Pages

Wednesday, December 30, 2009

ಮಿರಮಿರ ಮಿನುಗುವ ಮುದ್ದಿನ ತಾರೆ

ಮಿರಮಿರ ಮಿನುಗುವ ಮುದ್ದಿನ ತಾರೆ
ಬಾನಲಿ ಬೆಳಗುವ ನೀನಾರೆ?
ಫಳಫಳ ಹೊಳೆಯುವ ವಜ್ರದ ಹರಳೆ,
ನಭದಲಿ ನಗುವೆಯಾ ನೀ ಹೇಳೆ?

ಧಗಧಗಿಸುವ ನೇಸರ ಮರಳಿದ ಮೇಲೆ,
ಕವಿದಿದೆ ಭುವಿಗೆ ಕತ್ತಲ ಮಾಲೆ,
ಲಕಲಕಲಕಿಸುವ ನಿನ್ನಯ ಲೀಲೆ,
ಭೂಮಿಯ ಬೆಳಗುವ ದೀಪದ ಬಾಲೆ

ನೀಲಾಗಸದಲಿ ತಣ್ಣಗೆ ಬೆಳಗುವೆ
ಕಿಟಕಿ ಕಿಂಡಿಯೆಲೇ ನಗುವೆ.
ಬೆಳಗಿನ ಬೆಳ್ಳಿ ಮೂಡುವವರೆಗೂ,
ಕಣ್ಣನು ಮುಚ್ಚದೆ ಕಾದಿರುವೆ.

ತಣ್ಣನೆ ಬೆಳಕಿನ ಸಣ್ಣವ ನೀನು,
ಕತ್ತಲೆ ಪಯಣದ ಕಣ್ಣೇ ನೀನು,
ನಿನ್ನಾ ಬೆಳಕಿನ ಮರ್ಮವದೇನು?
ಕೆಲಸಕೆ ಸಂಬಳ ದೊರಕುವುದೇನು?
ಅರಿಯದೇ ಹೋದರು ನಿನ್ನನು ನಾನು,
ಮಿರಮಿರ ಮಿನುಗುವ ಮುದ್ದೇ ನೀನು.

(ಸಂಪದದಲ್ಲಿ ೨೦೦೬ ಡಿಸೆಂಬರ್ ೧೨ /ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಕವನದ ಅನುವಾದ/ಸಂಪದದಲ್ಲಿ ಪ್ರಕಟಿಸಿದ್ದು)

No comments:

Post a Comment