Pages

Friday, August 20, 2010

ಕೆಲವರು ವಿಶೇಷ ವ್ಯಕ್ತಿಗಳಾಗಿರುತ್ತಾರೆ.

ಇದು ನನಗೆ ತಿಳಿದದ್ದು ಹೀಗೆ.


ಜರ್ಮನಿಯ ಸ್ಟುಟ್ಗಾರ್ಟ್ ನಗರದಲ್ಲಿ ಮಧ್ಯಭಾಗಲ್ಲೊಂದು ಕೋಟೆಯಿದೆ. ಅದರ ಮುಂದೊಂದು ಪ್ರತಿಮೆ. ಕ್ರಿಸ್ಟೋಫ್ ವುರ್ಟೆನ್‍ಬರ್ಗ್ ಎನ್ನುವ ಇಲ್ಲಿನ ರಾಜನದು (ಡ್ಯೂಕ್ ಎನ್ನುವುದಕ್ಕೆ ಸಾಮಂತ ಎನ್ನುವುದು ಸಮಾನಾರ್ಥಕವೇನೋ.. ಆದರೆ ನಾನು ರಾಜ ಎಂದೇ ಬಳಸುತ್ತೇನೆ.) ಸುಮಾರು ಐದು ಶತಮಾನಗಳ ಹಿಂದೆ ಕಟ್ಟಿದ ಕೋಟೆ ಮತ್ತು ಅರಮನೆ ಅದು.



ಅವನ ಚರಿತ್ರೆಯನ್ನು ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಅವನು ಕಟ್ಟಿದ ಆ ಕೋಟೆಯನ್ನು ಇಲ್ಲಿ ಜನ ಹಳೇಕೋಟೆ ಎನ್ನುತ್ತಾರೆಂದು ಅದರಲ್ಲಿ ಕಡೆಯವರೆಗೂ ಅಲ್ಲಿಯ ವಂಶದ ಕುಡಿ ಕ್ಲಾಸ್ ಶೆಂಕ್ ಗ್ರಾಫ್ ಫ಼ೋನ್ ಸ್ಟಾಫ಼ೆನ್‍ಬೆರ್ಗ್ Claus Schenk Graf von Stauffenberg ಇದ್ದನೆಂದೂ, ೧೯೪೪ರ ಜುಲೈ ೨೧ರಂದು ಆತ ಹುತಾತ್ಮನಾದನೆಂದೂ, ನಂತರ ಆ ಕೋಟೆಯಲ್ಲೊಂದು ಕೋಣೆಯನ್ನು ಆತನ ನೆನಪಿನಲ್ಲಿ ಮ್ಯೂಸಿಯಂ ಮಾಡಿದ್ದಾರೆಂದೂ ತಿಳಿದು ಅಚ್ಚರಿಯಾಯಿತು. ಯಾರಪ್ಪಾ ಈ ಸ್ಟಾಫೆನ್ ಬೆರ್ಗ್ ಅವನು ಮಾಡಿದ್ದಾದರೂ ಏನು ಎಂದು ತಿಳಿಯೋಣವೆಂದು ಮತ್ತಷ್ಟು ಜಾಲಾಡಿದರೆ, ಈ ಮನುಷ್ಯನ ಬಗ್ಗೆ ಹೆಮ್ಮೆ ಮೂಡಿತು.



