನನಗಾಗಿ ಒಂದು ವಿಶಿಷ್ಟ ಬ್ರೋಚರ್ ಅನ್ನೇ ಉಡುಗೊರೆಯಾಗಿತ್ತ! ನನಗೆ ಅದಕ್ಕಿಂತಲೂ ಅಚ್ಚರಿಯ ಸಂಗತಿ ಎಂದರೆ ಅವನು ಶುಧ್ಧ ಇಂಗ್ಲಿಷ್ ಮಾತಾಡುತ್ತಿದ್ದುದು.

ಅಂದಹಾಗೇ ಇಲ್ಲೂ ಗೋಡೆ ಬರಹ ಕಣ್ಣಿಗೆ ಬಿದ್ದದ್ದು ಅದಕ್ಕಿಂತಲೂ ಅಚ್ಚರಿ

No comments:

Post a Comment