ಜರ್ಮನಿ ಎಂದರೆ ನಮಗೆ ಮೊದಲು ನೆನಪಾಗುವುದು ಹಿಟ್ಲರ್. ಮನುಕುಲದ ಚರಿತ್ರೆಯಲ್ಲಿ ಹೆಸರಾದ ಒಬ್ಬ ರಾಕ್ಷಸನೆಂದು. ತನ್ನ ಮಹತ್ವಾಕಾಂಕ್ಷೆಯ ಸಾಧನೆಗಾಗಿ ಜಗತ್ತನ್ನೇ ಯುಧ್ಧಕ್ಕೆಳೆದು, ಕಡೆಗೆ ಆತ್ಮಹತ್ಯೆ ಮಾಡಿಕೊಂಡವನೆಂದು ಇನ್ನೂ ಅವನನ್ನು ನಾವು ನೆನೆಸಿಕೊಳ್ಳುತ್ತೇವೆ. ಇಂತಹ ಹಿಟ್ಲರನ ಸೇನೆಯಲ್ಲಿ ಒಬ್ಬ ಸೇನಾನಿಯಾಗಿದ್ದ ಈ ಸ್ಟಾಫೆನ್ ಬೆರ್ಗ್. ಮೊದಮೊದಲು ಪೋಲ್ಯಾಂಡ್ ಮತ್ತು ಫ಼್ರಾನ್ಸ್ ಗಳ ಯುದ್ಧಗಳಲ್ಲಿ ಭಾಗವಹಿಸಿದ್ದ. ರಷಿಯಾದ ಮೇಲಿನ ದಾಳಿ ಆಪರೇಷನ್ ಬಾರ್ಬರೋಸ್ ನಲ್ಲಿಯೂ ಟುನೇಶಿಯಾ ಮೇಲಿನ ಯುದ್ಧದಲ್ಲಿಯೂ ಭಾಗವಹಿಸಿದ್ದ. ಅಷ್ಟೇ ಅಲ್ಲ. ಬ್ರಿಟಿಷರ ಬಾಂಬು ದಾಳಿಗೆ ಬಲಿಯಾಗಿ ತನ್ನ ಎಡಗಣ್ಣು, ಬಲಗೈ ಕಳೆದುಕೊಂಡಿದ್ದ. ಅವನ ಎಡಗೈನಲ್ಲಿ ಉಳಿದದ್ದು ಮೂರೇ ಬೆರಳು. ಆಸ್ಪತ್ರೆಯಿಂದ ನಂತರ ತನ್ನ ಸ್ನೇಹಿತರ ಜೊತೆ ಮಾತನಾಡುತ್ತ, ಮುಂಚೆ ಅಷ್ಟೊಂದು ಬೆರಳುಗಳಿದ್ದಾಗಲೂ ಅವುಗಳಿಂದ ಏನು ಮಾಡಬೇಕೆಂದು ತನಗೆ ಗೊತ್ತಿರಲಿಲ್ಲ. ಈಗ ಬೆರಳು ಮತ್ತು ಕೈ ಕಳೆದುಕೊಂಡು ತೊಂದರೆಯೇನೂ ಇಲ್ಲ ಎಂದ ಧೀರ ಯೋಧ ಈತ. ಆದರೆ ಟ್ಯುನೇಶಿಯಾ ಯುದ್ಧದ ವೇಳೆಗೆ ಹಿಟ್ಲರನ ನೀತಿಗಳ ಬಗ್ಗೆ ಭ್ರಮನಿರಸನ ಹೊಂದಿದ್ದ. ಅವು ಮಾನವೀಯವಾಗಿಲ್ಲ ಮತ್ತು ಜರ್ಮನಿಗೆ ಅನುಕೂಲಕರವಾಗಿಲ್ಲ ಎನ್ನುವುದು ಆತನ ನಿಲುವಾಗಿತ್ತು.

ಜರ್ಮನರು ಏನು ಮಾಡಿದರೂ ಅಚ್ಚುಕಟ್ಟಾಗಿ ಮಾಡುತ್ತಾರೆ ಎನ್ನುವುದಕ್ಕೆ ಒಂದು ನಿದರ್ಶನ "ಉಂಟರ್ಮೆಹ್ಮೆನ್ ವಾಲ್ಕೌರೆ" ಅಥವಾ ಆಪರೇಷನ್ ವಾಲ್ಕೀರಿ (Valkyrie). ಯುದ್ಧದಲ್ಲಿ ಘಾಸಿಗೊಳಗಾದ ಜರ್ಮನಿಯ ಜನತೆ ಅರಾಜಕತೆಗೆ ಒಡಗೊಡದಿರಲೆಂದು, ತಕ್ಷಣವೇ ರಾಜಕೀಯ ಸ್ಧಿರತೆ ಸ್ಥಾಪಿಸುವ ಉದ್ದೇಶ ಈ ಯೋಜನೆಯದು. (ಇಂತಹುದೇ ಒಂದು ಯೋಜನೆ ನಮ್ಮ ಇಂಟರ್ನೆಟ್ ಶೋಧಕ್ಕೆ ಅಡಿಗಲ್ಲಾಗಿದ್ದು ನಿಮಗೂ ತಿಳಿದಿದೆ.) ಹಿಟ್ಲರನ ನೀತಿಗಳ ಬಗ್ಗೆ ಭ್ರಮನಿರಸನಗೊಂಡಿದ್ದ ಮಂದಿಯೊಡಗೂಡಿದ ಸ್ಟಾಫ಼ೆನ್ ಬರ್ಗ್ ಈ ಯೋಜನೆಯನ್ನು ಆತನ ವಿರುದ್ದವೇ ಬಳಸುವ ತಂತ್ರ ರೂಪಿಸಿದ. ಹಿಟ್ಲರು ದೇಶದ ಸೈನಿಕರ ಕೈಯಲ್ಲಿ ಆತನಿಗೆ (ಜರ್ಮನಿಯ ಅಧ್ಯಕ್ಷನಿಗೆ) ನಿಯತ್ತಾಗಿರುವಂತೆ ವಚನ ಪಡೆಯುತ್ತಿದ್ದ. ಮೊದಲಿಗೆ ಇಂತಹ ಸೈನಿಕರನ್ನು ವಚನಭ್ರಷ್ಟರಾಗದಂತೆ ತಡೆಯಲು, ಹಿಟ್ಲರನನ್ನು ಹತ್ಯೆಗೈದು, ಆ ನಂತರ ಉಂಟಾಗಬಹುದಾದ ರಾಜಕೀಯ ಅನಿಶ್ಚಿತತೆಯನ್ನು ವಾಲ್ಕೀರಿಯಿಂದ ಕೊನೆಗಾಣಿಸಿ, ದೇಶವನ್ನು ನರಳುವಿಕೆಯತ್ತ ಕೊಂಡೊಯ್ಯುತ್ತಿರುವ ಯುದ್ದದಿಂದ ಮುಕ್ತಿ ನೀಡುವುದು ಸ್ಟಾಫ಼ೆನ್ ಬೆರ್ಗ್ ಮತ್ತವನ ಸಂಗಡಿಗರ ಉದ್ದೇಶವಾಗಿತ್ತು. ಇದರಂತೆ ಜುಲೈ ಇಪ್ಪತ್ತು ೧೯೪೪ ರಂದು ಯೋಜನೆ ಕಾರ್ಯಗತವಾಗಲು ಪ್ರಯತ್ನ ನಡೆಯಿತು. ಅದೇ ಜುಲೈ ೨೦ರ ಷಡ್ಯಂತ್ರ.

ವೋಲ್ಫ಼್‍ಶಾಂಜ್ ನಲ್ಲಿ ಹಿಟ್ಲರನೊಂದಿಗೆ ಮಿಲಿಟರಿ ಚರ್ಚೆ ಜುಲೈ ೨೦ರಂದು ನಿಗದಿಯಾಗಿತ್ತು. ಅಲ್ಲಿಗೆ ಹೋದ ಸ್ಟಾಫ಼ೆನ್‍ಬರ್ಗ್ ತನ್ನ ಬ್ರೀಫ಼್‍ಕೇಸಿನಲ್ಲಿ ಎರಡು ಬಾಂಬುಗಳನ್ನೂ ಕೊಂಡೊಯ್ದಿದ್ದ. ಅವನ ರಿವಾಲ್ವರ್ ಅನ್ನು ಪಡೆದುಕೊಂಡು ಬ್ರೀಫ಼್ ಕೇಸ್ ಪರೀಕ್ಷಿಸದೆ ಆತನನ್ನು ಒಳಗೆ ಬಿಡಲಾಯಿತು. ಅಲ್ಲಿ ಬಾಂಬುಗಳನ್ನು ಜೋಡಿಸುತ್ತಿರುವಾಗ, ಹಿಟ್ಲರ್ ನಿಗದಿತ ಅವಧಿಗಿಂತ ಮುಂಚೆಯೇ ಬರುತ್ತಿರುವನೆಂದೂ ಸ್ಟಾಫ಼ೆನ್ ತನ್ನ ಕೆಲಸವನ್ನು ಬೇಗನೇ ಮುಗಿಸಬೇಕೆಂದೂ ಸುದ್ದಿ ಬಂದಿತು. ಕೇವಲ ಎಡಗೈ ಮತ್ತದರ ಮೂರು ಬೆರಳುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ಟಾಫ಼ೆನ್ ಗೆ ಎರಡೂ ಬಾಂಬುಗಳನ್ನು ಜೋಡಿಸಲಾಗಲಿಲ್ಲ. ಒಂದನ್ನು ಜೋಡಿಸಿ, ಬ್ರೀಫ಼್ ಕೇಸಿನಲ್ಲಿಟ್ಟು, ಹಿಟ್ಲರಿಗೆಂದು ನಿಗದಿತವಾದ ಕುರ್ಚಿಯ ಆದಷ್ಟೂ ಸಮೀಪಕ್ಕೆ ತಳ್ಳಿ, ತಾನು ಸಭೆಯಲ್ಲಿ ಭಾಗವಹಿಸದೆ ಹೊರನಡೆದುಬಿಟ್ಟ, ಬಾಂಬೂ ನಿಗದಿಯಂತೆ ಸ್ಪೋಟವಾಯ್ತು. ಆದರೆ ಹಿಟ್ಲರನ ಸುದೈವ. ಪಾಪಿ ಚಿರಾಯು ಎನ್ನುತ್ತಾರಲ್ಲ ಹಾಗೆ.. ದಪ್ಪ ಮೇಜಿನ ಹಲಗೆಯಿಂದಾಗಿ, ಹಿಟ್ಲರ್ ಸಣ್ಣಪುಟ್ಟಗಾಯಗಳೊಡನೆ ಪಾರಾಗಿದ್ದ. ಅಲ್ಲದೇ ಅಂದೇ ಸಂಜೆ ರಾಷ್ಟ್ರವನ್ನುದ್ದೇಶಿಸಿ ರೇಡಿಯೋ ಭಾಷಣವನ್ನೂ ಮಾಡಿದ.

ಇತ್ತ ಸಭೆಯಿಂದ ಹೊರಬಂದ ಸ್ಟಾಫ಼ೆನ್ನನಿಗೆ ಬಾಂಬು ಸ್ಪೋಟವಾದದ್ದು ಕಾಣಿಸಿತು. ಆ ಸ್ಫೋಟದಲ್ಲಿ ಖಂಡಿತವಾಗಿಯೂ ಹಿಟ್ಲರ್ ಸತ್ತಿರುತ್ತಾನೆಂಬ ನಂಬಿಕೆಯೊಂದಿಗೆ, ಮುಂದಿನ ರಾಜಕೀಯ ಚಟುವಟಿಕೆಗಳಿಗಾಗಿ ಬರ್ಲಿನ್ ಗೆ ಹೊರಟು ಬಿಟ್ಟ, ಆದರೆ ಬದುಕುಳಿದ ಹಿಟ್ಲರ್ ಈ ಸೇಡಿಗಾಗೆ ನಾಲ್ಕೂವರೆ ಸಾವಿರ ಜನರ ಸಾವಿಗೆ ಆದೇಶಿಸಿದ. ಕೆಲವರು ಗುಂಡಿಗೆ ಬಲಿಯಾದರೆ, ಮತ್ತೆ ಕೆಲವರು ನಿರಾಹಾರದಿಂದ, ಮತ್ತೆ ಕೆಲವರು ನಿಧಾನವಾಗಿ ಕತ್ತು ಹಿಸುಕುವ ಯಂತ್ರ ಗೆರೇಟ್ ವೀಲ್ ಗೆ ಬಲಿಯಾದರು. ಬರ್ಲಿನ್ ನಲ್ಲಿ ಬಂಧನಕ್ಕೊಳಗಾದ ಮೂವತ್ತಾರು ವರ್ಷದ ಸ್ಟಾಫ಼ೆನ್ ವಿಚಾರಣೆಯಲ್ಲಿ ಇದೆಲ್ಲವೂ ತನ್ನೊಬ್ಬನದೇ ತಂತ್ರ. ಮರಣದಂಡನೆಯಾಗುವುದಾದರೆ ತನಗೊಬ್ಬನಿಗೇ ಆಗಬೇಕು ಎಂದು ವಾದಿಸಿದ. ಆದರೆ ಅವನ ಜೊತೆ ಇನ್ನೂ ನಾಲ್ವರಿಗೆ ಗುಂಡಿನಿಂದ ಸಾಯುವ ಆದೇಶ ದೊರೆಯಿತು . ಈ ಆದೇಶ ನೀಡಿದ್ದು, ಆತನ ಜೊತೆ ಈ ಸಂಚಿನಲ್ಲಿ ಭಾಗಿಯಾಗಿದ್ದ ಫ಼್ರಾಮ್ ಎಂಬ ಕರ್ನಲ್. ಅದರಲ್ಲೂ ತನ್ನ ಹೆಸರು ಹೊರಗೆ ಬರಬಾರದೆಂಬ ಭಯದಿಂದ ಈ ಸಂಚಿನಲ್ಲಿ ಸಿಕ್ಕಿಕೊಂಡವರನ್ನು ಕೂಡಲೇ ಕೊಲ್ಲಲು ಆದೇಶಿಸಿದ. ಆದರೆ ಸ್ಟಾಫೆನ್ ಬರ್ಗ್ ನನ್ನು ತನ್ನ ಸಮವಸ್ತ್ರ ಮತ್ತು ಪದಕಗಳೊಂದಿಗೆ ಸಮಾಧಿ ಮಾಡಲು ಆದೇಶಿಸಿದ್ದ. ಮರುದಿನ ಹಿಟ್ಲರನ ವಿಶೇಷ ಪಡೆ ಗೆಸ್ಟಾಪೋ ಅವನ ಶವವನ್ನು ಮೇಲೆತ್ತಿ ಸಮವಸ್ತ್ರ ಮತ್ತು ಪದಕಗಳನ್ನು ಬಿಚ್ಚಿ ಅವನನ್ನು ಮತ್ತೆ ಹೂಳಿತು. ಫ಼್ರಾಮ್ ಸಂಚಿನಲ್ಲಿ ತನ್ನ ಪಾತ್ರವನ್ನು ಯಶಸ್ವಿಯಾಗಿ ಮುಚ್ಚಿಹಾಕಿದ್ದೇನೆನ್ನುವ ಭ್ರಮೆಯಲ್ಲಿದ್ದರೂ, ಎಸೆಸ್ಸ್ ಪಡೆ ಆತನನ್ನುಬಂಧಿಸಿ, ಸಂಚನ್ನು ಮುಂಗಾಣಲು ವಿಫಲನಾದ ಅರೋಪದ ಮೇಲೆ ಅವನನ್ನು ಮಾರ್ಚಿ ೧೯೪೫ರಲ್ಲಿ ಗಲ್ಲಿಗೇರಿಸಿತು ..!

ಸಾಯುವ ಮುನ್ನ ಶಾಂತಿಯಿಂದ ಸ್ಟಾಫೆನ್ "Es lebe unser heiliges Deutschland!" ಎಂದು ಹೇಳಿದ ಎನ್ನುತ್ತಾರೆ ಅಂದರೆ "ಪವಿತ್ರ ಜರ್ಮನಿ ಚಿರಕಾಲ ಬಾಳಲಿ" ಎಂದರ್ಥ. ಇನ್ನೂ ಕೆಲವರು ಆತನ ಕಡೆಯ ಮಾತುಗಳು "Es lebe das geheime Deutschland!" ಎನ್ನುತ್ತರೆ. ಅಂದರೆ "ಗುಪ್ತ ಜರ್ಮನಿ ಚಿರಕಾಲ ಬಾಳಲಿ" ಎಂದರ್ಥ.

ಯುದ್ದದ ತರುವಾಯು ಈ ವಿಷಯವನ್ನಾಧರಿಸಿ ಹಲವಾರು ಚಲನಚಿತ್ರಗಳೂ, ಟಿವಿ ಸೀರಿಯಲ್ಲುಗಳೂ ಬಂದಿವೆ. Valkyrie ವಲ್ಕಿರಿ ಅವುಗಳಲ್ಲಿ ತೀರಾ ಇತ್ತೀಚಿಗೆ ೨೦೦೮ರಲ್ಲಿ ಬಿಡುಗಡೆಯಾದ ಚಿತ್ರ ಇದರಲ್ಲಿ ಟಾಮ್ ಕ್ರೂಸ್ ಸ್ಟಾಫ಼ೆನ್ ಬರ್ಗ್ ನ ಪಾತ್ರ ಮಾಡಿದ್ದಾನೆ. ಜುಲೈ ಇಪ್ಪತ್ತರ ಷಡ್ಯಂತ್ರ ಮನುಷ್ಯನ ಅದಮ್ಯ ವಿಶ್ವಾಸ ಮತ್ತು ಹೋರಾಟಕ್ಕೆ ಮತ್ತೊಂದು ನಿದರ್ಶನ. ಇಲ್ಲಿ ಸ್ಟಾಫ಼ೆನ್ ಬರ್ಗ ಅಣ್ಣ, ಹೆಂಡತಿ ಮತ್ತು ಇನ್ನೂ ಅನೇಕ ಹೀರೋಗಳಿದ್ದಾರೆ. ಆದರೆ ನಾನಿಲ್ಲಿ ಹೇಳುತ್ತಿರುವುದು ಸ್ಟಾಫ಼ೆನ್ ಬರ್ಗ್ ಬಗ್ಗೆ ಮಾತ್ರ..!


ಚಿತ್ರಗಳು ನನ್ನವೇ
ಆಧಾರಗಳು ಮತ್ತು ಹೆಚ್ಚಿನ ಮಾಹಿತಿಗೆ :

http://en.wikipedia.org/wiki/Claus_Schenk_Graf_von_Stauffenberg
http://en.wikipedia.org/wiki/Valkyrie_(film)
http://www.historylearningsite.co.uk/july_bomb_plot.htm
http://en.wikipedia.org/wiki/Adolf_Hitler
http://en.wikipedia.org/wiki/July_20_plot
http://en.wikipedia.org/wiki/Reichswehreid
http://www.stauffenbergthemovie.com/history_july20.html

No comments:

Post a Comment